ರಾಜ್ಯದಲ್ಲಿ ಗುರುಕುಲಗಳು ಹೆಚ್ಚಾಗಲಿ
Team Udayavani, Nov 24, 2019, 3:08 AM IST
ಬೆಂಗಳೂರು: ಮೆಕಾಲೆ ಶಿಕ್ಷಣ ವ್ಯವಸ್ಥೆಯಿಂದ ಸ್ವಾಭಿಮಾನ ಕಳೆದುಕೊಂಡಿದ್ದೇವೆ. ಇನ್ನಾದರೂ ಗುರುಕುಲ ಶಿಕ್ಷಣ ವ್ಯವಸ್ಥೆ ಮರಳಬೇಕಿದೆ. ಹೀಗಾಗಿ ರಾಜ್ಯದಲ್ಲಿ ಗುರುಕುಲಗಳು ಹೆಚ್ಚಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು. ಹರಿಹರಪುರದ ಪ್ರಬೋಧಿನೀ ಗುರುಕುಲಮ್‌ನ ಅರ್ಧಮಂಡಲೋತ್ಸವ ಪ್ರಯುಕ್ತ ಶನಿವಾರ ನೃಪತುಂಗ ರಸ್ತೆಯ ಯವನಿಕದಲ್ಲಿ ಏರ್ಪಡಿಸಿದ್ದ “ಗುರುಕುಲ ದರ್ಶನಮ್’ ಭಾರತೀಯ ಗುರುಕುಲ ಪ್ರಯೋಗದ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆಕಾಲೆ ಶಿಕ್ಷಣ ಪದ್ಧತಿಯೂ ಮನುಷ್ಯರ ನಡುವೆ ಅಂತರ ಬೆಳೆಸಿದೆ. ನಮ್ಮತನವನ್ನು ಕಳೆದುಕೊಳ್ಳುವಂತೆ ಮಾಡಿದೆ. ಎಂದು ಹೇಳಿದರು. ಭಾರತ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಆದರೆ, ಪಠ್ಯಕ್ಕೂ ನಾವು ಮಾಡುವ ಕೆಲಸಕ್ಕೂ ವ್ಯತ್ಯಾಸವಿದೆ. ಮೆಕಾಲೆ ಶಿಕ್ಷಣ ವಿದ್ಯಾರ್ಥಿಗೆ ಆತ್ಮಸ್ಥೈರ್ಯ ನೀಡುವುದಿಲ್ಲ. ಕಂಪನಿಗಳಿಗೆ ಸಂದರ್ಶನಕ್ಕಾಗಿ ಹೋಗುವ ವ್ಯಕ್ತಿಗೆ ಅಲ್ಲಿನ ಸಂದರ್ಶಕರು ಕೇಳುವ ಪ್ರಶ್ನೆಯೇ ಬೇರೆ, ಪುಸ್ತಕದಲ್ಲಿರುವ ವಿಷಯವೇ ಬೇರೆಯಾಗಿರುತ್ತದೆ. ಈ ದ್ವಂದ್ವಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದರು.
ಪ್ರಸ್ತುತ ಪಠ್ಯ ಬದಲಾಗುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಾಗಿ ಗುರುಕುಲದಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಶಿಕ್ಷಕರಾಗಿ ಗುರುಕುಲದಲ್ಲಿ ಕೆಲಸ ನಿರ್ವಹಿಸಬೇಕು. ಅದರ ಜತೆಗೆ ಪೋಷಕರ ಮನಸ್ಥಿತಿಯೂ ಬದಲಾಗಬೇಕು. ಆಗ ಮಾತ್ರ ಉತ್ತಮ ಶಿಕ್ಷಣ ಸಾಧ್ಯ. ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗೆ ಉತ್ತರ ಕಂಡುಕೊಳ್ಳುವ ಮಾರ್ಗದರ್ಶನ ನೀಡುತ್ತಾರೆ. ಹೊಸ ಚಿಂತನೆ ಮತ್ತು ಸ್ವಾವಲಂಬನೆ ಬರಲಿದೆ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಗುರುಕುಲ ಪದ್ಧತಿ ಎಂದರೆ ತಪ್ಪು ಕಲ್ಪನೆಯಿದೆ. ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವರೇ ಎಂಬ ಸಂದೇಹಗಳಿವೆ. ಗುರುಕುಲದಲ್ಲಿ ಶಿಕ್ಷಣ ಪಡೆದವರು ವಿದೇಶದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಹೊಸ ಆಲೋಚನೆ ಮೂಲಕ ಸ್ವತ ಉದ್ಯೋಗ ಹೊಂದಿದ್ದಾರೆ ಎಂದು ತಿಳಿಸಿದರು. ಇನ್ಫೋಸಿಸ್ ಸಂಸ್ಥೆಯ ಸ್ವತಂತ್ರ ನಿರ್ದೇಶಕ ಡಿ.ಎನ್.ಪ್ರಹ್ಲಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪದವಿಗಳು ಸಾಮಾನ್ಯವಾಗಿವೆ.
ಆದರೆ, ಕೌಶಲ್ಯದ ಕೊರತೆಯಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪುಸ್ತಕಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಅದಕ್ಕಾಗಿಯೇ ಉದ್ಯೋಗದ ಅಭದ್ರತೆ ಎದುರಾಗುತ್ತಿದೆ. ಆದರೆ, ಗುರುಕುಲದಲ್ಲಿ ಶಿಕ್ಷಣ ಪಡೆಯುವವರಿಗೆ ಎಲ್ಲ ವಿಷಯದ ಜ್ಞಾನ ಇರಲಿದೆ. ಆತ್ಮಸ್ಥೈರ್ಯ ಬರಲಿದ್ದು, ಎಲ್ಲಿಯಾದರೂ, ಏನೇ ಕೆಲಸ ಮಾಡಿಯಾದರೂ ಬದುಕುತ್ತೇನೆ ಎಂಬ ವಿಶ್ವಾಸ ಬರಲಿದೆ ಎಂದು ತಿಳಿಸಿದರು. ಪ್ರಬೋಧಿನೀ ಗುರುಕುಲದ ವ್ಯವಸ್ಥಾಪಕ ಉಮೇಶ್ ಆಚಾರ್ಯ ಮಾತನಾಡಿ, ಗುರುಕುಲ ಎಂದರೆ ವೇದ, ಸಂಸ್ಕೃತ, ಪೂಜೆ ಮಾತ್ರವಲ್ಲ.
ಸಾಂಸ್ಕೃತಿಕ ರಾಯಭಾರಿಗಳಾಗುತ್ತಾರೆ. ಇಲ್ಲಿ ಓದುವವರು ಗುರುಗಳಾಗುತ್ತಾರೆ. ಪ್ರಬೋಧಿನೀ ಸಂಸ್ಥೆ 1995ರಲ್ಲಿ ಗುರುಕುಲ ಆರಂಭಿಸಿದ್ದು, ಸತತ 24 ವರ್ಷದಿಂದ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ 17 ಜಿಲ್ಲೆಯ 65 ತಾಲೂಕಿನ 104 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರು. ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್, ಪ್ರೊ. ರಾಮಚಂದ್ರಭಟ್, ಪಗತಿಪರ ಕೃಷಿಕ ರಾಜಗೋಪಾಲ್, ಅನರ್ಹ ಶಾಸಕ ಮುನಿರತ್ನ ಮತ್ತಿತರರು ಉಪಸ್ಥಿತರಿದ್ದರು.
ಗುರುಕುಲ ಎಂಬುದು ಒಂದು ಸಂಸ್ಥೆಯಲ್ಲ. ಅದೊಂದು ಪರಿಕಲ್ಪನೆ. ಶಿಕ್ಷಣ ಉದ್ಯಮವಾಗುತ್ತಿರುವುದರಿಂದ ಸ್ವಾವಲಂಬಿಯಾಗಿ ಬದುಕಲು ಗುರುಕುಲಗಳ ಅಗತ್ಯವಿದೆ. ಗುರುಕುಲ ಪಠ್ಯದ ಜತೆಗೆ ಪ್ರಾಯೋಗಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ.
-ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.