ಸಂವಿಧಾನದ ಆಶಯಗಳಿಗೆ ಮೌಲ್ಯ ತುಂಬಿ ಬರಲಿ
Team Udayavani, Nov 26, 2019, 5:43 AM IST
“”ಭಾರತ ಸಂವಿಧಾನವು ಬೇಲೂರು, ಹಳೆಬೀಡು ದೇವಸ್ಥಾನಗಳ ಕಲಾ ವೈಭವಕ್ಕೆ ಸರಿಸಮಾನವಾಗಿ ಹೋಲಿಸಬಲ್ಲ, ಪವಿತ್ರವಾದ ಮಹಾಕಾವ್ಯವಾಗಿ ನಿಲ್ಲಬಲ್ಲ ಈ ನೆಲದ ಶ್ರೇಷ್ಠ ಗ್ರಂಥ” ಎಂದು ವರ್ಣಿಸಿದವರು ನಿವೃತ್ತ ನ್ಯಾಯಮೂರ್ತಿ ವಿ. ಶೈಲೇಂದ್ರ ಕುಮಾರ್‌ರವರು. ಇದು ಭಾರತೀಯ ಸಂವಿಧಾನದ ವ್ಯಕ್ತಿತ್ವದ ಪರಿಪೂರ್ಣವಾದ ದರ್ಶನವೂ ಹೌದು. ಸಂವಿಧಾನವೆಂದರೆ ಗ್ರಂಥಾಲಯಗಳನ್ನು ಅಲಂಕರಿಸುವ ಪುಸ್ತಕಗಳಾಗದೆ; ಜನರ ಬದುಕನ್ನೂ ಸದಾ ಸ್ಪರ್ಶಿಸುವ ಚಿಂತನ-ಮಂಥನಗಳಿಗೆ ಒಳಪಡುವ ಗ್ರಂಥವೂ ಆಗಬೇಕು.
ಭಾರತ ಸಂವಿಧಾನದ ಹುಟ್ಟು ಬೆಳವಣಿಗೆಯ ಯಶೋಗಾಥೆಯನ್ನು ನೆನಪಿಸಿಕೊಂಡಾಗ ನಮ್ಮ ಸಂವಿಧಾನ ಕಾನೂನು ತಜ್ಞರ ಅಪರಿಮಿತ ಪರಿಶ್ರಮ, ಜ್ಞಾನ, ಅನುಭವದ ಮೂಸೆಯಲ್ಲಿ ಹುಟ್ಟಿಬಂದ ನಮ್ಮೆಲ್ಲರ ಬದುಕನ್ನು ಕಟ್ಟುವ ರೂಪಿಸುವ ಮಹಾಕಾವ್ಯ ಅನ್ನುವುದು ವೇದ್ಯವಾಗುತ್ತದೆ. ಸಂವಿಧಾನದ ರಚನಾ ಸಭೆ ಒಟ್ಟು ಎರಡು ವರ್ಷ, ಹನ್ನೊಂದು ತಿಂಗಳು ಹದಿನೆಂಟು ದಿನಗಳನ್ನು ತೆಗೆದುಕೊಂಡು, ಸುಮಾರು 165ಗಂಟೆಗಳ ಅಧಿವೇಶನವನ್ನು ಹಮ್ಮಿಕೊಂಡು ನಮಗೊಂದು ಭವ್ಯವಾದ ಸಂವಿಧಾನವನ್ನು ರೂಪಿಸಿ ಕೊಟ್ಟ ಕೀರ್ತಿ ಭಾರತ ಸಂವಿಧಾನದ ಸಮಿತಿಗೆ ಸಲ್ಲುತ್ತದೆ. 1949 ನವಂಬರ್ 26ರಂದು ಸಂವಿಧಾನಕ್ಕೆ ಒಪ್ಪಿಗೆ ಕೊಟ್ಟ ದಿನವಾದ ಇಂದು ಭಾರತ ಸಂವಿಧಾನದ ಹುಟ್ಟು ದಿನವಾಗಿ ಆಚರಿಸುತ್ತಿ¤ದ್ದೇವೆ. 1950 ಜನವರಿ 26ರಂದು ಇದು ಅಧಿಕೃತವಾಗಿ ಜಾರಿಗೆ ಬಂದ ದಿನವೂ ಹೌದು.
1946 ಡಿಸೆಂಬರ್ 11ರಂದು ಸಂವಿಧಾನ ಸಭೆಯ ಅಧ್ಯಕ್ಷರನ್ನಾಗಿ ಡಾ| ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷರಾಗಿ ಎಚ್.ಸಿ. ಮುಖರ್ಜಿ ಮತ್ತು ಎ.ಟಿ. ಕೃಷ್ಣ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾದರು. ಸಂವಿಧಾನದ ರಚನಾ ಸಭೆಯಲ್ಲಿ 22 ವಿವಿಧ ಸಮಿತಿಗಳು ಹಾಗೂ 5 ಉಪ ಸಮಿತಿಗಳನ್ನು ರಚಿಸಲಾಯಿತು. ಅವುಗಳಲ್ಲಿ ಪ್ರಮುಖ ಸಮಿತಿಗಳೆಂದರೆ ಕರಡು ಸಮಿತಿ, ಪ್ರಸ್ತಾವನಾ ಸಮಿತಿ, ಮೂಲಭೂತ ಹಕ್ಕು ಸಮಿತಿ. ಈ ಎಲ್ಲ ಸಮಿತಿಗಳು ವರದಿ ನೀಡಿದ ಮೇಲೆ ಅದನ್ನು ಕ್ರೋಢೀಕರಿಸಿ, ವಿಧಿವಿಧಾನಗಳನ್ನು ಕ್ರಮ ಪ್ರಕಾರವಾಗಿ ಜೋಡಿಸಿ, ಸ್ಪಷ್ಟತೆಯ ವಿವರಣೆ ನೀಡುವ ಜವಾಬ್ದಾರಿಯನ್ನು ಕರಡು ಸಮಿತಿಗೆ ನೀಡಲಾಯಿತು. ಇದಕ್ಕೊಪ್ಪುವ ಸಮರ್ಥ, ಸಂವಿಧಾನ ಹಾಗೂ ಭಾಷಾ ತಜ್ಞರ ಅಗತ್ಯವೂ ಇತ್ತು. ಅಂದಿನ ಮಧ್ಯಾವಧಿ ಸರಕಾರದ ಪ್ರಧಾನಿಗಳಿಂದ ಜವಾಹರಲಾಲ್ ನೆಹರೂರವರು ಇಂಗ್ಲೆಂಡಿನ ಸಂವಿಧಾನ ತಜ್ಞ ಎಡ್‌ವರ್ಡ್ ಜನ್ನಿಂಗ್‌ರ ಹೆಸರನ್ನು ಪ್ರಾಸ್ತಾಪಿಸಿದ್ದರು.
ವಿಶೇಷತೆ ಅಂದರೆ ಸಂವಿಧಾನದ ಯಾವುದೇ ಸಮಿತಿಯಲ್ಲಿ ಕಾಣಿಸಿಕೊಳ್ಳದ ಮಹಾತ್ಮ ಗಾಂಧೀಜಿಯವರು “””ನಮ್ಮಲ್ಲಿಯೇ ಶ್ರೇಷ್ಠ ಕಾನೂನು ಪರಿಣಿತರಾದ ಡಾ| ಬಿ.ಆರ್. ಅಂಬೇಡ್ಕರ್‌ರವರು ಇರುವಾಗ ನಾವೇಕೆ ಮತ್ತೆ ಬ್ರಿಟಿಷರಿಗೆ ಮಣೆ ಹಾಕಬೇಕು?” ಎಂಬ ಅಭಿಪ್ರಾಯವನ್ನು ಹೊರಗಿನಿಂದಲೇ ಸೂಚಿಸಿದ್ದರು. ಕೊನೆಗೆ ಸಂವಿಧಾನ ಸಮಿತಿಯ ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿ 1947 ಆಗಸ್ಟ್ 29ರಂದು ಡಾ| ಬಿ.ಆರ್. ಅಂಬೇಡ್ಕರ್‌ರವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಈ ಕರಡು ಸಮಿತಿಯಲ್ಲಿ ಎಸ್. ಗೋಪಾಲ್ ಸ್ವಾಮಿ ಅಯ್ಯಂಗಾರ್, ಎ. ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಶಿ, ಟಿ.ಟಿ. ಕೃಷ್ಣಮಾಚಾರಿ, ಮಹಮ್ಮದ್ ಶದುಲ್ಲ, ಎನ್. ಮಾಧವರಾವ್, ಡಿ.ಪಿ. ಖೇತಾನ್ ಪ್ರಮುಖ ಕಾನೂನು ಸಲಹೆಗಾರರಾಗಿ ಆಡಳಿತ ತಜ್ಞ ಕಾನೂನು ಪರಿಣಿತ ಬಿ.ಎನ್. ರಾವ್‌ರವರನ್ನು ನೇಮಿಸಿಕೊಳ್ಳಲಾಯಿತು. ಇವರೆಲ್ಲರ ಅವಿರತ, ಅಪ್ರತಿಮ ಪರಿಶ್ರಮದ ಫಲವಾಗಿ ಮೂಡಿ ಬಂದಿರುವ ಭಾರತೀಯ ಸಂವಿಧಾನವನ್ನು ಅಂದಿನ ಕಾನೂನು ಮಂತ್ರಿಗಳು, ಕರಡು ಸಮಿತಿಯ ಅಧ್ಯಕ್ಷರಾದ ಡಾ| ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡರು.
ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಸಂವಿಧಾನದ ಪ್ರಾಸ್ತಾವಿಕ ಭಾಗದಲ್ಲಿ ದಾಖಲಿಸಿರುವಂತೆ ಭಾರತವೊಂದು ಪ್ರಜಾಸತ್ತಾತ್ಮಕ ಪರಮಾಧಿಕಾರ, ಜಾತ್ಯಾತೀತ, ಸಮಾಜವಾದ, ಗಣರಾಜ್ಯ ಎಂದು ಮಾನ್ಯ ಮಾಡಿರುತ್ತದೆ.
ಪ್ರಜಾಸತ್ತಾತ್ಮಕ ಪದದಲ್ಲಿ ಪ್ರಜಾಪ್ರಭುತ್ವದ ಎಲ್ಲ ಸತ್ವ- ತತ್ವಗಳನ್ನು ಮೈಗೂಡಿಸಿಕೊಂಡು ಉತ್ತರದಾಯಿತ್ವವುಳ್ಳ; ಸಂಸದೀಯ ಸರಕಾರವನ್ನು ರೂಪಿಸುವ ಹೊಣೆಗಾರಿಕೆಯನ್ನು ಬಿಂಬಿಸಲಾಗಿದೆ. ಪರಮಾಧಿಕಾರ ಪದದಲ್ಲಿ ಜನರು ತಮಗೆ ಬೇಕಾಗುವ ಸರಕಾರ; ಕಾನೂನು ರೂಪಿಸಿಕೊಳ್ಳುವ ಅಥವಾ ಕಾಲಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಸರ್ವ ಶ್ರೇಷ್ಠ ಅಧಿಕಾರವನ್ನು ಜನರ ಕೈಗೆ ನೀಡಲಾಗಿದೆ. ಇದನ್ನೇ ಸಂವಿಧಾನದ 368ನೇ ವಿಧಿಯಲ್ಲಿ ಸಂವಿಧಾನದ ತಿದ್ದುಪಡಿ ವಿಧಾನಗಳ ಕುರಿತು ಸಮಗ್ರವಾಗಿ ಚಿತ್ರಿಸಲಾಗಿದೆ.
ಸಂವಿಧಾನ ಅನ್ನುವುದು ದೇಶದ ಶ್ರೇಷ್ಠ ಕಾನೂನು- ಮಾತ್ರವಲ್ಲ ಸಂವಿಧಾನ ನಿಂತ ನೀರಾಗಬಾರದು. ಬದಲಾಗಿ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳುವ ಗುಣಹೊಂದಿರಬೇಕು. ಇದು ಯಾವುದೇ ಸಂವಿಧಾನದ ಜೀವಂತಿಕೆಯ ಲಕ್ಷಣವೂ ಹೌದು. ಭಾರತೀಯ ಸಂವಿಧಾನ ಕೂಡಾ ಇದಕ್ಕೆ ಹೊರತಾಗಿಲ್ಲ. ಕಾಲ, ಅಗತ್ಯಗಳಿಗೆ ಅನುಗುಣವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ತರದಲ್ಲಿ ಸಾಕಷ್ಟು ತಿದ್ದುಪಡಿಗಳಿಗೂ ಒಳಪಟ್ಟು ಬೆಳೆದು ಬಂದಿದೆ. ಹಾಗಾಗಿ ಇದೊಂದು ಜೀವಂತಿಕೆಯ ಮಾದರಿ ಸಂವಿಧಾನ ಅನ್ನಿಸಿಕೊಂಡಿದೆ. ಭಾರತದ ಸಂವಿಧಾನ ಅನ್ನುವುದು ಈ ನೆಲದ ಶ್ರೇಷ್ಠ ಗ್ರಂಥ. ಅದೊಂದು ಸೈದ್ಧಾಂತಿಕ ನೆಲೆಗಟ್ಟು. ಇಲ್ಲಿ ಸರಕಾರ ಅನ್ನುವುದು ಚಲಿಸುವ ಆಡಳಿತ ಯಂತ್ರ. ಸಂವಿಧಾನ ಮತ್ತು ಸರಕಾರ ಒಂದೇ ದಿಕ್ಕಿನಲ್ಲಿ ಶ್ರಮಿಸಿದಾಗ ಜನರಿಗೆ ಯಾವುದೇ ಗೊಂದಲವಾಗಲಿ; ಸಂಶಯವಾಗಲಿ ಉಂಟಾಗುವುದಿಲ್ಲ. ಜನರಿಗೂ ಕೂಡಾ ವ್ಯವಸ್ಥೆಯ ಮೇಲೆ ವಿಶ್ವಾಸ ನಂಬಿಕೆ ಮೂಡಿಬರುತ್ತದೆ. ಇದರಿಂದಾಗಿ ರಾಷ್ಟ್ರದಲ್ಲಿ ನ್ಯಾಯ, ಸಮಾನತೆ, ಐಕ್ಯತೆ ಪ್ರಾಪ್ತವಾಗುತ್ತದೆ.
ಶಿಕ್ಷಣ ತಜ್ಞರು, ಸಂವಿಧಾನ ಸಮಿತಿಯ ಸದಸ್ಯರಾದ ಡಾ| ಎಸ್. ರಾಧಾ ಕೃಷ್ಣನ್‌ರವರ ಮಾತನ್ನು ನೆನಪಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತವೆನ್ನಿಸಿಕೊಳ್ಳುತ್ತದೆ. ದಿನದ ಊಟ, ಕೆಲಸಕ್ಕಾಗಿ ಅಲೆದಾಡುವ, ಹಸಿವಿನಿಂದ ಬಳಲುವ, ಕಿತ್ತು ತಿನ್ನುವ ಬಡತನವುಳ್ಳ ಜನರಿಗೆ, ಸಂವಿಧಾನ ಕಾನೂನು, ಸಮಾನತೆಯಂತಹ ಸಾಂವಿಧಾನಿಕ ಪದಗಳು ಎಷ್ಟರ ಮಟ್ಟಿಗೆ ಅರ್ಥೈಸಲು ಸಾಧ್ಯ. ಹಾಗಾಗಿ ಸಂವಿಧಾನಕ್ಕೆ ಜೀವಂತಿಕೆ ಬರಬೇಕಾದರೆ ಮೊದಲು ನಾವು ಮಾಡಬೇಕಾದದ್ದು, ಸಂವಿಧಾನದ ಮೂಲಭೂತ ಆಶಯಗಳನ್ನು ಪೂರೈಸಲು ಸಾಧ್ಯವಾದಾಗ ಮಾತ್ರ; ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಕ್ಷರಗಳಿಗೂ ಮೌಲ್ಯ ತುಂಬಿ ಬರುತ್ತದೆ.
– ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.