![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 26, 2019, 5:28 AM IST
ವಿಶೇಷ ವರದಿ-ಸುರತ್ಕಲ್: ನವಮಂಗಳೂರು ಮೂಲಕ ಐಷಾರಾಮಿ ಪ್ರವಾಸಿ ಹಡಗು ಇದೀಗ ದಾಖಲೆ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಈಗಾಗಲೇ 21 ಹಡಗು ಗಳು ನೋಂದಣಿ ಮಾಡಿವೆ. ಇದೀಗ ಈ ಎಲ್ಲ ಪ್ರವಾಸಿಗರಿಗೆ ಯಕ್ಷಗಾನ, ತುಳುನಾಡ ಸಾಂಸ್ಕೃತಿಕ ಲೋಕದ ಮೂಲಕ ಸ್ವಾಗತ ಕೋರಲಾಗುತ್ತಿದೆ.
ಪ್ರಥಮ ಬಾರಿಗೆ ಕೇಂದ್ರ ಸರಕಾರ ಈ ಯಕ್ಷಗಾನ ಕಲಾವಿದರಿಗೆ ಮನ್ನಣೆ ನೀಡಿ ಎನ್‌ಎಂಪಿಟಿಯ ಮೂಲಕ ಇವರಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಅನುಮತಿ ಸಿಕ್ಕಿದೆ. ಇದರ ಜತೆಗೆ ಒಂದಿಷ್ಟು ಗೌರವಧನವೂ ಇವರಿಗೆ ಲಭಿಸುತ್ತದೆ. ಈ ಮೂಲಕ ಯಕ್ಷಗಾನಕ್ಕೂ ವಿದೇಶಿ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿದೆ.
ಈ ಪ್ರವಾಸಿ ಋತುವಿನಲ್ಲಿ ಈಗಾಗಲೇ ನಾಲ್ಕು ಪ್ರವಾಸಿ ಹಡಗು ಬಂದಿವೆ. ಆ ವೇಳೆ ಯಕ್ಷಗಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ನವಮಂಗಳೂರು ಬಂದರಿನ ಒಳಗಿನ ಲಾಂಜ್‌ನಲ್ಲಿ ಯಕ್ಷಗಾನ ವೇಷಭೂಷಣ ಧರಿಸಿದ ಕಲಾವಿದರು ನಮ್ಮ ಯಕ್ಷಗಾನದ ನೃತ್ಯ ಪ್ರದರ್ಶಿಸುತ್ತಾರೆ. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ನಮಸ್ಕರಿಸಿ ಅವರಿಗೆ ಸ್ವಾಗತ ಕೋರುತ್ತಾರೆ. ನವಿಲು ಕುಣಿತದ ಪ್ರದರ್ಶನವಿದೆ.
ಈ ಹಿಂದೆ ಡೊಳ್ಳುಕುಣಿತ, ಕಂಗೀಲು ನೃತ್ಯ ಮತ್ತಿತರ ತುಳುನಾಡ ವೈಭವ ಸಾರುವ ನೃತ್ಯ ಆಯೋಜಿಸಲಾಗಿತ್ತು. ಇದರಲ್ಲಿ ಯಕ್ಷಗಾನ ಇದರ ವೇಷ ಭೂಷಣ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲವು ಪ್ರವಾಸಿಗರು ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕ್ಷಣವೂ ಇದೆ. ಈ ಬಾರಿಯ ಬಾಲಕನೊಬ್ಬ ಯಕ್ಷಗಾನ ವೇಷದಲ್ಲಿದ್ದು ಪ್ರವಾಸಿಗರು ಈತನಿಗೆ ಅಭಿಮಾನದಿಂದ ಬಹುಮಾನ ರೂಪವಾಗಿ ಡಾಲರ್ ನೀಡಿ ಗೌರವಿಸಿದ್ದಾರೆ.
ಸೂಕ್ಷ್ಮ ವೇಷ ಭೂಷಣ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬಂದವರು ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಹೇಳುತ್ತಾರೆ. ನೃತ್ಯದ ಮೂಲಕ ಸ್ವಾಗತ ಕೋರುವ ತಂಡವನ್ನು ಮುನ್ನಡೆಸುತ್ತಿರುವ ಪಣಂಬೂರು ಯಕ್ಷಗಾನ ತಂಡದ ಶಂಕರನಾರಾಯಣ ಮೈರ್ಪಾಡಿ ಅವರು.
ಎರಡು ಹಡಗುಗಳು
ಬಹುತೇಕ ಹಡಗುಗಳು ಮುಂಬಯಿ ಮೂಲಕ ಆಗಮಿಸಿ ಮಂಗಳೂರು, ಕೊಚ್ಚಿನ್, ಇಲ್ಲವೇ ಕೊಚ್ಚಿನ್ ಮೂಲಕ ಆಗಮಿಸಿ ಗೋವಾ ಮೂಲಕ ಸಾಗುತ್ತವೆ. ನ. 26, 27ರಂದು ಎರಡು ದಿನ ಎರಡು ಪ್ರತ್ಯೇಕ ಪ್ರವಾಸಿ ಹಡಗು ಆಗಮಿಸಲಿದ್ದು, ಸ್ಥಳೀಯ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಸಂಸ್ಕೃತಿ ಪರಿಚಯಿಸುವ ಉದ್ದೇಶ
ಪ್ರವಾಸಿ ಹಡಗು ನವಮಂಗಳೂರಿಗೆ ಬಂದ ಸಂದರ್ಭ ನಮ್ಮ ಜಿಲ್ಲೆಯ ಉತ್ತಮ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶವಿದೆ. ಈ ಮೂಲಕ ಸಾಂಪ್ರದಾಯಿಕ ಯಕ್ಷಗಾನ ಮತ್ತು ಇತರ ನೃತ್ಯದ ಮೂಲಕ ಸ್ವಾಗತಿಸುವ ವಿಶೇಷ ವ್ಯವಸ್ಥೆಯನ್ನು ಎನ್‌ಎಂಪಿಟಿ ಮಾಡಿದೆ. ಪ್ರವಾಸಿಗರು ಆಕರ್ಷಿತರಾಗಿ ಮಾಹಿತಿ ಪಡೆಯು ವುದನ್ನು ಕಂಡಾಗ ಶ್ರೀಮಂತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.
– ಎ.ವಿ. ರಮಣ್,
ಚೆಯರ್‌ಮನ್ , ಎನ್‌ಎಂಪಿಟಿ
You seem to have an Ad Blocker on.
To continue reading, please turn it off or whitelist Udayavani.