ಕಾಂಗ್ರೆಸ್, ಜೆಡಿಎಸ್‌ಗೆ “ಮಹಾ ಕ್ರಾಂತಿ’ಯ ಅಸ್ತ್ರ
Team Udayavani, Nov 27, 2019, 3:08 AM IST
ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಅಸ್ತ್ರ ಸಿಕ್ಕಂತಾಗಿದೆ. ರಾತ್ರೋರಾತ್ರಿ ರಾಜಕೀಯ ಕ್ರಾಂತಿಯ ಬಗ್ಗೆ ವಿಜಯೋತ್ಸವ ರೂಪದ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರೀಗ ಮುಜುಗರ ಎದುರಿಸುವಂತಾಗಿದೆ. ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಕ್ಕೂ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ನಡೆಸಿದ ಅಧಿಕಾರ ಯತ್ನಕ್ಕೂ ಸಾಕಷ್ಟು ಸಾಮ್ಯತೆಗಳಿವೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕರೊಬ್ಬರ ಭರವಸೆ ಮೇರೆಗೆ ಬಿಜೆಪಿ ಅಧಿಕಾರ ಹಿಡಿದರೆ, ಕರ್ನಾಟಕದಲ್ಲಿ ಇನ್ನಾರೋ ಬರುತ್ತಾರೆ, ಬೆಂಬಲ ನೀಡುತ್ತಾರೆಂದು ಬಿಜೆಪಿ ಮೂರು ದಿನದ ಮಟ್ಟಿಗೆ ಅಧಿಕಾರ ಹಿಡಿದಿತ್ತು. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆ ನಂತರ 104 ಸ್ಥಾನದ ಬಿಜೆಪಿ, ಅಗತ್ಯ ಸಂಖ್ಯಾ ಬಲ ಇಲ್ಲದಿದ್ದರೂ ಸರ್ಕಾರ ರಚಿಸಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.
ಸುಪ್ರೀಂಕೋರ್ಟ್ ನಿಗದಿ ಪಡಿಸಿದ ದಿನಕ್ಕೆ ಬಹುಮತ ಸಾಬೀತಿಗೆ ಸಾಧ್ಯವಾಗದೆ, ಮೂರು ದಿನಕ್ಕೆ ರಾಜೀನಾಮೆ ನೀಡಿದ್ದರು. ಮಹಾರಾಷ್ಟ್ರ ದಲ್ಲೂ 105 ಶಾಸಕರ ಬಲದ ಬಿಜೆಪಿ ರಾತ್ರೋ ರಾತ್ರಿ ಅಧಿಕಾರ ಹಿಡಿದು, ದೇವೇಂದ್ರ ಫಡ್ನವಿಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅಲ್ಲಿಯೂ ಸುಪ್ರೀಂಕೋರ್ಟ್ ಬಹುಮತ ಸಾಬೀತಿಗೆ ಗಡುವು ನಿಗದಿಪಡಿಸಿದ್ದರಿಂದ, ಬಹುಮತದ ಒಂದು ದಿನ ಮೊದಲೇ ಫಡ್ನವೀಸ್ ರಾಜೀನಾಮೆ ನೀಡುವಂತಾಯಿತು.
ರಾಜ್ಯದಲ್ಲಿನ ಉಪ ಚುನಾವಣೆ ವೇಳೆ ಇದು ವಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ಅನರ್ಹರ ಮೇಲೆ ಹೆಚ್ಚು ಮುಗಿಬೀಳಲು, ಸ್ಥೈರ್ಯ ಕುಗ್ಗಿಸುವ ಹೇಳಿಕೆ ಹಾಗೂ ಆರೋಪಗಳಿಗೆ ಇದು ಸಹಕಾರಿಯಾಗುವ ಸಾಧ್ಯತೆ ಇಲ್ಲದಿಲ್ಲ. ವಿಶೇಷವಾಗಿ ಮಹಾರಾಷ್ಟ್ರದ ವಿದ್ಯಮಾನ ಗಡಿ ಜಿಲ್ಲೆ ಬೆಳಗಾವಿಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣಾಮ ಬೀರಬಹುದು.
ಚುನಾವಣೆ ವೇಳೆ ಅಸ್ತ್ರ: ಮಹಾರಾಷ್ಟ್ರದಲ್ಲಿ ನಡೆದ ತಡರಾತ್ರಿ ರಾಜಕೀಯ ಕ್ರಾಂತಿ ಬಗ್ಗೆ ದೇಶಾದ್ಯಂತ ವಿಪಕ್ಷಗಳು ಬಿಜೆಪಿ ಹಾಗೂ ಕೇಂದ್ರದ ಮೇಲೆ ಮುಗಿಬಿದ್ದು ವಾಗ್ಧಾಳಿ ನಡೆಸಿದ್ದವು. ಅಧಿಕಾರದ ದುರ್ಬಳಕೆ, ರಾಜ್ಯಪಾಲರ ಮೂಲಕ ಅಧಿಕಾರ ಹಿಡಿಯುವ ಕೆಟ್ಟ ಸಂಪ್ರದಾಯ ಎಂಬೆಲ್ಲ ಟೀಕೆಗಳು ಬಂದಿದ್ದವು. ಈ ಹಿಂದೆ ಕರ್ನಾಟಕದಲ್ಲಿ ನಡೆಸಿದ ಯತ್ನವನ್ನೇ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮಹಾರಾಷ್ಟ್ರದಲ್ಲಿ ಮುಂದುವರಿಸಿದೆ ಎಂದು ಆರೋಪಿಸಲಾಗಿತ್ತು.
ಉಪ ಚುನಾವಣೆ ಸಂದರ್ಭದಲ್ಲಿ ಅದರಲ್ಲೂ ಕಾಂಗ್ರೆಸ್-ಜೆಡಿಎಸ್‌ನಿಂದ ಗೆದ್ದು ಶಾಸಕ ಸ್ಥಾನ ಗಳಿಗೆ ರಾಜೀನಾಮೆ ನೀಡಿ ಅನರ್ಹಗೊಂಡಿ ದ್ದರಿಂದ ಎದುರಾದ 15 ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ವಿದ್ಯಮಾನ ಸಹಜವಾಗಿಯೇ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಜೆಪಿ ಮೇಲೆ ಮುಗಿಬೀಳಲು, ಇದನ್ನು ಚುನಾವಣೆ ಪ್ರಚಾರದಲ್ಲಿ ವಾಗ್ಧಾಳಿಗೆ ಬಳಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಇಬ್ಭಾಗಿಸಿ ಅಧಿಕಾರ ಹಿಡಿಯುವ ಯತ್ನಕ್ಕೆ ಮುಂದಾಗಿದ್ದ ಬಿಜೆಪಿ, ಇಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಒಡೆದು ಅಧಿಕಾರ ಹಿಡಿದಿದೆ ಎಂಬ ವಿಪಕ್ಷಗಳ ನಾಯಕರ ಆರೋಪಗಳು ಇನ್ನಷ್ಟು ಅಬ್ಬರಿಸುವ ಸಾಧ್ಯತೆಯಿದೆ. ಅನರ್ಹಗೊಂಡು ಇದೀಗ ಬಿಜೆಪಿ ಅಭ್ಯರ್ಥಿಗಳಿಗೆ ಇನ್ನಷ್ಟು ಮುಜುಗರ ತರುವಂತಾಗುವ ನಿಟ್ಟಿನಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಚುನಾವಣೆ ಪ್ರಚಾರದಲ್ಲಿ ತೀವ್ರ ವಾಗ್ಧಾಳಿಗಿಳಿ ಯುವುದನ್ನು ತಳ್ಳಿ ಹಾಕುವಂತಿಲ್ಲ.
ವಿಶೇಷವಾಗಿ ಗಡಿ ಜಿಲ್ಲೆ ಬೆಳಗಾವಿಯ ಗೋಕಾಕ, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳ ಉಪ ಚುನಾವಣೆ ಮೇಲೂ ಮಹಾರಾಷ್ಟ್ರ ರಾಜಕೀಯ ವಿದ್ಯಮಾನ ತುಸು ಹೆಚ್ಚಿನ ರೀತಿ ಯಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.
ಹಿರಿ ಹಿರಿ ಹಿಗ್ಗಿದ್ದ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಲಕ್ಷ್ಮಣ ಸವದಿ!: ರಾಜ್ಯದಲ್ಲೂ ಸಿಎಂ ಯಡಿಯೂರಪ್ಪ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರದಲ್ಲೂ ನಮ್ಮದೇ ಸರ್ಕಾರವಿದೆ, ನೀರಿನ ಸಮಸ್ಯೆ ಇತ್ಯರ್ಥಕ್ಕೆ ನಾನೇ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಅವರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಜನರ ಬಯಕೆಯಾಗಿದ್ದು, ಎನ್‌ಸಿಪಿಯ 54 ಶಾಸಕರು ನಮ್ಮೊಟ್ಟಿಗೆ ಬರಲಿದ್ದಾರೆ ಎಂದೇ ಭವಿಷ್ಯ ನುಡಿದಿದ್ದರು.
ಅತಿದೊಡ್ಡ ಪಕ್ಷ ಸರ್ಕಾರ ರಚನೆ ಸಹಜ ಪ್ರಕ್ರಿಯೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೇಳಿಕೆ ನೀಡಿದ್ದರು. ಲಕ್ಷ್ಮಣ ಸವದಿಯವರಂತೂ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ನನಗೀಗ ಸಮಾಧಾನವಾಯಿತು ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ದಿನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದರಿಂದಾಗಿ ಸಂಭ್ರಮಾಚರಣೆ ರೀತಿಯಲ್ಲಿ ಹೇಳಿಕೆ ನೀಡಿದ್ದ ರಾಜ್ಯದ ಬಿಜೆಪಿ ನಾಯಕರೀಗ ಮುಜುಗರ ಅನುಭವಿಸುವಂತಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ಇಂತಹ ಸ್ಥಿತಿ ಬಿಜೆಪಿ ನಾಯಕರಿಗೆ ತಳಮಳ ಸೃಷ್ಟಿಸುವಂತೆ ಮಾಡಿದೆ. ಈ ಅಸ್ತ್ರವನ್ನು ವಿಪಕ್ಷಗಳು ಹೇಗೆ ಬಳಕೆ ಮಾಡಿಕೊಳ್ಳಲಿವೆ ಎಂದು ಕಾದು ನೋಡಬೇಕಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.