ಮೂಳೆ ಸವಕಳಿ ಸದ್ದಿಲ್ಲದ ಕಳ್ಳ !


Team Udayavani, Nov 17, 2019, 5:45 AM IST

nn-11

ಗಂಗಮ್ಮ 76 ವರ್ಷದವರು. ಮನೆಯ ಹೊಸ ಗ್ರಾನೈಟ್‌ ನೆಲದಲ್ಲಿ ಕಾಲು ಜಾರಿ ಉಳುಕಿದಂತಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಸೊಂಟದ ಕೀಲಿನ ಬಳಿ ಮೂಳೆ ಮುರಿತ ಪತ್ತೆ. ಚಿಕಿತ್ಸೆ; ಶಸ್ತ್ರಚಿಕಿತ್ಸೆ ನಡೆಸಿ, ಕೀಲು ಬದಲಾವಣೆ. ಖರ್ಚು ಲಕ್ಷ ರೂ.

ನರಸಿಂಹ ಭಟ್‌, 60 ವರ್ಷ. ಬಸ್ಸಿನ ಕೊನೆಯ ಸೀಟಿನಲ್ಲಿ ಶಿವಮೊಗ್ಗಕ್ಕೆ ಪ್ರಯಾಣಿಸುವಾಗ, ಹೆಬ್ರಿ ಬಳಿ ರಸ್ತೆ ಹೊಂಡಕ್ಕೆ ಬಸ್‌ ಬಿದ್ದಾಗ ಸೀಟಿನಲ್ಲೇ ಹಾರಿ ಬಿದ್ದ ಪ್ರಸಂಗ. ಅನಂತರ ಅಸಾಧ್ಯ ಬೆನ್ನುನೋವು. ಎಕ್ಸ್‌ರೇ ತೆಗೆದು ನೋಡಿದಾಗ ಬೆನ್ನು ಮೂಳೆ ಮೂರು ಕಡೆ ಮುರಿತ!

ನಿಖೀಲ್‌ ಡಿ’ಸೋಜಾ, 19 ವರ್ಷ. ಕಾಲೇಜ್‌ ವಿದ್ಯಾರ್ಥಿ. ಸಂಜೆ ಕ್ಲಾಸ್‌ ಮುಗಿದ ಕೂಡಲೇ ಕಾಲೇಜ್‌ ಬಳಿಯ ಜಿಮ್‌ನಲ್ಲಿ ವ್ಯಾಯಾಮ. ಸಿನೆಮಾ ತಾರೆಯರಂತೆ ಸಿಕ್ಸ್‌ ಪ್ಯಾಕ್‌ ಬೇಕೆಂಬ ಹಂಬಲ. ಬೇಕಾಬಿಟ್ಟಿ ಮಾಂಸಖಂಡ ಉಬ್ಬಿಸಲು ಸ್ಟಿರಾಯ್ಡ ಸೇವನೆ. ಹೊತ್ತಿಗೆ ಸರಿಯಾಗಿ ತಿಂಡಿ ಊಟವಿಲ್ಲ. ಕೋಲಾ, ಕುರುಕಲು ತಿಂಡಿಗಳೇ ಆಹಾರ.

ಶ್ರಾವ್ಯಾ, 22 ವರ್ಷ. ಎಂಜಿನಿಯರಿಂಗ್‌ ವಿದ್ಯಾರ್ಥಿನಿ. ದಿನವಿಡೀ ಸೈಜ್‌ ಜೀರೋ ಕನಸು. ಕರೀನಾ ಕಪೂರ್‌ಳಂತೆ ತೆಳ್ಳಗಾಗುವ ಕನಸು. ಸಾಂಪ್ರದಾಯಿಕ ಊಟ, ತಿಂಡಿ ಬಿಟ್ಟು ಜಂಕ್‌ಪುಡ್‌, ಓಟ್ಸ್‌ ಸೇವನೆ. ಜಾಹೀರಾತು ನಂಬಿ ತೂಕ ಇಳಿಸುವ ಔಷಧ ಪುಡಿಗಳ ಬಳಕೆ. ನಿಖೀಲ್‌ ಮತ್ತು ಶ್ರಾವ್ಯಾ ಊರಿನಲ್ಲಿ ಮೂಳೆ ಸಾಂದ್ರತೆ ಕ್ಯಾಂಪ್‌ ನಡೆದಾಗ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸ ಬಂದವರು.

ಕುತೂಹಲದಿಂದ ತಮ್ಮದೇ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಕೊಂಡಾಗ ಫ‌ಲಿತಾಂಶ ನೋಡಿ ಹೌಹಾರಿದರು – ಇಬ್ಬರಿಗೂ ಅತಿಯಾದ ಮೂಳೆ ಸವಕಳಿ! ಗಂಗಮ್ಮ, ನರಸಿಂಹ ಭಟ್‌, ನಿಖೀಲ್‌ ಹಾಗೂ ಶ್ರಾವ್ಯಾ ಇವರೆಲ್ಲರಿಗೂ ಇರುವ ತೊಂದರೆ ಮೂಳೆ ಸವಕಳಿ ಅಂದರೆ ಆಸ್ಟಿಯೋಪೋರೋಸಿಸ್‌. ಇವರಿಗ್ಯಾಕೆ ಅದರ ಅರಿವೇ ಇರಲಿಲ್ಲ? ಇದ್ದಕ್ಕಿದ್ದಂತೆ ಸಣ್ಣ ಮಟ್ಟಿನ ಆಘಾತಕ್ಕೂ ಮೂಳೆ ಮುರಿತಗಳು ಹೇಗಾದವು? ಇದೇ ಕುಖ್ಯಾತಿಯಿಂದಾಗಿ ಮೂಳೆ ಸವಕಳಿಯನ್ನು ವೈದ್ಯಕೀಯ ಸಾಹಿತ್ಯ “ಸದ್ದಿಲ್ಲದ ಕಳ್ಳ’ ಎಂದು ಬಣ್ಣಿಸಿವೆ.

ಮುಟ್ಟು ನಿಂತ ಹಾಗೂ ವಯಸ್ಸಾದ ಮಹಿಳೆಯರನ್ನಷ್ಟೇ ಕಾಡಿಸಿ ಪೀಡಿಸುತ್ತಿದ್ದ ಆಸ್ಟಿಯೋಪೋರೋಸಿಸ್‌ ಎಂಬ ಮೂಳೆ ಸವಕಳಿ ಕಾಯಿಲೆಯೀಗ ಎಲ್ಲ ವಯೋವರ್ಗದ ಸ್ತ್ರೀ – ಪುರುಷರನ್ನು ಯಾವುದೇ ಮುಲಾಜಿಲ್ಲದೆ ಜೀವನಪರ್ಯಂತ ಹೈರಾಣು ಮಾಡುತ್ತಿದೆ. ಮೂಳೆ ಎಂಬ ಅದ್ಭುತ ಅಂಗಾಂಶವನ್ನು ಗಟ್ಟಿಮುಟ್ಟಾಗಿ ಆರೋಗ್ಯವಾಗಿಡಲು, ಮೂಳೆ ಸವಕಳಿಯ ಮುರಿತದ ಯಾತನೆಯ ಅಪಾಯದಿಂದ ಪಾರು ಮಾಡಲು ಏನಿದು ಉಪಾಯ?

ಮೂಳೆ ಸವಕಳಿ: ಸದ್ದಿಲ್ಲದ ಕಳ್ಳ!
ಮೊದಲ ಹಂತದಲ್ಲಿ ಯಾವುದೇ ಲಕ್ಷಣಗಳಿಲ್ಲದ, ಆದರೆ ಬಹಳ ಬೇಗ ಉಲ್ಬಣಿಸುವ ಕಾಯಿಲೆ. ಸವಕಳಿಗೊಂಡ, ಶಿಥಿಲವಾದ ಮೂಳೆ ಬೆನ್ನನ್ನು ಬಾಗಿಸಿ, ರೋಗಿಯನ್ನು ಕುಳ್ಳಗಾಗಿಸುತ್ತದೆ. ಬೆನ್ನು, ಸೊಂಟ ಮತ್ತು ಮಣಿಗಂಟಿನಲ್ಲಿ ಮೂಳೆ ಮುರಿತಕ್ಕೆ ಮುಖ್ಯ ಕಾರಣವಾಗುತ್ತದೆ. ಇದುವರೆಗೆ ಮುಟ್ಟು ನಿಂತ ಮತ್ತು ವಯಸ್ಸಾದ ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂದು ನಂಬಲಾಗಿದ್ದ ಈ ಕಾಯಿಲೆ, ಎಲ್ಲ ವಯೋಮಾನದ ಜನರನ್ನು ಸ್ತ್ರೀ-ಪುರುಷ ಎಂಬ ಭೇದಭಾವ ಇಲ್ಲದೆ ತೊಂದರೆಗೀಡು ಮಾಡುತ್ತಿದೆ.

ಮೂಳೆ ಸವಕಳಿಯ ಕಾರಣದಿಂದ ಸೊಂಟದ ಕೀಲು ಮುರಿದ ವ್ಯಕ್ತಿಗಳಲ್ಲಿ ಶೇ. 20 ಜನರು ಒಂದು ವರ್ಷದೊಳಗೆ ಸಾಯಬಹುದು. ಉಳಿದ ಶೇ.80 ಜನರು ಜೀವನಪರ್ಯಂತ ಪರಾವಲಂಬಿಗಳಾಗಬಹುದು. ಮೂಳೆಯ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಿ, ಜೀವನಪರ್ಯಂತ ಮೂಳೆಗಳನ್ನು ಗಟ್ಟಿಮುಟ್ಟು ಹಾಗೂ ಆರೋಗ್ಯವಾಗಿರಿಸಲು, ಮೂಳೆ ಮುರಿತ ತಡೆಗಟ್ಟಲು ಇಲ್ಲಿದೆ ಮಾಹಿತಿ.

ಮೂಳೆ ಒಂದು ಅದ್ಭುತ ಜೀವಂತ ಅಂಗಾಂಶ. ರಕ್ತಸಂಚಾರ, ನರ, ಜೀವಕೋಶಗಳು, ಪ್ರೊಟೀನ್‌, ಖನಿಜಗಳು ಮತ್ತು ವಿಟಮಿನ್‌ಯುಕ್ತ. ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುವ ವಿಸ್ಮಯಕಾರಿ ವ್ಯವಸ್ಥೆ.

ರಚನೆ
ಜನನದಲ್ಲಿ ಸಾಮಾನ್ಯವಾಗಿ 300 ಮೂಳೆಗಳಿದ್ದು, ಬೆಳವಣಿಗೆಯಾದಂತೆ ಪ್ರೌಢಾವಸ್ಥೆಯಲ್ಲಿ 206 ಗಟ್ಟಿಯಾದ ಹಂದರ ದೇಹಕ್ಕೆ ಆಕಾರ ನೀಡುತ್ತದೆ. ಚಲನವಲನಗಳಿಗೆ ಆಧಾರ ನೀಡುತ್ತದೆ. ಜೀವಕ್ಕೆ ಅವಶ್ಯವಾದ ರಕ್ತಕಣಗಳ ಉತ್ಪಾದನೆಯೂ ಮೂಳೆಗಳಲ್ಲೇ ಆಗುತ್ತದೆ (ಅಸ್ತಿ ಮಜ್ಜೆ). ಆಸ್ಟಿಯೋಬ್ಲಾಸ್ಟ್‌ ಅಂದರೆ ಮೂಳೆಯನ್ನು ಉತ್ಪಾದಿಸುವ ಜೀವಕೋಶ. ಆಸ್ಟಿಯೋಕ್ಲಾಸ್ಟ್‌ ಅಂದರೆ ಮೂಳೆಯನ್ನು ಪುನರ್‌ನಿರ್ಮಾಣ ಮಾಡುವ ಜೀವಕೋಶ. ಈ ಮೂರು ಜೀವಕೋಶಗಳು ಕೊಲ್ಯಾಜಿನ್‌ ಕ್ಯಾಲ್ಸಿಯಮ್‌, ಇತರ ಖನಿಜಗಳು ಹಾಗೂ ನೀರನ್ನು ಒಳಗೊಂಡ ಮ್ಯಾಟ್ರಿಕ್ಸ್‌ನಲ್ಲಿ ಹುದುಗಿರುತ್ತವೆ.

 ಮೂಳೆಯಲ್ಲಿ ಮೃದುವಾದ ಕೊಲ್ಯಾಜಿನ್‌ ಪ್ರೊಟೀನ್‌ , ಕಠಿನ ಖನಿಜಗಳಾದ ಕ್ಯಾಲ್ಸಿಯಮ್‌ ಮತ್ತು ಫಾಸ್ಪರಸ್‌ ಇವೆ.
 ಮೂಳೆಯ ಸಾಂದ್ರತೆ ಕಾಯ್ದುಕೊಳ್ಳಲು
ಖನಿಜಗಳ ನಿಯಮಿತ ಸೇವನೆ ಅಗತ್ಯ. ಆಹಾರದಲ್ಲಿ ಕ್ಯಾಲ್ಸಿಯಮ್‌, ಖನಿಜಗಳು ಅಗತ್ಯ.
 ಈ ಖನಿಜಗಳನ್ನು ದೇಹದೊಳಗೆ ಹೀರಿಕೊಳ್ಳಲು ಕೆಲವು ಹಾರ್ಮೋನ್‌ಗಳಾದ ಕ್ಯಾಲ್ಸಿಟೋನಿನ್‌, ಪಾರಾಥೈರಾಯ್ಡ ಗ್ರೋಥ್‌ ಮತ್ತು ಈಸ್ಟ್ರೋಜನ್‌ (ಮಹಿಳೆಯರಲ್ಲಿ), ಪ್ರೊಜೆಸ್ಟಿರಾನ್‌ (ಪುರುಷರಲ್ಲಿ) ಸರಿಯಾದ ಪ್ರಮಾಣದಲ್ಲಿರಬೇಕು.
 ವಿಟಮಿನ್‌ ಡಿ – ಕ್ಯಾಲ್ಸಿಯಮ್‌ ಅನ್ನು ಮೂಳೆಗಳಿಗೆ ಶೇಖರ ಮಾಡಲು ಸಹಾಯ ಮಾಡುತ್ತದೆ.
 ಮೂಳೆಗಳು ಜೀವನಪರ್ಯಂತ ಹುಟ್ಟುತ್ತಲೇ ಇರುತ್ತವೆ. ಹಳೆಯ ಮೂಳೆಗಳು ತೆಗೆಯಲ್ಪಟ್ಟು ಆ ಜಾಗವನ್ನು ಹೊಸ ಮೂಳೆಗಳು ಆಕ್ರಮಿಸುತ್ತವೆ.
 ಮೂಳೆಯ ಸಾಂದ್ರತೆ ಜನನದಿಂದ 30 ವರ್ಷಗಳವರೆಗೆ ಏರುತ್ತಲೇ ಹೋಗುತ್ತದೆ. ಅನಂತರ ಹೊಸ ಮೂಳೆ ಸೇರುವ ಪ್ರಮಾಣ ಕಡಿಮೆಯಾಗುತ್ತದೆ. ಒಂದು ಹಂತದಲ್ಲಿ ಹೊಸ ಮೂಳೆ ಸೇರಿಕೊಳ್ಳುವ ಪ್ರಮಾಣಕ್ಕಿಂತ ಮೂಳೆ ತೆಗೆಯಲ್ಪಡುವುದು ಜಾಸ್ತಿಯಾಗಿ ಮೂಳೆ ಸವಕಳಿ ಆರಂಭವಾಗುತ್ತದೆ.
 ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಮ್‌, ಖನಿಜಗಳು, ಪ್ರೊಟೀನ್‌ ಮತ್ತು ವಿಟಮಿನ್‌ಗಳನ್ನು ಸೇವಿಸದಿದ್ದಲ್ಲಿ ದೇಹವು ಇರುವ ಮೂಳೆಯಿಂದಲೇ ಕ್ಯಾಲ್ಸಿಯಮ್‌ ಅನ್ನು ಹೊರ ತೆಗೆದು ಹೊಸ ಮೂಳೆ ಸೇರಿಸುವ ಪ್ರಯತ್ನ ಮಾಡುತ್ತದೆ.
ಮೂಳೆಗಳ ಬಲ ಮತ್ತು ಸಾಂದ್ರತೆಗೆ ಗಾಢವಾದ ಸಂಬಂಧ ಇದೆ. ಒತ್ತೂತ್ತಾದ ಮೂಳೆಯ ಕಣಗಳು ಆರೋಗ್ಯವಂತ ಮೂಳೆಯ ಲಕ್ಷಣ. ವಿರಳವಾದ ಮೂಳೆ ಕಣಗಳು ಮೂಳೆಯ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಇದೇ ಕಾರಣಕ್ಕೆ ಸವಕಳಿಯಾದ ಮೂಳೆಯನ್ನು ಗೆದ್ದಲು ಹಿಡಿದ ಮರಕ್ಕೆ ಹೋಲಿಸಲಾಗುತ್ತದೆ.

ನಿಮಗೆ ರಿಸ್ಕ್ ಇದೆಯೇ ಎಂದು ಕಂಡುಹಿಡಿಯಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ನಿರ್ಧರಿಸಿ.
ಮೂಳೆ ಸವಕಳಿ/ ಮುರಿತಕ್ಕೆ ಕಾರಣವಾಗುವ ಅಂಶಗಳು: ಯಾರಿಗೆ ಮೂಳೆ ಸವಕಳಿ ನಿರೋಧಕ / ಪ್ರತಿಬಂಧಕ ಚಿಕಿತ್ಸೆ ಅಗತ್ಯ ಇದೆ ಎಂದು ತಿಳಿಯಲು, ಅನಗತ್ಯ ಚಿಕಿತ್ಸೆಯನ್ನು ತಪ್ಪಿಸಲು ಈ ಕೆಳಗಿನ ಅಂಶಗಳನ್ನು ಗಮನಿಸಿ.

ಮೂಳೆಯ ಫಿಕ್ಸೆಡ್‌ ಡೆಪೋಸಿಟ್‌!
20ರಿಂದ 30 ವಯಸ್ಸಿನವರೆಗೆ ಗರಿಷ್ಠ ಎಷ್ಟು ಮೂಳೆ ಸಾಂದ್ರತೆ ಗಳಿಸಿದ್ದೀರೋ ಮೂಳೆಗಳ ಆರೋಗ್ಯ ಅಷ್ಟು ಉತ್ತಮವಾಗಿರುತ್ತದೆ. ಈ ವಯೋಮಾನದಲ್ಲಿ ಕಾಯಿಲೆಯಿಂದ ಬಳಲಿದರೆ, ಸರಿಯಾದ ಆಹಾರ ಸೇವಿಸದಿದ್ದರೆ ಮತ್ತು ಮೂಳೆಗಳು ಗರಿಷ್ಠ ಸಾಂದ್ರತೆ ಹೊಂದುವಲ್ಲಿ ವಿಫ‌ಲವಾದರೆ ಮುಂದೆ ಮೂಳೆ ಸವಕಳಿಯಾಗುವುದೂ ಖಂಡಿತ. ವಯಸ್ಸಾದಂತೆ ಮೂಳೆ ನಷ್ಟ ಜಾಸ್ತಿ. ಅವುಗಳ ಮರುಹುಟ್ಟು ಕಡಿಮೆ. ಮುಟ್ಟು ನಿಂತ ಬಳಿಕ ಮಹಿಳೆಯರ ಮೂಳೆ ಬಹಳ ಬೇಗ ಸಾಂದ್ರತೆ ಕಳೆದುಕೊಳ್ಳಲು ಆರಂಭಿಸುತ್ತದೆ. ಕೆಲವರಿಗೆ ಮೂಳೆ ಸವಕಳಿಯ ಅಪಾಯ / ರಿಸ್ಕ್ ಜಾಸ್ತಿ.

ಬದಲಾಯಿಸಲಾಗದ ಅಪಾಯದ ಅಂಶಗಳು
 ವಯಸ್ಸು: 60 ವರ್ಷ ದಾಟಿದ ಎಲ್ಲರಿಗೂ ಅಪಾಯ ಇದೆ. ಮುಟ್ಟು ನಿಂತ ಮಹಿಳೆಯರಿಗೆ ಅಪಾಯ ಜಾಸ್ತಿ.
 ಬಿಎಂಐ (ದೇಹದ ಎತ್ತರ ಮತ್ತು ತೂಕದ ಅನುಪಾತ) ಬಹಳ ಕೃಶಕಾಯದವರಿಗೆ ಮೂಳೆ ಸವಕಳಿ ಜಾಸ್ತಿ.
 ಯೌವನದಲ್ಲಿ ಮೂಳೆ ಮುರಿತದ ಇತಿಹಾಸ ಇದ್ದವರಿಗೆ
 ಬಹಳ ಬೇಗ ಮುಟ್ಟು ನಿಂತವರಿಗೆ / ಗರ್ಭಕೋಶ ತೆಗೆದಿರುವವರಿಗೆ )
 ದೀರ್ಘ‌ ಕಾಲದಿಂದ ಸ್ಟಿರಾಯ್ಡ / ಔಷಧ ಸೇವಿಸುತ್ತಿದ್ದವರಿಗೆ.

ಬದಲಿಸಬಹುದಾದ ಅಪಾಯದ ಅಂಶಗಳು
ಧೂಮಪಾನ, ಅತಿಯಾದ ಮದ್ಯಪಾನ ಹಾಗೂ ಲಘು ಪಾನೀಯ ಸೇವನೆಯನ್ನು ನಿಷೇಧಿಸಿ.
 ಆಹಾರದಲ್ಲಿ ಪೋಷಕಾಂಶಗಳಾದ ಕ್ಯಾಲ್ಸಿಯಮ್‌, ವಿಟಮಿನ್‌, ಪ್ರೊಟೀನ್‌ ಕೊರತೆ ನೀಗಿಸಿ.
 ದೈಹಿಕ ಚಟುವಟಿಕೆಗಳಿಗೆ ಆದ್ಯತೆ ಕೊಡಿ. ಬಿಸಿಲಿಗೆ ಮೈಯೊಡ್ಡಿ.
 ದೃಷ್ಟಿದೋಷ ನಿವಾರಿಸಿ, ಆಗಾಗ ಬೀಳದಂತೆ ಎಚ್ಚರವಹಿಸಿ
 ಅತಿಯಾದ ತೂಕ ಇಳಿಸುವಿಕೆ, ಅಲ್ಪಾಹಾರ ಸೇವನೆಯನ್ನು ಕೈಬಿಡಿ.

ಹೊಸ ಪೀಳಿಗೆ : ಹೊಸ ತೊಂದರೆ
ಸಾಮಾನ್ಯವಾಗಿ ಮೂಳೆ ಸವಕಳಿ ಮುಟ್ಟು ನಿಂತ, ವಯಸ್ಸಾದ ಮಹಿಳೆಯರಿಗೆ ಮಾತ್ರ ಇರುವ ತೊಂದರೆ ಎಂಬ ಭಾವನೆ ಇತ್ತು. ಆದರೆ ಬದಲಾಗಿರುವ ಜೀವನಶೈಲಿ, ಕಡಿಮೆಯಾದ ದೈಹಿಕ ಚಟುವಟಿಕೆ, ಮೈಗೆ ಬಿಸಿಲು ತಾಗದಿರುವುದು, ಜಂಕ್‌ ಫ‌ುಡ್‌ ಸೇವನೆ – ಸಾಫ್ಟ್ವೇರ್‌ ಎಂಜಿನಿಯರ್‌ಗಳನ್ನು, ವೈದ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಮೂಳೆ ಸವಕಳಿಯಿಂದ ಬಳಲುವಂತೆ ಮಾಡಿದೆ! ಕ್ರ್ಯಾಷ್‌ ಡಯಟ್‌ ಮಾಡುವ ಹದಿ ಹರೆಯದ ಹುಡುಗಿಯರು ಹಾಗೂ ಮಾಂಸ ಖಂಡಗಳನ್ನು ಉಬ್ಬಿಸಲು, ಬಿಗಿಗೊಳಿಸಲು ಸ್ಟಿರಾಯ್ಡ ಸೇವಿಸುವ ಯುವಕರನ್ನು ರೋಗಿಗಳನ್ನಾಗಿ ಮಾಡುತ್ತದೆ ಮೂಳೆ ಸವಕಳಿ.

ಮೂಳೆ ಸವಕಳಿ: ಲಕ್ಷಣಗಳು – ಅಪಾಯದ ಸಂಕೇತಗಳು
ಈ ರೋಗದ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳಾಗಲಿ, ತೊಂದರೆಯಾಗಲೀ ಕಾಣಿಸದು. ನಿರುತ್ಸಾಹ ಮತ್ತು ಯಾವುದೇ ತ್ರಾಸದಾಯಕ ಕೆಲಸಗಳನ್ನು ಮಾಡಲು ಆಗದೇ ಇರುವುದು ಪ್ರಥಮ ಸೂಚನೆ. ದಿನ ಕಳೆದಂತೆ ಮೂಳೆಗಳು ಇನ್ನಷ್ಟು ದುರ್ಬಲವಾದಾಗ, ಬೆನ್ನುನೋವು, ದೇಹದ ವಿವಿಧ ಭಾಗಗಳಲ್ಲಿ ನೋವು – ಬಿಗಿತ ಕಾಣಿಸಿಕೊಳ್ಳಬಹುದು. ಬೆನ್ನುಮೂಳೆ ದುರ್ಬಲವಾದರೆ ವ್ಯಕ್ತಿಯ ಎತ್ತರ ಕಡಿಮೆಯಾಗಿ ಕ್ರಮೇಣ ಬೆನ್ನು ಮುಂದಕ್ಕೆ ಬಾಗುವುದು.
ತೀವ್ರವಾದ ಮೂಳೆ ಸವಕಳಿಯಾದರೆ, ಸಣ್ಣಪುಟ್ಟ ಬೀಳುವಿಕೆ, ಉಳುಕಿದಂತಾದರೆ ಅಥವಾ ಜೋರಾಗಿ ಕೆಮ್ಮಿದರೆ, ಸೀನಿದರೆ ಕೂಡ ಮೂಳೆ ಮುರಿತವಾಗಬಹುದು.

ಬೆನ್ನುಮೂಳೆಯಿಂದ ಬೆನ್ನು ಡೊಂಕು.
ಮೃದುವಾದ ಬೆನ್ನಿನ ಮೂಳೆಗಳು ಮುರಿದರೆ/ ಚಪ್ಪಟೆಯಾದರೆ ಬೆನ್ನು ಡೊಂಕಾಗುತ್ತದೆ. ಬೆನ್ನುಹುರಿಯ ಮೇಲೆ, ನರಗಳ ಮೇಲೆ ಒತ್ತಡ ಉಂಟಾದಲ್ಲಿ ಬೆನ್ನಿನಲ್ಲಿ ಅಲ್ಲದೆ ಕಾಲುಗಳಲ್ಲಿ ಕೂಡ ತೀವ್ರವಾದ ನೋವು (ಸಯಾಟಿಕಾ) ಕಾಣಿಸಬಹುದು.

ಸೊಂಟದ ಕೀಲಿನ ಮೂಳೆ ಮುರಿತ
ಬಿದ್ದರೆ, ಎಡವಿದರೆ ಸೊಂಟದ ಕೀಲಿನ ಬಳಿ ಮೂಳೆ ಮುರಿತ ಉಂಟಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಿ ಮುರಿದ ಮೂಳೆಯ ಪುನರ್‌ಜೋಡಣೆ ನಡೆಸಿದರೂ ಮೂಳೆ ಸವಕಳಿ ಇದ್ದರೆ ಅದು ಕೂಡಿಕೊಳ್ಳದು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಕೃತಕ ಕೀಲನ್ನು ಅಳವಡಿಸಲಾಗುತ್ತದೆ. ಈ ಬಗೆಯ ಮೂಳೆ ಮುರಿತಕ್ಕೊಳಗಾದ ಶೇ.20ರಷ್ಟು ರೋಗಿಗಳು ಒಂದು ವರ್ಷದೊಳಗಾಗಿ ಇತರ ತೊಂದರೆಗಳಿಂದಾಗಿ ಮರಣ ಹೊಂದುವ ಸಂಭವ ಜಾಸ್ತಿ. ಉಳಿದ ಶೇ.80 ರೋಗಿಗಳು ಬಹುಕಾಲ ಹಾಸಿಗೆಯಲ್ಲಿದ್ದು ಪರಾವಲಂಬಿಯಾಗಿ ಜೀವನ ನಡೆಸಬೇಕಾಗುತ್ತದೆ.

ಸೊಂಟದ ಕೀಲು ಮುರಿದು, ಶಸ್ತ್ರ ಚಿಕಿತ್ಸೆಯ ಒಂದು ವರ್ಷದ ಬಳಿಕ ಮಣಿಗಂಟಿನ ಮೂಳೆ ಮುರಿತ
ಕೈಯನ್ನೂರಿ ಬೀಳುವಾಗ ಮೂಳೆ ಸವಕಳಿ ಇರುವ ವ್ಯಕ್ತಿಗೆ ಮಣಿಗಂಟಿನ ಮೂಳೆ ಮುರಿತ ಸಾಮಾನ್ಯ. ಬಹಳಷ್ಟು ಸಂದರ್ಭದಲ್ಲಿ ಇಂಥ ಮೂಳೆ ಮುರಿತವಾಗಿ ಆಸ್ಪತ್ರೆಗೆ / ವೈದ್ಯರಲ್ಲಿ ಬಂದಾಗಲೇ ಮೂಳೆ ಸವಕಳಿ ಇದೆಯೆಂದು ಅರಿವಾಗುವುದು. ಮೂಳೆ ಮುರಿಯುವಷ್ಟು ಸವಕಳಿ ಆಗುವ ಮೊದಲೇ ತಪಾಸಣೆ ನಡೆಸಿ, ತಜ್ಞವೈದ್ಯರ ಸಲಹೆ ಪಡೆದು, ಚಿಕಿತ್ಸೆ ಆರಂಭಿಸಿದರೆ, ಮೂಳೆ ಮುರಿತದ ಯಾತನೆ ಹಾಗೂ ಅದರ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯ.

ಆರೋಗ್ಯವಂತರಲ್ಲಿ ಮೂಳೆ ಸವಕಳಿ ಪತ್ತೆ ಹೇಗೆ?
ವೈದ್ಯರು ರೋಗಿ ಮತ್ತು ಕೌಟುಂಬಿಕ ಹಿನ್ನೆಲೆ, ದೈಹಿಕ ಪರೀಕ್ಷೆ, ರಕ್ತ ಹಾಗೂ ಮೂಳೆ ಸಾಂದ್ರತೆ ಪರೀಕ್ಷೆ (ಬಿಎಂಡಿ) ಟೆಸ್ಟ್‌ = ಬೋನ್‌ ಮಿನರಲ್‌ ಡೆನ್ಸಿಟಿ ಟೆಸ್ಟ್‌) ಆಧರಿಸಿ ಮೂಳೆ ಸವಕಳಿಯ ಹಂತಗಳನ್ನು ಪತ್ತೆಹಚ್ಚುತ್ತಾರೆ. ಸಾಮಾನ್ಯ ಎಕ್ಸ್‌ರೇ ಮೂಳೆ ಸವಕಳಿಯನ್ನು ಪತ್ತೆ ಮಾಡುವಷ್ಟರೊಳಗೆ ದೇಹದಲ್ಲಿ ಶೇ. 30ರಷ್ಟು ಸವಕಳಿ ಆಗಿರುತ್ತದೆ.

ವೈದ್ಯಕೀಯ ಅಂಕಿಅಂಶಗಳ ಪ್ರಕಾರ ಮೂಳೆ ಸವಕಳಿ, ಇತರ ಮಾರಕ ಕಾಯಿಲೆಗಳಾದ ಕ್ಯಾನ್ಸರ್‌, ಹೃದಯ ಸಂಬಂಧಿ ತೊಂದರೆಗಳಷ್ಟೇ ವೇಗವಾಗಿ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತದೆ7. ತಜ್ಞರ ಪ್ರಕಾರ ಮುಂದಿನ ಎರಡು ದಶಕಗಳಲ್ಲಿ ಮೂಳೆ ಸವಕಳಿ – ಮೂಳೆ ಮುರಿತಗಳ ಸಂಖ್ಯೆ ಬಹಳ ಹೆಚ್ಚಲಿದೆ. ಈಗಿನ ಅಂದಾಜಿನಂತೆ ಭಾರತದಲ್ಲಿ ಸುಮಾರು 30 ಮಿಲಿಯ ಮಹಿಳೆಯರು ಮೂಳೆ ಸವಕಳಿಯಿಂದ ಬಾಧಿತರು. ಇದು ಕಳವಳದ ಸಂಗತಿ. ಯಾಕೆಂದರೆ, ವಯಸ್ಸಾದವರಿಗೆ ಮೂಳೆ ಮುರಿತ ದೊಡ್ಡ ಆರ್ಥಿಕ ಹೊರೆಯಾಗಲಿದೆ.

ಮೂಳೆ ಸಾಂದ್ರತೆ
(ಬಿಎಂಡಿ)ಯ ಸ್ಕೋರ್‌
ಮೂಳೆ ಸಾಂದ್ರತೆ ಯಾವ ಮಟ್ಟದಲ್ಲಿದೆ ಎಂದು ತಿಳಿಸುವ ಈ ಪರೀಕ್ಷೆಯಲ್ಲಿ ರೋಗಿಯ ಮೂಳೆ ಸಾಂದ್ರತೆಯನ್ನು ಆರೋಗ್ಯವಂತ ಯುವ ಜನತೆಯ ಸರಕಾಸರಿಕೆ ತುಲನೆ ಮಾಡಿ ಸ್ಕೋರ್‌ ಅಥವಾ ಅಂಕ ನೀಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಮೂಳೆ ಸಾಂದ್ರತೆಯಲ್ಲಿ ನಾಲ್ಕು ಶ್ರೇಣಿಗಳಿವೆ. ಈ ಶ್ರೇಣಿಗಳು ಮೂಳೆ ಸವಕಳಿಯ ತೀವ್ರತೆಯನ್ನಷ್ಟೇ ಅಲ್ಲ, ಮೂಳೆ ಮುರಿತದ ಸಂಭಾವ್ಯತೆಯನ್ನು ಕೂಡ ತಿಳಿಸಬಲ್ಲವು.

ಮೂಳೆ ಸಾಂದ್ರತೆ ಪತ್ತೆ ಹಚ್ಚುವಿಕೆ
ಅಲ್ಟ್ರಾಸೌಂಡ್‌ ತಂತ್ರಜ್ಞಾನ ಬಳಸಿ ಕೇವಲ ಐದು ನಿಮಿಷಗಳಲ್ಲಿ ಮೂಳೆ ಸವಕಳಿ ಇದೆಯೇ ಎಂದು ಕಂಡುಹಿಡಿಯುವ ಸಾಧನದ ಮೂಲಕ ಪಾದದ ಹಿಮ್ಮಡಿಯ ಅಥವಾ ಕೈಯ ಮಣಿಗಂಟಿನ ಮೂಳೆ ತಪಾಸಣೆ ನಡೆಸಿ ಟಿ ಹಾಗೂ ಝಡ್‌ ಸ್ಕೋರ್‌ ನೀಡಲಾಗುತ್ತದೆ.

ಮೂಳೆ ಸಾಂದ್ರತೆ ಪರೀಕ್ಷೆ
ಯಾರ್ಯಾರಿಗೆ? ಯಾವಾಗ?
ವರ್ಷಕ್ಕೊಮ್ಮೆ: 40 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರೂ ಮುಟ್ಟು ನಿಂತ ಮಹಿಳೆಯರು, ಯಾವುದೇ ಕಾರಣಕ್ಕೆ ಗರ್ಭಕೋಶ ತೆಗೆದಿದ್ದವರು, ಡಯಾಬಿಟಿಸ್‌, ಮೂತ್ರಜನಕಾಂಗದ ಕಾಯಿಲೆ, ರುಮಾಟಾಯ್ಡ ಆರ್ಥೈಟಿಸ್‌ನಿಂದ ಬಳಲುವವರು, ದೀರ್ಘ‌ಕಾಲದ ಔಷಧ ಸೇವನೆ ಮಾಡುತ್ತಿರುವವರು, ಮೂಳೆ ಮುರಿತದ ಇತಿಹಾಸ ಇದ್ದರೆ.

ಮೂರು ತಿಂಗಳಿಗೊಮ್ಮೆ: ಹಿಂದೆ ಸಾಂದ್ರತೆ ಪರೀಕ್ಷಿಸಿ, ಮೂಳೆ ಸವಕಳಿಗಾಗಿ ಚಿಕಿತ್ಸೆ ಪಡೆಯುತ್ತಿರುವವರು, ಮೂಳೆ ಸಾಂದ್ರತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ, ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಡಿಇಎಕ್ಸ್‌ ಎ ಎಂಬ ಎಕ್ಸ್‌ರೇ ನಿಖರವಾಗಿ ಮೂಳೆ ಸಾಂದ್ರತೆ ಅಳೆಯುವ ಸಾಧನ. ಬೆನ್ನೆಲುಬು ಮತ್ತು ಸೊಂಟದ ಕೀಲಿನ ಬಳಿ ಸಾಂದ್ರತೆ ಪತ್ತೆ ಹಚ್ಚಲು ಈ ಸಾಧನ ಬಳಸಲಾಗುತ್ತದೆ. ಈ ಸಾಧನದ ಮೂಲಕ ಓರ್ವ ವ್ಯಕ್ತಿಯ ತಪಾಸಣೆಗೆ ಸುಮಾರು 30 ನಿಮಿಷ ಬೇಕು. ಅಂದಾಜು ಖರ್ಚು ಎರಡು ಸಾವಿರ ರೂ. ಇದೇ ಕಾರಣಕ್ಕೆ ಈ ಪರೀಕ್ಷೆಯನ್ನು ಮೂಳೆ ಸವಕಳಿಯನ್ನು ಖಚಿತಪಡಿಸಲು ಹಾಗೂ ಚಿಕಿತ್ಸೆಯ ಪರಿಣಾಮವನ್ನು ಅಳೆಯಲು ಮಾತ್ರ ಕಾದಿರಿಸಲಾಗುತ್ತದೆ.

ಮೂಳೆ ಸವಕಳಿಗೆ
ವಿಶೇಷ ರಕ್ಷ ಪರೀಕ್ಷೆ
(ಬೋನ್‌ ಟರ್ನ್ ಓವರ್‌ ಮಾರ್ಕರ್ – ಬಿಟಿಎಂ)
ಮೂಳೆ ಸವಕಳಿ ಇದ್ದಾಗ, ಸಾಮಾನ್ಯ ರಕ್ತ ಪರೀಕ್ಷೆ ಯಾವುದೇ ಮಾಹಿತಿ ನೀಡಲಾರದು ( ಉದಾ: ಕ್ಯಾಲ್ಸಿಯಮ್‌ ಪ್ರಮಾಣ ನಾರ್ಮಲ್‌ ಎಂದೇ ಬರುತ್ತದೆ). ರಕ್ತ ಹಾಗೂ ಮೂತ್ರದಲ್ಲಿ ಮೂಳೆ ನಿರ್ಮಾಣ ಸೂಚಕ (ಬೋನ್‌ ಫಾರ್ಮೇಶನ್‌ ಮಾರ್ಕರ್‌), ಮೂಳೆ ಮರು ಹೀರು ವಿಕೆಯ ಸೂಚಕ (ಬೋನ್‌ ರೆಸಾರ್ಪನ್‌ ಮಾರ್ಕರ್‌) ಹಾಗೂ ಆಸ್ಟಿಯೋ ಕ್ಲಾಸ್ಟ್‌ ಗಳ ನಿರ್ವಾಹಕ ಪ್ರೊಟೀನ್‌ ಸೂಚಕಗಳ ಪ್ರಮಾಣವನ್ನು ಅಳೆದರೆ ಮಾತ್ರ ಮೂಳೆ ಸಾಂದ್ರತೆ ಖಚಿತ ಮಾಹಿತಿ ದೊರೆಯುತ್ತದೆ. ಈ ವಿಶೇಷ ರಕ್ತ ಪರೀಕ್ಷೆಗೆ ಸುಮಾರು 2,000 ರೂ. ಖರ್ಚಾಗಬಹುದು. ಚಿಕಿತ್ಸೆಯ ಪ್ರಗತಿ ಯನ್ನು ಅರಿಯಲು ಈ ಪರೀಕ್ಷೆ ಅಗತ್ಯ.

ಮೂಳೆ ಸವಕಳಿ ಹೀಗೆ ತಡೆಗಟ್ಟಿ
ಚಿಕಿತ್ಸೆಯ ಉದ್ದೇಶ ಸ್ಪಷ್ಟ. ಮೂಳೆ ಸವಕಳಿಯನ್ನು ತಡೆಗಟ್ಟುವುದು. ಮೂಳೆಗಳ ಸಾಂದ್ರತೆ ಹೆಚ್ಚಿಸಿ ಮೂಳೆ ಮುರಿತವನ್ನು ತಡೆಗಟ್ಟುವುದು. ಸವಕಳಿಯನ್ನು ಬೇಗನೇ ಗುರುತಿಸಿ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಆರಂಭಿಸಿದರೆ ಭವಿಷ್ಯದಲ್ಲಿ ಆಗಬಹುದಾದ ಮೂಳೆ ಮುರಿತ – ಅದರಿಂದಾಗುವ ತೊಂದರೆಗಳನ್ನು ಸಾಕಷ್ಟು ಕಡಿಮೆ ಮಾಡಬಹುದು.

 30 ವರ್ಷದೊಳಗೆ ಗರಿಷ್ಠ ಮೂಳೆ ಸಾಂದ್ರತೆ ಸಾಧಿಸುವ ಪ್ರಯತ್ನ ಒಳ್ಳೆಯದು. ಅದಕ್ಕಾಗಿ ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿಯೇ ಚುರುಕಾಗಿ ಕ್ರೀಡೆ ಮತ್ತು ವ್ಯಾಯಾಮಗಳಲ್ಲಿ ತೊಡಗುವಂತೆ ಹುರಿದುಂಬಿಸಬೇಕು. ಆಹಾರದಲ್ಲಿ ಜಂಕ್‌ಫ‌ುಡ್‌, ಕೋಲಾ, ಕುರುಕಲು ತಿಂಡಿಗಳನ್ನು ದೂರವಿರಿಸಿ ಹಣ್ಣು – ಹಂಪಲು, ತರಕಾರಿ ನಿಯಮಿತವಾಗಿ ಸೇವಿಸಬೇಕು. ಪ್ರೌಢಾವಸ್ಥೆಯಲ್ಲಿ ಗರಿಷ್ಠ ಮೂಳೆ ಸಾಂದ್ರತೆ ಸಾಧಿಸಿದರೆ ಭವಿಷ್ಯದ ಮೂಳೆಯ ಆರೋಗ್ಯಕ್ಕೆ ಭದ್ರ ಬುನಾದಿ ಹಾಕಿದಂತೆ!

 ಉತ್ತಮ ಸಮತೋಲಿತ ಆಹಾರ ಮೂಳೆ ಸವಕಳಿ ತಡೆಗಟ್ಟಲು ಮತ್ತು ಸರಿಪಡಿಸಲು ಅಗತ್ಯ. ತಜ್ಞರು ಹೇಳುವಂತೆ ಜೀವನವಿಡೀ ಶರೀರಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಮ್‌, ಪ್ರೊಟೀನ್‌, ಖನಿಜಗಳು ಹಾಗೂ ವಿಟಮಿನ್‌ಗಳು ದೊರಕದಿರುವುದು ಮೂಳೆ ಸವಕಳಿಗೆ ಮುಖ್ಯ ಕಾರಣ. ಆಹಾರದಲ್ಲಿ ಕ್ಯಾಲ್ಸಿಯಮ್‌ ದೊರಕುವ ಮೂಲಗಳೆಂದರೆ
 ಹಾಲು ಮತ್ತು ಇತರ ಡೇರಿ ಉತ್ಪನ್ನಗಳು, ಹಸುರೆಲೆಗಳು, ಹಣ್ಣುಗಳು ಮತ್ತು ಒಣಹಣ್ಣುಗಳು. ಕ್ಯಾಲ್ಸಿಯಮ್‌ ಶರೀರದೊಳಗೆ ಸೇರಲು ವಿಟಮಿನ್‌ ಡಿ ಅವಶ್ಯ. ಶರೀರದ ಮೇಲೆ ಬಿಸಿಲು ಬಿದ್ದಾಗ ಸ್ವಾಭಾವಿಕವಾಗಿಯೇ ಬಿಡುಗಡೆ ಆಗುವ ವಿಟಮಿನ್‌ ಡಿ, ಮೊಟ್ಟೆಯ ಹಳದಿ, ಮೀನು ಮತ್ತು ಲಿವರ್‌ಗಳಲ್ಲಿದೆ.
 ವ್ಯಾಯಾಮ: ಲಘುವಾದ ವ್ಯಾಯಾಮ ಸ್ನಾಯುಗಳ ಚಲನ ವಲನಕ್ಕೆ ಮತ್ತು ಮೂಳೆಯ ಆರೋಗ್ಯ ಕಾಪಾಡಲು ಅಗತ್ಯ. ಬಿಸಿಲಿಗೆ ಮೈಯೊಡ್ಡಿ ನಡೆಸುವ ಚಟುವಟಿಕೆಗಳು ಸ್ವಾಭಾವಿಕವಾಗಿ ವಿಟಮಿನ್‌ ಡಿ ದೊರಕುವಂತೆ ಮಾಡುತ್ತವೆ. ನಡೆಯುವುದು, ಲಘುವಾದ ಭಾರ ಎತ್ತುವುದು, ಸಮತೋಲನ ಕಾಪಾಡಲು ವ್ಯಾಯಾಮ, ಚಲನವಲನ ಹೆಚ್ಚಿಸುವ ವ್ಯಾಯಾಮ, ಶಕ್ತಿ ಹೆಚ್ಚಿಸುವ ವ್ಯಾಯಾಮ, ನಿರ್ದಿಷ್ಟ ಯೋಗಾಸನಗಳನ್ನು ತಜ್ಞರ ಸಲಹೆ ಪಡೆದು ಮಾಡಬೇಕು (ಎಚ್ಚರಿಕೆ: ಬೆನ್ನೆಲುಬು ತಿರುಚುವ, ಮುಂದಕ್ಕೆ ಬಾಗುವ (ಕಾಲೆºರಳು ಮುಟ್ಟುವಂಥ) ವ್ಯಾಯಾಮಗಳನ್ನು ಮಾಡಬಾರದು). ಮೂಳೆ ಸವಕಳಿ ತಡೆಯಲು ನಿರಂತರ ಚಟುವಟಿಕೆಯಿಂದಿರುವುದು ಅಗತ್ಯ. ದೀರ್ಘ‌ಕಾಲದ ನಿಷ್ಕ್ರಿಯತೆ, ಆಲಸ್ಯ ಕೂಡ ಮೂಳೆ ಸವಕಳಿಗೆ ಕಾರಣ.

ಧೂಮಪಾನ, ಮದ್ಯಪಾನ ಖಂಡಿತ ಬೇಡ
ಧೂಮಪಾನ ಮೂಳೆಗಳಿಗೆ, ಹೃದಯಕ್ಕೆ ಮತ್ತು ಶ್ವಾಸಕೋಶಗಳಿಗೆ ಹಾನಿಕರ. ಧೂಮಪಾನ ಮತ್ತು ಮದ್ಯಪಾನ ಆಹಾರದಲ್ಲಿರುವ ಕ್ಯಾಲ್ಸಿಯಮ್‌ ದೇಹವನ್ನು ಸೇರಲು ತಡೆ ತರುತ್ತವೆ. ಮಹಿಳೆಯರಲ್ಲಿ ಧೂಮಪಾನ ಮತ್ತು ಮದ್ಯಪಾನ ಹೆಚ್ಚಿನ ಹಾನಿಗೆ ಕಾರಣವಾಗುತ್ತದೆ. ಮುಟ್ಟು ಬೇಗ ನಿಂತು ಮೂಳೆ ಸವಕಳಿಯ ಅಪಾಯವನ್ನು ಹೆಚ್ಚಿಸುತ್ತದೆ.
 ಕ್ಯಾಲ್ಸಿಯಮ್‌ ಮತ್ತು ವಿಟಮಿನ್‌ ಡಿ: ಕೇವಲ ಕ್ಯಾಲ್ಸಿಯಮ್‌ ಸೇವನೆ ಮೂಳೆ ಸವಕಳಿಯನ್ನು ತಡೆಯಲಾರದು ಅಥವಾ ಗುಣಪಡಿಸಲಾರದು. ಆದರೂ ಮೂಳೆಗಳ ಆರೋಗ್ಯ ನಿರ್ವಹಣೆಯಲ್ಲಿ ಕ್ಯಾಲ್ಸಿಯಮ್‌ ಪಾತ್ರ ಹಿರಿದು. ವಯಸ್ಸಾದಂತೆ ಕ್ಯಾಲ್ಸಿಯಮ್‌ ಹೀರುವಿಕೆ ಮತ್ತು ವಿಟಮಿನ್‌ ಡಿ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ. ದಾಖಲೆಗಳ ಪ್ರಕಾರ ಬಹಳಷ್ಟು ಜನ ಶಿಫಾರಸು ಮಾಡಲಾಗಿರುವ ಪ್ರಮಾಣಕ್ಕಿಂತ ಕಡಿಮೆ ಕ್ಯಾಲ್ಸಿಯಮ್‌ ಪಡೆಯುತ್ತಿದ್ದಾರೆ. ಆಹಾರದಲ್ಲಿ ಕ್ಯಾಲ್ಸಿಯಮ್‌ ಮತ್ತು ವಿಟಮಿನ್‌ ಡಿ ಸೂಕ್ತ ಪ್ರಮಾಣದಲ್ಲಿ ದೊರಕದಿದ್ದರೆ ವೈದ್ಯರ ಸಲಹೆ ಪಡೆದು ಕ್ಯಾಲ್ಸಿಯಮ್‌, ವಿಟಮಿನ್‌ ಡಿ ಪೂರಕ ಆಹಾರವನ್ನು ನಿರ್ದಿಷ್ಟ ಅವಧಿಯ ವರೆಗೆ ಸೇವಿಸಬಹುದು.

ದೈನಂದಿನ
ಕ್ಯಾಲ್ಸಿಯಮ್‌ ಸೇವನೆ
ವಿಟಮಿನ್‌ ಡಿಯಲ್ಲಿ ಎರಡು ವಿಧ. ಸಾಮಾನ್ಯ (ಕೋಲಿಕ್ಯಾಲ್ಸಿಫೆರಾಲ್‌) ಮತ್ತು ಸಕಿÂ (ಕ್ಯಾಲ್ಸಿಟ್ರಯಾಲ್‌, ಅಲ್ಫಾ ಕ್ಯಾಲ್ಸಿಡಾಲ್‌) ಆಹಾರದಲ್ಲಿ ಸೇವಿಸಿದ ಕ್ಯಾಲ್ಸಿಯಮ್‌ ದೇಹದೊಳಗೆ ಸೇರಲು, ಮೂಳೆಗಳಲ್ಲಿ ಶೇಖರವಾಗಲು ವಿಟಮಿನ್‌ ಡಿ ಬೇಕು. ದಿನಕ್ಕೆ 400ರಿಂದ 800 ಐ.ಯೂ. ಅಂದರೆ ಇಂಟರ್‌ನ್ಯಾಶನಲ್‌ ಟೂನಿಟ್‌ಗಳಷ್ಟು ವಿಟಮಿನ್‌ ಡಿ ಅವಶ್ಯ.

ಮೂಳೆ ಮುರಿತ ತಡೆಗಟ್ಟಲು
ಕೆಲವು ಉಪಾಯಗಳು
ಮೂಳೆ ಸವಕಳಿ ಇರುವವರು, ವಯಸ್ಸಾದವರು ಹೆಚ್ಚಾಗಿ ಮನೆಯೊಳಗೇ ಬಿದ್ದು ಮೂಳೆ ಮುರಿತಕ್ಕೊಳಗಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ಬೀಳುವುದನ್ನು ತಡೆಗಟ್ಟಿದರೆ, ಮೂಳೆ ಮುರಿತ ಮತ್ತು ಇತರ ತೊಂದರೆಗಳನ್ನು ನಿವಾರಿಸಿದಂತೆ.
ಮನೆಯೊಳಗೆ: ಜಾರುವ ನೆಲದಲ್ಲಿ ಜಾಗ್ರತೆ! ಗ್ರಾನೈಟ್‌ ನೆಲ, ಹೊಳಪಿನ ಟೈಲ್ಸ್‌, ಕಾಪೆìಟ್‌ ಇತ್ಯಾದಿ ಜಾರಿಬೀಳಲು ಮುಖ್ಯ ಕಾರಣ. ರಬ್ಬರ್‌ ಸೋಲ್‌ ಇರುವ ಪಾದರಕ್ಷೆ ಧರಿಸಿದರೆ, ಊರುಗೋಲು ಬಳಸಿದರೆ ಜಾರುವ ಅಪಾಯ ಕಡಿಮೆ. ನೆಲದ ಮೇಲೆ ಪ್ಲಾಸ್ಟಿಕ್‌ ಚೀಲ, ನೀರು, ವಯರ್‌ಗಳಿದ್ದರೆ ಅದನ್ನು ಎಡವಿ ಬೀಳುವ ಅಪಾಯ ಹೆಚ್ಚು.
ಅಡುಗೆ ಮನೆಯಲ್ಲಿ: ಜಾರದಂಥ (ಆ್ಯಂಟಿ ಸ್ಕಿಡ್‌) ನೆಲಹಾಸು ಅಳವಡಿಸಿ. ಸಾಮಾನಿನ ಶೆಲ್ಫ್ಗಳು ಕೈಗೆ ಎಟಕುವಂತೆ ಇರಲಿ. ಎಲ್ಲ ಸಾಮಾನುಗಳು ಕೈಗೆ ಸಿಗುವಂತೆ ಇದ್ದರೆ ಅನಾವಶ್ಯಕ ಬಾಗುವುದನ್ನು ತಡೆಗಟ್ಟಬಹುದು.ಬಚ್ಚಲು ಕೋಣೆ: ಜಾರದಂಥ ನೆಲಹಾಸು ಅಳವಡಿಸಿ. ನೆಲ ಜಾರದಂತೆ ಮ್ಯಾಟ್‌ ಬಳಸಿ. ಕೈ ಹಿಡಿಗಳನ್ನು ಅಳವಡಿಸಿ.
ಮೆಟ್ಟಿಲು, ಕಾರಿಡಾರ್‌: ಉತ್ತಮ ಬೆಳಕಿನ ವ್ಯವಸ್ಥೆ, ಜಾರದಂಥ ನೆಲ, ಕೈ ಹಿಡಿಯಲು ರೇಲಿಂಗ್‌ ಅಳವಡಿಸಬೇಕು.

ಮೂಳೆ ಸವಕಳಿಗೆ ಚಿಕಿತ್ಸೆ
ಮೂಳೆ ಸವಕಳಿ ತಡೆಗಟ್ಟುವುದೇ ಉತ್ತಮ ಉಪಾಯ. ಒಮ್ಮೆ ಮೂಳೆ ಸವಕಳಿ ಪತ್ತೆಯಾದರೆ, ರೋಗಿ ಮೂಳೆ ಮುರಿತವಾಗಿ ಬಂದರೆ ಚಿಕಿತ್ಸೆ ಅತ್ಯಗತ್ಯ. ಮೂಳೆ ಸವಕಳಿಯ ಪರಿಣಾಮಕಾರಿ ಚಿಕಿತ್ಸೆಗೆ ತಿಂಗಳುಗಳು ಅಥವಾ ವರ್ಷಗಳೇ ಬೇಕಾದೀತು. ಇದನ್ನು ಅರಿಯದ ಹೆಚ್ಚಿನ ರೋಗಿಗಳು ತಾಳ್ಮೆ ಕಳೆದುಕೊಂಡು, ದೀರ್ಘ‌ಕಾಲಿಕ ಚಿಕಿತ್ಸೆ ಪಡೆಯದೆ ಅನಾವಶ್ಯಕ ತೊಂದರೆಗೊಳಗಾಗುತ್ತಾರೆ. ಜಾಹೀರಾತಿಗೆ ಮಾರು ಹೋಗಿ ಕ್ಯಾಲ್ಸಿಯಮ್‌ ನ್ಯೂಟ್ರಿಷನಲ್‌ ಸಪ್ಲಿಮೆಂಟ್ಸ್‌ ಇತ್ಯಾದಿ ಸ್ವಯಂ ಚಿಕಿತ್ಸೆ ಪಡೆದರೆ ಮೂಳೆ ಸವಕಳಿಗೆ ಸರಿಯಾದ ಚಿಕಿತ್ಸೆ ಆಗದು. ಕ್ಯಾಲ್ಸಿಯಮ್‌, ವಿಟಮಿನ್‌ ಡಿ, ವಿಟಮಿನ್‌ ಕೆ2 ಅಲ್ಲದೆ ಬಹಳಷ್ಟು ಪರಿಣಾಮಕಾರಿ ಔಷಧಗಳು ಈಗ ಲಭ್ಯ. ಆದರೆ ಚಿಕಿತ್ಸೆ ಪರಿಣಾಮಕಾರಿಯೇ ಎಂದು ಅರಿ ಯಲು ನಿಯಮಿತ ಮೂಳೆ ಸಾಂದ್ರತೆ ಪರೀಕ್ಷೆ, ತಜ್ಞ ವೈದ್ಯರ ಸಲಹೆ ಅಗತ್ಯ.

ಎ) ಮೂಳೆ ಸವಕಳಿ: ಹೀರುವಿಕೆ ತಡೆಗಟ್ಟುವ ಔಷಧಗಳು: ಮೂಳೆ ಸವಕಳಿಯನ್ನು ತಡೆದು, ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತವೆ. ಈಸ್ಟ್ರೋಜನ್‌ ಹಾರ್ಮೋನ್‌, ಈಸ್ಟ್ರೋಜನ್‌ ರಿಸೆಪ್ಟರ್‌ ಮಾಡ್ಯುಲೇಟರ್‌ ಮಿಸ್ಟಾಸೊÌàನೇಟ್‌ಗಳು ಇವಕ್ಕೆ ಉದಾಹರಣೆ. ಮುಟ್ಟು ನಿಂತ ಮಹಿಳೆಯರಿಗೆ ಹಾರ್ಮೋನ್‌ ರಿಪ್ಲೇಸ್‌ಮೆಂಟ್‌ ಥೆರಪಿ ಐದು ವರ್ಷಗಳ ಕಾಲ ಪರಿಣಾಮಕಾರಿ. ಈ ಔಷಧಗಳನ್ನು ತಜ್ಞರ ಸಲಹೆ ಮೇರೆಗೆ ಮಾತ್ರ ಸೇವಿಸಬಹುದು. ಇವುಗಳ ಜತೆಗೆ ಕ್ಯಾಲ್ಸಿಯಮ್‌ ಹಾಗೂ ವಿಟಮಿನ್‌ ಡಿ ಸೇವನೆ ಅಗತ್ಯ. ಈ ಎಲ್ಲ ಔಷಧಗಳನ್ನು ನಿರಂತರವಾಗಿ ಸೇವಿಸಬಾರದು. ಮೂರು ವರ್ಷಗಳಿಗೊಮ್ಮೆ ಆರು ತಿಂಗಳ ಕಾಲ ಸೇವನೆ ನಿಲ್ಲಿಸಬೇಕಾಗುತ್ತದೆ.
ಬಿ) ಮೂಳೆ ಸಾಂದ್ರತೆ ಹೆಚ್ಚಿಸುವ ಅನಾಬಾಲಿಕ್‌ ಔಷಧಗಳು: ಸ್ಟ್ರಾಂಷಿಯಮ್‌, ಟೆರಿಪ್ಯಾರಾಟೈಡ್‌ ಇತ್ಯಾದಿ ಔಷಧಗಳು ಹೊಸ ಮೂಳೆ ಪುನರುತ್ಪತ್ತಿಗೆ ಚಾಲನೆ ನೀಡುತ್ತವೆ.

ರೋಗಿಗೆ ಉದರ ಸಂಬಂಧಿ ತೊಂದರೆಗಳಿದ್ದು, ಜೀರ್ಣ ಮಾಡಿಕೊಳ್ಳುವ ಶಕ್ತಿ ಇಲ್ಲದಿದ್ದರೆ ಯಾವುದೇ ಮಾತ್ರೆಯ ಸೇವನೆ ಪರಿಣಾಮಕಾರಿ ಆಗಲಾರದು. ಮೂಗಿನ ಮೂಲಕ ತೆಗೆದುಕೊಳ್ಳುವ ಕ್ಯಾಲ್ಸಿಟೋನಿನ್‌, ಇಂಜೆಕ್ಷನ್‌ ಮೂಲಕ ನೀಡುವ ಟೆರಿಪ್ಯಾರಾಟೈಡ್‌, ವರ್ಷಕೊಮ್ಮೆ ರಕ್ತನಾಗಳ ಮೂಲಕ ನೀಡುವ ಜೋಲೆಡ್ರೋನಿಕ್‌ ಆ್ಯಸಿಡ್‌ ಇಂಥ ರೋಗಿಗಳಿಗೆ ವರದಾನ.

ದುಬಾರಿ ಔಷಧ, ದೀರ್ಘ‌ಕಾಲದ ಚಿಕಿತ್ಸೆ, ರೋಗ ಲಕ್ಷಣಗಳಿಲ್ಲದ ಕಾಯಿಲೆ ಚಿಕಿತ್ಸೆಯಿಂದ ಅದ್ಭುತವಾದ ಬದಲಾವಣೆ ಕಾಣದಿರುವುದು ಮೂಳೆ ಸವಕಳಿ ರೋಗಿಗಳು ಚಿಕಿತ್ಸೆಯನ್ನು ನಿಲ್ಲಿಸಲು/ ಮುಂದುವರಿಸದಿರಲು ಕಾರಣಗಳು. ಇದರ ನಿವಾರಣೆಗಾಗಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಪಡೆಯುವ ಔಷಧಿಗಳು ಈಗ ಜನಪ್ರಿಯತೆ ಗಳಿಸುತ್ತಿವೆ.

ಮೂಳೆ ಸವಕಳಿಯಲ್ಲಿ
ಶಸ್ತ್ರಚಿಕಿತ್ಸೆಯ ಪಾತ್ರ
ಹೆಚ್ಚಿನ ಸಂದರ್ಭಗಳಲ್ಲಿ ಮೂಳೆ ಮುರಿತವೇ ಮೂಳೆ ಸವಕಳಿಯ ಪ್ರಥಮ ಸೂಚನೆ. ಇಂಥ ಸನ್ನಿವೇಶದಲ್ಲಿ ಶಸ್ತ್ರಚಿಕಿತ್ಸೆಯ ಮೂಲ ಉದ್ದೇಶ – ಮೂಳೆ ಮುರಿತವನ್ನು ಸರಿಹೊಂದಿಸಿ, ಚೆನ್ನಾಗಿ ಹಿಡಿದಿಟ್ಟು ಬೇಗನೇ ಕೂಡಿಕೊಳ್ಳುವಂತೆ ಮಾಡಿ ರೋಗಿಯನ್ನು ಆದಷ್ಟು ಬೇಗ ನಡೆದಾಡುವಂತೆ ಮಾಡುವುದು. ಆದರೆ ಸವಕಳಿಯಾದ ಮೂಳೆ ಮುರಿತದ ಶಸ್ತ್ರಚಿಕಿತ್ಸೆ ಕ್ಲಿಷ್ಟಕರ. ಯಾಕೆಂದರೆ ಸಾಮಾನ್ಯ ಮೂಳೆ ಮುರಿತ ಜೋಡಿಸಲು ಬಳಸುವ ಪ್ಲೇಟ್‌ ಮತ್ತು ಸೂðಗಳು ಸವಕಳಿಯಾದ ಮೂಳೆಗಳನ್ನು ಹಿಡಿದಿಡಲು ಅಸಮರ್ಥವಾಗುತ್ತವೆ.

ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಇತ್ತೀಚೆಗೆ ಹೊಸ ಮಾದರಿಯ ಲಾಕ್‌ಡ್‌ ಕಂಪ್ರಶ್ಯನ್‌ ಪ್ಲೇಟಿಂಗ್‌ (ಎಲ್‌ಸಿಪಿ) ಇಂಟರ್‌ ಲಾಕಿಂಗ್‌ ರಾಡ್‌ಗಳು ಲಭ್ಯವಿದ್ದು, ಸವಕಳಿಯಾದ ಮೂಳೆ ಮುರಿತವನ್ನು ಕೂಡ ಹಿಡಿದಿರಿಸಲು ಸಮರ್ಥವಾಗಿವೆ.

ಕೀಲುಗಳ ಬಳಿ ಆಗುವ ಮೂಳೆ ಸವಕಳಿಯ ಮುರಿತಗಳಿಗೆ ಕೀಲು ಬದಲಾವಣೆಯೇ ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಸೊಂಟ, ಭುಜದ ಕೀಲು ಬದಲಾವಣೆ ಅತ್ಯಂತ ಪರಿಣಾಮಕಾರಿ. ಈ ಶಸ್ತ್ರ ಚಿಕಿತ್ಸೆ ನಡೆಸಿದ ರೋಗಿ ಕೆಲವೇ ದಿನಗಳಲ್ಲಿ ನಡೆದಾಡಲು ಸಮರ್ಥನಾಗುತ್ತಾನೆ.

ಬೆನ್ನುಮೂಳೆ ಮುರಿದರೆ ಕ್ರಮೇಣ ಬೆನ್ನು ಬಾಗುತ್ತದೆ. ಇದನ್ನು ತಡೆಗಟ್ಟಲು ಸೂಕ್ಷ್ಮರಂಧ್ರ ಚಿಕಿತ್ಸೆ ( ಕೀ ಹೋಲ್‌ ಸರ್ಜರಿ) ನಡೆಸಿ ಬೋನ್‌ ಸಿಮೆಂಟ್‌ ಬಳಸಿ ಶಸ್ತ್ರಚಿಕಿತ್ಸೆ ಮಾಡಬಹುದು. ಕೈಪೋಪ್ಲಾಸ್ಟಿ ಎಂಬ ಈ ಚಿಕಿತ್ಸೆ ನೋವು ನಿವಾರಣೆ ಮತ್ತು ಬೆನ್ನು ಬಾಗುವುದನ್ನು ತಡೆಗಟ್ಟಲು ಪರಿಣಾಮಕಾರಿ.

ಮೂಳೆ ಸವಕಳಿ ಮತ್ತು ಅದರಿಂದಾಗುವ ಹಾನಿ – ಮೂಳೆ ಮುರಿತ ಎರಡೂ ಸಮಸ್ಯೆಗಳು ಯಾತನಾಮಯ ಮತ್ತು ಅವುಗಳ ಚಿಕಿತ್ಸೆಯೂ ದುಬಾರಿ. ಇದರ ಶೇ.10ರಷ್ಟು ಖರ್ಚಿನಲ್ಲಿ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಮೂಳೆ ಸವಕಳಿಯ ಬಗ್ಗೆ ಅರಿವು, ನಿಯಂತ್ರಣದ ಬಗ್ಗೆ ಪ್ರಯತ್ನ ಚಿಕಿತ್ಸೆಯ ಬಗ್ಗೆ ದೃಢ ಸಂಕಲ್ಪ ಈ ಮೂರು ಅಂಶಗಳನ್ನು ಮನಗಂಡರೆ ಈ “ಸೈಲೆಂಟ್‌ ಥೀಫ್ ಆಸ್ಟಿಯೋಪೋರೋಸಿಸ್‌’ನ ನಿವಾರಣೆ ಖಂಡಿತ!

ನಿಮಗೆ ಮೂಳೆ ಮುರಿತದ
ರಿಸ್ಕ್ ಇದೆಯೇ ?
ಸಂಘ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರಗಳನ್ನು ಏರ್ಪಡಿಸಿ, ಸಾರ್ವಜನಿಕರ ಮೂಳೆ ಸಾಂದ್ರತೆ ಸೀðನಿಂಗ್‌ / ಪತ್ತೆ ಹಚ್ಚುವ ಕೆಲಸವನ್ನು ನಿಯಮಿತವಾಗಿ ನಡೆಸಿದರೆ ಅದು ಸಮಾಜಕ್ಕೆ ನೀಡುವ ದೊಡ್ಡ ಸೇವೆಯಾಗಬಹುದು.

ಆಸ್ಟಿಯೋಪೋರೋಸಿಸ್‌ ಕ್ಲಿನಿಕ್‌
ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳ ಎರಡನೆಯ ಶನಿವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಥೋìಪೆಡಿಕ್‌ ವಿಭಾಗದಲ್ಲಿ ಆಸ್ಟಿಯೋಪೋರೋಸಿಸ್‌ ಕ್ಲಿನಿಕ್‌ ಕಾರ್ಯಾಚರಿಸುತ್ತಿದೆ. ಆರೋಗ್ಯವಂತರ ಮೂಳೆ ಸಾಂದ್ರತೆ ಪರೀಕ್ಷೆ, ಮೂಳೆ ಸವಕಳಿ ಬಾಧಿತರಿಕೆ ಸಮಗ್ರ ಸಲಹೆ, ಪರಿಹಾರ, ಚಿಕಿತ್ಸೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಳೆ ಸಾಂದ್ರತೆ ಕ್ಯಾಂಪ್‌ ಇವು ಈ ಕ್ಲಿನಿಕ್‌ನ ಚಟುವಟಿಕೆಗಳು. ಈ ಕ್ಲಿನಿಕ್‌ನ ರೂವಾರಿ ಡಾ| ಕಿರಣ್‌ ಆಚಾರ್ಯ ಅವರು ಬರೆದ ಮೂಳೆ ಸವಕಳಿಗೆ ಸಂಬಂಧಿಸಿದ ಒಟ್ಟು ಐದು ಸಂಶೋಧನ ಪ್ರಬಂಧಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಜರ್ನಲ್‌ಗ‌ಳಲ್ಲಿ ಪ್ರಕಟವಾಗಿವೆ. ಈ ಕ್ಲಿನಿಕ್‌ನ ಸಂಶೋಧನೆಗಳ ದಾಖಲೆಗಳ ಪ್ರಕಾರ
 ಮೂಳೆ ಸವಕಳಿ ಎಲ್ಲ ವಯೋಮಾನದವರನ್ನು ಬಾಧಿಸಬಹುದು.
 35 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಠ ವರ್ಷಕ್ಕೊಮ್ಮೆ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳಬೇಕು.
 ಹೊಸ ಜೀವನ ಶೈಲಿಯ ಕಾರಣ ಮೂಳೆ ಸವಕಳಿ ಸ್ತ್ರೀಯರಷ್ಟೇ ಪುರಷರನ್ನೂ ಕಾಡುತ್ತದೆ.
 ನಿಯಮಿತ ತಪಾಸಣೆ, ಆರೋಗ್ಯವಂತ ಜೀವನಶೈಲಿ, ಸಮತೋಲನದ ಆಹಾರ – ಮೂಳೆ ಸವಕಳಿಯನ್ನು ದೂರವಿಡುತ್ತದೆ.
ಮೂಳೆ ಮುರಿತವಾದರೆ ಅದರ ಶಸ್ತ್ರ ಚಿಕಿತ್ಸೆಯ ವೆಚ್ಚದ ಶೇ. 10ರಷ್ಟು ಖರ್ಚಿನಲ್ಲಿ ಮೂಳೆ ಮುರಿತ ತಡೆಗಟ್ಟಬಹುದು ಎಂದು ವೈದ್ಯರು ರೋಗಿಗಳಿಗೆ ಮನದಟ್ಟು ಮಾಡಿದರೆ ಚಿಕಿತ್ಸೆಗೆ ರೋಗಿ ಖಂಡಿತ ಸಹಕರಿಸುತ್ತಾನೆ.

ಡಾ| ಕಿರಣ್‌ ಆಚಾರ್ಯ ,
ಪ್ರೊಫೆಸರ್‌, ಯುನಿಟ್‌ 4 ಆಥೋಪೆಡಿಕ್ಸ್‌, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.