ಭಾಷೆಯ ವಲಸೆ ಮತ್ತು ಶಬ್ದ ಯಾನ
Team Udayavani, Dec 1, 2019, 5:38 AM IST
ಕನ್ನಡದ್ದೆಂದೇ ನಮಗನಿಸುವ ಎಷ್ಟೋ ಶಬ್ದಗಳು ಮೂಲತಃ ನಮ್ಮದಾಗಿರದೆ, ಪರದೇಶಗಳಿಂದ ಹೊರಟು ಸುತ್ತಿ ಬಳಸಿ ಬಂದು, ಪ್ರಾಯಶಃ ಉರ್ದುವಿನ ಮುಖಾಂತರ ಕನ್ನಡಕ್ಕೆ ಸೇರಿದವುಗಳು- ಕುರ್ಚಿ, ಮೇಜು, ಸಾಬೂನು, ನಾಜೂಕು, ಮಜಾ, ಪರವಾ (ಇಲ್ಲ), ಸವಾರಿ, ಹವೆ, ಕಚೇರಿ, ಶೋಕಿ, ಖಾಸಗಿ… ಇಂಥವು ಹೇರಳವಾಗಿವೆ. ಇವು ಅರೇಬಿಯಾ, ಟರ್ಕಿ, ಪರ್ಸಿಯಾ ಮುಂತಾದ ದೇಶಗಳಿಂದ ವಲಸೆ ಬಂದ ಸಾವಿರಾರು ಜನರೊಂದಿಗೆ ನಮ್ಮ ದೇಶಕ್ಕೆ ನುಸುಳಿ, ದೇಶದ ಮೂಲೆಮೂಲೆಗೂ ರವಾನೆ (ವಲಸೆ ಎನ್ನಬಹುದು) ಗೊಂಡವು. ಹೀಗೆ ವಲಸಿಗರು ಹೋದಲ್ಲಿಗೆ ಅವರ ಭಾಷೆ ಹೋದರೆ, ಆ ಭಾಷೆಯ ಶಬ್ದಗಳು ತಮ್ಮಷ್ಟಕ್ಕೆ ಸ್ಥಳೀಯ ಭಾಷೆಗಳಿಗೆ ವಲಸೆ ಹೋಗುತ್ತವೆ.
ಮುಂಬಯಿಯಲ್ಲಂತೂ ಈ ವಲಸೆ ಶಬ್ದಗಳು ಅವೆಷ್ಟು ಬಲಿತವೆಂದರೆ ಅವುಗಳಿಂದಾಗಿ ಬಂಬಯ್ಯ ಎಂಬ ಹಿಂದಿಯ ಅಪಭ್ರಂಶ- ಭಾಷೆಯೇ ಸೃಷ್ಟಿಗೊಂಡಿತು. ಹಲವು ಭಾಷೆಗಳಿರುವ ಮುಂಬಯಿಯಲ್ಲಿ ಯಾವೊಂದು ಭಾಷೆಯ ಜನರೂ ಬಹುಸಂಖ್ಯೆಯಲ್ಲಿರಲಿಲ್ಲ. ಇಲ್ಲಿಗೆ ಬರುತ್ತಿದ್ದ ಉತ್ತರಭಾರತೀಯರ ಭಾಷೆಗಳಾದ ಹಿಂದಿ ಮತ್ತು ಉರ್ದುಗಳಿಂದ ಪ್ರೇರಿತವಾಗಿ ರೂಪುಗೊಂಡ ಈ ಪ್ರಭೇದವು ವಿಭಿನ್ನ ಭಾಷೆಗಳ ಜನರಿಗೆ ಪರಸ್ಪರ ಮಾತುಕತೆಯಾಡಲು ಸಂಪರ್ಕ ಭಾಷೆಯಾಯಿತು. ಇದು ಇಲ್ಲಿಯ ಮೂಲ ಭಾಷೆಗಳಾದ ಮರಾಠಿ ಮತ್ತು ಗುಜರಾತಿ ಎರಡನ್ನೂ ಮೀರಿಸಿ ಮುಂಬಯಿಯ ಅಧಿಕೃತ ಭಾಷೆಯಾಗಿ ಬಿಟ್ಟಿದೆ. ಹಿಂದಿ-ಉರ್ದು ಭಾಷೆಗಳ ಮಿಶ್ರಣಕ್ಕೆ ಸಾಕಷ್ಟು ಮರಾಠಿ, ಕೊಂಕಣಿ, ಗುಜರಾತಿ ಶಬ್ದಗಳ ಅಪಭ್ರಂಶಗಳು ಸೇರಿಕೊಂಡು ಆದ ಕಲಸುಮೇಲೋಗರವೇ ಬಂಬಯ್ಯ. ಈ ಆಡುಭಾಷೆಯು ನಿಯಮಗಳ ಬಗ್ಗೆಯಾಗಲಿ, ವ್ಯಾಕರಣದ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ಹೊಸಬರು ಇದನ್ನು ಮಾತನಾಡಲಿಕ್ಕೆ ಸಂಕೋಚಿಸುವ ಅಗತ್ಯವಿಲ್ಲ.
ಇದರಲ್ಲಿ ಸೇರಿಕೊಂಡ ಉರ್ದು ಕೂಡ ಮೂಲತಃ ಮುಸ್ಲಿಂ ದೊರೆಗಳ ಸೈನ್ಯದಲ್ಲಿದ್ದ ಅರಬ್ಬಿ, ಪಾರ್ಸಿ, ತುರ್ಕಿ ಮತ್ತು ಹಿಂದಿ ಭಾಷೆಗಳ ಸಿಪಾಯಿಗಳು ತಮ್ಮೊಳಗೆ ಮಾತಾಡುವಾಗ ಹುಟ್ಟಿಕೊಂಡದ್ದು ಎನ್ನುತ್ತಾರೆ. ಮುಂದೆ ಉರ್ದು ಭಾಷೆಯು ಸಾಹಿತ್ಯದಲ್ಲಿ ಬಳಕೆಗೊಂಡು ಕಾವ್ಯಮಯ ಭಾಷೆಯಾಗಿ ಮಾರ್ಪಾಡು ಹೊಂದಿದರೆ, ಬಂಬಯ್ಯವು ಸಾಹಿತ್ಯದಿಂದ ದೂರವಿದ್ದು, ಹಿಂದಿ ಸಿನೆಮಾಗಳಲ್ಲಿ ಭೂಗತ ಬಾಸ್‌ಗಳು, ರೌಡಿ-ಗಣಗಳು, ಬೀದಿ ಟಪೋರಿಗಳೇ ಮುಂತಾದವರ ಭಾಷೆಯಾಗಿ ಕೀರ್ತಿ ಗಳಿಸಿದೆ. ಭೋಲೆತೋ, ಅಪನ್ಕೊ ನಹೀ ಮಾಂಗ್ತಾ ಹೈ ಎಂಬಂಥ ಬಂಬಯ್ಯ ಪ್ರಯೋಗಗಳನ್ನು ಕೇಳಿ, ಶುದ್ಧ ಹಿಂದಿ ಅಥವಾ ಉರ್ದು ಮಾತಾಡುವ ಜನರಿಗೆ ಆಘಾತವಾಗುವುದುಂಟು. ಏನಿದ್ದರೂ ಮುಂಬಯಿಯ ಜನರಿಗೆ ಇದು ಪ್ರಿಯವಾದ ಭಾಷೆ.
ಬಂಬಯ್ಯವು ನಿರಂತರವಾಗಿ ಬದಲಾಗುತ್ತಲೇ ಇದೆ. ಅದನ್ನು ಉಪಯೋಗಿಸುವವರು ತಮ್ಮ ತಾಯ್ನುಡಿಯ ಶಬ್ದಗಳನ್ನು ಬೇಕಾದಂತೆ ಬಳಸಿಕೊಳ್ಳುವುದರಿಂದ ಅದು ವಿವಿಧ ಅವತಾರಗಳನ್ನು ತಾಳುತ್ತಿರುತ್ತದೆ. ನನ್ನ ದೊಡ್ಡಮ್ಮನ ಮಗಳು ಹಿಂದಿ ಮಾತಾಡುವಾಗ ಕೇಳುವುದೇ ಒಂದು ಮಜಾ. ಹಲವು ವರ್ಷಗಳಿಂದ ಮುಂಬಯಿಯಲ್ಲಿದ್ದರೂ ಹಿಂದಿ ಶಬ್ದಗಳು ಅವಳಿಗೆ ಬೇಕಾದಾಗ ಬಾಯಿಗೆ ಬಾರವು. ಅವಕ್ಕೋಸ್ಕರ ತಡಕಾಡುವ ಜಾಯಮಾನ ಅವಳದಲ್ಲ. ಯಾವ ಕನ್ನಡ ಶಬ್ದ ಮನಸ್ಸಿಗೆ ಬಂತೋ ಅದು! ಅವಸರ ಮತ್ ಕರೋ ರೇ, ಮೆಲ್ಲ ಲೇಕೆ ಜಾ ಎಂದು ಟ್ಯಾಕ್ಸಿಯವನಿಗೆ ಸೂಚನೆ ಇತ್ತಾಳು. ಸೀರೆ ಖರೀದಿಸುವಾಗ, ಸೆರಗು, ಅಂಚು ಎಂದು ಕನ್ನಡ ಶಬ್ದಗಳಲ್ಲೇ ವಿವರಿಸಿಯಾಳು. ಸಾಕಷ್ಟು ಕನ್ನಡಿಗರು ಮುಂಬೈಯಲ್ಲಿದ್ದಿದ್ದರೆ, ಎಲ್ಲರೂ ಅವಳಂತೆ ಕನ್ನಡ ಪ್ರಯೋಗ ಮಾಡಿದ್ದಿದ್ದರೆ, ಕನ್ನಡವಲ್ಲದಿದ್ದರೂ ಅದರ ಅಪರ ಅಪಭ್ರಂಶವಾದರೂ ಇಲ್ಲಿಯ ಆಡುಭಾಷೆಯಾಗುತ್ತಿತ್ತೇನೋ!
ವಲಸಿಗರ ಭಾಷೆಯು ಸ್ಥಳೀಯ ಭಾಷೆಯ ಮೇಲೆ ತನ್ನ ಪ್ರಭಾವ ಬೀರಿದಂತೆ, ಸ್ಥಳೀಯ ಶಬ್ದಗಳೂ ಅವರ ಭಾಷೆಯೊಳಗೆ ಸ್ಥಾನ ಗಿಟ್ಟಿಸುವುದಿದೆ. ಈ ಪ್ರಕ್ರಿಯೆಯೂ ತುಂಬ ಸ್ವಾರಸ್ಯಕರ. ಮುಂಬಯಿಯಲ್ಲಿ ಕನ್ನಡ ಮಾತಾಡುವಾಗ ಸಲೀಸಾಗಿ ಹಿಂದಿ, ಮರಾಠಿ ಶಬ್ದಗಳ ಉಪಯೋಗ ನಡೆಯುತ್ತಿರುತ್ತದೆ. ಉದಾಹರಣೆಗೆ, ಆವಾಜ್ ಮಾಡಬೇಡಿ, ರೈಲಿನಲ್ಲಿ ಗರ್ದಿ ಇತ್ತು ಇತ್ಯಾದಿ. ಒಮ್ಮೆ ಊರಿನಿಂದ ಬಂದಿದ್ದ ನನ್ನಮ್ಮ ಊಟ ಮಾಡುತ್ತಿದ್ದಾಗ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅತ್ತಿಗೆ ಮಗಳು ದಹಿ ಬೇಕೇ? ಎಂದು ಕೇಳಿ, ಹಿಂದಿಯ ಹಿಂದುಮುಂದು ಗೊತ್ತಿಲ್ಲದ ಅಮ್ಮನಿಗೆ ಅರ್ಥವಾಗದಿದ್ದುದಕ್ಕೆ ಆಶ್ಚರ್ಯಪಟ್ಟಿದ್ದಳು. ದಹಿ (ಮೊಸರು) ಕನ್ನಡದಲ್ಲೂ ಇರುವ ಶಬ್ದವೆಂಬ ಭಾವನೆ ಅವಳದು. ಮುಂಬಯಿಯಲ್ಲಿ ಕೆಲವು ವರ್ಷಗಳಿದ್ದು ಊರಿಗೆ ಮರಳುವವರು ಇಲ್ಲಿಯ ಶಬ್ದಗಳನ್ನು ಊರಿಗೆ ಒಯ್ಯುವುದರಿಂದ ಬಂದ್, ಗಂಟಾಳ ದಂಥ ಶಬ್ದಗಳು ಅಲ್ಲಿಗೂ ಪಯಣ ಬೆಳೆಸಿವೆ.
ಇನ್ನು ಇಂಗ್ಲಿಷ್ ಭಾಷೆಯ ಶಬ್ದಗಳಂತೂ ದೇಶದ ಎಲ್ಲ ಭಾಷೆಗಳೊಳಗೆ ಉಚಿತ ಪ್ರವೇಶ ಪಡೆದಿವೆ. ತರಕಾರಿ ಮಾರ್ಕೆಟಿನಲ್ಲಿ ಸೊಪ್ಪು ಮಾರುವ ಹೆಂಗಸು ಒಮ್ಮೆ ಕಷ್ಟ-ಸುಖ ಮಾತಾಡುತ್ತ, ತನ್ನ ಗಂಡನದು “ಟೆಂಪರವರಿ ಕೆಲಸ. ಟೆಂಪರವರಿ ಎಂದರೆ ಗೊತ್ತಲ್ಲ?’ ಎಂದು ಕೇಳಿದ್ದಳು. ತಾನು ಉಪಯೋಗಿಸಿದ “ಮರಾಠಿ’ ಶಬ್ದ ನನಗೆ ಅರ್ಥ ಆಗಿದೆಯೋ ಇಲ್ಲವೋ ಎಂಬ ಆತಂಕ ಅವಳಿಗೆ! ಶಾಲೆಗೂ ಹೋಗದ ಆಕೆಯ ಭಾಷೆಯೊಳಗೆ “ಟೆಂಪರರಿ’ಯಂತಹ ಇಂಗ್ಲಿಷ್ ಶಬ್ದವು “ಪರ್ಮನೆಂಟ್’ ಆಗಿ ಸೇರಿಕೊಂಡುಬಿಟ್ಟಿತ್ತು. ಹಾಗೆಯೇ “ಟೇಮ…’, “ಟೆನ್ಶನ್’ನಂತಹ ಶಬ್ದಗಳೂ ಸಾಲುಕಟ್ಟಿ ವಲಸೆ ಬಂದಿದ್ದಾವೆ.
ಜಗತ್ತಿನಾದ್ಯಂತ ವಲಸೆ ಭಾಷೆಗಳು ಮಾಡಿದ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳು ಅಸಾಧಾರಣ. ಉದಾಹರಣೆಗೆ, ಈಜಿಪ್ತ್, ಸಿರಿಯಾ, ಇರಾಕ್ ಮುಂತಾದ ಅರಬ್ ದೇಶಗಳಲ್ಲಿ “ಕೋಪಿಕ್’ನಂಥ ಅಲ್ಲಿಯವೇ ಆದ ಪ್ರಬುದ್ಧ ಭಾಷೆಗಳಿದ್ದವು. ಆದರೆ, ಇಸ್ಲಾಮಿನೊಡನೆ ಅರಬರು ತಂದ ಅರಬ್ಬೀ ಭಾಷೆಯನ್ನು ಅವರು ತಮ್ಮದಾಗಿ ಮಾಡಿಕೊಂಡದ್ದರಿಂದ ಅದು ಇಸ್ಲಾಮೀ ಸಾಮ್ರಾಜ್ಯದ ಅಧಿಕೃತ ಭಾಷೆಯಾಯಿತು. ಇಂದಿಗೆ ಅರಬ್ ದೇಶಗಳು ತೋರಿಕೆಗಾದರೂ ಒಗ್ಗಟ್ಟಿನಲ್ಲಿ¨ªಾವೆಂದು ಕಂಡರೆ ಅದು ಇದೇ ಕಾರಣದಿಂದಾಗಿ. ಇನ್ನು, “ಸೂರ್ಯಾಸ್ತಮಾನವಾಗದ’ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಬ್ರಿಟಿಷರಿಂದಾಗಿ, ಹಲವಾರು ದೇಶಗಳಲ್ಲಿ ಇಂಗ್ಲಿಷ್ ಇಂದಿಗೆ ರಾಷ್ಟ್ರಭಾಷೆಯಾಗಿದೆ. ಈಗಂತೂ ಅದು ಅನಧಿಕೃತ ಜಾಗತಿಕ ಸಂಪರ್ಕ ಭಾಷೆಯೂ ಆಗಿದ್ದು, ಅದರ ಶಬ್ದಗಳು ವಲಸೆ ಹೋಗದ ಭಾಷೆಗಳಿಲ್ಲ ಎಂಬಂತಾಗಿದೆ. ಇಂಗ್ಲಿಷ್ ಕೂಡ ಅಷ್ಟೇ ಭರದಿಂದ ಇತರ ಭಾಷೆಗಳ ಶಬ್ದಗಳನ್ನು ತನ್ನೊಡಲಲ್ಲಿ ಸೇರಿಸುತ್ತಲೇ ಬಂದಿದೆ.
ಶತಮಾನಗಳ ಹಿಂದೆ ಸಂಸ್ಕೃತವು ಭಾರತದ ಸಂಪರ್ಕ-ಭಾಷೆಯಾಗಿತ್ತು. ಹೀಗಾಗಿ, ದೇಶದ ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಶಬ್ದಗಳು ಹಾಸುಹೊಕ್ಕಿವೆ. ಆಗ ಭಾರತೀಯರು ಕಾಂಬೋಡಿಯಾ, ಇಂಡೊನೇಶಿಯಾ ಮತ್ತು ಇತರ ದಕ್ಷಿಣ ಏಷ್ಯಾ ದೇಶಗಳಿಗೆ ವಲಸೆ ಹೋಗಿ ಅಲ್ಲಿಯ ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಪಾಲುಗೊಂಡದ್ದರಿಂದ, ಅಲ್ಲಿಯ ಭಾಷೆಗಳಲ್ಲೂ ವಿಪುಲವಾಗಿ ಸಂಸ್ಕೃತ ಶಬ್ದಗಳನ್ನು ಕಾಣಬಹುದು.
ಹೀಗೆ ಭಾಷೆ ಮತ್ತು ಶಬ್ದಗಳ ವಲಸೆಯ ಕತೆ ದೊಡ್ಡದು.
ಮಿತ್ರಾ ವೆಂಕಟ್ರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.