ಸಹಕಾರಿ ಸಂಘ-ಬ್ಯಾಂಕ್‌ಗಳಿಗೆ ಸಹಕರಿಸದ ಸರ್ಕಾರ
Team Udayavani, Nov 16, 2019, 4:57 PM IST
ದಾವಣಗೆರೆ: ಸರ್ಕಾರ ಸಹಕಾರಿ ಸಂಘ, ಬ್ಯಾಂಕ್‌ಗಳಿಗೆ ನೆರವು ನೀಡದೇ ಇದ್ದರೂ ಅತಿ ಹೆಚ್ಚಿನ ನಿರ್ಬಂಧ ಹೇರುತ್ತಿದೆ ಎಂದು ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೋಗುಂಡೆ ಬಕ್ಕೇಶಪ್ಪ ತಿಳಿಸಿದ್ದಾರೆ.
ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್,ಶಿಮುಲ್ , ಪತ್ತಿನ ಸಹಕಾರ ಸಂಘ ಹಾಗೂ ವಿವಿಧ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ 66 ನೇ ಸಹಕಾರ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘ, ಬ್ಯಾಂಕ್ ಸರ್ಕಾರದಿಂದ ನೆರವು ಪಡೆಯದೇ ಇದ್ದರೂ ವಿಪರೀತ ಎನ್ನುವಂತೆ ನಿರ್ಬಂಧ ಹೇರುತ್ತಿದೆ ಎಂದರು.
ಸಹಕಾರಿ ಸಂಘಗಳಲ್ಲಿ ಅಧ್ಯಕ್ಷ ಸ್ಥಾನಕ್ಕಿಂತಲೂ ಆಡಳಿತ ಮಂಡಳಿಗಳಿಗೆ ಅಧಿಕಾರ ನೀಡಬೇಕು ಎಂದು ನಾಲ್ಕು ವರ್ಷಗಳಿಂದ ಸರ್ಕಾರದ ಗಮನಕ್ಕೆ ತಂದರೂ ಈ ವರೆಗೆ ಸಹಕಾರವೇ ಸಿಕ್ಕಿಲ್ಲ . ಪ್ರತಿ ಬಾರಿ ಬ್ಯಾಂಕ್‌ಗಳ ನವೀಕರಣ ಹೊರೆಯಾಗಲಿದೆ. ಎಲ್ಲಾ ಸಹಕಾರಿ ಬ್ಯಾಂಕ್ ಗಳು ಸೇರಿ ಒಮ್ಮೆಗೆ ನವೀಕರಣ ಮಾಡುವಂತೆ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಲೆಕ್ಕಪರಿಶೋಧಕ ಮಹೇಶ್ವರಪ್ಪ ಮಾತನಾಡಿ, ಸಹಕಾರಿ ಕಾಯ್ದೆ 1904 ರಲ್ಲಿ ಜಾರಿಯಾಯಿತು, 1950 ರವರೆಗೂ ಸಹಕಾರಿ ರಂಗ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿತು. ಪಂಚವಾರ್ಷಿಕ ಆರ್ಥಿಕ ಯೋಜನೆಗಳು ಜನರಿಗೆ ತಲುಪಲು ಸಹಕಾರಿ ಬ್ಯಾಂಕ್ ಸಹಾಯವಾದವು. ಆದರೆ, 1991ರ ನಂತರ ಸರ್ಕಾರಗಳು ಸಹಕಾರಿ ಬ್ಯಾಂಕ್‌ಗಳಲ್ಲಿ ಅಸ್ತಿತ್ವ ಸಾ ಧಿಸಲು ಮುಂದಾದವು. ಸರ್ಕಾರವನ್ನು ಹೊರಗಿಡಲು ಸಹಕಾರಿ ಬ್ಯಾಂಕ್ ಗಳು ಸರ್ಕಾರದಿಂದ ಯಾವೊಂದು ಅನುದಾನ, ಸೌಲಭ್ಯ ಪಡೆಯುವುದನ್ನು ನಿರಾಕರಿಸಿದವು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 11 ಅರ್ಬನ್ ಬ್ಯಾಂಕ್‌ಗಳ ಕಾರ್ಯವ್ಯಾಪ್ತಿ ದೊಡ್ಡ ಸವಾಲು. ಸಿಬ್ಬಂದಿಗಳು ಸಹಕಾರಿ ಬ್ಯಾಂಕ್‌ಗಳು ಲಾಭದಾಯಕವಾಗಿ ಬೆಳೆಯಲು ಶ್ರಮಿಸಬೇಕು. ಆರ್‌ಬಿಐ ನ ಎಲ್ಲಾ ನಿಯಮಗಳನ್ನು ಪರಿಪಾಲಿಸಿದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಸಹಕಾರಿ ಬ್ಯಾಂಕುಗಳನ್ನು ಸೇವಾ ಮನೋಭಾವದಿಂದ ಲಾಭದಾಯಕವಾಗಿ ಬೆಳೆಸುವಂತಾಗಬೇಕು ಎಂದು ಆಶಿಸಿದರು.
ಪ್ರಾಸ್ತಾವಿಕ ಮಾತುಗಳಾಡಿದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಇಂಗ್ಲೆಂಡ್‌ನ ರಾಕ್‌ಡೆಲ್… ಎಂಬಲ್ಲಿ ಸಹಕಾರ ತತ್ವ ಜನ್ಮತಾಳಿತು. 1844 ರಲ್ಲಿ ನೂಲಿನ ಗಿರಣಿ ಕಾರ್ಮಿಕರು ಸೇರಿ ಸೊಸೈಟಿ ಪ್ರಾರಂಭಿಸಿದರು.
ಗದಗಿನ ಕಣಗಿನಹಾಳ್‌ನ ಸಿದ್ದನಗೌಡ ಸಣ್ಣ ರಾಮಣ್ಣನಗೌಡ ಅವರು ಸಹಕಾರ ತತ್ವವನ್ನು ಕರ್ನಾಟಕದಲ್ಲಿ ಹುಟ್ಟಿಹಾಕಿದರು. ಹಾಗಾಗಿ ಅವರನ್ನು ಸಹಕಾರಿ ತತ್ವದ ಪಿತಾಮಹ… ಇಂಗ್ಲೆಂಡ್‌ನ್ನು ಸಹಕಾರಿ ತೊಟ್ಟಿಲು ಎನ್ನಲಾಗುತ್ತದೆ ಎಂದು ತಿಳಿಸಿದರು.
ಸಹಕಾರಿ ಸಂಘಗಳಲ್ಲಿ ಆಗುವ ನೂತನ ಕಾನೂನುಗಳ ಮತ್ತು ತಂತ್ರಜ್ಞಾನಗಳ ಬಗ್ಗೆ ತರಬೇತಿ ಕೊಡಲು ರಾಜ್ಯದಲ್ಲಿ 8 ಕಡೆಗಳಲ್ಲಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ದಾವಣಗೆರೆಯಲ್ಲೂ ಶೀಘ್ರದಲ್ಲಿ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ವಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ. ಸಂಗಮೇಶ್ವರ ಗೌಡ್ರು, ಆರ್.ಜಿ. ಶ್ರೀನಿವಾಸಮೂರ್ತಿ, ಎಚ್.ಜಿ. ಸಂಗಪ್ಪ, ಡಾ| ತಿಪ್ಪೇಸ್ವಾಮಿ ಏಕಬೋಟೆ, ಗುಡ್ಡಳ್ಳಿ ನಾಗರಾಜ್, ಕೆ.ಎಂ. ಸೋಮಶೇಖರಪ್ಪ, ಜಿ.ಪಿ. ಶರಣಪ್ಪ, ಡಿ.ಎಂ. ಮುರುಗೇಂದ್ರಯ್ಯ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.