ನೋಡ್ತಾ ಇರಿ, ಇಡೀ ಎನ್‌ಸಿಪಿ ಬಿಜೆಪಿಗೆ ಬರಲಿದೆ : ಜೋಶಿ
Team Udayavani, Nov 23, 2019, 8:21 PM IST
ಹುಬ್ಬಳ್ಳಿ: ಮಹಾರಾಷ್ಟ್ರದ ಜನರ ತೀರ್ಪಿಗೆ ವಿರುದ್ಧವಾಗಿ ಶಿವಸೇನೆ ಪಕ್ಷ ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದರಿಂದ ಬಿಜೆಪಿಯು ಎನ್‌ಸಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೈತಿಕ ರಾಜಕಾರಣಕ್ಕೆ ನಾವು ಮುಂದಾಗಿಲ್ಲ. ಎನ್‌ಸಿಪಿಯ ಶಾಸಕಾಂಗ ನಾಯಕರನ್ನಾಗಿ ಅವರ ಪಕ್ಷದವರೇ ಅಜಿತ್ ಪವಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈಗ ಅಜಿತ್ ಪವಾರ್ ಅವರೇ ಉಪಮುಖ್ಯಮಂತ್ರಿಯಾದರೆ ಇದರಲ್ಲಿ ನಮ್ಮ ಕೈವಾಡವೇನಿದೆ? ನೀವು ನೋಡ್ತಾ ಇರಿ, ಇಡೀ ಎನ್‌ಸಿಪಿಯೇ ನಮ್ಮೊಂದಿಗೆ ಬರಲಿದೆ ಎಂದರು.
ಮೋದಿ ರಾಷ್ಟ್ರೀಯ ನಾಯಕತ್ವ ಹಾಗೂ ದೇವೇಂದ್ರ ಫಡ್ನವೀಸ್ ಅವರ ಸ್ಥಳೀಯ ನೇತೃತ್ವಕ್ಕೆ ಮನ್ನಣೆ ನೀಡಿ ಮಹಾರಾಷ್ಟ್ರದ ಜನರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಹಾಗೂ ಶಿವಸೇನೆಯನ್ನು ಗೆಲ್ಲಿಸಿದರು. ಆದರೆ ಬಾಳಾಸಾಹೇಬ ಠಾಕ್ರೆ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ದುರಾಸೆ ಹಾಗೂ ದುರಹಂಕಾರದ ಕಾರಣದಿಂದ ಬಿಜೆಪಿಯಿಂದ ದೂರ ಸರಿಯುವ ನಿರ್ಧಾರಕ್ಕೆ ಶಿವಸೇನೆ ಮುಂದಾಯಿತು. ಆದರೆ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರದ ಅವಶ್ಯಕತೆ ಮನಗಂಡು ಅನಿವಾರ್ಯವಾಗಿ ನಾವು ಎನ್‌ಸಿಪಿಯೊಂದಿಗೆ ಸರ್ಕಾರ ರಚಿಸಿದ್ದೇವೆ ಎಂದರು.
ಸಂಜಯ ರಾವುತ್ ಎಂಬ ದುರಹಂಕಾರಿ ಹಾಗೂ ಉದ್ಧವ ಠಾಕ್ರೆ ಎಂಬ ಅಧಿಕಾರದಾಹಿ ವ್ಯಕ್ತಿಗೆ ಅನಿವಾರ್ಯವಾಗಿ ಪಾಠ ಕಲಿಸಬೇಕಾಯಿತು. ರಾಜ್ಯದಲ್ಲಿಯೂ ಹಿಂದೆ ಹೀಗೆಯೇ ಆಗಿತ್ತು. ಇದು ಅಧಿಕಾರ ದುರ್ಬಳಕೆಯಲ್ಲ. ಕಳೆದೊಂದು ತಿಂಗಳಿನಿಂದ ಬಿಜೆಪಿ ಶಾಂತವಾಗಿ, ಸಂಯಮದಿಂದ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಲು ಪ್ರಯತ್ನಿಸಿತು. ಅವರು ಸುಧಾರಿಸುತ್ತಾರೆಂಬುದು ನಮ್ಮ ನಿರೀಕ್ಷೆಯಾಗಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ಜಯಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮಗೆ ಯಾವುದೇ ಆಯ್ಕೆಗಳಿರಲಿಲ್ಲ. ಚುನಾವಣೆ ಪೂರ್ವದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತದೆಯೋ ಆ ಪಕ್ಷಕ್ಕೆ ಸಿಎಂ ಸ್ಥಾನ ನೀಡಬೇಕೆಂಬ ಒಪ್ಪಂದವಾಗಿತ್ತು ಎಂದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮುಂದಿನ 5 ವರ್ಷಗಳ ಕಾಲ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿ ಎಂದು ಉದ್ಧವ ಠಾಕ್ರೆ ಸಮ್ಮುಖದಲ್ಲಿಯೇ ಹೇಳಿದ್ದರು. ಆದರೆ ಆಗ ಯಾವುದೇ ಧ್ವನಿ ಎತ್ತಲಿಲ್ಲ. ಶಿವಸೇನೆ ಬ್ಲಾ Âಕ್‌ವೆುàಲ್ ರಾಜಕಾರಣ ಮಾಡಲು ಮುಂದಾಗಿದ್ದರಿಂದ ಬಿಜೆಪಿ ಅನಿವಾರ್ಯವಾಗಿ ಎನ್‌ಸಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಬೇಕಾಯಿತು ಎಂದರು.
ನೋಡಿಕೊಳ್ಳೋನು ಮೇಲಿದ್ದಾನೆ:
ಡಿ.ಕೆ. ಶಿವಕುಮಾರ ದಾಖಲೆ ಸಹಿತ ಉತ್ತರ ನೀಡುವುದಿದ್ದರೆ ನೀಡಲಿ. ಈಗಲೇ ಉಪಚುನಾವಣೆ ನಡೆದಿದೆ. ಅದಕ್ಕೆ ವಿಳಂಬ ಮಾಡದೇ ಈಗಲೇ ಉತ್ತರ ನೀಡಬೇಕು. 108 ಕೋಟಿ ರೂ. ಅವರ ಮಗಳ ಹೆಸರಿನಲ್ಲಿರುವ ಆಸ್ತಿ ಎಲ್ಲಿಂದ ಬಂತು ಎಂಬುದನ್ನು ಕೂಡ ಜನರಿಗೆ ತಿಳಿಸಲಿ. ಡಿ.ಕೆ. ಶಿವಕುಮಾರ 25-30 ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದಾಗ ಅವರ ಆಸ್ತಿ ಎಷ್ಟಿತ್ತು. ಈಗ ಎಷ್ಟಿದೆ ಎಂಬುದು ಜನರಿಗೆ ಗೊತ್ತಾಗುವುದಿಲ್ಲವೇ, ಜನರು ಮೂರ್ಖರೆಂದು ಅವರು ಭಾವಿಸಿದ್ದಾರೆಯೇ. ಆದ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಯೋಗ್ಯ ರೀತಿಯಲ್ಲಿ ರಾಜಕಾರಣ ಮಾಡುತ್ತೇನೆಂದು ಹೇಳುವುದನ್ನು ಬಿಟ್ಟು, ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ನೋಡಿಕೊಳ್ಳೋರು ಬಹಳ ಜನರಿದ್ದಾರೆ. ಎಲ್ಲರನ್ನೂ ನೋಡಿಕೊಳ್ಳುವವನು ಮೇಲೊಬ್ಬ ಇದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದರು.
ಮಹದಾಯಿಗೆ ಅಗತ್ಯ ಕ್ರಮ:
ಮಹದಾಯಿಗಾಗಿ ಯಾರು ಇಚ್ಛಾಶಕ್ತಿ ತೋರಿದ್ದಾರೆಂಬುದು ಜನರಿಗೆ ಗೊತ್ತಿದೆ. ಅದನ್ನು ಡಿ.ಕೆ. ಶಿವಕುಮಾರ ಹೇಳುವ ಅವಶ್ಯಕತೆಯಿಲ್ಲ. 60 ವರ್ಷ ದೇಶದಲ್ಲಿ ಅಧಿಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಎರಡೂ ಕಡೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೂ ನ್ಯಾಯಾಧಿಕರಣಕ್ಕೆ ಹೋಗಿರಲಿಲ್ಲ. ನ್ಯಾಯಾಧಿಕರಣ ಇರದ ಸಂದರ್ಭದಲ್ಲಿಯೂ ಕಾಂಗ್ರೆಸ್ ಏನೂ ಮಾಡಲಿಲ್ಲ. ಮುಂದೆ ನ್ಯಾಯಾಧಿಕರಣಕ್ಕೆ ಕೊಡುವ ಸಂದರ್ಭದಲ್ಲಿ ಕೂಡ ಸ್ಪಂದನೆ ನೀಡದ ಕಾಂಗ್ರೆಸ್ ಮುಖಂಡರು, ಈಗ ಪರಿಸರ ಇಲಾಖೆ ಹಸಿರು ನಿಶಾನೆ ತೋರಿದ ಸಂದರ್ಭದಲ್ಲಿ ಅನಗತ್ಯ ಆರೋಪ ಮಾಡುತ್ತಿರುವುದು ಚುನಾವಣೆ ಗಿಮಿಕ್ ಹೊರತು ಬೇರೇನಲ್ಲ ಎಂದರು.
ನಾವು ಕುಡಿಯುವ ನೀರಿಗಾಗಿ ಪರಿಸರ ಇಲಾಖೆ ಅನುಮತಿ ಕೇಳಿದ್ದೆವು. ಆದರೆ ನೀರಾವರಿಗಾಗಿ ಬಳಕೆ ಮಾಡಿಕೊಳ್ಳಲು ನೀರು ಕೇಳಿದ್ದಾರೆಂದು ಗೋವಾ ಹೇಳಿದೆ. ಇದಕ್ಕಾಗಿ ನಾಲಾಗಳನ್ನು ಮಾಡಲಾಗಿದೆ ಎಂದು ಆರೋಪಿಸಿದೆ. ಅದನ್ನು ಸಚಿವ ಪ್ರಕಾಶ ಜಾವಡೇಕರ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಹೊಸ ಸಮಿತಿಯೇನಲ್ಲ, ಅಧಿಕಾರಿಗಳ ಸಮಿತಿಗೆ ಶಿಫಾರಸು ಮಾಡಿದ್ದಾರೆ ಎಂದರು.
ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದ ಮೋಹನ ಕಾತರಕಿಯವರೇ ಇದನ್ನು ಸ್ಪಷ್ಟಪಡಿಸಿದ್ದು, ಆದ್ದರಿಂದ ನೋಟಿಫಿಕೇಶನ್ ಹೊರಡಿಸಲು ಬರುವುದಿಲ್ಲ. ಪೂರ್ವ ತಯಾರಿಗೆ ಪರಿಸರ ಇಲಾಖೆ ಅನುಮತಿ ಸಿಕ್ಕಿದೆ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಎಲ್ಲ ಸಂಗತಿಗಳನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ನಾವು ಮಾಡಬೇಕಾದ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಗುಪ್ತಚರ ವರದಿ ಅವಶ್ಯಕತೆಯಿಲ್ಲ
ಉಪಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ಬರುತ್ತದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿರುವುದು ನನಗೆ ಗೊತ್ತಿಲ್ಲ. ವರದಿ ಮುಖ್ಯಮಂತ್ರಿಗಾಗಲಿ ಅಥವಾ ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೂ ಬಂದಿಲ್ಲ. ಅದು ಇನ್ನಾರಿಗಾದರೂ ಬಂದಿದ್ದರೆ ಅದರ ಬಗ್ಗೆ ನಾನು ಹೇಳುವುದರಲ್ಲಿ ಅರ್ಥವಿಲ್ಲ. ನಮಗೆ ಗುಪ್ತಚರ ವರದಿ ಅವಶ್ಯಕತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಬಗ್ಗೆ ವಿಶ್ವಾಸವಿದೆ ಎಂದು ಜೋಶಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.