225 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ!
ಸ್ಮಶಾನಕ್ಕೆ ಭೂಮಿ ನೀಡುವಂತೆ ಜನರ ಮನವಿಜಾಗ ಗುರುತಿಸಲು ಜಿಲ್ಲಾಡಳಿತದಿಂದ ಕ್ರಮ
Team Udayavani, Nov 25, 2019, 1:13 PM IST
ಎಸ್.ಕೆ. ಲಕ್ಷ್ಮೀಪ್ರಸಾದ್
ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ 1008 ಗ್ರಾಮಗಳಲ್ಲಿ 225 ಗ್ರಾಮಗಳು ಇನ್ನೂ ಸಹ ಸ್ಮಶಾನ ಭೂಮಿಯನ್ನು ಹೊಂದಬೇಕಾಗಿದೆ. ಅಲ್ಲದೆ 225 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವನ್ನೂ ಗುರುತಿಸಲಾಗಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಉತ್ಛ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಂತೆ ಜಿಲ್ಲೆ ಹೊಂದಿರುವ 8 ಪಟ್ಟಣ ಮತ್ತು ನಗರಗಳನ್ನು ಹೊರತುಪಡಿಸಿದರೆ 1008 ಗ್ರಾಮಗಳಲ್ಲಿ 783 ಗ್ರಾಮಗಳಲ್ಲಿ ಸ್ಮಶಾನಗಳಿವೆ.
ಉಳಿದಂತೆ 225 ಗ್ರಾಮಗಳಲ್ಲಿ ಅಧಿಕೃತವಾಗಿ ಸ್ಮಶಾನಕ್ಕೆ ಜಾಗ ಮೀಸಲಿರಿಸಿರಲಿಲ್ಲ. ಆನಂತರ 171 ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಉಳಿದಂತೆ 54 ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಾಗ ಕಾದಿರಿಸಿಲ್ಲ.
ಇತ್ತೀಚೆಗೆ ಶ್ರೇಷ್ಠ ನ್ಯಾಯಾಲಯ ಪ್ರತಿ ಗ್ರಾಮದಲ್ಲೂ ಮೃತಪಟ್ಟ ವ್ಯಕ್ತಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ಒದಗಿಸಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದ ಸ್ಮಶಾನ ಭೂಮಿಯನ್ನು ಕಾದಿರಿಸಲು ಸರ್ಕಾರ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅನೇಕ ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಜಾಗವಿಲ್ಲದೆ ಅದನ್ನು ಒದಗಿಸಬೇಕೆಂಬ ಮನವಿಗಳು ಜಿಲ್ಲಾಧಿಕಾರಿ ಕಚೇರಿ ತಲುಪುತಿದ್ದು, ಸರ್ಕಾರಿ ಭೂಮಿ ಇಲ್ಲದೆ ಇದ್ದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಿ ಸ್ಮಶಾನಕ್ಕೆ ಜಾಗ ಒದಗಿಸುವ ಸೂಚನೆಯನ್ನು ಸರ್ಕಾರ ನೀಡಿದೆ.
ತಾಲೂಕುವಾರು ವಿವರ: ನರಸಿಂಹರಾಜಪುರ ತಾಲೂಕಿನಲ್ಲಿರುವ 55 ಗ್ರಾಮಗಳ ಪೈಕಿ 1 ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ. ಕೊಪ್ಪ ತಾಲೂಕಿನಲ್ಲಿರುವ 68 ಗ್ರಾಮಗಳಲ್ಲಿ 12 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕೊರತೆ ಇದ್ದು, ಇದೀಗ 10 ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಸ್ಮಶಾನಕ್ಕಾಗಿ ಗುರುತಿಸಲಾಗಿದ್ದು, ಇನ್ನೂ 2 ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಜಾಗ ಗುರುತಿಸಬೇಕಾಗಿದೆ. ವಿಶೇಷವೆಂದರೆ ಕೊಪ್ಪ ಪಟ್ಟಣದಲ್ಲೂ ಸ್ಮಶಾನ ಭೂಮಿ ಜಾಗ ಕಾದಿರಿಸಿಲ್ಲ.
ಚಿಕ್ಕಮಗಳೂರು ತಾಲೂಕಿನಲ್ಲಿ 199 ಗ್ರಾಮಗಳಲ್ಲಿ 159 ಗ್ರಾಮಗಳಲ್ಲಿ ಸ್ಮಶಾನವಿದ್ದರೆ, 40 ಗ್ರಾಮದಲ್ಲಿ ಸ್ಮಶಾನ ಭೂಮಿ ಇರಲಿಲ್ಲ. ಈಗ 10 ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿ ಗುರುತಿಸಿದ್ದು, ಇನ್ನೂ 30
ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಭೂಮಿ ಹುಡುಕಬೇಕಾಗಿದೆ. ಮೂಡಿಗೆರೆ ತಾಲೂಕಿನ 139 ಗ್ರಾಮಗಳಲ್ಲಿ 96 ರಲ್ಲಿ ಸ್ಮಶಾನ ಭೂಮಿ ಇದ್ದರೆ, 43 ಗ್ರಾಮಗಳಲ್ಲಿ ಇದರ ಕೊರತೆ ಇತ್ತು. ಈಗ 40 ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಭೂಮಿ ಗುರುತಿಸಿದ್ದು, ಇನ್ನೂ 3 ಗ್ರಾಮಗಳಲ್ಲಿ ಭೂಮಿ ಗುರುತಿಸಬೇಕಾಗಿದೆ.
ಶೃಂಗೇರಿ ತಾಲೂಕಿನ 49 ಗ್ರಾಮಗಳಲ್ಲಿ 29 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯವಿದ್ದರೆ, ಉಳಿದ 20 ಗ್ರಾಮಗಳಲ್ಲಿ 14 ಗ್ರಾಮಗಳಿಗೆ ಸ್ಮಶಾನ ಭೂಮಿ ಗುರುತಿಸಲಾಗಿದೆ. ಉಳಿದ 6 ಗ್ರಾಮಗಳಿಗೆ ಸ್ಮಶಾನ ಭೂಮಿ ಗುರುತಿಸಬೇಕಾಗಿದೆ. ಕಡೂರು ತಾಲೂಕಿನ 232 ಗ್ರಾಮಗಳಲ್ಲಿ 167 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದೆ. 65 ಗ್ರಾಮದಲ್ಲಿ 60 ಗ್ರಾಮಗಳಿಗೆ ಸ್ಮಶಾನಕ್ಕಾಗಿ ಸ್ಮಶಾನ ಭೂಮಿ ಕಾಯ್ದಿರಿಸಿದ್ದು, ಉಳಿದ 5ಕ್ಕೆ ಸ್ಮಶಾನ ಸೌಲಭ್ಯ ಒದಗಿಸಲು ಭೂಮಿ ಹುಡುಕಲಾಗುತ್ತಿದೆ.
ತರೀಕೆರೆ ತಾಲೂಕಿನ 146 ಗ್ರಾಮಗಳಲ್ಲಿ 124 ಗ್ರಾಮಗಳಲ್ಲಿ ಸ್ಮಶಾನಗಳಿದ್ದು, ಉಳಿದ 21 ರಲ್ಲಿ 18 ಗ್ರಾಮಗಳಿಗೆ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿ ಕಾಯ್ದಿರಿಸಲಾಗಿದೆ. ಉಳಿದ 3 ಗ್ರಾಮಗಳಿಗೆ ಭೂಮಿ ಗುರುತಿಸಲು ಪ್ರಯತ್ನ ನಡೆದಿದೆ. ಅಜ್ಜಂಪುರ ತಾಲೂಕಿನ 108 ಗ್ರಾಮಗಳಲ್ಲಿ 85 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದರೆ, ಉಳಿದ 23 ಗ್ರಾಮಗಳಲ್ಲಿ 19ಕ್ಕೆ ಸ್ಮಶಾನ ಭೂಮಿ ಗುರುತಿಸಿದ್ದು, ಉಳಿದ 4 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ನೀಡಲು ಭೂಮಿಗಾಗಿ ಹುಡುಕಾಟ ನಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.