ಹದಿಹರೆಯದ ಸಮಯ
Team Udayavani, Nov 15, 2019, 5:14 AM IST
ಹದಿಹರೆಯದ ಮಕ್ಕಳನ್ನು ಸಂಭಾಳಿಸುವುದು ತುಸು ತ್ರಾಸದಾಯಕ. ಎಂಟನೆಯ ತರಗತಿಗೆ ಬಂದಾಗ ಮುಗ್ಧ ಮಕ್ಕಳಾಗಿರುವ ಹುಡುಗರು ಒಂಬತ್ತನೆಯ ತರಗತಿಗೆ ಬಂದಾಗ ಸ್ವಲ್ಪಮಟ್ಟಿಗೆ ಬದಲಾಗಿರುತ್ತಾರೆ. ಹತ್ತನೆಯ ತರಗತಿಗೆ ಬಂದಾಗ ಪೂರ್ತಿ ಬದಲಾಗಿರುತ್ತಾರೆ. ಬಾಲಕರಾಗಿದ್ದವರು ತರುಣರೆನಿಸಿಕೊಳ್ಳುವ ಈ ಸಮಯ ಶಿಕ್ಷಕರಿಗೆ ಹಾಗೂ ಹೆತ್ತವರಿಗೆ ಛಾಲೆಂಜಿಂಗ್ ಅನಿಸುವುದು ಸಹಜ. ಹುಡುಗರಿಗಿಂತ ಹುಡುಗಿಯರು ಬೇಗ ತಾರುಣ್ಯಕ್ಕೆ ಪ್ರವೇಶಿಸುವುದರಿಂದ ಬಹುಪಾಲು ಹೆಣ್ಣುಮಕ್ಕಳು ಎಂಟನೆಯ ತರಗತಿಯಲ್ಲೇ ಶಾರೀರಿಕ ಹಾಗೂ ಮಾನಸಿಕವಾಗಿ ಬೆಳೆದಿರುತ್ತಾರೆ. ಹುಡುಗ-ಹುಡುಗಿಯರ ವರ್ತನೆಗಳು ಮೂಲಭೂತವಾಗಿ ಪರಸ್ಪರ ಆಕರ್ಷಿಸುವುದೇ ಆಗಿದ್ದರೂ ಆ ವರ್ತನೆಗಳಲ್ಲಿ ಲಿಂಗಬೇಧಕ್ಕನುಗುಣವಾದ ವ್ಯತ್ಯಾಸಗಳಿರುತ್ತವೆ. ಹುಡುಗಿಯರು ಮೇಕಪ್ ಮಾಡುವತ್ತ ಹೆಚ್ಚು ಒಲವು ತೋರುತ್ತಾರೆ. ಹುಡುಗರದ್ದೂ ಮೇಕಪ್ ಅಂತಲೇ ಹೇಳಬಹುದು. ಆದರೆ ಅದು ಪ್ರಧಾನವಾಗಿ ಹೇರ್‌ಸ್ಟೆ çಲ್‌ಗೆ ಸಂಬಂಧಿಸಿರುತ್ತದೆ. ಯಾವ್ಯಾವುದೋ ಹೆಸರುಗಳ ವಿವಿಧ ಸ್ಟೈಲ್‌ನ ಹೇರ್‌ಕಟ್‌ಗಳನ್ನು ಮಾಡಿಕೊಂಡರೆ, ಹುಡುಗಿಯರು ಐ ಲೈನರ್ ಹಾಕಿ ಕಣ್ಣಿನ ಅಂದ ಹೆಚ್ಚಿಸಲು ನೋಡುತ್ತಾರೆ. ಹುಡುಗರು ಸೊಂಟದಿಂದ ಜಾರುವ ತರದ ಲೋ ವೇಸ್ಟ್ ಪ್ಯಾಂಟ್ ಹಾಕಿ, ಪಾದದ ಬಳಿ ಅದನ್ನು ಸಪೂರವಾಗಿಸಿ, ಗಿಡ್ಡವಾಗಿಸಿ ಏನೇನೋ ಫ್ಯಾಷನ್ ಮಾಡಲು ನೋಡುತ್ತಾರೆ.
ನಮ್ಮ ಶಾಲೆಯಲ್ಲಿ ಪ್ರತಿದಿನವೂ ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು ಈ ತರದ ಯಾವುದೇ ಫ್ಯಾಷನ್‌ಗಳನ್ನು ಅನುಮತಿಸುವುದಿಲ್ಲ. ಆದರೂ, ಒಮ್ಮೊಮ್ಮೆ ಕೆಲವರು ಈ ರೀತಿ ಹೇರ್ ಸ್ಟೈಲ್ ಮಾಡಿ ಬರುವುದುಂಟು. ಅದೇ ದಿನ ನಮ್ಮ ಮುಖ್ಯೋಪಾಧ್ಯಾಯರು ಸರಿಯಾದ ಹೇರ್ ಕಟ್ ಮಾಡಿ ಬರುವಂತೆ ಪುನಃ ಅವರನ್ನು ಸೆಲೂನ್‌ಗೆ ಕಳುಹಿಸುತ್ತಾರೆಂದು ಅವರಿಗೂ ಗೊತ್ತಿರುತ್ತದೆ. ಆದರೆ, ಫ್ಯಾಷನ್ ಚಪಲಕ್ಕೆ ಮತ್ತೇನು ಮಾಡುವುದು! ಮರುದಿನ ಸರಿಯಾದ ಹೇರ್ ಕಟ್‌ನಲ್ಲಿ ಶಾಲೆಗೆ ಬರುತ್ತಾರೆ. ಐ ಲೈನರ್ ಹಾಕಿ ಬರಲು ಹೆಣ್ಣು ಮಕ್ಕಳಿಗೆ ನಾವು ಅನುಮತಿಸುವುದಿಲ್ಲ. ಅವರು ನೀಟಾಗಿ ಬೈತಲೆ ತೆಗೆದು ಎರಡು ಜಡೆ ಮಡಚಿ ಕಟ್ಟಿರಬೇಕು. ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಇದು ಎಂದು ಹಲವರಿಗೆ ಅನಿಸಬಹುದು. ಆದರೆ, ಯಾವಾಗ ಫ್ಯಾಷನ್ ಮಾಡಿ ಬರುತ್ತಾರೋ, ಆಗ ಮಕ್ಕಳ ಗಮನ ಪಾಠದ ಕಡೆಗಿರುವುದಿಲ್ಲ. ಯಾರೆಲ್ಲ ತನ್ನನ್ನು ಗಮನಿಸುತ್ತಾರೆ ಎಂದಷ್ಟೇ ಅವರು ಚಿಂತಿಸುತ್ತಿರುತ್ತಾರೆ. ಇಂಥ ಮೇಕಪ್‌ಗ್ಳಿಗೆ ಅನುಮತಿಸಿದರೆ ಕನ್ನಡಿ ಮುಂದೆ ಅವರು ಕಳೆಯುವ ಸಮಯ ಹೆಚ್ಚಾಗುತ್ತದೆ. ಇದು ಕಲಿಕೆಯನ್ನು ಬಾಧಿಸುತ್ತದೆ. ಸಮವಸ್ತ್ರ ಎಂಬ ಕಲ್ಪನೆಗೆ ಮೇಕಪ್ ಸರಿಹೊಂದುವುದೂ ಇಲ್ಲ. ಹದಿಹರೆಯದ ಚಂಚಲ
ಪ್ರಾಯದ ಮಕ್ಕಳ ಮನಸ್ಸು ಮೊದಲೇ ಲಗಾಮಿಲ್ಲದ ಕುದುರೆಯ ಹಾಗೆ. ಅದಕ್ಕೆ ನಿಯಂತ್ರಣವಿಲ್ಲದಿದ್ದರೆ ಮತ್ತೆ ಕೇಳುವುದೇ ಬೇಡ.
ಎಂಟನೆಯ ತರಗತಿಯಲ್ಲಿ “ಮೇಡಂ, ಮೇಡಂ’ ಎಂದು ಮುಗ್ಧವಾಗಿ ಮಾತಾಡಿಸುತ್ತಿದ್ದ ಮಕ್ಕಳು ಹತ್ತನೆಯ ತರಗತಿಗೆ ಬಂದಾಗ ಬಿಗುವಿನಿಂದ ವರ್ತಿಸಲು ಪ್ರಾರಂಭಿಸುತ್ತಾರೆ. ಸಣ್ಣ ವಿಷಯಕ್ಕೂ ದೂರು ತರುತ್ತಿದ್ದವರು ನಾವಾಗಿ ಒಂದು ವಿಷಯದ ವಿಚಾರಣೆ ಮಾಡಲು ನಾನಾ ರೀತಿಯಲ್ಲಿ ಪ್ರಶ್ನೆ ಹಾಕಿದರೂ ತುಟಿ ಪಿಟಿಕ್ಕೆನ್ನುವುದಿಲ್ಲ. ತರಗತಿಯ ಸಹಪಾಠಿಗಳನ್ನು ಎಂಥ ಪರಿಸ್ಥಿತಿಯಲ್ಲೂ ಬಿಟ್ಟುಕೊಡುವುದಿಲ್ಲ. ವೈಯಕ್ತಿಕವಾಗಿ ಕರೆದು ಗುಟ್ಟಾಗಿ ವಿಚಾರಿಸಿ ಸಹಪಾಠಿಗಳ ಕುರಿತಾದ ಕೆಲವು ರಹಸ್ಯಗಳನ್ನು ಕೆಲವರಿಂದ ನಾವು ತಿಳಿದುಕೊಳ್ಳುತ್ತೇವೆ. ಪುಸ್ತಕದಲ್ಲಿ ಹುಡುಗ/ಹುಡುಗಿಯ ಹೆಸರು ಬರೆಯುವುದು, ತನ್ನ ಹೆಸರಿನ ಒಂದಕ್ಷರದ ಜೊತೆ ಒಬ್ಬ ಹುಡುಗ/ಹುಡುಗಿಯ ಹೆಸರು ಬರೆಯುವುದು ಮಕ್ಕಳ ಈ ಹಂತದ ಸಾಮಾನ್ಯ ಲಕ್ಷಣಗಳಲ್ಲೊಂದು. ನೋಟ್ಸ… ಕರೆಕ್ಷನ್ ಸಮಯದಲ್ಲೋ ಅಥವಾ ಆ ಹೆಸರಿನ ಒಡೆಯರಿಗೆ ಅದು ಇಷ್ಟವಿಲ್ಲದೇ ದೂರು ತಂದಾಗಲೋ ನಾವು ವಿಚಾರಣೆ ಆರಂಭಿಸಬೇಕಾಗುತ್ತದೆ. ಹೆಚ್ಚಿನ ಮಕ್ಕಳು ನಮ್ಮ ಗಮನಕ್ಕೆ ಬಂದಿದೆ ಎಂದ ಮೇಲೆ ಮತ್ತೆ ತಕರಾರಿಲ್ಲದೇ ಸುಮ್ಮನಿರುತ್ತಾರೆ. ಕೆಲವರು ನಾವು ಅವರ ವರ್ತನೆಯನ್ನು ಖಂಡಿಸುವಾಗ, ನಾವು ಹೇಗಿದ್ದರೆ ಇವರಿಗೇನು? ಎಂಬಂತಹ ಮನೋಭಾವದಿಂದ ಮನಸ್ಸಿನೊಳಗೆ ಸಿಡಿಮಿಡಿಗುಟ್ಟುತ್ತಾರೆ.
ಪ್ರೇಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು ದೊಡ್ಡ ತಲೆನೋವಿನ ವಿಷಯ. ಒಮ್ಮೆ ಒಬ್ಬಳು ಹುಡುಗಿಯ ಬಗ್ಗೆ ಯಾರೋ ನೀಡಿದ ಮಾಹಿತಿಯನ್ವಯ ನಾವು ಅವಳನ್ನು ಕರೆದು ವಿಚಾರಿಸಿದೆವು. ಆಗ ಅವಳು ತನ್ನ ಸಹಪಾಠಿಗಳೆಲ್ಲರ ಗುಟ್ಟನ್ನು ಬಿಚ್ಚಿಟ್ಟು, ತಾನೊಬ್ಬಳೇ ಅಲ್ಲ ಎಂದು ಸಾಧಿಸಲು ಹೊರಟಳು. ಅನಾಯಾಸವಾಗಿ ಜಾಲವೊಂದು ತೆರೆದುಕೊಂಡಿತು. ಕೊನೆಗೆ ತರಗತಿಯ ಒಂದು ಡಜನ್ ವಿದ್ಯಾರ್ಥಿಗಳನ್ನು ವಿಚಾರಿಸಿ ಬುದ್ಧಿಹೇಳುವ ಕೆಲಸ ನಮ್ಮದಾಯಿತು. ಇನ್ನೊಂದು ಸಲ ಒಬ್ಬಳು ಹುಡುಗಿಯ ಫೋನ್ ನಂಬರ್ ಸಹಪಾಠಿಯೊಬ್ಬನ ನೋಟ್‌ಬುಕ್‌ನಲ್ಲಿ ಪತ್ತೆಯಾಯ್ತು. ಅದರ ಬಗ್ಗೆ ವಿಚಾರಿಸುವಾಗ ಅವನು ಅದೇ ತರಗತಿಯ ಇನ್ನೊಬ್ಬಳ ಹೆಸರು ಹೇಳಿ ಅವಳು ಕೊಟ್ಟದ್ದೆಂದ. ಅವರ ಮಾತುಗಳು ನಮಗೆ ಅರ್ಥವಾಗಬೇಕಾದರೆ ಬಹಳ ಸಮಯ ಹಿಡಿಯಿತು. ಅಷ್ಟೊಂದು ಗೋಜಲಾಗಿತ್ತು ಆ ಪ್ರಕರಣ. ಕೊನೆಗೆ ನಿಜ ವಿಷಯ ಬಯಲಾಯ್ತು. ದೇವಸ್ಥಾನಕ್ಕೆ ಹೋಗಿದ್ದ ಇಬ್ಬರು ಹುಡುಗಿಯರು ತಮ್ಮ ಸಹಪಾಠಿ ಮತ್ತು ಗೆಳೆಯರು ಮೊಬೈಲ್ ಹಿಡಿದು ಅಲ್ಲಿಗೆ ಬಂದದ್ದನ್ನು ಕಂಡು ಅತ್ತ ನೋಡಿದರು. ಆ ಹುಡುಗರು ಇವರ ಫೋಟೋ ತೆಗೆದರಂತೆ. ಅದು ಡಿಲೀಟ್ ಮಾಡಲಿಕ್ಕಾಗಿ ಹುಡುಗಿಯರು ಅಲ್ಲಿದ್ದ ಮಗುವೊಂದನ್ನು ಕರೆದು ಚಾಕಲೇಟ್ ಆಸೆ ತೋರಿಸಿ ಅವನ ಮೊಬೈಲ್ ತರಿಸಿ ಫೋಟೋ ಅಳಿಸಿದರಂತೆ. ಜೊತೆಗೆ ಅವರಲ್ಲಿ ಒಬ್ಬಳು ತನ್ನ ಮನೆಯ ನಂಬರಿಗೆ ಒಂದು ಮಿಸ್ಡ್ ಕಾಲ್ ಕೂಡಾ ಕೊಟ್ಟಳು. ಕಾಲ್ ಲಿಸ್ಟ್‌ನಲ್ಲಿದ್ದ ಆ ನಂಬರ್ ಯಾರದ್ದೆಂದು ತಿಳಿಯದ ಇವನು ಮನೆಗೆ ಹೋದ ಮೇಲೆ ಫೋನ್ ಮಾಡಿದ. ಇವಳು ಮಾತನಾಡಿದಳು. ಅವನು ಸಹಪಾಠಿಯೊಬ್ಬಳ ನಂಬರ್ ಕೇಳಿದ. ಇವಳು ನಂಬರ್ ಕೊಟ್ಟು ಸಹಾಯ ಮಾಡಿದಳು. ಅವನು ಕನಸಿನ ಲೋಕದಲ್ಲಿ ತೇಲಾಡುತ್ತ ಪರೀಕ್ಷೆಯಲ್ಲೂ ಕಡಿಮೆ ಅಂಕ ಪಡೆದಿದ್ದ. ಈ ಸಮಸ್ಯೆಗೆ ಸಂಬಂಧಪಟ್ಟ ಆ ಐದಾರು ಜನರಿಗೆ ಬುದ್ಧಿ ಹೇಳಿ, ತಾಕೀತು ಮಾಡಿ ಕಳಿಸಿದೆವು. ಅವನು ತನ್ನ ಏಕಮುಖ ಪ್ರೇಮದಿಂದ ಹಿಂದೆ ಸರಿದಿರಬೇಕು. ಮತ್ತೆ ಅವಳ ತಂಟೆಗೆ ಹೋದಂತೆ ಕಾಣಲಿಲ್ಲ.
ಹತ್ತನೆಯ ತರಗತಿಯ ಮಕ್ಕಳನ್ನು ಪಬ್ಲಿಕ್ ಪರೀಕ್ಷೆಗಾಗಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ನಾವು ಜೂನ್ ತಿಂಗಳಲ್ಲೇ ಆರಂಭಿಸಿರುತ್ತೇವೆ. ವಿದ್ಯಾರ್ಥಿಗಳೂ ಅಷ್ಟೇ, ಜವಾಬ್ದಾರಿಯುತವಾಗಿ ವರ್ತಿಸಲು ಪ್ರಾರಂಭಿಸಿರುತ್ತಾರೆ. ವ್ಯವಸ್ಥಿತವಾದ ಕಲಿಕೆ ಆರಂಭಿಸಿರುತ್ತಾರೆ. ಈ ಮಧ್ಯೆ ಮನಸ್ಸು ಪ್ರೀತಿ-ಪ್ರೇಮದ ಕಡೆಗೆ ಹೋಯಿತೋ, ನಮ್ಮ ಹಾಗೂ ಅವರ ಪ್ರಯತ್ನಗಳೆಲ್ಲವೂ ನಿಷ#ಲವಾಗುತ್ತದೆ. ಜೊತೆಗೆ ಈ ಹಂತದ ಮಾನಸಿಕ ಬೆಳವಣಿಗೆಯ ಕುರುಹಾದ ಸಿಟ್ಟು, ಸಿಡುಕು, ಅಹಂಕಾರ, ಅವಿಧೇಯತೆಗಳೂ ಸೇರಿದರೆ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಲು ನಾವು ಭಾರಿ ಹೆಣಗಾಡಬೇಕಾಗುತ್ತದೆ. ಒಮ್ಮೊಮ್ಮೆ ನಮ್ಮ ಕಳಕಳಿಗೆ ಅವರು ಸ್ಪಂದಿಸದೇ ಇರುವಾಗ ಬೇಸತ್ತು ಅವರ ನಕಾರಾತ್ಮಕ ವರ್ತನೆಗಳನ್ನು ಕಡೆಗಣಿಸಿ ಅವರನ್ನು ನಿರ್ಲಕ್ಷಿಸಲು ಮನಸ್ಸು ಹೇಳುತ್ತದೆ. ಆದರೆ ಹಾಗೆ ಮಾಡಲು ಸಾಧ್ಯವಾಗದೇ, ಅವರನ್ನು ತಿದ್ದುವ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯವನ್ನು ಗಟ್ಟಿಗೊಳಿಸಲು ಪ್ರಯತ್ನ ಮುಂದುವರಿಸುತ್ತೇವೆ.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.