ಬೆಣ್ಣೆ ಕಡೆಯುವುದು ಎಂಬ ಮಧುರ ಕೆಲಸ
ಅಂತರಂಗದ ಅಡುಮನೆ
Team Udayavani, Nov 29, 2019, 5:20 AM IST
ಕಾಲು ಗಂಟೆಯಿಂದ ಮೊಸರು ಕಡೆಯುವ ಮೆಷಿನ್ ತಿರುಗುತ್ತಿದ್ದರೂ ಬೆಣ್ಣೆ ಬಂದಿರಲಿಲ್ಲ. ಫ್ರಿಡಿjನಿಂದ ತೆಗೆದಿಡಲು ಮರೆತಿದ್ದ ಮೊಸರು ತನ್ನಲ್ಲಿದ್ದ ಬೆಣ್ಣೆಯನ್ನು ಹೊರಗೆ ಹೋಗಲೇ ಬಿಡುತ್ತಿರಲಿಲ್ಲ. ಈ ಬೆಣ್ಣೆ ಕಡೆಯೋದೂ ಬೇಡ, ತುಪ್ಪ ಮಾಡೋದೂ ಬೇಡ ಎಂದು ಮನದೊಳಗೆ ಬೈಯ್ದುಕೊಂಡರೂ ಕೈ ಬೆಣ್ಣೆಯ ಮೆಷಿನ್ನಿನ ಸ್ವಿಚ್ ಮತ್ತೂಮ್ಮೆ ಒತ್ತುವಂತೆ ಮಾಡಿತ್ತು.
ಫಕ್ಕನೆ ನೆನಪಾದವಳು ಅಜ್ಜಿ.
ಹಿರಿಯಜ್ಜಿ ಅವಳು… ವಯಸ್ಸಾಗಲೇ ಎಂಬತ್ತು ದಾಟಿ ಮತ್ತೈದಾರು ವರ್ಷಗಳೇ ಕಳೆದಿರಬಹುದು, ಬೆನ್ನು ಬಾಗಿದೆ, ಕಣ್ಣು ಮಂಜಾಗಿದೆ. ನಡಿಗೆ ನಿಧಾನವಾಗಿದೆ. ಮನೆಯ ಸುತ್ತಿನ ಕೆಲಸ ಕಾರ್ಯಗಳಿಗೆ ಕೈಮೈ ಸಹಕರಿಸದ ಪ್ರಾಯವದು. ಆದರೂ ಕತ್ತಲಿರುವಾಗಲೇ ಏಳುತ್ತಾಳೆ. ಸೂರ್ಯನೊಂದಿಗೆ ಸ್ಪರ್ಧೆಯೇರ್ಪಟ್ಟಂತೆ. ತಡವುತ್ತಿರುವ ಕೈಕಾಲುಗಳು ಅವಳನ್ನೆಳೆದೊಯ್ದು ನಿಲ್ಲಿಸುವುದು ಸಿಕ್ಕದಲ್ಲಿಟ್ಟ ಮೊಸರ ಗಡಿಗೆಯೆದುರು. ನಡುಗುವ ಕೈಗಳು ಅದನ್ನು ಇಳಿಸುತ್ತವೆ. ಪಾತ್ರೆಯೊಂದರಲ್ಲಿಟ್ಟ ಶುದ್ಧ ಜಲಕ್ಕೆ ಕಡೆಗೋಲನ್ನು ಅದ್ದಿ ತೆಗೆಯುತ್ತವೆ. ಸಿಗಿಸಿಟ್ಟ ಕಡೆಗೋಲಿಗೆ ಮೂರೋ ನಾಲ್ಕೋ ಸುತ್ತು ಸುತ್ತಿದ ಬಳ್ಳಿ… ಪಕ್ಕದಲ್ಲಿಟ್ಟ ಚಿಮಣಿಯ ಬೆಳಕೋ ಸುಮ್ಮನೆ ಉರಿಯುತ್ತಿರುತ್ತದೆ. ಆಕೆಯ ಕೈ ಚಳಕಕ್ಕೆ ಬೆರಗಾಗಿ, ಅಜ್ಜಿಯ ನಡುಗು ಸ್ವರ ತಾನಾಗೇ ಉಲಿಯುತ್ತದೆ. ಉದಯ ಕಾಲದೋಳ್ ಎದ್ದು ಗೋಪಿಯು ದಧಿಯ ಮಥಿಸುತಾ…. ಈ ಹಾಡಿಗೆ ಹಿನ್ನೆಲೆ ವಾದ್ಯವಾಗಿ ಸರ್ ಬರ್ ಎಂದು ಸದ್ದು ಮಾಡುವ ಮೊಸರು ಕಡೆಯುವ ಕಡೆಗೋಲು…
ಅದಾಗಲೇ ಅರುವತ್ತೈದು ದಾಟಿದ ಸೊಸೆಗೆ ಈ ಜವಾಬ್ದಾರಿ ಹೊರುವ ಅನುಭವವಿನ್ನೂ ಬಂದಿಲ್ಲ ಎಂಬುದೇ ಅವಳ ಯೋಚನೆ, ಯಾವಾಗಲಾದರೊಮ್ಮೆ ಆರೋಗ್ಯ ಕೈ ಕೊಟ್ಟಾಗ ಅವಳು ಕಡೆದಿದ್ದ ಬೆಣ್ಣೆಯ ಗಾತ್ರ ಕಡಿಮೆಯೇ. ಮಜ್ಜಿಗೆ ಮಂದವಿಲ್ಲ, ತುಂಬ ನೀರು ಹಾಕಿ¨ªಾಳೆ ಎಂದೆಲ್ಲ ಮಂಜು ಕಣ್ಣುಗಳೂ ಅಳೆಯುತ್ತಿರುತ್ತದೆ. ತಾನಿಲ್ಲದಿದ್ದರೆ ಮನೆಯವರೆಂದೂ ಬೆಣ್ಣೆ, ತುಪ್ಪದ ಮುಖ ಕಾಣರು ಎಂಬುದವಳ ನಂಬಿಕೆ. ಹಾಗಾಗಿಯೇ ಅವಳು ಮಾಡುವ ಈ ಕೆಲಸಕ್ಕೆ ಅಷ್ಟು ಮರ್ಯಾದೆಯನ್ನು ಅವಳೇ ಕೊಟ್ಟುಕೊಳ್ಳುವುದು. ಬೆಣ್ಣೆ ಬರಲು ಬೇಕಾಗುವುದು ಹಾಲಲ್ಲ, ಮೊಸರಲ್ಲ, ಕೆನೆಯೂ ಅಲ್ಲ, ಬೇಕಾಗಿದ್ದು ಕಡೆಯುವ ಹದ, ಅದನ್ನರಿತ ತನ್ನ ಕೈ, ಎಂಬುದನ್ನವಳು ಎಲ್ಲಿಯೂ ಸ್ವರವೆತ್ತಿ ಹೇಳಬಲ್ಲಳು. ಅವಳ
ಕೈಯ ಚರ್ಮದ ಸುಕ್ಕುಗಳಲ್ಲಷ್ಟು ಅನು ಭವದ ಗೆರೆಗಳು ಮೂಡಿದ್ದು ಸುಳ್ಳೇ ಮತ್ತೆ.
ಇನ್ನೂ ಹಕ್ಕಿಗಳೇಳದ ಹೊತ್ತಿಗೆ ಏಳಬೇಕಿತ್ತಾಗ “ಬೆಣ್ಣೆ ಕಡೆಯುವುದು’ ಎಂಬ ಮಧುರ ಕೆಲಸವೊಂದನ್ನು ಮಾಡಲು. ಕೊಂಚ ಬಿಸಿಲೇರಿ ತಡವಾದರೆ, ಮೊಸರೊಡೆದರೆ ಬೆಣ್ಣೆ ಬಾರದು ರನ್ನವೇ ಎನ್ನುವ ಹಾಡೇ ಮುಂದಿನದು ತಾನೇ. ಚಳಿಯಿರಲಿ, ಮಳೆಯಿರಲಿ ಬಿರು ಬೇಸಿಗೆಯ ಉರಿಯಿರಲಿ ಇದೊಂದು ಅವಳ ಪ್ರೀತಿಯ ನಿತ್ಯ ನಿರಂತರ ಕೆಲಸ. ಆಗಾಗ ಕುಡುಗೋಲನ್ನೆತ್ತಿ ನೋಡಿ ತಾನು ಗುಣುಗುಣಿಸುವ ಹಾಡನ್ನೊಮ್ಮೆ ನಿಲ್ಲಿಸಿ ಬೆಣ್ಣೆ ಬಂದಿದೆಯೇ ಎಂಬ ಪರೀಕ್ಷೆಗೊಳಗಾಗುತ್ತಿದ್ದ ಮೊಸರು. ಬಂದಿದ್ದರೂ ಹದ ಸರಿಯಿದೆಯೇ ಎಂದು ನೋಡುವ ಕೊಸರು.
ಇಷ್ಟೆಲ್ಲ ಆದ ಮೇಲೆ ಬೆಣ್ಣೆ ತೆಗೆಯುವುದು ಕೂಡ ಸುಲಭದ್ದಲ್ಲ. ತಣ್ಣೀರು ತುಂಬಿದೊಂದು ಪಾತ್ರೆ, ಬಿಸಿನೀರು ತುಂಬಿದ್ದಿನ್ನೊಂದು. ಕೈಯನ್ನು ಬಿಸಿ ನೀರಿಗೆ ಅದ್ದಿಕೊಂಡರೆ ಬೆಣ್ಣೆ ಕೈಗೆ ಅಂಟದು. ಬೆಣ್ಣೆ ತೆಗೆದು ತಣ್ಣಗಿನ ನೀರಿಗೆ ಹಾಕಿದರೆ ಬೆಣ್ಣೆ ಒಂದಕ್ಕೊಂದು ಬೆಸೆದು ಮುದ್ದೆಗೆ ಬರುವುದು. ಉಳಿದ ಮಜ್ಜಿಗೆಯನ್ನು ಮತ್ತೆ ಮತ್ತೆ ಕಡೆದು ಶೋಧಿಸಿ ಉಳಿದ ಬೆಣ್ಣೆಯನ್ನು ಹೊರತೆಗೆಯುವುದು. ಅಷ್ಟು ಹೊತ್ತು ಮಜ್ಜಿಗೆಯೊಳಗೆ ಇದ್ದ ಬೆಣ್ಣೆಯಲ್ಲಿ ಮಜ್ಜಿಗೆಯ ಅಂಶ ಉಳಿಯದಂತೆ ತಣ್ಣೀರಿನಲ್ಲಿ ತೊಳೆದು ಶುದ್ಧಗೊಳಿಸಿ ನೀರಿನ ಪಾತ್ರೆಯಲ್ಲಿ ಹಾಕಿಡುವುದು. ಮಜ್ಜಿಗೆಯನ್ನು ಇನ್ನೊಂದು ಭರಣಿಗೆ ವರ್ಗಾಯಿಸಿ ಮುಚ್ಚಿಟ್ಟರೆ ಬೆಣ್ಣೆ ತೆಗೆಯುವುದು ಎಂಬ ಕೆಲಸ ಸಮರ್ಪಕವಾಗಿ ಮುಗಿದಂತೆ.
ನಾವೆಲ್ಲಾದರೂ ಅಪ್ಪಿತಪ್ಪಿ ಬೇಗ ಎದ್ದು ಅಜ್ಜಿಯ ಸುತ್ತಮುತ್ತ ಕುಳಿತುಬಿಟ್ಟರೆ ಬೆಣ್ಣೆ ಕಳ್ಳ ಕೃಷ್ಣನ ಕಥೆಗಳ ಸಾಲು ಸಾಲು… ಹೆಚ್ಚಿನದೆಲ್ಲ ಕೇಳಿ ಕೇಳಿ ನಮಗಾಗಲೇ ನಾಲಿಗೆಯ ತುದಿಯಲ್ಲಿರುವ ಕಥೆಗಳೇ ಆದರೂ ಅಜ್ಜಿಯ ಬೊಕ್ಕು ಬಾಯಲ್ಲಿ ಅದನ್ನು ಕೇಳುವ ಗಮ್ಮತ್ತೇ ಬೇರೆ. ಅದರ ಜೊತೆಗೆ ಬೆಣ್ಣೆ ಎಂದರೆ ಬಾಯಲ್ಲಿ ನೀರೂರಿಸುವ ಮಕ್ಕಳಿಗೆ ಅಜ್ಜಿಯ ಬೆರಳ ತುದಿಯಿಂದ ಮಕ್ಕಳ ಬೆರಳ ತುದಿಗಂಟಿಸುವ ಬೆಣ್ಣೆಯ ಪ್ರಸಾದ.
ಹೀಗೆ ಬೆಣ್ಣೆ ತೆಗೆಯುವುದನ್ನು ಕೊನೆಯುಸಿರಿನವರೆಗೆ ಧ್ಯಾನದಂತೆ ಮಾಡಿಕೊಂಡು ಬಂದ ಅಜ್ಜಿ ಈ ಒರಟೊರಟಾದ ಮೆಷೀನನ್ನು ಯಾವತ್ತೂ ಒಪ್ಪಿಕೊಳ್ಳಲಾರಳು. ಅಜ್ಜಿಯ ಕ್ರಮವನ್ನೇ ಹಳೆಯದೆಂದು ಸಾಧಿಸಹೊರಟ ನಂತರದ ತಲೆಮಾರಾದ ನನ್ನಮ್ಮನದು ಇನ್ನೊಂದು ವಿಧ. ಬೆಣ್ಣೆ ತೆಗೆಯಲು ಅಷ್ಟೆಲ್ಲ ಕಷ್ಟ ಪಡಬೇಕಾ? ಅದು ದಿನನಿತ್ಯ ಬೇಗ ಎದ್ದು ! ಊಹುಂ! ಎಲ್ಲವನ್ನೂ ಸುಲಭಗೊಳಿಸುವ ಹೊಸ್ತಿಲಲ್ಲಿ ನಿಂದವಳು ತನ್ನದೇ ಸರಿ ಎಂದಳು.
ಪೇಟೆಯ ಮನೆ, ಪ್ಯಾಕೆಟು ಹಾಲು… ಬಂದೀತೆಷ್ಟು ಬೆಣ್ಣೆ ! ಅದನ್ನು ದಿನಾ ಬೆಳಗಾಗೆದ್ದು ಕಡೆಯುವುದು ಎಂಬ ಶಿಕ್ಷೆಗೆ ತಾನೂ ಒಳಗಾಗಳು. ಹಾಗೆಂದು ಅದನ್ನೂ ಸುಮ್ಮನೆ ಬಿಡಳು. ದಿನನಿತ್ಯವೂ ಕೆನೆಯನ್ನಷ್ಟೇ ಬಾಟಲಿಗೆ ತುಂಬಿ ಕೊನೆಗೊಂದಿಷ್ಟು ಮೊಸರ ಹನಿ ಬೆರೆಸಿಬಿಡುವುದು. ಬಾಟಲನ್ನು ಬೆಣ್ಣೆ ಬರುವವರೆಗೆ ಕುಲುಕಿ ಇಡುವುದು.
ಹೀಗೆ ಬೆಣ್ಣೆ ತೆಗೆಯುವ ಮೆಷೀನ್ ಬರುವ ಮೊದಲೇ ಬೆಣ್ಣೆ ತೆಗೆಯುವುದನ್ನು ಸುಲಭವಾಗಿಸಿಕೊಂಡವಳು ನನ್ನಮ್ಮ, ಅದೂ ಸ್ವಲ್ಪವೂ ತ್ರಾಸವಿಲ್ಲದೇ. ಅದೇನು ಬ್ರಹ್ಮವಿದ್ಯೆಯಾಗಿರಲಿಲ್ಲ ಆಕೆಗೆ. ಹಾಲಿನ ಕೆನೆಯನ್ನು, ಉಳಿದ ಮೊಸರನ್ನು ಒಂದು ಹಾರ್ಲಿಕ್ಸ್ ಬಾಟಲಿಗೆ ತುಂಬಿಡುವುದು ಮರುದಿನ ಬೆಳಗಾಗಿ ಅಪ್ಪ ಹಲ್ಲುಜ್ಜಿ ಹೊರ ಬರುವುದನ್ನೇ ಕಾಯುತ್ತ ಅಪ್ಪನ ಕೈಗೆ ಬಾಟಲಿಯನ್ನು ಕೊಟ್ಟುಬಿಡುವುದು… ಇಷ್ಟೇ…ಸಿಂಪಲ್… ಅಪ್ಪ ಒಂದು ಕೈಯಲ್ಲಿ ಆ ಬಾಟಲಿಯನ್ನು ಕುಲುಕುತ್ತ ಇನ್ನೊಂದರಲ್ಲಿ ಪತ್ರಿಕೆಯೋ, ಪುಸ್ತಕವೋ ಹಿಡಿದು ಓದು ಮುಂದು ವರಿಸುತ್ತಿದ್ದರು. ಆಗಾಗ ಅಮ್ಮನೇ ಬೆಣ್ಣೆ ಬಾಟಲಿಯ ಕಡೆಗೆ ನೋಡಿ ಅದು ಆಗುತ್ತಿದ್ದಂತೆ, “ಇನ್ನೊಂಚೂರು ಅಷ್ಟೇ. ನಾನೇ ಮಾಡ್ಕೊಳ್ತೀನಿ’ ಎಂದೋ, “ಅಯ್ಯೋ ಆಗಲೇ ಆಗಿದೆ, ಕೊಡಿ ಇತ್ಲಾಗಿ’ ಎಂದೋ ಅದನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದ್ದಳು. ಸುಮಾರಾಗಿ ಉಂಡೆಯಂತೆಯೇ ಆಗಿರುವ ಬೆಣ್ಣೆಯನ್ನು ಪಾತ್ರೆಗೆ ವರ್ಗಾಯಿಸಿ ತೊಳೆದು ನೀರು ತುಂಬಿದ ಪಾತ್ರೆಗೆ ಹಾಕಿಡುವುದಷ್ಟೇ ಕೆಲಸ.
ಮತ್ತೆ ಹಳ್ಳಿಯ ಮನೆಗೆ ಬಂದ ನಾನು, ಅತ್ತ ಅಜ್ಜಿಯ ಅನುಭವವೂ ಅಲ್ಲ, ಇತ್ತ ಅಮ್ಮನ ಸುಲಭ ವಿದ್ಯೆಯೂ ಅಲ್ಲ ; ಕೈಗಳಿಗೆ ಕೆಲಸ ಕಡಿಮೆ ಮಾಡುವ ಯಂತ್ರ, ಅದನ್ನು ಚಲಾಯಿಸಲು ವಿದ್ಯುತ್… ಹೀಗೆ ಬೆಣ್ಣೆ ತೆಗೆಯುವುದನ್ನು ಆಧುನೀಕರಣಗೊಳಿಸಿದರೂ ಬೆಣ್ಣೆ ತನ್ನಿಂದ ತಾನೇ ಹೊರಬರದು ಬಿಡಿ. ಅದೇ ಮೊಸರು, ಅದೇ ಮೃದು ಮಧುರ ಪರಿಮಳದ ಬೆಣ್ಣೆ. ಅದೇ ಬಿಸಿನೀರು, ತಣ್ಣೀರಿನ ಸಮೀಕರಣ. ಬೆಣ್ಣೆ ಎಂಬ ದೇವರು ಪ್ರತ್ಯಕ್ಷವಾಗಬೇಕಾದರೆ ಅಷ್ಟೇ ತಾಳ್ಮೆಯ ಪೂಜೆ.
ಅಜ್ಜಿ, ಅಮ್ಮ ಮತ್ತು ನಾನು, ನೀವೂ… ಕಾಸಿದ ಹಾಲಾದೆವು, ಹೆಪ್ಪಿಟ್ಟೊಡನೆ ಮೊಸರಾದೆವು, ಮಥನಕ್ಕೊಳಗಾಗಿ ಬೆಣ್ಣೆಯಾದೆವು, ಮತ್ತೆ ಕಾಸಿದರೆ ತುಪ್ಪವೂ…
ಅನಿತಾ ನರೇಶ ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.