ಶಬರಿಮಲೆ ಪ್ರವೇಶ ನಿರಾಕರಣೆ ವಿಷಾದನೀಯ: ಸಾಂವಿಧಾನಿಕ ಪೀಠದ ಇಬ್ಬರು ಸದಸ್ಯರ ಪ್ರತ್ಯೇಕ ತೀರ್ಪು
ದೇಶವಾಸಿಗಳಿಗೆ ಸಂವಿಧಾನವೇ ಪವಿತ್ರ
Team Udayavani, Nov 15, 2019, 6:29 AM IST
ನವದೆಹಲಿ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡದೇ ಇರುವ ವಿಚಾರ ನಿಜಕ್ಕೂ ವಿಷಾದನೀಯ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮತ್ತಿಬ್ಬರು ಸದಸ್ಯರಾಗಿರುವ ನ್ಯಾ.ಆರ್.ಎಫ್.ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ್ ಪ್ರತಿಪಾದಿಸಿದ್ದಾರೆ. ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ಯಾಕೆ ವರ್ಗಾಯಿಸಬಾರದು ಎನ್ನುವುದಕ್ಕೆ ಇವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸ ನ್ಯಾಯಪೀಠ 2018ರಲ್ಲಿ ಇಂಡಿಯನ್ ಯಂಗ್ ಲಾಯರ್ಸ್ ಎಸೋಸಿಯೇಷನ್, ಇತರರು ಮತ್ತು ಕೇರಳ ರಾಜ್ಯ ಸರ್ಕಾರ ನಡುವಿನ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಪರಿಗಣಿಸದೇ ಇರುವ ಸಾಧ್ಯತೆ ಇದೆ ಎಂದು ನ್ಯಾ.ನಾರಿಮನ್ ಮತ್ತು ನ್ಯಾ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ, ಪಾರ್ಸಿ ಸಮುದಾಯದಲ್ಲಿ ಬೆಂಕಿಯ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ಮತ್ತೆರಡು ವಿಚಾರಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಕ್ಕೆ ಆಕ್ಷೇಪ ಎತ್ತಿ ಪ್ರತ್ಯೇಕ ತೀರ್ಪು ಬರೆದ ಸಂದರ್ಭಗಳಲ್ಲಿ ಇಬ್ಬರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಚ್ಚರಿಕೆ ವಹಿಸಬೇಕು: ಧಾರ್ಮಿಕತೆಗೆ ಸಂಬಂಧಿಸಿದ ವಿಚಾರಗಳನ್ನು ನ್ಯಾಯಾಲಯಗಳು ವಿಚಾರಣೆ ನಡೆಸುವ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು
ನ್ಯಾ.ಆರ್.ಎಫ್.ನಾರಿಮನ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ‘ಸಂಪ್ರದಾಯವನ್ನು ಪಾಲನೆ ಮಾಡಿಯೇ ಮಾಡುತ್ತೇವೆ ಎಂದು ಹೇಳುವ ಮೂಲಕ ತೀರ್ಪನ್ನು ಅನುಷ್ಠಾನಗೊಳಿಸಲು ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ ನ್ಯಾ.ನಾರಿಮನ್. ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಜತೆಗೆ ಚರ್ಚೆ ನಡೆಸಿ ತೀರ್ಪು ಜಾರಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಸರ್ಕಾರಕ್ಕೆ ಅವರು ಸೂಚನೆ ನೀಡಿದ್ದಾರೆ.
ಸಂವಿಧಾನವೇ ಪವಿತ್ರ: ದೇಶದ ನಾಗರಿಕರಿಗೆ ಸಂವಿಧಾನವೇ ಪವಿತ್ರ ಪುಸ್ತಕ ಎಂದು ಬಣ್ಣಿಸಿದ ನ್ಯಾ.ಆರ್.ಎಫ್.ನಾರಿಮನ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್, ‘ಸಂವಿಧಾನದ ಆಧಾರದಲ್ಲಿಯೇ ಎಲ್ಲರೂ ಒಟ್ಟಾಗಿ ಒಂದೇ ರಾಷ್ಟ್ರ ಎಂಬಂತೆ ಸಾಗುತ್ತಿದ್ದಾರೆ’ ಎಂದೂ ಹೇಳಿದ್ದಾರೆ.
ಭಕ್ತರ ಹಕ್ಕುಗಳ ರಕ್ಷಣೆ ಸೂಕ್ತ
‘ನಂಬಿಕೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮತ್ತು ಭಕ್ತರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಇದೊಂದು ಸೂಕ್ತ ಕ್ರಮ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. ಇದು ಮೂಲಭೂತ ಹಕ್ಕಾಗಿರಲಿಲ್ಲ. ಬದಲಾಗಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದು ಅವರು ಹೇಳಿದ್ದಾರೆ.
ದಾವೂದಿ ಬೋಹ್ರಾ ಸಮುದಾಯ
ಶಿಯಾ ಮುಸ್ಲಿಂ ಸಮುದಾಯದ ಒಳ ಪಂಗಡವೇ ದಾವೂದಿ ಬೋಹ್ರಾ. ಭಾರತ, ಪಾಕಿಸ್ತಾನ, ಯೆಮೆನ್, ಪೂರ್ವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯದವರು ಕಾಣ ಸಿಗುತ್ತಾರೆ. ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ಯುರೋಪ್‌ಗಳಲ್ಲಿಯೂ ಇದ್ದಾರೆ.
ಭಾರತದಲ್ಲಿ ಈ ಸಮುದಾಯದ 10 ಲಕ್ಷ ಮಂದಿ ಇದ್ದಾರೆ. ಸಮುದಾಯದ ಮಹಿಳೆಯರು ಆರು ಅಥವಾ ಏಳು ವರ್ಷದವರು ಇರುವಾಗಲೇ ಜನನಾಂಗದ ಅಂಶವನ್ನು ಛೇದಿಸಲಾಗುತ್ತದೆ. ಅದನ್ನು ‘ಖಾಟ್ನಾ’ ಅಥವಾ ‘ಖಾರ್ಫ್’ ಎಂದು ಕರೆಯಲಾಗುತ್ತದೆ. ಸಮುದಾಯದ ಧರ್ಮ ಗುರು ಸಯೇದ್ನಾ ಮುಫದ್ದಾಲ್ ಸೈಫುದ್ದೀನ್ ಪ್ರತಿಪಾದಿಸಿರುವ ಪ್ರಕಾರ ‘ಇದೊಂದು ಧಾರ್ಮಿಕ ರೀತಿಯಲ್ಲಿ ಶುದ್ಧೀಕರಣ’ ಎಂದು ಹೇಳಿದ್ದಾರೆ. ಬೋಹ್ರಾ ಸಮುದಾಯದ ಇತರ ಪಂಗಡಗಳಾಗಿರುವ ಸುಲೇಮಾನಿ ಬೋಹ್ರಾ, ಅಲವಿ ಬೋಹ್ರಾಗಳೂ ಮಹಿಳೆಯರ ಜನನಾಂಗ ಛೇದನ ಪದ್ಧತಿ ಅನುಸರಿಸುತ್ತಿವೆ.
ಸುಪ್ರೀಂಕೋರ್ಟ್‌ನಲ್ಲಿ ಕೇಸು: ಈ ಪದ್ಧತಿ ಪ್ರಶ್ನೆ ಮಾಡಿ ನವದೆಹಲಿಯಲ್ಲಿ ವಕೀಲರಾಗಿರುವ ಸುನಿತಾ ತಿವಾರಿ ಎಂಬವರು 2017ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.
ತಾರಮತ್ಯದ ವಿಚಾರ ಅಲ್ಲ: ಆರ್‌ಎಸ್‌ಎಸ್
ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಆರ್‌ಎಸ್‌ಎಸ್ ಸ್ವಾಗತಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಖೀಲ ಭಾರತ ಪ್ರಚಾರ ಮುಖ್ಯಸ್ಥ ಅರುಣ್ ಕುಮಾರ್ ‘ಸುಪ್ರೀಂಕೋರ್ಟ್ ನಿರ್ಧಾರವನ್ನು ಆರ್‌ಎಸ್‌ಎಸ್ ಸ್ವಾಗತಿಸುತ್ತದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಎನ್ನುವುದು ಲಿಂಗ ತಾರತಮ್ಯವಲ್ಲ. ಅದು ನಂಬಿಕೆಯ ವಿಚಾರ. ಕ್ಷೇತ್ರಗಳಿಗೆ ಪ್ರವೇಶ ವಿಚಾರ ಅಲ್ಲಿನ ಸಂಪ್ರದಾಯಗಳಿಗೆ ಅನುಸಾರವಾಗಿ ಇರಬೇಕು’ ಎಂದು ಬರೆದುಕೊಂಡಿದ್ದಾರೆ.
ತಜ್ಞರ ಜತೆಗೆ ಸಮಾಲೋಚನೆ
ಸುಪ್ರೀಂಕೋರ್ಟ್ ನಿರ್ಧಾರದ ಬಗ್ಗೆ ಸರ್ಕಾರ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ತಿರುವನಂತಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ. ದೇಗುಲ ಪ್ರವೇಶ ಮಾಡಲಿರುವ ಮಹಿಳೆಯರಿಗೆ ವಿಶೇಷ ಭದ್ರತೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯನ್ ‘ಎಲ್ಲಾ ಸಂಶಯಗಳನ್ನು ಪರಿಹರಿಸಿಕೊಂಡ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ಹೇಳಿದ್ದಾರೆ.
ಅಗ್ಯಾರಿ ಪದ್ಧತಿ ಎಂದರೇನು?
ಪಾರ್ಸಿ ಸಮುದಾಯ ಮೂಲತಃ ಬೆಂಕಿಯನ್ನು ಪೂಜಿಸುವ ಸಮುದಾಯ. ಅವರ ದೇಗುಲಕ್ಕೆ ಗುಜರಾತಿ ಭಾಷೆಯಲ್ಲಿ ಅಗ್ಯಾರಿ ಎನ್ನುತ್ತಾರೆ. ಅಲ್ಲಿ ಪಾರ್ಸಿ ಹೊರತಾಗಿನ ಸಮುದಾಯದವರಿಗೆ ಪ್ರವೇಶ ನಿಷಿದ್ಧ. ಪಾರ್ಸಿ ಸಮುದಾಯದ ಮಹಿಳೆಯರು ಸಮುದಾಯದ ಹೊರಗೆ ವಿವಾಹವಾದರೆ ಅಂಥವರಿಗೆ ಈ ದೇಗುಲ ಪ್ರವೇಶ ಮಾಡಲು ಅವಕಾಶ ಇರಲಿಲ್ಲ.
ಗೂಲ್‌ರುಖ್ ಗುಪ್ತಾ ಎಂಬ ಗುಜರಾತ್‌ನ ಮಹಿಳೆ ಪಾರ್ಸಿ ಸಮುದಾಯದ ಪದ್ಧತಿಯನ್ನು ಪ್ರಶ್ನಿಸಿ 2010ರಲ್ಲಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದು ಸಮುದಾಯದ ಕಟ್ಟಳೆಗಳನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು. ಇದರಿಂದ ತೃಪ್ತರಾಗದ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ, ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತಲ್ಲದೆ, ದೇಗುಲದಲ್ಲಿ ನಡೆಯಲಿರುವ ಗೂಲ್‌ರುಖ್ ಗುಪ್ತಾರ ತಂದೆಯ ಉತ್ತರ ಕ್ರಿಯೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿತ್ತು.
ದೇಗುಲಗಳ ಸಂಖ್ಯೆ
167 - ವಿಶ್ವದಲ್ಲಿರುವ ಅಗ್ಯಾರಿ ದೇಗುಲ (ಬೆಂಕಿಯ ದೇಗುಲ)
45- ಮುಂಬೈನಲ್ಲಿರುವ ದೇಗುಲಗಳ ಸಂಖ್ಯೆ
105- ದೇಶದ ಇತರ ಭಾಗಗಳಲ್ಲಿ ಇರುವ ದೇಗುಲಗಳು
17- ವಿಶ್ವದ ಇತರ ದೇಗುಲಗಳ ಸಂಖ್ಯೆ
ಶಬರಿಮಲೆ ವಿಚಾರವನ್ನು ತೀರ್ಮಾನಿಸುವುದನ್ನು ಏಳು ಸದಸ್ಯರ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದ್ದು ಸೂಕ್ತ ನಿರ್ಧಾರ. ಮಸೀದಿಗಳಿಗೆ ಮಹಿಳೆಯರು ಪ್ರವೇಶ ಮಾಡುವ ವಿಚಾರ ಕೂಡ ಇದರಲ್ಲಿ ಸೇರ್ಪಡೆ ಯಾಗಿರುವುದರಿಂದ ಸಾಂವಿಧಾನಿಕ ಪೀಠದ ನಿರ್ಧಾರ ಸ್ವಾಗತಾರ್ಹ.
– ಶಶಿ ತರೂರ್, ತಿರುವನಂತಪುರ ಸಂಸದ
ಈ ನಿರ್ಧಾರ ಸ್ವಾಗತಾರ್ಹ. 2018 ಸೆ.28ರ ತೀರ್ಪಿಗೆ ಯಾವುದೇ ತಡೆಯಾಜ್ಞೆ ನೀಡದೆ ಇರುವುದರಿಂದ ರಾಜ್ಯ ಸರ್ಕಾರ ಯಾವುದೇ ಹೆಚ್ಚುವರಿ ಭದ್ರತೆ ನೀಡಿ ರಾದ್ಧಾಂತ ಮಾಡಬೇಕಾದ ಅಗತ್ಯವಿಲ್ಲ. ಹೀಗಾಗಿ ಅದು ತನ್ನ ಹಿಂದಿನ ರಹಸ್ಯ ಅಜೆಂಡಾ ಜಾರಿ ಮಾಡುವುದು ಬೇಡ.
– ರಮೇಶ್ ಚೆನ್ನಿತ್ತಲ, ಕೇರಳ ಪ್ರತಿಪಕ್ಷ ನಾಯಕ
ಮಹಿಳೆಯರು ದೇಗುಲಕ್ಕೆ ಪ್ರವೇಶ ಮಾಡುವುದಿದ್ದರೆ ಕೇರಳ ಸರ್ಕಾರ ಅವರನ್ನು ತಡೆಯಬೇಕು. ವಿಸ್ತೃತ ಪೀಠಕ್ಕೆ ಶಬರಿಮಲೆ ತೀರ್ಪು ವರ್ಗಾವಣೆಗೊಂಡಿದೆ ಎಂದಾದರೆ ಹಿಂದಿನ ತೀರ್ಪಲ್ಲಿ ಲೋಪವಿದೆ ಎನ್ನುವುದು ನಿಸ್ಸಂದೇಹ.
– ಕುಮ್ಮನಮ್ ರಾಜಶೇಖರನ್, ಕೇರಳ ಬಿಜೆಪಿ ಮಾಜಿ ಅಧ್ಯಕ್ಷ
ವಿಸ್ತೃತ ಪೀಠ ನಿರ್ಧಾರ ಪ್ರಕಟಿಸುವ ವರೆಗೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ಮುಂದುವರಿಯಬೇಕು. ಅದುವರೆಗೆ ಯಾರೂ ಪ್ರತಿಭಟನೆ ಮಾಡಬಾರದು. ನ.16ರಂದು ನಾನು ಶಬರಿಮಲೆಗೆ ಪೂಜೆ ಸಲ್ಲಿಸಲು ಹೋಗುತ್ತೇನೆ.
– ತೃಪ್ತಿ ದೇಸಾಯಿ, ಹೋರಾಟಗಾರ್ತಿ
ಹಿಂದಿನ ತೀರ್ಪನ್ನು ಮರುಪರಿಶೀಲನೆ ನಡೆಸಲೇಬೇಕು ಎಂದು ಬಹುತೇಕ ಮಂದಿ ಬಯಸಿದ್ದರು. ಈಗಿನ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ.
ಯಾವುದೇ ಧರ್ಮದಲ್ಲಿ ಯಾರೂ ಮಧ್ಯಪ್ರವೇಶ ಮಾಡಬಾರದು. ಏಕೆಂದರೆ ಭಾರತವು ಬಹುತ್ವದ ಭೂಮಿ. ಭಾರತದ ಶ್ರೇಷ್ಠತೆ ಇರುವುದೇ ನಮ್ಮ ಸಾಂಸ್ಕೃತಿಕ ವೈವಿಧ್ಯದಲ್ಲಿ.
– ರಾಹುಲ್ ಈಶ್ವರ್, ಅರ್ಜಿದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.