ಕೈ ಹಿಡಿದ ಈರುಳ್ಳಿ ದರ; ಗ್ರಾಹಕರ ಜೇಬಿಗೆ ಭಾರ
ಹೋಟೆಲ್‌ಗಳಲ್ಲಿ 'ನೋ ಆನಿಯನ್ ಪ್ಲೀಸ್'ಸೂಚನೆ ಉಳ್ಳಾಗಡ್ಡಿ ಇಳುವರಿ ಕುಂಠಿತ; ರೈತರ ಕೈ ಹಿಡಿದ ಮಾರುಕಟ್ಟೆ
Team Udayavani, Nov 29, 2019, 12:05 PM IST
ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಕಳೆದ ಬಾರಿ ದರ ಕುಸಿತದಿಂದ ಕಂಗೆಟ್ಟಿದ ರೈತರಿಗೆ ಈ ಬಾರಿ ಈರುಳ್ಳಿ ಕೈ ಹಿಡಿದರೆ, ಮತ್ತೂಂದೆಡೆ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಹೋಟೆಲ್‌ಗಳಲ್ಲಿ “ದಯವಿಟ್ಟು ಈರುಳ್ಳಿ ಕೇಳಬೇಡಿ’ ಎಂದು ಸೂಚನೆ ಹಾಕುವಷ್ಟರ ಮಟ್ಟಿಗೆ ದರ ಬಿಸಿ ಮುಟ್ಟಿದೆ.
ಈರುಳ್ಳಿ ಗುಣವೇ ಹಾಗೆ. ಅದು ಯಾವಾಗಲೂ ರೈತರ ಬಾಳಲ್ಲಿ ಅದೃಷ್ಟದಾಟ ಆಡುತ್ತಲೇ ಇರುತ್ತದೆ. ಕೆಲವೊಮ್ಮೆ ರೈತರು ಬೀದಿಗೆ ಬಿಸಾಡುವಷ್ಟು ಸೋವಿಯಾದರೆ, ಕೆಲವೊಮ್ಮೆ ಗ್ರಾಹಕರು ಖರೀದಿಸಲು ಆಗದಷ್ಟು ದುಬಾರಿಯಾಗುತ್ತದೆ. ಈ ವರ್ಷ ವರುಣನ ಆರ್ಭಟಕ್ಕೆ ಮಹಾರಾಷ್ಟ್ರ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು, ಇದು ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ನೋ ಆನಿಯನ್ ಪ್ಲೀಸ್: ಇನ್ನು ಇದರ ನೇರ ಹೊಣೆ ಗ್ರಾಹಕರ ಮೇಲೆ ಬಿದ್ದಿದ್ದು, ಕೆಜಿ ಈರುಳ್ಳಿ ಖರೀದಿಸಬೇಕಾದರೆ 70-80 ರೂ. ನೀಡಬೇಕಿದೆ. ಅದಕ್ಕಿಂತ ತಿನ್ನುವುದನ್ನು ಬಿಡುವುದೇ ಲೇಸು ಎನ್ನುತ್ತಿದ್ದಾರೆ ಮಧ್ಯಮ ವರ್ಗದ ಜನ. ಇದರ ನೇರ ಪರಿಣಾಮ ಎನ್ನುವಂತೆ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ದಯವಿಟ್ಟು “ಈರುಳ್ಳಿ ಕೇಳಬೇಡಿ’ (ನೋ ಆನಿಯನ್ ಪ್ಲೀಸ್ )ಎಂಬ ಸೂಚನೆ ಹಾಕಲಾಗಿದೆ. ಹೊಟೇಲ್ ಮಾಲೀಕರನ್ನು ಕೇಳಿದರೆ ನಮಗೆ ಸಿಗುವ ಲಾಭದಲ್ಲಿ ಈರುಳ್ಳಿಗೆ ಪಾವತಿಸುವಂತಾಗಿದೆ ಎನ್ನುತ್ತಾರೆ.
3ರಿಂದ 7 ಸಾವಿರ ರೂ. ದರ: ಮಾರುಕಟ್ಟೆಗೆ ಈಗಾಗಲೇ ಬಹುತೇಕ ರೈತರು ಈರುಳ್ಳಿ ತಂದಿದ್ದು, ತೀರ ಚಿಕ್ಕ ಗಾತ್ರದ ಈರುಳ್ಳಿಗೆ ಕ್ವಿಂಟಲ್‌ಗೆ ಕನಿಷ್ಠ 3 ಸಾವಿರ ರೂ. ದರ ಸಿಗುತ್ತಿದೆ. ಇನ್ನೂ ಚೆನ್ನಾಗಿರುವ ಈರುಳ್ಳಿಗೆ 7 ಸಾವಿರ ರೂ. ಸಿಗುತ್ತಿದೆ. ಇದರಿಂದ ಈ ಬಾರಿ ರೈತರಿಗೆ ವಂಚನೆ ಆಗಿಲ್ಲ ಎಂದೇ ಹೇಳಬಹುದು. ಮಳೆಯಿಂದ ನಷ್ಟ: ಇನ್ನೇನು ಈರುಳ್ಳಿ ಕೊನೆ ಹಂತಕ್ಕೆ ಬಂದ ವೇಳೆ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆ ರೈತರಿಗೆ ತುಸು ಕೇಡುಂಟು ಮಾಡಿತು. ದರಿಂದ ಕೆಲವೆಡೆ ಈರುಳ್ಳಿ ಕೊಳೆತು ಹೋದ ಕಾರಣ ಇಳುವರಿ ಕುಗ್ಗಿದೆ. ನೀರಿನ ಲಭ್ಯತೆ ಇದ್ದಲ್ಲಿ ಎಕರೆಗೆ ಏನಿಲ್ಲವೆಂದರೂ 90-100 ಕ್ವಿಂಟಲ್ ಬೆಳೆಯಬಹುದು ಎನ್ನುತ್ತಾರೆ ರೈತರು. ಆದರೆ, ಈ ಬಾರಿ ಎಕರೆಗೆ 60-70 ಕ್ವಿಂಟಲ್ ಮಾತ್ರ ಬೆಳೆದಿದ್ದೇವೆ. ಆದರೆ, ಕಳೆದ ವರ್ಷ ಬೆಳೆಯೂ ಅಷ್ಟಕ್ಕಷ್ಟೇ ಇತ್ತು. ಜತೆಗೆ ದರವೂ ಕೈಗೆಟುಕಲಿಲ್ಲ. ಈ ಬಾರಿ ಇಳುವರಿ ಕಡಿಮೆಯಾದರೂ ದರವಾದರೂ ಕೈ ಹಿಡಿದಿದೆ ಎನ್ನುತ್ತಾರೆ ರೈತರು.
ಇಳುವರಿ ಇನ್ನೂ ಹೆಚ್ಚು ಬರುತ್ತಿತ್ತು. ಆದರೆ, ಮಳೆ ಬಂದು ಹೊಡೆತ ಕೊಟ್ಟಿತು. ಈಗ ದರ ಹೆಚ್ಚಾಗಿರುವುದು ನಮಗಾಗುತ್ತಿದ್ದ ನಷ್ಟ ತಪ್ಪಿಸಿದೆ. ಎಕರೆಗೆ 100 ಕ್ವಿಂಟಲ್ ಬೆಳೆಯುತ್ತಿದ್ದೆವು. ಆದರೆ, ಈ ಬಾರಿ 50-60 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ.
ವಾಚಳಪ್ಪ, ರೈತ
ಹಿಂದಿನ ದಿನದ ದರಕ್ಕೂ ಇವತ್ತಿನ ದರಕ್ಕೂ ವ್ಯತ್ಯಾಸವಾಗಿದೆ. ದರ ಹೆಚ್ಚಾದ ಕಾರಣ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ಹೇಳಿಕೆ ನೀಡಿದ್ದರಿಂದ ಬೆಲೆ ಕುಸಿತವಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೈತರಿಗೆ ಲಾಭ ಸಿಕ್ಕಿದೆ. ಸರ್ಕಾರ ನಿಗದಿತ ದರಕ್ಕೆ ಬೆಂಬಲ ನೀಡಿ ಈರುಳ್ಳಿ ಖರೀದಿಸಿದರೆ ಸೂಕ್ತ. ಲಕ್ಷ್ಮಣಗೌಡ ಕಡಂಗದಿನ್ನಿ,
ರೈತ ಸಂಘದ ಜಿಲ್ಲಾಧ್ಯಕ್ಷ