ಪ್ರಬಂಧ: ಚಂದಮಾಮ


Team Udayavani, Dec 1, 2019, 5:49 AM IST

ww-10

ಸಂಜೆ ಹೊತ್ತಿನಲ್ಲಿ ಆಕಾಶ ನೋಡುತ್ತ ನನಗೆ ನಾನೇ ಕಳೆದು ಹೋಗು ವುದು ನಾನು ಲಾಗಾಯ್ತಿನಿಂದ ರೂಢಿಸಿಕೊಂಡು ಬಂದಂಥ ಪದ್ಧತಿ. ಹಗಲಿಗೆ ಮಂಕು ಕವಿಯುವ ಆ ಹೊತ್ತಿನಲ್ಲಿ ಬಾನಿನಂಚಿನವರೆಗೂ ಹೋಗಿ, ಆಗೊಮ್ಮೆ ಈಗೊಮ್ಮೆ ಹಿಂತಿರುಗಿ ನೋಡಿದಂತೆ ಹಣಕಿ ಹಾಕುತ್ತ, ಬೇಸರದ ಮೊಗ ಹೊತ್ತು ವಿದಾಯ ಹೇಳುತ್ತ ಅಲ್ಲೆಲ್ಲೋ ಮರೆಯಾಗುವ ಸೂರ್ಯ, ಅಷ್ಟಕ್ಕೇ ಕಾದಿದ್ದಂತೆ ಶಾಲೆಗೆ ಮೊದಲು ಬಂದು ಬಾಗಿಲು ತೆರೆಯುವ ಮಕ್ಕಳಂತೆ ಒಂದೋ ಎರಡೋ ಕಣ್ಣು ಮಿಟುಕಿಸಿ ಬಾನಿನಂಗಳದಲ್ಲಿ ಹೊತ್ತಿಗೆ ಮೊದಲೇ ಆಡಲು ಕುಳಿತ ನಕ್ಷತ್ರ, ರೆಕ್ಕೆ ಮಡಚದೆ ತಾಲೀಮು ನಡೆಸುವಂತೆ ಗಾಳಿಯಲ್ಲಿ ತೇಲುತ್ತ ಗೂಡು ಸೇರುವ ಧಾವಂತದಲ್ಲಿರುವ ಬಗೆ ಬಗೆಯ ಪಕ್ಷಿಗಳು, ಇಳಿಯುವ ಕತ್ತಲ ತೊಳೆಯಲು ಶಪಥ ತೊಟ್ಟಂತೆ ಬಂದ ಮಿಂಚುಹುಳುಗಳ ಪಡೆ, ಎಲ್ಲಕ್ಕಿಂತ ಹೆಚ್ಚಾಗಿ ನಾನಾ ರೀತಿಯಲ್ಲಿ ಚಿತ್ರ ಬಿಡಿಸುತ್ತ ತನ್ನ ಕೈಚಳಕ ತೋರಿಸುತ್ತಿರುವ ಮೋಡ. ಯಾವ ಮಾಯದ ಕಲೆಗಾರ ಆಗಸದೊಳಗೆ ಹುದುಗಿರುವನೋ ಅಂತ ಕಣ್ಣ ರೆಪ್ಪೆ ಸಡಿಲಿಸದೆ ನನ್ನ ಹುಡುಕುವ ಕಾಯಕಕ್ಕೆ ಫ‌ಲ ಸಿಗಲೇ ಇಲ್ಲ, ಹುಡುಕಾಟವೂ ನಿಲ್ಲುವುದಿಲ್ಲ. ಈ ಆಗಸ ನೋಡುವ ಖಯಾಲಿಯಿಂದಲೇ ಇರಬೇಕು, ಏನೋ ಒಂದೆರಡು ಹಾಳುಮೂಳು ಕವಿತೆ ಗೀಚುತ್ತ ಕವಿತೆಯ ಸಂಗಕ್ಕೆ ಬಿದ್ದದ್ದು. ಯಾವುದೋ ಕಾಡಿದ ಸಂಗತಿ ಎದೆಯೊಳಗಿಳಿದಿದ್ದನ್ನು ಹಾಗೇ ಜೋಪಾನವಾಗಿ ಎಳೆದು ತಂದು ಉದ್ದುದ್ದ ಎಳೆದೂ ಎಳೆದೂ ಬಿಳಿಯ ಹಾಳೆಗಳ ಮೇಲೆ ಅದನ್ನು ಹರವಿ ನಿರಾಳವಾಗಿದ್ದು, ಒಂದೇ, ಎರಡೆ? ತಲೆಯೆತ್ತಿ ಒಂದಷ್ಟು ಹೊತ್ತು ಆಗಸದ ಸಖ್ಯ ಬೆಳೆಸಿದ್ದಕ್ಕೆ ಎಷ್ಟೊಂದು ವಿಸ್ಮಯಗಳು ತೆರೆದುಕೊಂಡವಲ್ಲ! ಅಚ್ಚರಿ ನನಗೆ. ಆದರೆ, ಮಳೆಗಾಲದಲ್ಲಿ ಹಿತ್ತಲಕಟ್ಟೆಯಲ್ಲಿ ಕುಳಿತು ಆಗಸ ನೋಡುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಆದರೂ ಹಜಾರದಲ್ಲಿ ಕುಳಿತೋ, ಕಿಟಕಿಯ ಸರಳಿಗೆ ತಲೆಯಾನಿಸಿಯೋ ಹಿಡಿ ಆಗಸವನ್ನು ಎದೆಯೊಳಗೆ ತುಂಬಿಕೊಳ್ಳುವುದುಂಟು.

ಅದೃಶ್ಯ ಪ್ರೀತಿಯೊಂದು ಹನಿಗಳ ರೂಪದಲ್ಲಿ ಗೆರೆ ಎಳೆದು ಭುವಿಗೂ ಬಾನಿಗೂ ನಂಟು ಬೆಸೆಯುವ ಚೋದ್ಯಕ್ಕೆ ನಮೊ! ಆಗಸ ಹನಿಯೊಂದಿಗೆ ಭುವಿಗೆ ಕಳಿಸಿದ್ದಾದರೂ ಏನನ್ನ? ಸಂದೇಶವಾ? ಉಡೊಗೊರೆಯಾ? ಪ್ರೇಮ ನಿವೇದನೆಯಾ? ಈವರೆಗೂ ಯಾವ ಸಂಶೋಧಕರಿಗೂ ಇದನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ನೋಡಿ. ಇನ್ನು ಹನಿಗಳೊಂದಿಗೆ ಬುವಿ ಹೇಳಿ ಕಳಿಸಿದ್ದಾದರೂ ಏನು? ಮಳೆಯ ಸದ್ದಿನ ನಡುವೆ ಯಾವ ಪಿಸುಮಾತುಗಳೂ ಕೂಡ ಕಿವಿಯನ್ನು ತಲುಪುವುದೇ ಇಲ್ಲ. ಅದೇನೇ ಇರಲಿ, ಮಳೆಯ ವೇಷ ತೊಟ್ಟು ಬಾನು ಬಂದು ಬುವಿಯನ್ನು ಮುಟ್ಟಿ ಹೋಗಿದೆ ಎಂಬ ಸತ್ಯವನ್ನು ಎಷ್ಟೇ ಬಚ್ಚಿಟ್ಟರೂ, ನೆಲ ಹಸುರು ನಗೆ ತೊಟ್ಟು ಸಾಕ್ಷಿ ಹೇಳುತ್ತಿದೆ. ಎಲ್ಲವೂ ಕಣ್ಣ ಮುಂದೆ ಒಂದು ಪವಾಡದಂತೆ ಜರುಗಿ ಅದ್ಭುತವನ್ನೇ ಸೃಷ್ಟಿಸಿ ಬಿಡುವಾಗ ಇವೆಲ್ಲ ಆಗಸದ ಕರಾಮತ್ತು ಅನ್ನುವುದು ಯಾವುದೂ ಈಗ ಗೋಪ್ಯವಾಗಿ ಉಳಿದಿಲ್ಲ. ಅಂಥ ಮಾಯಾವಿ ಆಗಸ ನಮ್ಮೊಳಗೂ ಒಂದು ಸಂಚಲನವನ್ನು ಉಂಟು ಮಾಡದೇ ಬಿಟ್ಟಿàತೆ? ಅದಕ್ಕೇ ನಾನಂತೂ ಯಾವೊತ್ತೂ ಬಗಲಿಗೇ ಅಂಟಿಕೊಂಡಿರುವ ಹಸುಗೂಸಿನಂತೆ ಪದೇ ಪದೇ ರಚ್ಚೆ ಹಿಡಿದು ಕೂಗುವ ಜಂಗಮವಾಣಿಯ ಕಿವಿ ಹಿಂಡಿ ಅದನ್ನು ತೆಪ್ಪಗೆ ಮನೆಯೊಳಗೆ ಕುಳ್ಳಿರಿಸಿ ಹಿತ್ತಲಿಗೆ ಓಡೋಡಿ ಬಂದು ಆಕಾಶಕ್ಕೇ ಕಣ್ಣು ನೆಟ್ಟು ಕುಳಿತುಕೊಳ್ಳುವೆ. ಆಗಸ ನೋಡುವುದೆಂದರೆ ಅದೊಂದು ಧ್ಯಾನ; ಅದೊಂದು ತಪಸ್ಸು. ಸುಮ್ಮಗೆ ಸಮಯ ಕಳೆಯುವ ಸಾಧನ ಅಂತ ನೋಡಿದವರಿಗೆ ಅನ್ನಿಸಿದರೂ ನನ್ನ ಆಗಸದೊಳಗೆ ಹರಡಿ ಕೊಂಡದ್ದಾದರೂ ಎಷ್ಟು? ಕಂಡವರು, ಕಾಣದವರು, ಇದ್ದವರು, ಇನ್ನಿಲ್ಲ ವಾದವರು ಎಲ್ಲರೂ ಮುಖಾಮುಖೀಯಾಗಿ ಮೌನ ಸಂವಾದವೊಂದು ಜರುಗಿದ್ದು ಎಲ್ಲವೂ ಆಗಸದ ಕಾಣ್ಕೆ ಎಂದರೂ ಅಡ್ಡಿಯಿಲ್ಲ.

ಈಗೀಗ ಅದೇ ಹೊತ್ತಿನಲ್ಲಿ ಬಿಡುವಾಗಿ ಫೋನಾಯಿಸುವ ಗೆಳತಿಯರಿಗೆ ಯಾವುದೋ ಒಂದು ಗಳಿಗೆಯಲ್ಲಿ ಬಾಯಿತಪ್ಪಿ ನಾನು ಆಗಸದೊಂದಿಗೆ ದೃಷ್ಟಿಯುದ್ಧ ಮಾಡುವ ವಿಚಾರ ಹೊರಗೆಡಹಿ ಬಿಟ್ಟಿರುವೆ. ಮೊದಮೊದಲು ರೇಗಿಸಿದರೂ ಈಗ ಕೆಲವರಂತೂ ನನ್ನ ಹಾದಿಯನ್ನೇ ಹಿಡಿದು ಆಗಸಕ್ಕೆ ಮುಖ ನೆಟ್ಟು ಮಾತನಾಡಲಿಕ್ಕೆ ಶುರುಮಾಡಿದ ಮೇಲೆ ಅವರುಗಳು ಈಗ ಸಿಕ್ಕಾಪಟ್ಟೆ ಖುಷಿಯಾಗಿ¨ªಾರೆ ಅಂತ ಸಣ್ಣಗೆ ನಗುತ್ತ ಹೇಳುತ್ತಾರೆ. ಸದ್ಯ! ಇದನ್ನು ಯಾರಿಗೂ ಹೇಳುತ್ತ ಹೋಗಬೇಡಿ. ಸಂಜೆ ಹೆಂಗಸರೆಲ್ಲ ಆಗಸ ನೋಡುತ್ತ ಕುಳಿತುಬಿಟ್ಟರೆ, ಮನೆ ಇಡೀ ಬಿಕೋ ಅಂದು ಹೊಸ ಕ್ರಾಂತಿಯೇ ಶುರುವಾಗಿ ಅರ್ಥವ್ಯವಸ್ಥೆಯ ಮೇಲೆಯೇ ದೊಡ್ಡ ಹೊಡೆತ ಬಿದ್ದು ಅದರ ಪರಿಣಾಮ ನೇರ ನಮ್ಮ ಮೇಲೆ ಉಂಟಾಗಿ ತದನಂತರ ಆಗಸ ಕಾಣದಂತೆ ಛಾವಣಿ ಎದ್ದು ನಿಂತುಬಿಡಬಹುದೆಂಬ ದೂರಾಲೋಚನೆಯನ್ನು ಯಾವುದೇ ದುರಾಲೋಚನೆಗಳಿಲ್ಲದೆ, ಇದು ತುಂಬಾ ನಾಜೂಕಿನ ವಿಷಯ ಅಂತ ಗುಟ್ಟಿನಲ್ಲಿ ಎಂಬಂತೆ ಮೆಲ್ಲಗೆ ಹೇಳಿ ಕೊಟ್ಟಿರುವೆ. ಇನ್ನು ರಾತ್ರೆಯ ಹೊತ್ತಿನಲ್ಲಂತೂ ಆಗಸ ನೋಡುವ ಸುಖವೇ ಬೇರೆ. ಖಾಲಿ ಆಗಸದಲ್ಲಿ ಒಂಟಿ ಚಂದಿರ ದಿನಕ್ಕೊಂದು ಬಗೆಯಲ್ಲಿ ಬದಲಾಗುತ್ತ ಹೋಗುವುದೇ ವಿಶೇಷ. ಆಗಸದ ಚಂದಿರನ ನೋಡುತ್ತ ಅಮ್ಮಂದಿರು ಮಕ್ಕಳಿಗೆ ಊಟ ಮಾಡಿಸಿದ್ದು, ಕತೆ ಹೇಳಿದ್ದು, ಮಕ್ಕಳೆಲ್ಲ ಚಂದಿರನ ನೋಡುತ್ತ ಬೆಳೆದು ದೊಡ್ಡವರಾದದ್ದು, ಕತೆಯ ಅಮಲು ಹೆಚ್ಚಾಗಿ ಚಂದ್ರನ ತಂದುಕೊಡೆಂದು ದುಂಬಾಲು ಬಿದ್ದದ್ದಕ್ಕೆ ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಚಂದ್ರನ ಬಿಂಬವ ತೋರಿಸಿ ಸಮಾಧಾನಿಸಿದ್ದು- ಹೀಗೆ ಎಲ್ಲರ ಮನೆಯ ಛಾವಣಿ ಮೇಲೆ ಒಂದೇ ಚಂದಿರನ ನೂರೆಂಟು ಕತೆಗಳು ತೆರೆದುಕೊಳ್ಳುತ್ತವೆ. ಇವೆಲ್ಲ ಕಲ್ಪನೆಯ ಜಗತ್ತಿಗೆ ಮೀಸಲಾಯಿತು. ವಾಸ್ತವದಲ್ಲಿ ಈಗ ಚಂದ್ರನೂರಿಗೆ ಪ್ರಯಾಣ ಬೆಳೆಸಿದ್ದು, ನಭೋ ಮಂಡಲಕ್ಕೆ ಪರ್ಯಟನೆ ಹಾಕುವುದು ಇವೆಲ್ಲ ಈಗ ನೆರೆಮನೆಗೆ ಪ್ರಯಾಣ ಬೆಳೆಸುವಷ್ಟೇ ಮಾಮೂಲಿ ಸಂಗತಿಯಾದರೂ ಮನೋಭಿತ್ತಿಯಲ್ಲಿ ಆಗಸವೆಂಬ ನೂರೆಂಟು ಕಲನೆಯ ಚಿತ್ರಣಗಳೇ ಹೆಚ್ಚು ಆಪ್ಯಾಯಮಾನವಾದ ಸಂಗತಿ.

ಇಷ್ಟೊಂದು ನೆಚ್ಚಿಕೊಂಡ ಆಗಸವನ್ನು ಕೆಲವೊಂದು ಸಂದರ್ಭದಲ್ಲಿ ನಾವು ನೋಡಲೇಬಾರದು ಅಂತ ತಾಕೀತು ಮಾಡಿ ಕಟ್ಟಪ್ಪಣೆ ಹೊರಡಿಸಿದರೆ ಹೇಗೆ? ಮನಸು ಕೇಳುವುದೇ? ನಿರ್ಬಂಧ ಹೇರಿದಷ್ಟೂ ಮನಸಿಗೆ ಹಪಾಹಪಿಕೆಯ ತುಡಿತ ಹೆಚ್ಚು. ಕಡಿವಾಣಕ್ಕೆ ಕುತೂಹಲದ ಕಟ್ಟೆ ಒಡೆಯುವುದು ಸಹಜ. ಕೆಲವರಿಗೆ ಆಗಸ ನೋಡದೆ ಇರುವುದಕ್ಕೆ ಮೂಢನಂಬಿಕೆ ನೆವವಾದರೆ, ಇನ್ನೊಂದು ವರ್ಗದವರಿಗೆ ವೈಜ್ಞಾನಿಕತೆಯ ಆಧಾರ. ಗ್ರಹಣದ ದಿನಗಳು ಮತ್ತು ಚೌತಿ ದಿನದಂದು ಚಂದ್ರನನ್ನು ನೋಡಬಾರದೆಂಬ ಆಚರಣೆ ಇವತ್ತಿಗೂ ಇದೆ. ಆದರೂ ಗ್ರಹಣ ನೋಡುವುದರಿಂದ ದೇಹದ ಮೇಲಾಗುವ ಪ್ರತಿಕೂಲ ಪರಿಣಾಮದ ಭೀತಿಯಿಂದ ಅದನ್ನು ಅಲ್ಲಗಳೆಯಲಾಗದೆ, ಅತ್ತ ನೋಡದಿರಲೂ ಆಗದೇ ಟಿ. ವಿ. ಪರದೆಯ ಮೇಲೆ ನೋಡಿ ಮನಸಿನ ಕುತೂಹಲವನ್ನು ತಣಿಸಿಕೊಳ್ಳುತ್ತಾರೆ. ಒಂದಷ್ಟು ದಶಕಗಳ ಹಿಂದೆ ನಮ್ಮ ಎಳವೆಯಲ್ಲಿ ತೀರಾ ಸಂಪ್ರದಾಯಸ್ಥ ಮನೋಸ್ಥಿತಿಯವರು ಹೆದರಿಕೆಯಿಂದ ಬೇಗ ಊಟ ಮುಗಿಸಿಯೋ, ಉಪವಾಸ ಇದ್ದೋ ಯಾವುದೋ ಅವ್ಯಕ್ತ ಭಯದಲ್ಲಿ ಕಿಟಕಿ-ಬಾಗಿಲು ಮುಚ್ಚಿ ಬೇಗ ನಿದ್ರೆಗೆ ಜಾರಿ ಬಿಟ್ಟರೆ ಒಂದಷ್ಟು ಪ್ರಗತಿಶೀಲ ಮನೋಭಾವದವರು ಸೆಗಣಿಯ ತಿಳಿನೀರ ಮೇಲೆ ಚಂದ್ರನ ಬಿಂಬವನ್ನು ಮುಳುಗಿಸಿ ಅದರಲ್ಲಿ ನೋಡಿದೆವೆಂದು ಭಾರಿ ಧೈರ್ಯವಂತರಂತೆ ಹೆಮ್ಮೆಯಲ್ಲಿ ಬೀಗುತ್ತಿದ್ದರು.

ನನ್ನ ಗೆಳತಿಯೊಬ್ಬಳು ಶಿಕ್ಷಕಿ. ಆಕೆ ಸಾಕಷ್ಟು ವಿಚಾರವಂತಳು. ಪ್ರಗತಿಪರ ಮನೋಭಾವದವಳಾದರೂ ಅವಳೂ ಚೌತಿಚಂದ್ರನನ್ನು ನೋಡಲು ಹೆದರುತ್ತಾಳೆ ಅನ್ನುವುದಕ್ಕೆ ಅನೇಕ ಘಟನೆಗಳನ್ನು ಹೇಳಿದ್ದಳು. ಅದರಲ್ಲಿ ಅವಳು ಎಳವೆಯಲ್ಲಿ ಅವಳ ತಂಗಿಗೆ ತೆಗೆದುಕೊಟ್ಟ ಹೊಸ ಪೆನ್ಸಿಲನ್ನು ನೋಡಿ ಶಾಲೆಯಲ್ಲಿ ಅವಳು ಪೆನ್ಸಿಲ್‌ ಕಳ್ಳಿ ಅಂತ ಅಪವಾದ ಹೊರಿಸಿದ್ದರಂತೆ. ಅದಕ್ಕೆ ಸರಿಯಾಗಿ ಈ ಹಿಂದೆ ಆಕೆ ಚೌತಿ ಚಂದ್ರಮನನ್ನು ತಿಳಿದೋ ತಿಳಿಯದೆಯೋ ನೋಡಿ ಬಿಟ್ಟದ್ದೊಂದು ನೆವ. ಇದುವೇ ಭಯ ಅವಳಲ್ಲಿ ಆಳವಾಗಿ ಕೂತು ಬಿಟ್ಟಿತ್ತಂತೆ. ನನ್ನ ಕತೆಯೂ ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕವಳಿರುವಾಗ ಓರಗೆಯ ಗೆಳತಿಯರು ಚೌತಿ ಚಂದ್ರಮನನ್ನು ಮಾತ್ರ ನೋಡಲೇಬಾರದು ಅಂತ ದಿಗಿಲು ಹುಟ್ಟಿಸುವ ದನಿಯಲ್ಲಿ ಹೇಳಿದ್ದು ಎದೆಗೆ ತಾಕಿ ಭಯದ ಚಳಿ ಕೂತ ಮೇಲೆ ನಾನು ಕೂಡ ಆವತ್ತಿನಿಂದ ಇವತ್ತಿನವರೆಗೂ ಆ ದಿನ ಮಾತ್ರ ನಾಚಿಕೆಯೇ ಮೈಯೆತ್ತಿದವಳಂತೆ ನೆಲಕ್ಕೆ ಕಣ್ಣು ತಾಗಿಸಿ ನಡೆದರೂ ಚಂದ್ರ ಹಠಕ್ಕೆ ಬಿದ್ದವನಂತೆ ತನ್ನ ಮುಖ ಹೇಗಾದರೂ ತೋರಿಸಿಯೇ ತೋರಿಸುತ್ತಿದ್ದ.

ಒಮ್ಮೆ ಹೀಗೆ ಆಗಿತ್ತು, ಬೆಳಗ್ಗಿನಿಂದ ಸಂಜೆಯವರೆಗೆ ಹೇಗೋ ಕಷ್ಟಪಟ್ಟು ಆಗಸಕ್ಕೆ ತಲೆಯೆತ್ತದೆ ಸುಧಾರಿಸಿಕೊಂಡಿದ್ದೆ. ಇನ್ನೇನು, ಕತ್ತಲು ಆವರಿಸುತ್ತಿತ್ತು. ಮನೆಯೊಳಗೆ ಬಾಗಿಲು ಹಾಕಿದ ಮೇಲೆ ಚಂದ್ರನನ್ನು ಕಾಣುವ ಪ್ರಮೇಯ ಇಲ್ಲ ಅಂತಲೇ ಖುಷಿಯಲ್ಲೇ ಕೊಡ ಎತ್ತಿಕೊಂಡು ನೀರು ತರಲು ಹೊದೆ. ನ‌ಮ್ಮ ಮನೆಯ ಅಡುಗೆ ಕೋಣೆಗೆ ಅಂಟಿಕೊಂಡಂತೆ ಒಂದು ಸೇದು ಬಾವಿ. ಕತ್ತು ಬಗ್ಗಿಸಿ ನೀರು ಸೇದುತ್ತಿದ್ದವಳಿಗೆ ಬಾವಿಯೊಳಗೆ ಚಂದ್ರ ಇಣುಕಿ ಫ‌ಳ್ಳನೆ ನಗಬೇಕೇ? ಪ್ರಜ್ಞಾಪೂರ್ವಕವಾಗಿ ನಾನು ನೋಡಿಲ್ಲವಾದರೂ ಯಾವುದೋ ಅವ್ಯಕ್ತ ತಳಮಳ. ಹೆದರಿಕೆಯಿಂದ ಅವರಿವರು ಹೇಳಿದಂತೆ ಮಂತ್ರ ಪಠನೆ, ಸಂಕಷ್ಟಿ ಪೂಜೆ ಎಲ್ಲಾ ಮಾಡಿಸಿದ್ದು ಆಯಿತು. ಆ ವರುಷ ಉಂಟಾದ ಕೆಲವೊಂದು ಕಹಿ ಘಟನೆಗಳಿಗೆ ಚೌತಿ ಚಂದ್ರನೇ ಕಾರಣ ಅಂತ ತರ್ಕಿಸಿದ್ದೂ ಆಯಿತು.

ಅದಾದ ಮೇಲೆ ಪ್ರತೀ ಸಾರಿ ಚೌತಿ ಬಂದಾಗ ಮಕ್ಕಳಿಗೂ ಚಂದ್ರನನ್ನು ನೋಡಬೇಡಿ ಅಂತ ತಾಕೀತು ಮಾಡಿದರೂ ವಿಜ್ಞಾನ ಓದುವ ಮಕ್ಕಳು ನಂಬುತ್ತಿರಲಿಲ್ಲ. ಅವರವರ ನಂಬಿಕೆ ಅವರಿಗೆ ಅಂತ ನಾನು ಕಟ್ಟುನಿಟ್ಟಾಗಿ ನಿಯಮ ಪಾಲಿಸಿದರೂ ಚಂದ್ರ ಹೇಗೋ ಬಂದು ನನ್ನ ಎದುರು ನಿಲ್ಲುವುದನ್ನು ನನಗೆ ಮಾತ್ರ ತಪ್ಪಿಸಲು ಸಾಧ್ಯವಾಗಲಿಲ್ಲ. ಮತ್ತೂಮ್ಮೆ ಚೌತಿಯಂದು ಹೀಗೆ ಹಿತ್ತಿಲ ಮೆಟ್ಟಿಲಲ್ಲಿ ರಾತ್ರಿ ಆಗುವುದನ್ನೇ ಕಾಯುತ್ತಿದ್ದವಳನ್ನು ಹುಡುಕಿ ಅಲ್ಲಿಗೂ ಬಂದು ಚಂದ್ರ ನಕ್ಕಿದ್ದ. ನಾನೋ ಪ್ರಾಯಶ್ಚಿತವೆಂಬಂತೆ

ಮನ್ನಿಸಿ ಬಿಡು ಗಣಪ
ನಾನಲ್ಲ, ಚಂದಿರನೇ ನನ್ನ ನೋಡಿ ನಕ್ಕಿದ್ದು
ಅಂತ ಕವಿತೆ ಗೀಚಿ ಕೊಂಚ ಎದೆಯ ಭಾರ ಇಳಿಸಿಕೊಂಡಿದ್ದೆ.

ಸ್ಮಿತಾ ಅಮೃತರಾಜ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.