ಅಥಣಿಯಲ್ಲಿ ಮೊದಲ ಉಪ ಚುನಾವಣೆ
ಮನಸ್ಸಿಲ್ಲದಿದ್ದರೂ ಉಪಸಮರಕ್ಕೆ ಸಜ್ಜಾದ ಜನಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಿದ್ದ ಲೀಲಾವತಿ
Team Udayavani, Nov 27, 2019, 2:39 PM IST
ಕೇಶವ ಆದಿ
ಬೆಳಗಾವಿ: ಸದಾ ಬರಗಾಲದ ಬೀಡು. ಕೃಷ್ಣಾ ನದಿ ಪಕ್ಕದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗಡಿಭಾಗದ ಅಥಣಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಈ ಹಿಂದೆ ಬಹಳ ಸದ್ದು ಮಾಡಿದ ಕ್ಷೇತ್ರವೇನಲ್ಲ. ಆದರೆ ಈಗ ಅನರ್ಹ ಶಾಸಕರು ಹಾಗೂ ಸೋತರೂ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಂಡ ಕ್ಷೇತ್ರ ಎಂಬುದರಿಂದ “ವಿಶೇಷ ಸದ್ದು’ ಮಾಡುತ್ತಿದೆ.
ಕಾಂಗ್ರೆಸ್‌ನಿಂದ ಗೆದ್ದು ಬಂದು ನಂತರ ಅನರ್ಹಗೊಂಡ ಮಹೇಶ ಕುಮಟಳ್ಳಿ ಒಂದು ರೀತಿಯಲ್ಲಿ ಸುದ್ದಿ ಮಾಡಿದರೆ, ಇವರ ವಿರುದ್ಧ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಬಿಜೆಪಿ ಸರ್ಕಾರದಲ್ಲಿ ಅನಿರೀಕ್ಷಿತ ಎಂಬಂತೆ ಸಚಿವ ಸ್ಥಾನ ಪಡೆದಿದ್ದಲ್ಲದೆ ಕೊನೆಗೆ ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರು.
ಈ ಎರಡೂ ಅನಿರೀಕ್ಷಿತ ಬೆಳವಣಿಗೆಗಳು ಇಡೀ ರಾಜ್ಯದ ಜನ ಅಥಣಿ ಕಡೆ ನೋಡುವಂತೆ ಮಾಡಿದವು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ, ನಂತರ ಈಗ ಬಿಜೆಪಿ ಕೋಟೆಯಾಗಿ ಪರಿವರ್ತನೆಯಾಗಿರುವ ಅಥಣಿ ವಿಧಾನಸಭಾ ಕ್ಷೇತ್ರ 1957ರಿಂದ ಇದುವರೆಗೆ ಒಮ್ಮೆಯೂ ಉಪಚುನಾವಣೆ ಕಂಡಿಲ್ಲ. ಅಂತಹ ರಾಜಕೀಯ ಅವಾಂತರಗಳಿಗೂ ಸಾಕ್ಷಿಯಾಗಿರಲಿಲ್ಲ. ಆದರೆ ಈಗ ಸಾಕಷ್ಟು ರಾಜಕೀಯ ಬೆಳವಣಿಗೆಯಿಂದಾಗಿ ಉಪಚುನಾವಣೆ ಎದುರಿಸಬೇಕಾಗಿದೆ.
ಎರಡು ದಶಕಗಳ ನಂತರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದ ಅಥಣಿ ಕ್ಷೇತ್ರದಲ್ಲಿ ಯಾವ ಮತದಾರರೂ ನಮಗೆ ಉಪಚುನಾವಣೆ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ ಮೈತ್ರಿ ಸರ್ಕಾರದಲ್ಲಿ ಆರಂಭದಿಂದಲೇ ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಲ್ಲದೇ ಕ್ಷೇತ್ರದಲ್ಲಿ ಉಪಚುನಾವಣೆ ಬರಲು ಕಾರಣರಾದರು.
ಕಳೆದ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಸಂಪೂರ್ಣ ಸಹಕಾರದಿಂದ ಮೊದಲ ಬಾರಿಗೆ ಶಾಸಕರಾಗುವ ಅವಕಾಶ ಪಡೆದಿದ್ದ ಮಹೇಶ ಕುಮಟಳ್ಳಿ ಸಹ ತಮ್ಮ ಕ್ಷೇತ್ರಕ್ಕೆ ಉಪಚುನಾವಣೆ ಬರುತ್ತದೆ ಎಂದು ಎಣಿಸಿರಲಿಲ್ಲ. ಆದರೆ ತಮ್ಮ ರಾಜಕೀಯ ಗುರು ರಮೇಶ ಜಾರಕಿಹೊಳಿ ಹಾಕಿದ ಗೆರೆಯನ್ನು ಮಹೇಶ ಕುಮಟಳ್ಳಿ ದಾಟಲಿಲ್ಲ.
ಪರಿಣಾಮ ಗೋಕಾಕ ಜೊತೆ ಅಥಣಿಗೂ ಉಪಚುನಾವಣೆ ಬಂದಿತು. ಮತದಾರರೂ ಸಹ ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಾಯಿತು. ಕಾಂಗ್ರೆಸ್ ಭದ್ರಕೋಟೆ: 1962ರಿಂದ 1983ರವರೆಗೆ ಅಥಣಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. 1957ರಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಡಿ.ಬಿ.ಪವಾರ 1962ರಿಂದ 1983ರವರೆಗೆ ಐದು ಬಾರಿ ಶಾಸಕರಾಗಿ ಅಧಿಪತ್ಯ ನಡೆಸಿದ್ದರು. ಇದರ ಮಧ್ಯೆ 1972ರಲ್ಲಿ ಎ.ಎ. ದೇಸಾಯಿ ಕಾಂಗ್ರೆಸ್‌ದಿಂದ ಆಯ್ಕೆಯಾಗಿದ್ದರು. 1985ರಲ್ಲಿ ಕಾಂಗ್ರೆಸ್ ಆಳ್ವಿಕೆಗೆ ಕೊನೆಬಿತ್ತು. ಆಗ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಲೀಲಾದೇವಿ ಪ್ರಸಾದ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿ ಕಾಂಗ್ರೆಸ್ ಭದ್ರಕೋಟೆಯನ್ನು ತಮ್ಮ ವಶ ಮಾಡಿಕೊಂಡರು.
ಆದರೆ, 1989ರ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗಲಿಲ್ಲ. ಐ.ಎಂ. ಶೆಡಶ್ಯಾಳ ಮೂಲಕ ಕಾಂಗ್ರೆಸ್ ಮತ್ತೆ ಈ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 1994ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧೆ ಮಾಡಿದ್ದ ಲೀಲಾದೇವಿ ಪ್ರಸಾದ ಪಕ್ಷದ ಅಲೆಯಲ್ಲಿ ಎರಡನೇ ಬಾರಿಗೆ ಶಾಸಕರಾಗುವ ಅವಕಾಶ ಪಡೆದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿನ ಚುನಾವಣೆಯ ಸೋಲು ತೀರಿಸಿಕೊಂಡು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿತು.
ಬಿಜೆಪಿ ತೆಕ್ಕೆಗೆ ಬಂದಿದ್ದು ಯಾವಾಗ?: 1985ರಿಂದ ಕಾಂಗ್ರೆಸ್ ಹಾಗೂ ಜನತಾದಳದ ಮಧ್ಯೆ ಓಡಾಡುತ್ತಿದ್ದ ಅಥಣಿ ಕ್ಷೇತ್ರ 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಮನೆ ಸೇರಿತು. ಲಕ್ಷ್ಮಣ ಸವದಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಇಲ್ಲಿ ತನ್ನ ಖಾತೆ ತೆರೆಯಿತು. ಇದರ ಜೊತೆಗೆ ಲಕ್ಷ್ಮಣ ಸವದಿ 1999ರಲ್ಲಿ ಶಹಜಹಾನ್ ಡೊಂಗರಗಾವ್ ವಿರುದ್ಧ ಸೋತಿದ್ದ ಸೇಡು ತೀರಿಸಿಕೊಂಡರು.
2004ರಲ್ಲಿ ಬಿಜೆಪಿ ತೆಕ್ಕೆಗೆ ಬಂದ ಅಥಣಿ ಕ್ಷೇತ್ರ ಸತತ ಮೂರು ಚುನಾವಣೆಗಳಲ್ಲಿ ಜಯಬೇರಿ ಬಾರಿಸಿ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. ಈ ನಡುವೆ ಸವದಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದರು. ತಮಗೆ ಎದುರಾಳಿಗಳು ಇಲ್ಲದಂತೆ ಬೆಳೆದರು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ಲೆಕ್ಕಾಚಾರಗಳೆಲ್ಲ ವಿಫಲವಾದವು.
ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿದ್ದ ಮಹೇಶ ಕುಮಟಳ್ಳಿ ಪರ ರಮೇಶ ಜಾರಕಿಹೊಳಿ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತರು. ಒಂದರ್ಥದಲ್ಲಿ ಇದು ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ನಡುವಿನ ಚುನಾವಣೆ ಎಂಬ ಮಾತುಗಳು ಸಹ ಕೇಳಿಬಂದವು. ಜಾತಿ ಬಲ ಹಾಗೂ ರಮೇಶ ಬೆಂಬಲದಿಂದ ಮಹೇಶ ಕುಮಟಳ್ಳಿ ಜಯಗಳಿಸಿ 2013ರ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡರು. ಆದರೆ 2018ರ ಚುನಾವಣೆ ಮುಂದೆ ಸಾಕಷ್ಟು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲ. ತಮ್ಮ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನಗೊಂಡ ರಮೇಶ ಜಾರಕಿಹೊಳಿ ತಮ್ಮ ಜೊತೆಗೆ ಬೆಂಬಲಿತ ಶಾಸಕರನ್ನು ಸಹ ಪಕ್ಷದಿಂದ ಹೊರಗೆ ಕರೆದುಕೊಂಡು ಬಂದರು. ಒಂದು ಕಡೆ ಸರ್ಕಾರ ಪತನವಾದರೆ ಈ ಕಡೆ ಅಸಮಾಧಾನಗೊಂಡ ಶಾಸಕರು ಅನರ್ಹಗೊಂಡರು. ಪರಿಣಾಮ ಉಪಚುನಾವಣೆ ಅನಿವಾರ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.