ದೃಢ ಸಂಕಲ್ಪದ ನ್ಯಾಯಾಧೀಶ ರಂಜನ್ ಗೊಗೋಯ್
Team Udayavani, Nov 18, 2019, 5:16 AM IST
ಅಯೋಧ್ಯೆಯೂ ಸೇರಿದಂತೆ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾಗುವಂಥ ಹಲವು ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನಿವೃತ್ತರಾಗಿದ್ದಾರೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೊಬ್ಬರು ನಿವೃತ್ತರಾಗುವುದು ಭಾರೀ ದೊಡ್ಡ ವಿಷಯ ಅಲ್ಲ. ಅವರು ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗುವುದೇ ಸೇವೆಯ ಸಂಧ್ಯಾಕಾಲದಲ್ಲಿ. ಬಹುತೇಕ ಒಂದೂವರೆ – ಎರಡು ವರ್ಷವಷ್ಟೇ ಅವರ ಅಧಿಕಾರವಧಿ ಇರುತ್ತದೆ. ಪ್ರಸ್ತುತ ರಂಜನ್ ಗೊಗೋಯ್ ಅವರೂ ಬರೀ 13 ತಿಂಗಳು ಮಾತ್ರ ಮುಖ್ಯ ನ್ಯಾಯಾಧೀಶರಾಗಿದ್ದರು. ಆದರೆ ಈ ಕಿರು ಅವಧಿಯಲ್ಲಿ ಅವರು ಭಾರತದ ನ್ಯಾಯಾಂಗವನ್ನು ಮುನ್ನಡೆಸಿದ ರೀತಿ ಉಳಿದವರಿಗಿಂತ ತುಸು ಭಿನ್ನವಾಗಿತ್ತು. ಹೀಗಾಗಿ ಗೊಗೋಯ್ ನಿವೃತ್ತಿ ಉಲ್ಲೇಖಾರ್ಹ ಘಟನೆ ಯಾಗುತ್ತದೆ.
ದಶಕಗಳಿಂದ ಕಗ್ಗಂಟಾಗಿದ್ದ ಅಯೋಧ್ಯೆ ವಿವಾದವನ್ನು ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠ ಬಹುತೇಕ ಸೌಹಾರ್ದಯುತವಾಗಿ ಬಗೆಹರಿಸಿತು ಎನ್ನುವುದು ಮಾತ್ರ ಮುಖ್ಯ ಅಲ್ಲ. ಇಡೀ ಪ್ರಕರಣದ ಮಹತ್ವದ ಘಟ್ಟವಾಗಿದ್ದ ವಿಚಾರಣೆಯನ್ನು ದೈನಂದಿನ ನೆಲೆಯಲ್ಲಿ ಬರೀ 40 ದಿನಗಳ ಒಳಗೆ ಮುಗಿಸಿತ್ತು ಎಂಬುದು ಗಮನಾರ್ಹ ವಿಚಾರ. ನ್ಯಾಯಾಲಯದ ಕಟ್ಟೆಯೇರಿದ ಪ್ರಕರಣಗಳೆಲ್ಲ ವರ್ಷಾನುಗಟ್ಟಲೆ ಕೊಳೆಯಬೇಕು ಎಂಬ ಪರಿಸ್ಥಿತಿಯಿರುವಾಗ ನ್ಯಾಯಾಂಗವನ್ನು ಮುನ್ನಡೆಸುವವರ ಸಂಕಲ್ಪ ದೃಢವಾಗಿದ್ದರೆ ದಾಖಲೆ ಸಮಯದಲ್ಲಿ ನ್ಯಾಯದಾನ ಮಾಡಬಹುದು ಎಂಬುದನ್ನು ಗೊಗೋಯ್ ತೋರಿಸಿಕೊಟ್ಟಿದ್ದಾರೆ.
ರಫೇಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರದಲ್ಲಿ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪದ ಪ್ರಕರಣವನ್ನೂ ಸುಪ್ರೀಂ ಕೋರ್ಟ್ ಕ್ಷಿಪ್ರವಾಗಿ ಮುಕ್ತಾಯಗೊಳಿಸಿದೆ. ಎರಡು ಸಲವೂ ಈ ಪ್ರಕರಣದಲ್ಲಿ ಕೇಂದ್ರ ಸರಕಾರಕ್ಕೆ ಕ್ಲೀನ್‌ಚಿಟ್ ನೀಡುವ ಮೂಲಕ ರಕ್ಷಣಾ ಖರೀದಿಗಿದ್ದ ಅಡ್ಡಿಗಳನ್ನು ನಿವಾರಿಸಿದೆ.
ಧಾರ್ಮಿಕ ಮತ್ತು ರಾಜಕೀಯವಾಗಿ ಮುಖ್ಯವಾಗಿದ್ದ ಶಬರಿಮಲೆಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ವಿವಾದವನ್ನು ಸಪ್ತ ಸದಸ್ಯರ ಸಂವಿಧಾನ ಪೀಠಕ್ಕೆ ಒಪ್ಪಿಸಿರುವುದು ಮತ್ತು ಕರ್ನಾಟಕದ ಶಾಸಕರ ಅನರ್ಹತೆ ಪ್ರಕರಣವನ್ನು ಬಗೆಹರಿಸಿದ್ದು, ಅಸ್ಸಾಂನ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿವಾದದ ಸಂದರ್ಭದಲ್ಲಿ ನ್ಯಾಯಾಂಗದ ನಿಲುವಿಗೆ ಅಚಲವಾಗಿ ಅಂಟಿಕೊಂಡದ್ದು ಗೊಗೋಯ್ ನೀಡಿರುವ ಇತರ ಕೆಲವು ಪ್ರಮುಖ ತೀರ್ಪುಗಳು.ಮುಖ್ಯ ನ್ಯಾಯಾಧೀಶರ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಅಡಿಗೆ ತಂದದ್ದು ಗೊಗೋಯ್ ನೀಡಿರುವ ಇನ್ನೊಂದು ಮಹತ್ವದ ತೀರ್ಪು. ಗಮನಾರ್ಹ ಅಂಶ ವೆಂದರೆ ಈ ಎಲ್ಲಾ ತೀರ್ಪುಗಳಲ್ಲಿ ಒಂದು ರೀತಿಯ ಸಮತೋಲನವನ್ನು ಕಾಪಾಡಿ ಕೊಳ್ಳಲು ನ್ಯಾಯಾಂಗ ಪ್ರಯತ್ನಿಸಿದೆ. ಎರಡೂ ಕಡೆಯ ಕಕ್ಷಿದಾರರಿಗೆ ನ್ಯಾಯ ಸಿಗಬೇಕೆಂಬ ಧೋರಣೆ ಈ ತೀರ್ಪುಗಳಲ್ಲಿ ಕಂಡು ಬರುತ್ತದೆ. ತೀರ್ಪು ಪಂಚಾಯತಿ ಕಟ್ಟೆಯ ನ್ಯಾಯ ತೀರ್ಮಾನದಂತಿದೆ ಎಂಬ ಟೀಕೆಗಳು ಇದ್ದರೂ ಬಹುಕಾಲದಿಂದ ಸಾಮಾಜಿಕ, ಧಾರ್ಮಿಕ ಸೌಹಾ ರ್ದತೆ ಕದಡಿದ್ದ ವಿವಾದಗಳನ್ನು ಬಗೆಹರಿಸುವಾಗ ಇಂಥ ಸಮತೋಲನವನ್ನು ಕಾಪಾಡುವುದು ಅನಿವಾರ್ಯ ವಾಗಿತ್ತು.
ಇದೇ ವೇಳೆ ಗೊಗೋಯ್ ಕೆಲವು ವಿವಾದಗಳಿಗೂ ಸಿಲುಕಿರುವುದನ್ನು ಉಲ್ಲೇಖೀಸಬೇಕಾಗುತ್ತದೆ. ಈ ಪೈಕಿ ಅವರ ಮೇಲೆಯೇ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪ ಈ ಪೈಕಿ ಪ್ರಮುಖವಾದದ್ದು. ಈ ಆರೋಪ ದಲ್ಲಿ ಹುರುಳಿಲ್ಲ ಎನ್ನುವುದು ತನಿಖೆಯಿಂದ ಸಾಬೀತಾಗಿದೆ ಎನ್ನುವುದು ನಿಜ. ಆದರೆ ಈ ತನಿಖೆ ನಡೆದ ರೀತಿಯ ಬಗ್ಗೆ ಇನ್ನೂ ಸಂದೇಹಗಳು ಉಳಿದುಕೊಂಡಿವೆ. ಹಿಂದಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ವಿರುದ್ಧ ಬಂಡಾಯ ಸಾರಿದ ನಾಲ್ವರು ಹಿರಿಯ ನ್ಯಾಯಾಧೀಶರಲ್ಲಿ ಗೊಗೋಯ್ ಕೂಡ ಒಬ್ಬರಾಗಿದ್ದರು.
ಅದೇನೆ ಇದ್ದರೂ ಭಾರತದ ನ್ಯಾಯಾಂಗ ಇತ್ತೀಚೆಗಿನ ವರ್ಷಗಳಲ್ಲಿ ಕಂಡು ಅತ್ಯಂತ ಕ್ರಿಯಾಶೀಲ ಮತ್ತು ಬದ್ಧತೆಯ ನ್ಯಾಯಾಧೀಶ ಗೊಗೋಯ್ ಎನ್ನುವುದರಲ್ಲಿ ಎರಡು ಮಾತಿಲ್ಲ.ದಿಟ್ಟ, ಕಠಿನ ಮತ್ತು ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳಲು ಗೊಗೋಯ್ ಹಿಂಜರಿಯುತ್ತಿರಲಿಲ್ಲ. ಅಯೋಧ್ಯೆ ವಿವಾದವನ್ನು ಬಗೆಹರಿಸಿದ ಕಾರಣಕ್ಕಾಗಿಯಾದರೂ ದೇಶ ಗೊಗೋಯ್ ಅವರ ಸೇವೆಯನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.