ಸಿಂಡಿಕೇಟ್ ಬ್ಯಾಂಕ್ ಅಸ್ಮಿತೆ ಉಳಿಯಬೇಕು
Team Udayavani, Nov 18, 2019, 6:15 AM IST
ಕರುನಾಡಿನವರ ಅಸ್ಮಿತೆಯ, ಅಭಿಮಾನದ ಪ್ರತೀಕವಾಗಿರುವ ಸಿಂಡಿಕೇಟ್ ಬ್ಯಾಂಕನ್ನು ವಿಲೀನಗೊಳಿಸುವ ನಿರ್ಧಾರದ ವಿರುದ್ಧದ ಧ್ವನಿ ಬಲವಾಗುತ್ತಿದೆ. ವಿವಿಧ ಕ್ಷೇತ್ರಗಳ ಪ್ರಮುಖರು ಬ್ಯಾಂಕ್ ವಿಲೀನದ ಕುರಿತಾದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗುಡ್‌ವಿಲ್, ಭಾವನೆಗೆ ಬೆಲೆ ಕೊಡಲೇಬೇಕು
ದೇಶದ ಆರ್ಥಿಕತೆಗೆ, ಸುಧಾರಣೆಗೆ ನಮ್ಮ ವಿರೋಧವಿಲ್ಲ. ಇದೇ ಕಾರಣವೊಡ್ಡಿ ವಿಲೀನಗೊಳಿಸುವುದಾದರೆ ಅದಕ್ಕೂ ನಮ್ಮ ಆಕ್ಷೇಪವಿಲ್ಲ. ಸಿಂಡಿಕೇಟ್ ಬ್ಯಾಂಕನ್ನು ಇನ್ನೊಂದು ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಬದಲು ಇತರ ಬ್ಯಾಂಕ್‌ಗಳನ್ನು ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಬಹುದಿತ್ತು. ಇಲ್ಲಿ ಬ್ಯಾಂಕ್‌ನ ಹೆಸರು ತೆಗೆಯುವುದು ತಪ್ಪು. “ನಾಮ’ವನ್ನು ಉಳಿಸಿಕೊಳ್ಳಬೇಕು, “ನಾಮಾವಶೇಷ’ ಮಾಡಕೂಡದು.
ತಾಂತ್ರಿಕವಾಗಿ ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವಾಗ ಮೂಲ ಬ್ಯಾಂಕ್‌ನ ಹೆಸರು, ಗುಡ್‌ವಿಲ್, ಭಾವನೆಗಳು ಇನ್ನಿಲ್ಲದಂತಾಗುವುದಕ್ಕೆ ನಮ್ಮ ಆಕ್ಷೇಪವಿದೆ. ವಿಲೀನಗೊಳ್ಳುವಾಗ ಮೂಲ ಹೆಸರಿನ ಒಂದು ತುಂಡಾದರೂ ಇರಬೇಕಲ್ಲ. “ಸಿಂಡ್’ ಅಂತಾದರೂ ಉಳಿಯಬೇಕಲ್ಲವೆ? ಸ್ಥಾಪಕರ ಆಶಯದ ಭಾವನೆಗೆ ಏನೂ ಬೆಲೆ ಬೇಡವೆ? ಕೊನೆಯ ಪಕ್ಷ “ಉಡುಪಿ’ ಅಂತಾದರೂ ಉಳಿಯಬೇಕಲ್ಲ! ನಾವು ಚಿಕ್ಕ ಪ್ರಾಯದಲ್ಲಿ ಗುರುಗಳಿಂದ ಸನ್ಯಾಸಾಶ್ರಮ ತೆಗೆದುಕೊಂಡಾಗ ಗುರು ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದರಿಗೆ ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ಆತ್ಮೀಯವಾದ ಸಂಬಂಧವಿದ್ದುದನ್ನು ನೋಡಿದ್ದೆವು. ಆಗ ಡಾ|ಟಿಎಂಎ ಪೈ, ಟಿಎ ಪೈ, ಕೆ.ಕೆ.ಪೈ ಮೊದಲಾದವರು ಮೂರ್‍ನಾಲ್ಕು ಬಾರಿ ಬಂದು ಮಾತನಾಡಿ ಹೋದದ್ದನ್ನು ನೋಡಿದ್ದೇವೆ. ಆದರೆ ಈಗ ದಿಢೀರನೆ ಸಕಾರಣವಿಲ್ಲದೆ ಇತರ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ವಿಚಾರವನ್ನು ಕೇಳಿ ಬೇಸರವಾಯಿತು. ಆರ್ಥಿಕ ವ್ಯವಹಾರಕ್ಕಿಂತಲೂ ಗುಡ್‌ವಿಲ್, ಭಾವನೆಗಳು ಮುಖ್ಯವೆಂದೇ ನಾವು ಪರಿಗಣಿಸುತ್ತೇವೆ. ಉಡುಪಿಯವರ ಭಾವನೆಗಳಿಗೆ ಬೆಲೆ ನೀಡಿ ಕೆಲವು ಬೇಡಿಕೆಯನ್ನಾದರೂ ಈಡೇರಿಸಬೇಕು. ಇದೆಲ್ಲವೂ ಆಗುವಂತೆ ಶ್ರೀಕೃಷ್ಣ ಮುಖ್ಯಪ್ರಾಣದೇವರಲ್ಲಿ ಪ್ರಾರ್ಥಿಸುತ್ತೇವೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಪುತ್ತಿಗೆ ಮಠ, ಉಡುಪಿ.
ವಿಲೀನ ಸರಿಯಲ್ಲ
ಬ್ಯಾಂಕ್‌ಗಳ ವಿಲೀನದಿಂದ ಆರ್ಥಿಕ ಹೊಡೆತ ಸರಿಯಾಗುತ್ತದೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಬ್ಯಾಂಕ್‌ಗಳು ವೀಲಿನವಾ ಗಲೇಬೇಕಾದ ಅನಿವಾರ್ಯ ಬಂದೊದಗಿದೆ. ರಾಷ್ಟ್ರೀಕೃತ ಬ್ಯಾಕುಗಳು ನಿಷ್ಕ್ರಿಯವಾಗಿವೆ. ಖಾಸಗಿ ವಲಯದಲ್ಲೂ ಒಂದೆರಡು ಬ್ಯಾಂಕು ಗಳಷ್ಟೇ ಲಾಭದ ಹಾದಿಯಲ್ಲಿವೆ. ವಿಲೀನ ಕುರಿತು ಇದಮಿತ್ಥಂ ಎಂದು ಹೇಳುವಷ್ಟು ಆರ್ಥಿಕ ಪರಿಣತ ನಾನಲ್ಲ. ಆದರೆ ದೇಶಕ್ಕೆ ಕರಾವಳಿಯಲ್ಲಿ ಆರಂಭವಾದ ಬ್ಯಾಂಕುಗಳ ಕೊಡುಗೆ ದೊಡ್ಡದು.
ಅಭಿವೃದ್ಧಿಯಲ್ಲಿ ಅವುಗಳ ಪಾಲು ತುಂಬ ಇದೆ. ಹಾಗಾಗಿ ಕರಾವಳಿಯ ಪ್ರಾದೇಶಿಕತೆಯ ಗುರುತಿ ಗಾಗಿ ವಿಲೀನಗೊಳಿಸದಿರುವುದೇ ಉತ್ತಮ.
ಬ್ಯಾಂಕುಗಳನ್ನು ವಿಲೀನ ಮಾಡಿದರೆ ಅಭಿವೃದ್ಧಿಯಾಗುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಸರಕಾರದ ಪ್ರಕಾರ ಆಗುವುದಿದ್ದರೂ ಆಗಬಹುದು! ಈ ಕುರಿತು ಸರಕಾರ ಮರುಚಿಂತನೆ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿವೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ.
ಸರಕಾರದ ಕೆಲವು ಯೋಜನೆಗಳೂ ಕಾರಣವಿರಬಹುದು. ಸರಕಾರ ತಂದ ಯೋಜನೆಗಳು ಎಷ್ಟು ಯಶಸ್ವಿ ಎಂದು ಹೇಳಲಾಗುತ್ತಿಲ್ಲ. ಆದ್ದರಿಂದ ವಿಲೀನ ಕೂಡಾ ಭಾರೀ ಯಶಸ್ಸು ತರಬಲ್ಲದು ಎಂಬ ನಂಬಿಕೆ ನನಗಂತೂ ಇಲ್ಲ. ಸರಕಾರ ವಿಲೀನ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎನ್ನುವುದು ನನ್ನ ಅಭಿಮತ.
– ಎ.ಜಿ.ಕೊಡ್ಗಿ, ಮಾಜಿ ಶಾಸಕರು, 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರು.
ಹೆಸರು ಉಳಿಯಲಿ
ಉಡುಪಿ-ಮಣಿಪಾಲದಲ್ಲಿ ಡಾ| ಟಿಎಂಎ ಪೈ ಅವರು ಬಡವರಲ್ಲಿ ಉಳಿತಾಯ ಮನೋಭಾವ ಬೆಳೆಸಲು ಜನರ ಮನೆ ಬಾಗಿಲಿನಿಂದ ಏಜೆಂಟರ ಮೂಲಕ ಪಿಗ್ಮಿ ಯೋಜನೆಯ ಮೂಲಕ ಹಣ ಸಂಗ್ರಹಿಸಲು ಪ್ರಾರಂಭ ಮಾಡಿದ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್. ಅದು ವಿಸ್ತಾರಗೊಳ್ಳುತ್ತಾ ಇತರ ಬ್ಯಾಂಕ್‌ಗಳಿಗೆ ಮಾದರಿ ಎನಿಸಿಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಉಡುಪಿ- ಮಣಿಪಾಲದಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನ ಕಚೇರಿ ಹೊಂದಿದ ಏಕೈಕ ಬ್ಯಾಂಕ್ ಆಗಿದೆ. ಸಣ್ಣ ವ್ಯಕ್ತಿಗಳ ದೊಡ್ಡ ಬ್ಯಾಂಕ್ ಎಂದೇ ಪರಿಗಣಿತವಾಗಿದೆ. ಮುಖ್ಯವಾಗಿ ಅವಿಭಜಿತ ದ.ಕ.ಜಿಲ್ಲೆಯ ಜನರಿಗೆ ಈ ಬ್ಯಾಂಕ್‌ನ ಬಗ್ಗೆ ಭಾವನಾತ್ಮಕ ನಂಟಿದೆ. ಈ ಕಾರಣಕ್ಕಾಗಿ ಎಲ್ಲೆಡೆ ಈ ಬ್ಯಾಂಕ್‌ನ ವಿಲೀನದ ಬಗ್ಗೆ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಇತರ ಬ್ಯಾಂಕ್‌ಗಳೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನ ಮಾಡುವುದರಿಂದ ನಮ್ಮದು ಎನ್ನುವ ಭಾವನಾತ್ಮಕ ನಂಟು ಕಳೆದುಹೋಗುತ್ತದೆ. ಶೈಕ್ಷಣಿಕ ವಿಚಾರದಲ್ಲಿ ಜಿಲ್ಲೆ ಮುಂದಿ ರುವಂತೆ ಬ್ಯಾಂಕಿಂಗ್ ಉದ್ಯಮದಲ್ಲೂ ಕೂಡ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಬ್ಯಾಂಕ್‌ಗಳು ಪೈಪೋಟಿಯಲ್ಲಿದ್ದರೆ ಆರ್ಥಿಕ ಹಿತದೃಷ್ಟಿಯಿಂದ ಹಲವಾರು ರೀತಿಯ ಅನುಕೂಲಗಳು ಇದ್ದರೂ ಈ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜತೆಗಿರುವ ನಂಟು ಅಪರಿಮಿತ. ಆರ್ಥಿಕ ಸುಧಾರಣೆ, ಇತರ ಖರ್ಚುಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ಆವಶ್ಯವಾಗಿರಬಹುದು. ಒಂದು ವೇಳೆ ಆರ್ಥಿಕ ಹಿತದೃಷ್ಟಿಯಿಂದಾಗಿ ವಿಲೀನ ಮಾಡುವ ಅಗತ್ಯ ಎದುರಾದರೆ ಸಿಂಡಿಕೇಟ್ ಬ್ಯಾಂಕ್‌ನ ಹೆಸರನ್ನಾದರೂ ಉಳಿಸುವ ಕೆಲಸ ಮಾಡಬೇಕು. ಈ ಮೂಲಕ ಕರಾವಳಿ ಭಾಗದ ಜನರಿಗೆ ಈ ಬ್ಯಾಂಕ್ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸುವ ಕೆಲಸ ಆಗಬೇಕು.
-ಕೆ.ರಘುಪತಿ ಭಟ್, ಶಾಸಕರು, ಉಡುಪಿ ವಿಧಾನ ಸಭಾ ಕ್ಷೇತ್ರ
ವಿಲೀನ ಖಂಡನೀಯ
ಬ್ಯಾಂಕಿಂಗ್ ವ್ಯವಸ್ಥೆಗೆ ಅವಿಭಜಿತ ದ.ಕ. ಜಿಲ್ಲೆಯ ಕೊಡುಗೆ ಬಹುದೊಡ್ಡದು. ಸಿಂಡಿಕೇಟ್, ಕೆನರಾ, ವಿಜಯ, ಕಾರ್ಪೊರೇಶನ್ ಬ್ಯಾಂಕ್ ಹುಟ್ಟಿದ್ದು ನಮ್ಮಲ್ಲಿ . ಆದರಿಂದಲೇ ಅವಿಭಜಿತ ಜಿಲ್ಲೆ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
1969ರಲ್ಲಿ ಇಂದಿರಾ ಗಾಂಧಿ 14 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವಾಗ ದೇಶದಲ್ಲಿ 300 ಜಿಲ್ಲೆಗಳು ಇದ್ದವು. ಅದರಲ್ಲಿ ಅವಿಭಜಿತ ಜಿಲ್ಲೆಯ 4 ಬ್ಯಾಂಕ್ ಹಾಗೂ 299 ಜಿಲ್ಲೆಗಳ ಒಟ್ಟು 12 ಬ್ಯಾಂಕ್‌ಗಳಿದ್ದವು. ಇಂದು ಹಳ್ಳಿ -ಹಳ್ಳಿಯಲ್ಲಿ ಸಹ ಸಿಂಡಿಕೇಟ್, ಕೆನರಾ, ವಿಜಯ, ಕಾರ್ಪೊರೇಶನ್ ಬ್ಯಾಂಕ್‌ಗಳ ಶಾಖೆಗಳಿವೆ. ಈ 4 ಬ್ಯಾಂಕ್‌ಗಳನ್ನು ಒಂದರೊಳಗೊಂದು ವಿಲೀನ ಮಾಡಿ ಕೇಂದ್ರ ಸರಕಾರ ಅವಿಭ ಜಿತ ದ.ಕ. ಜಿಲ್ಲೆಯ ಬ್ಯಾಂಕಿಂಗ್ ತೊಟ್ಟಿಲನ್ನು ಕಿತ್ತು ಹಾಕಿದೆ.
ಆಂಧ್ರ ಪ್ರದೇಶ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹುಟ್ಟೂರು. ಆ ವ್ಯಾಮೋಹದಿಂದ ಅಲ್ಲಿ ನಷ್ಟದಲ್ಲಿ ನಡೆಯು ತ್ತಿರುವ ಬ್ಯಾಂಕ್‌ಗಳನ್ನು ವಿಲೀನ ಮಾಡುತ್ತಿಲ್ಲ. ಕರಾವಳಿಯಲ್ಲಿ ಲಾಭ ದಲ್ಲಿರುವ ಬ್ಯಾಂಕ್‌ಗಳನ್ನು ವಿಲೀನ ಮಾಡುತ್ತಿರುವುದು ಖಂಡನೀಯ.
– ಪ್ರಮೋದ್ ಮಧ್ವರಾಜ್, ಮಾಜಿ ಸಚಿವ.