ತೋಳ್ ಬಲ
ಫ್ಯಾಷನ್ ಭಾರ ಹೆಗಲಿನ ಮೇಲೆ
Team Udayavani, Nov 20, 2019, 6:07 AM IST
ವ್ಯಕ್ತಿಯೊಬ್ಬನ ಶಕ್ತಿ ಅಡಗಿರುವುದು ತೋಳಿನಲ್ಲಿ ಅಂತ ನಂಬಿಕೆ. ಅದಕ್ಕೇ ತೋಳ್ಬಲ, ಭುಜಬಲ ಅಂತೆಲ್ಲಾ ಹೇಳುವುದು. ಹಾಗೆಯೇ, ವಸ್ತ್ರದ ಸೌಂದರ್ಯ ಕೂಡಾ ತೋಳಿನಲ್ಲಿ ಅಡಗಿದೆ ಅನ್ನುವುದು ಫ್ಯಾಷನಿಸ್‌ಟ್‌ಗಳ ಮಾತು. ಅದುವೇ ಪವರ್ ಸ್ಲೀವ್ಸ್ ಟ್ರೆಂಡ್…
ಉಡುಗೆ ಖರೀದಿಸುವಾಗ ಅದರ ಬಣ್ಣ, ಡಿಸೈನ್, ಮೆಟೀರಿಯಲ್ ಮತ್ತು ಸೈಝ್‌ಗೆ ಮಹತ್ವ ಕೊಡುತ್ತೇವೆಯೇ ಹೊರತು, ತೋಳುಗಳು ಹೇಗಿವೆ ಅನ್ನುವುದಕ್ಕೆ ಅಷ್ಟೊಂದು ಮಹತ್ವ ನೀಡುವುದಿಲ್ಲ ಅಲ್ಲವೇ? ಯಾಕಂದ್ರೆ, ತೋಳುಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳಬಹುದು. ಸ್ಲೀವ್‌ಲೆಸ್ ಆಗಿದ್ದರೆ, ತೋಳು ಹೊಲಿಸಬಹುದು. ತೋಳುಗಳು ಸಿಕ್ಕಾಾಪಟ್ಟೆ ಉದ್ದವಾಗಿದ್ದರೆ, ಕತ್ತರಿಸಿ, ಬೇಕಾದ ಉದ್ದಕ್ಕೆ ಆಲ್ಟರ್ ಮಾಡಿಸಬಹುದು. ಆದರೆ, ಇತ್ತೀಚಿನ ಫ್ಯಾಷನ್ ಟ್ರೆಂಡ್‌ಗಳಲ್ಲಿ ಬಟ್ಟೆಯ ತೋಳುಗಳಿಗೆ ಬಹಳ ಮಹತ್ವ ನೀಡಲಾಗುತ್ತಿದೆ.
ಬಟ್ಟೆಗಿಂತಲೂ ದೊಡ್ಡ ಗಾತ್ರದ ತೋಳುಗಳ ಈ ಟ್ರೆಂಡ್‌ಗೆ “ಪವರ್ ಸ್ಲೀವ್ಸ್’ ಎಂದು ಹೆಸರು. ಈ ಬಗೆಯ ಉಡುಪುಗಳು ಹೆಚ್ಚು ಸದ್ದು ಮಾಡುತ್ತಿದ್ದುದು, ಫ್ಯಾಷನ್ ಶೋಗಳಲ್ಲಿ. ರೂಪದರ್ಶಿಯರು ದೊಡ್ಡ ತೋಳಿನ ಬಟ್ಟೆಗಳನ್ನು ಧರಿಸುತ್ತಿದ್ದರು. ಆದರೆ, ಈಗ ಆ ಬಗೆಯ ವಿನ್ಯಾಾಸವನ್ನು ಸಾಮಾನ್ಯರೂ ಮೆಚ್ಚಿಕೊಂಡಿದ್ದಾರೆ. ಈ ಬಗೆಯ ಡ್ರೆಸ್ ನೋಡಲು ಸ್ವಲ್ಪ ತಮಾಷೆ ಎನಿಸಿದರೂ, ನೋಡಲು ಟ್ರೆಂಡಿ ಎನಿಸುತ್ತದೆ.
ಯಾವ ಬಣ್ಣ, ಯಾವ ಆಕ್ಸೆಸರೀಸ್?: ಸಾಲಿಡ್ ಕಲರ್, ಅಂದರೆ ಒಂದೇ ಬಣ್ಣದ ಉಡುಪಿನಲ್ಲಿ ಈ ಶೈಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. (ತಿಳಿ ಬಣ್ಣ, ಗಾಢ ಬಣ್ಣ- ಯಾವುದಾದರೂ ಪರವಾಗಿಲ್ಲ) ಪವರ್ ಸ್ಲೀವ್ಸ್ ಉಡುಪುಗಳನ್ನು ತೊಟ್ಟಾಗ ಬಳೆ, ಬ್ರೇಸ್‌ಲೆಟ್, ಕೈಗಡಿಯಾರದಂಥ ಆಕ್ಸೆಸರೀಸ್ ತೊಡುವ ಅವಶ್ಯಕತೆ ಇರುವುದಿಲ್ಲ. ಆಕ್ಸೆಸರೀಸ್ ತೊಟ್ಟರೆ ಈ ಬಗೆಯ ಡ್ರೆಸ್‌ಗಳು ಅಂದವಾಗಿ ಕಾಣಿಸುವುದಿಲ್ಲ. ಹಾಗಾಗಿ, ದೊಡ್ಡ ತೋಳಿನ ಬಟ್ಟೆಗಳ ಜೊತೆಗೆ ದೊಡ್ಡ ಕಿವಿಯೋಲೆ ಹಾಗೂ ಉಂಗುರ ತೊಡಬಹುದು.
ಎರಡಕ್ಕೂ ಒಪ್ಪುತ್ತದೆ: ಪವರ್ ಸ್ಲೀವ್ಸ್ ಶೈಲಿಯು, ಕೇವಲ ವೆಸ್ಟರ್ನ್ ಬಟ್ಟೆಗಳಿಗಷ್ಟೇ ಅಲ್ಲ, ಸಾಂಪ್ರದಾಯಿಕ ಉಡುಪುಗಳಿಗೂ ಒಪ್ಪುುತ್ತದೆ. ಜಂಪ್ ಸೂಟ್‌ಸ್, ಶರ್ಟ್, ಜಾಕೆಟ್, ಟ್ಯೂನಿಕ್, ಫಾರ್ಮಲ್ ಶರ್ಟ್, ಬ್ಲೇಜರ್, ಗೌನ್, ಸೀರೆಯ ಬ್ಲೌಸ್, ಚೂಡಿದಾರ, ಸಲ್ವಾಾರ್ ಕಮೀಜ್, ಕುರ್ತಾ, ಅನಾರ್ಕಲಿ, ಪಟಿಯಾಲ ಸೂಟ್, ಲಂಗ ದಾವಣಿ, ಉದ್ದ ಲಂಗ, ಘಾಗ್ರಾ ಚೋಲಿ…ಹೀಗೆ, ಎಲ್ಲ ಬಗೆಯ ಉಡುಗೆಯ ತೋಳಿಗೂ ಅಳವಡಿಸಬಹುದು. ಈ ಶೈಲಿಯ ಉಡುಪನ್ನು ಪಾರ್ಟಿ, ಹಬ್ಬ, ಪೂಜೆ, ಮದುವೆ, ಆಫೀಸ್ ವೇರ್, ಕ್ಯಾಶುಯಲ್ ಔಟಿಂಗ್… ಹೀಗೆ, ಯಾವುದೇ ಸಭೆ ಸಮಾರಂಭಕ್ಕೂ ತೊಡಬಹುದು.
ಹಿಂದೆಯೂ ಇತ್ತು: ಫ್ಯಾಷನ್ ಲೋಕದಲ್ಲಿ ಯಾವುದೂ ಹೊಸತಲ್ಲ, ಯಾವುದೂ ಹಳೆತಲ್ಲ. ನಿನ್ನೆಯ ಫ್ಯಾಷನ್ ಇಂದಿಗೆ ಹಳತಾಗಿ, ನಾಳೆ ಮತ್ತೆ ಹೊಸರೂಪದಲ್ಲಿ ಬರಬಹುದು ಎಂಬ ಮಾತಿಗೆ ಪವರ್ ಸ್ಲೀವ್ಸ್ ಸಾಕ್ಷಿ. ಯಾಕೆಂದರೆ, ಇದು ಎಪ್ಪತ್ತು- ಎಂಬತ್ತರ ದಶಕದ ಬಹಳ ಪ್ರಸಿದ್ಧ ವಸ್ತ್ರವಿನ್ಯಾಸಗಳಲ್ಲೊಂದು. ಆಗಿನ ಸಿನಿಮಾಗಳಲ್ಲಿ ಹೀರೋಯಿನ್‌ಗಳು ಈ ಬಗೆಯ ಉಡುಪು ಧರಿಸಿದ್ದನ್ನು ನೋಡಬಹುದು.
#ಪವರ್ ಸ್ಲೀವ್ಸ್: ಈ ಬಗೆಯ ದಿರಿಸುಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡ್ ಆಗುತ್ತಿವೆ. ಪಫಿ, ಫ್ಲೇರ್ಡ್, ಬಲೂನ್ (ಪುಗ್ಗೆ) ಆಕಾರದ, ವಿಂಡ್ (ರೆಕ್ಕೆ) ಆಕಾರದ ಅಥವಾ ಕೇಪ್ (ಬ್ಯಾಟ್‌ಮ್ಯಾನ್, ಸೂಪರ್‌ಮ್ಯಾನ್ ಉಡುಗೆಯಲ್ಲಿ ಕತ್ತಿನಿಂದ ಬೆನ್ನ ಮೇಲೆ ಜೋತಾಡುವ ಬಟ್ಟೆ) ನಂಥ ಆಯ್ಕೆಗಳು ಲಭ್ಯ ಇವೆ. ಯಾರಾದರೂ ಕೊಂಕು ಮಾತಾಡಿದರೆ ಐ ಡೋಂಟ್ ಕೇರ್ ಅನ್ನುವವರು ಇನ್ನೂ ಚಿತ್ರ- ವಿಚಿತ್ರ ತೋಳುಗಳನ್ನು ಹೋಲಿಸುವ ಸಾಹಸಕ್ಕೆ ಕೈ ಹಾಕಬಹುದು! ಇಂಥ ಉಡುಗೆ ತೊಟ್ಟು, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವಾಗ #ಪವರ್ ಸ್ಲೀವ್ಸ್ ಅಂತ ಹಾಕಿ, ಟ್ರೆಂಡ್ ಸೃಷ್ಟಿಸಬಹುದು!
-ಈ ಬಗೆಯ ಡ್ರೆಸ್ ಅನ್ನು ಪಾರ್ಟಿಗಳಿಗೆ ಧರಿಸುತ್ತೀರಾದರೆ, ಬಣ್ಣ ಗಾಢವಾಗಿರಲಿ.
-ಆಫೀಸು, ಕಾಲೇಜಿಗೆ ಕಪ್ಪು, ಬಳಿ, ಬೂದು, ನೀಲಿಯಂಥ ಬಣ್ಣಗಳ ಪವರ್ ಸ್ಲೀವ್ಸ್ ಸೂಕ್ತ.
-ಗಾಢ ಕೆಂಪು ಬಣ್ಣದ ಸ್ಲೀವ್ಸ್‌ಗಳು ಬೋಲ್ಡ್ ಲುಕ್ ನೀಡುತ್ತವೆ.
-ತೆಳ್ಳಗಿರುವವರಿಗೆ, ಸಣ್ಣಗಿನ ಸೊಂಟವುಳ್ಳವರಿಗೆ ಈ ಡ್ರೆಸ್ ಹೆಚ್ಚು ಸೂಕ್ತ.
-ಅಗಲವಾದ ಭುಜವುಳ್ಳವರಿಗೆ ಇದು ಅಷ್ಟು ಚೆನ್ನಾಗಿ ಹೊಂದುವುದಿಲ್ಲ. ಯಾಕಂದ್ರೆ, ಪವರ್ ಸ್ಲೀವ್ಸ್‌ಗಳು ಅವರ ಭುಜವನ್ನು ಮತ್ತಷ್ಟು ಅಗಲವಾಗಿ ಕಾಣುವಂತೆ ಮಾಡುತ್ತವೆ.
-ಕೈಗೆ ಯಾವುದೇ ಆ್ಯಕ್ಸೆಸರೀಸ್ ಬೇಡ.
-ದೊಡ್ಡ ಕಿವಿಯೋಲೆ, ಉಂಗುರ, ಸಾಂಪ್ರದಾಯಿಕ ಉಡುಗೆಯಾದರೆ ನೆಕ್‌ಲೇಸ್ ಧರಿಸಿದರೆ ಸಾಕು.
* ಅದಿತಿ ಮಾನಸ ಟಿ.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.