“ಜನರ ತೆರಿಗೆಯಿಂದ ನನ್ನ ವೇತನ, ಬಟ್ಟೆ, ಎಸಿ ಚೇಂಬರ್…’
ಉದಯವಾಣಿ ಸುವರ್ಣ ಸಂಭ್ರಮ; ಮಕ್ಕಳ ದಿನ "ಜೀವನಕಥನ'
Team Udayavani, Nov 14, 2019, 5:22 AM IST
ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.
ಉಡುಪಿ: ನಿಮ್ಮಲ್ಲಿ ಎಷ್ಟು ಮಕ್ಕಳು ನನ್ನ ಕಚೇರಿ ನೋಡಿದ್ದೀರಿ?
-ಎರಡೋ ಮೂರೋ ಮಕ್ಕಳು ಕೈ ಎತ್ತುತ್ತಾರೆ.
ಎಷ್ಟು ಮಕ್ಕಳು ನನ್ನ ಕಚೇರಿ ನೋಡಿದ್ದೀರಿ?
-ಯಾರೂ ಕೈಎತ್ತುವುದಿಲ್ಲ.
ಇದು ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿಯು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನ.13ರಂದು ಏರ್ಪಡಿಸಿ “ಜೀವನಕಥನ’ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಕ್ಕಳೆದುರು ಮಂಡಿಸಿದ ಪ್ರಶ್ನೆ.
ಅವರು ಮುಂದುವರಿಸಿ, “ನೀವು 5 ರೂ. ಚಾಕಲೇಟ್ ತಿಂದರೆ ಅದರಲ್ಲಿ ಎರಡು ರೂ. ತೆರಿಗೆಯೂ ಸೇರಿಕೊಂಡಿರುತ್ತದೆ. ನಿಮ್ಮಂತಹವರು ಚಾಕಲೇಟ್ ತಿಂದಾಗ ಆ ತೆರಿಗೆ ಹಣ ನಮಗೆ ವೇತನವಾಗಿ ಬರುತ್ತದೆ. ನನ್ನ ಕಚೇರಿಯಲ್ಲಿ ರಿವಾಲ್ವಿಂಗ್ ಆಸನವಿದೆ. ದೊಡ್ಡ ಕಚೇರಿ ಸಭಾಂಗಣವಿದೆ. ನಾನು ತೊಡುವ ಬಟ್ಟೆಯೂ ತೆರಿಗೆದಾರರ ಹಣದಿಂದಲೇ ಬಂದಿರುವುದು. ಹೆಚ್ಚೇಕೆ ನಾನು ಊಟ ಮಾಡೂದು ನಿಮ್ಮ ತೆರಿಗೆ ಹಣದಿಂದ…’ ಎಂದು ಸರಕಾರಿ ಅಧಿಕಾರಿಗಳ ಉತ್ತರದಾಯಿತ್ವವನ್ನು ಸ್ಮರಣೆಗೆ ತಂದುಕೊಂಡರು.
ಉಡುಪಿಯ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇಷ್ಟೆಲ್ಲ ನಿಮ್ಮ ತೆರಿಗೆ ಹಣದಿಂದ ನಾನು ಜೀವನ ಕಳೆಯುವಾಗ ನೀವು ನನ್ನ ಕಚೇರಿಗೆ ಬಂದ ಸಂದರ್ಭ ನಾನು ದುರಹಂಕಾರ ತೋರಿಸಿದರೆ ಏನಾಗುತ್ತದೆ? ನನಗೆ ಆಸನ, ಎಸಿ ಕೊಠಡಿ, ಬಟ್ಟೆ ಇದೆಲ್ಲ ಕೊಟ್ಟದ್ದು ಜನಸಾಮಾನ್ಯರ ಕೆಲಸ ಮಾಡಲು, ಅದೂ ಕೂಡ ನಿಮ್ಮ ಹಣದಿಂದ. ನನ್ನನ್ನು ಕಾಣಲು ಬಂದವರಿಗೆ ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯ ಬೇಕಲ್ಲ ಎಂದರು.
ಬಡವರು, ರೈತರಿಗೆ ಆದ್ಯತೆ
ನಾನೊಬ್ಬ ಬಡ ರೈತನ ಮಗ. ನಮ್ಮ ಊರಿನಲ್ಲಿ ನಮ್ಮನ್ನು ಬೆಳೆಸಲು, ಇಂದು ನನ್ನನ್ನು ಜಿಲ್ಲಾಧಿಕಾರಿಯಾಗಿ ನಿಲ್ಲಿಸುವಂತೆ ಮಾಡಲು ತಂದೆ, ತಾಯಿ ಎಷ್ಟು ಕಷ್ಟ ಪಟ್ಟಿದ್ದಾರೆಂದು ನನಗೆ ಗೊತ್ತಿದೆ. ಆದುದರಿಂದಲೇ ನಾನು ಇವರ ಪರವಾಗಿಯೇ ಕೆಲಸ ಮಾಡುತ್ತೇನೆ. ಬಡವರು, ರೈತರಿಗೆ ತಮ್ಮ ಕೆಲಸಗಳನ್ನು ಹೇಗೆ ಮಾಡಿಸಿಕೊಳ್ಳಬೇಕೆಂದು ಗೊತ್ತಿರುವುದಿಲ್ಲ ಎಂದು ಡಿಸಿ ತಿಳಿಸಿದರು.
ಸಾಧನೆಗೆ ಕ್ಷೇತ್ರ ಅಪಾರ
ಸಾಧನೆಯನ್ನು ಯಾವ ಕ್ಷೇತ್ರದಲ್ಲಿಯಾದರೂ ಮಾಡಬಹುದು. ಸಾಧನೆ ಎನ್ನುವುದು ರಾತ್ರಿ ಬೆಳಗ್ಗೆ ಆಗುವುದರೊಳಗೆ ಬರುವುದಿಲ್ಲ. ಕಷ್ಟಪಟ್ಟು ದುಡಿಯಬೇಕು. ಒಬ್ಬ ಪೌರಕಾರ್ಮಿಕನಾದರೆ “ನಾನೇ ಬೆಸ್ಟ್ ಪೌರಕಾರ್ಮಿಕ’, ಒಬ್ಬ ಡಿಸಿಯಾದರೆ “ನಾನೇ ಮಾಡೆಲ್ ಡಿಸಿ’, ಜಿ.ಪಂ. ಸಿಇಒ ಆಗಿದ್ದಲ್ಲಿ “ನಾನೇ ಮಾದರಿ ಸಿಇಒ’ ಆಗಬೇಕೆಂಬ ಇಚ್ಛೆಯಿಂದ ಕೆಲಸ ಮಾಡಬೇಕು ಎಂದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಸ.ಪ.ಪೂ. ಕಾಲೇಜು ಪ್ರಾಂಶುಪಾಲ ರುದ್ರೇಗೌಡ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ವಿಶ್ವನಾಥ ಬಾಯರಿ ಉಪಸ್ಥಿತರಿದ್ದರು. “ಉದಯವಾಣಿ’ ಪ್ರಸರಣ ವಿಭಾಗದ ಮೆನೇಜರ್ ಅಜಿತ್ ಭಂಡಾರಿ ಸ್ವಾಗತಿಸಿ ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ವಂದಿಸಿದರು. ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದರು. ಸಂಪಾದಕೀಯ ವಿಭಾಗದ ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಿತ್ತುತಿನ್ನುವ ಬಡತನವೇ
ನನ್ನ ಸಾಧನೆಗೆ ಸ್ಫೂರ್ತಿ
ನಿಮ್ಮ ಸಾಧನೆಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಹೊಟ್ಟೆಪಾಡಿಗಾಗಿ ನಾನು ಸಾಧನೆ ಮಾಡಿದ್ದೇನೆ. ಊಟವಿಲ್ಲದೆ ಕಳೆದ ದಿನಗಳಿವೆ. ತಂದೆಯವರು ಬೇರೆಯವರ ಮನೆಯಿಂದ ಅನ್ನ ತಂದು ಉಣ್ಣಿಸಿದ್ದಾರೆ. ತಂದೆ-ತಾಯಿ ನಮ್ಮನ್ನು ಕಷ್ಟಪಟ್ಟು ಸಾಕಿಸಲಹಿ ವಿದ್ಯಾಭ್ಯಾಸ ನೀಡಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಕಿತ್ತು ತಿನ್ನುವ ಬಡತನವೇ ನನ್ನ ಸಾಧನೆಗೆ ಸ್ಫೂರ್ತಿ ಎಂದರು. ಕಷ್ಟಪಟ್ಟು ನನ್ನನ್ನು ಜಿಲ್ಲಾಧಿಕಾರಿಯನ್ನಾಗಿಸಿದ ತಂದೆ-ತಾಯಿಯವರಿಗೆ ನನ್ನ ಜೀವನದಲ್ಲಿ ಮೊದಲ ಸ್ಥಾನ ನೀಡುತ್ತೇನೆ.
-ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಉತ್ಸುಕತೆ ಮತ್ತು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದರು. ಜಿ. ಜಗದೀಶ್ ಅವರೂ ಅಷ್ಟೇ ಉತ್ಸಾಹದಿಂದ ಮಾಹಿತಿಯುಕ್ತವಾದ ಅನುಭವ ಮತ್ತು ಒಳನೋಟಗಳುಳ್ಳ ಉತ್ತರಗಳನ್ನು ನೀಡಿದರು.
ಸೂಕ್ತ ಮಾರ್ಗದರ್ಶನ ಪಡೆಯಿರಿ
ಶಾಲೆಯಲ್ಲಿ ಗೆಳೆಯರ ಆಯ್ಕೆ ಹೇಗೆ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿ, ಒಬ್ಬ ವ್ಯಕ್ತಿ ಹೇಗೆ ಎಂಬುದನ್ನು ಆತನ ಗೆಳೆಯರಿಂದ ನಿರ್ಧರಿಸಬಹುದು. ಗೆಳೆತನ ಸರಿ ಇಲ್ಲ ಅಂತಾದರೆ ಯಾವುದೇ ಕ್ಷಣದಲ್ಲೂ ಬಿಡಬಹುದು. ಗೆಳೆಯರ ಆಯ್ಕೆ ಮನಸ್ಸಿಗೆ ಹೊಂದುವಂತೆ ಸೂಕ್ತವಾಗಿರಲು ತಂದೆ-ತಾಯಿಯವರ ಮಾರ್ಗ ದರ್ಶನ ಪಡೆದುಕೊಳ್ಳುವುದು ಅತೀ ಅಗತ್ಯ. ತಂದೆ- ತಾಯಿಗೆ ಇರುವ ಕಾಳಜಿ ಗೆಳೆಯರಿಂದ ಸಿಗಲು ಸಾಧ್ಯವಿಲ್ಲ ಎಂದರು.
ಪ್ರಯತ್ನ ಅಗತ್ಯ
ಶೇ.35 ಅಂಕ ಗಳಿಸಿದ ಎಸ್‌ಸಿ-ಎಸ್‌ಟಿಯವರಿಗೆ ಉದ್ಯೋಗ ಸಿಗುತ್ತದೆ. ಆದರೆ ಶೇ.100 ಅಂಕ ಗಳಿಸಿದ ಇತರ ಪಂಗಡದವರಿಗೆ ಉದ್ಯೋಗಾವಕಾಶ ಸಿಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಶೇ.35 ಅಂಕ ಗಳಿಸಿದವರಿಗೆ ಉದ್ಯೋಗ ಸಿಗುತ್ತದೆ ಎಂಬುದು ದೂರದ ಮಾತು. ಜನರಲ್ ಕೆಟಗರಿಯಲ್ಲಿ ಶೇ.50 ಉದ್ಯೋಗಾವಕಾಶ ಸಿಗುತ್ತದೆ. ಅದಕ್ಕಾದರೂ ಶ್ರಮ ಪಡಬೇಕು. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ ಎಂದರು.
ಸಾಧನೆ ಯಾವುದು?
ನಮ್ಮ ಸಾಧನೆ, ನಮ್ಮ ನಮ್ಮ ಕೆಲಸ ಮಾತನಾಡಬೇಕು. ಡಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ಜನರು ಹೇಳುವಂತೆ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ಆದದ್ದೇ ಸಾಧನೆಯಲ್ಲ. ಜನರ ಮನಸ್ಸಿನಲ್ಲಿ ಇರುವಂತೆ ಕೆಲಸ ಮಾಡುವುದು ಸಾಧನೆ ಎಂದು ಜಗದೀಶ್ ಹೇಳಿದರು.
ಕಾರ್ಯಯೋಜನೆ ರೂಪಿಸಿ
10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಒಳಕಾಡು ಶಾಲೆಯ ವಿದ್ಯಾರ್ಥಿ ಅಂಕಿತ್ ಅವರ ಪ್ರಶ್ನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಉತ್ತರಿಸಿ, ಅಧ್ಯಯನಕ್ಕಾಗಿ ವ್ಯವಸ್ಥಿತ ಕಾರ್ಯಯೋಜನೆಯನ್ನು ರೂಪಿಸಿಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಎಸೆಸೆಲ್ಸಿ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತೀ ಅಗತ್ಯ, ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ, ನಿರ್ದಿಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಬೇಕು ಎಂದರು.
ಹತ್ತು ಶಾಲೆಗಳ ವಿದ್ಯಾರ್ಥಿಗಳು
ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆ, ಕಡಿಯಾಳಿ ಕಮಲಾ ಬಾಯಿ ಪ್ರೌಢಶಾಲೆ, ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ, ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ, ಸೈಂಟ್ ಮೇರಿಸ್ ಪ್ರೌಢಶಾಲೆ, ಸೈಂಟ್ ಸಿಸಿಲೀಸ್ ಪ್ರೌಢಶಾಲೆ, ಒಳಕಾಡು ಸರಕಾರಿ ಪ್ರೌಢಶಾಲೆ, ಅಜ್ಜರಕಾಡು ಸರಕಾರಿ ಪ್ರೌಢಶಾಲೆ, ಕ್ರಿಶ್ಚಿಯನ್ ಪ್ರೌಢಶಾಲೆಗಳ ಸುಮಾರು 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಡಿಸಿ ಜತೆ ಮಕ್ಕಳ ಸಂವಾದ
ಸಾಧನೆಗೆ ಏನು ಮಾಡಬಹುದು?
-ವಿನಯಕರ್ , (ಕಡಿಯಾಳಿ ಕಮಲಾಬಾೖ ಶಾಲೆ)
ಸಾಧನೆ ಮಾಡಬೇಕೆಂದು ಯೋಚನೆ ಮಾಡು ತ್ತಿದ್ದರೆ ಕಾರ್ಯಗತಗೊಳ್ಳುವುದಿಲ್ಲ. ಸ್ಪಷ್ಟವಾಗದ ಗುರಿ ರೂಪಿಸಿ ಯೋಜನೆ ಸಿದ್ದಪಡಿಸಿಕೊಳ್ಳಬೇಕು. ಸಾಧನೆ ಬಗ್ಗೆ ಸ್ಪಷ್ಟತೆ ಇರುವುದು ಅಗತ್ಯ.
ಪ್ರೇರಣೆಯಿಂದಿರಲು ಏನು ಮಾಡಬಹುದು?
-ವಿನ್ಯಾಸ್ (ಒಳಕಾಡು ಶಾಲೆ)
ಸಾಧಕರ ಮಾತುಗಳನ್ನು ಏಕಾಗ್ರತೆಯಿಂದ ಕೇಳಬೇಕು. ಅಬ್ದುಲ್ ಕಲಾಂ ಹೇಳುವಂತೆ, ನಿಮ್ಮ ಗುರಿ ನಿಮ್ಮನ್ನು ನಿದ್ದೆಯಲ್ಲೂ ಎಚ್ಚರದಿಂದ ಇರಿಸುವಂತಿರಬೇಕು.
ನೀವು ಹೇಗೆ ಒತ್ತಡ ನಿಭಾಯಿಸುತ್ತೀರಿ?
-ಅನನ್ಯಾ (ಬಾಲಕಿಯರ ಸರಕಾರಿ ಪ್ರೌಢಶಾಲೆ)
ಶಾಲಾರಂಭದ ಮೊದಲ ದಿನದಿಂದಲೇ ಅಧ್ಯಯನ ಮಾಡಿದರೆ ಯಾವುದೇ ಒತ್ತಡ ಇರುವುದಿಲ್ಲ. ಪರೀಕ್ಷೆಯ ಕೊನೆಯ ಗಳಿಗೆಯಲ್ಲಿ ಸಿದ್ಧತೆ ಮಾಡುವುದರಿಂದ ಸಹಜವಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಬೀಳುತ್ತದೆ.
ನಿರುದ್ಯೋಗಕ್ಕೆ ಕಾರಣ, ಪರಿಹಾರ ಏನು?
-ಶ್ರಾವ್ಯಾ ಶೆಟ್ಟಿ (ಸೈಂಟ್ ಸಿಸಿಲಿ)
ಇವತ್ತಿನ ಪ್ರಪಂಚಕ್ಕೆ ಹೊಂದಿಕೊಳ್ಳುವಂತೆ ನಾವು ಅಪ್‌ಡೇಟ್ ಆಗಬೇಕು. ನಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಕೌಶಲಗಳನ್ನು ಬೆಳೆಸಿಕೊಂಡರೆ ಎಂತಹ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.
ಡಿಸಿ ಆಗಲು ಯಾವ ವಿಷಯ ಉತ್ತಮ?
ಸಮತಾ (ಬಾಲಕಿಯರ ಪ.ಪೂ.ಕಾಲೇಜು)
ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೂ ಅದಕ್ಕೆ ಸಂಬಂಧಿಸಿದ ಇತರ ಪುಸ್ತಕಗಳನ್ನೂ ಅಧ್ಯಯನ ಮಾಡಿಕೊಳ್ಳಬೇಕು. ಅಧ್ಯಯನದೊಂದಿಗೆ ಆಸಕ್ತಿ ಅಗತ್ಯ ಎಂದರು.
ಮೊಬೈಲ್ ಬಳಕೆ ಮಿತಿ ಮೀರುತ್ತಿಲ್ಲವೇ?
-ಕೃತಿ (ಸರಕಾರಿ ಪ್ರೌಢಶಾಲೆ ಒಳಕಾಡು)
ಅಧ್ಯಯನದ ಪ್ರಕಾರ 3 ನಿಮಿಷಕ್ಕೊಂದು ಬಾರಿ ಜನರು ಮೊಬೈಲ್ ಫೋನ್‌ನಲ್ಲಿ ಅಪ್‌ಡೇಟ್‌ಗಳನ್ನು ನೋಡುತ್ತಾರೆ. ಇದರಿಂದಾಗಿ ಮಕ್ಕಳ ಅಧ್ಯಯನ ಕಡಿಮೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.