ಆರ್ಥಿಕತೆಯ ಚೇತರಿಕೆಗೆ ತುರ್ತು ಕ್ರಮ ಅಗತ್ಯ
Team Udayavani, Dec 3, 2019, 4:33 AM IST
ಬರೀ ತೇಪೆ ಹಾಕುವ ಕೆಲಸಗಳಿಂದ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಾಗದು ಎನ್ನುವುದನ್ನು ಸರಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು.
ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ತೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ. 4.5ಕ್ಕೆ ಕುಸಿದಿರುವುದು ಕಳವಳಕಾರಿಯಾಗಿದ್ದರೂ ತೀರಾ ಅನಿರೀಕ್ಷಿತವೇನಲ್ಲ. ಆರ್ಥಿಕ ಹಿಂಜರಿತ ಎಲ್ಲ ಕ್ಷೇತ್ರಗಳಲ್ಲಿ ಢಾಳಾಗಿ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರು ಹೀಗೊಂದು ಕುಸಿತವನ್ನು ಮೊದಲೇ ಅಂದಾಜಿಸಿದ್ದರು. ಜಿಡಿಪಿ ಕುಸಿತವಾದ ಕೂಡಲೇ ಇಡೀ ಆರ್ಥಿಕ ವ್ಯವಸ್ಥೆಯೇ ಮುಳುಗಿ ಹೋಯಿತು ಎಂದು ಅರ್ಥವಲ್ಲ. ಆದರೆ ಒಟ್ಟಾರೆಯಾಗಿ ಅರ್ಥ ವ್ಯವಸ್ಥೆಯ ನಡಿಗೆ ಬಹಳ ಮಂದಗತಿಯಲ್ಲಿದ್ದು, ಇದರ ಚೇತರಿಕೆಗೆ ಸರಕಾರ ತುರ್ತಾಗಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಎಚ್ಚರಿಕೆಯ ಗಂಟೆಯಿದು.
ಆರ್ಥಿಕ ಹಿಂಜರಿತಕ್ಕೆ ಜಾಗತಿಕ ವಿದ್ಯಮಾನವೂ ಕಾರಣ. ಮುಖ್ಯವಾಗಿ ಚೀನ ಮತ್ತು ಅಮೆರಿಕದ ನಡುವಿನ ದರ ಸಮರವನ್ನು ಇದರ ಮುಖ್ಯ ದೋಷಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ನಿಜವಾಗಿರಲೂಬಹುದು. ಆದರೆ ಇದೇ ವೇಳೆ ದೇಶೀಯವಾಗಿ ಇರುವ ಹಲವು ಕಾರಣಗಳನ್ನು ನಿರ್ಲಕ್ಷಿಸುವಂತಿಲ್ಲ. ಮುಖ್ಯವಾಗಿ ಉದ್ಯೋಗ ಸೃಷ್ಟಿ, ಉತ್ಪಾದನೆ ಸೇರಿದಂತೆ ಪರಸ್ಪರ ಪೂರಕವಾಗಿರುವ ಕ್ಷೇತ್ರಗಳ ಸಮಸ್ಯೆಯ ಆಳಕ್ಕಿಳಿಯದೆ ಬರೀ ತೇಪೆ ಹಾಕುವ ಕೆಲಸಗಳಿಂದ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಾಗದು ಎನ್ನುವುದನ್ನು ಸರಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು.
ಸದ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಮಂದಗತಿ ಕಂಡು ಬರುತ್ತಿದೆ. ಅದರಲ್ಲೂ ರಿಯಲ್ ಎಸ್ಟೇಟ್ ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟು ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ನೀಡುತ್ತಿದೆ. ಸೂಕ್ಷ್ಮವಾಗಿ ನೋಡಿದರೆ ಕೃಷಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ನಡುವಿನ ಸಂಬಂಧ ಗೋಚರಕ್ಕೆ ಬಾರದಿರದು. ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸಲು ತೊಡಗಿ ಎರಡು ದಶಕಗಳೇ ಸಂದಿವೆ. ಆದರೆ ಇದೇ ವೇಳೆ ರಿಯಲ್ ಎಸ್ಟೇಟ್ ಉದ್ಯಮ ನಾಗಾಲೋಟದಲ್ಲಿ ಅಭಿವೃದ್ಧಿಯಾಗಿತ್ತು. ಕೃಷಿ ಕ್ಷೇತ್ರದಲ್ಲಿ ಆದ ಉದ್ಯೋಗ ನಷ್ಟವನ್ನು ರಿಯಲ್ ಎಸ್ಟೇಟ್ ಕ್ಷೇತ್ರ ತುಂಬಿಸಿಕೊಟ್ಟಿತ್ತು. ಈ ಮೂಲಕ ಒಂದು ಕ್ಷೇತ್ರದಲ್ಲಾದ ಉತ್ಪಾದಕತೆಯ ನಷ್ಟ ಇನ್ನೊಂದು ಕ್ಷೇತ್ರದ ಅಭಿವೃದ್ಧಿಯಿಂದಾಗಿ ಸಮತೋಲನದಲ್ಲಿತ್ತು. ಆದರೆ ಯಾವಾಗ ರಿಯಲ್ ಎಸ್ಟೇಟ್ ಕ್ಷೇತ್ರ ಕುಸಿಯತೊಡಗಿತೋ ಆಗ ಆರ್ಥಿಕತೆಗೆ ಹೊಡೆತ ಬೀಳತೊಡಗಿತು.
ಯಾವುದೇ ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಯೋಜನೆಗಳು ಈಗ ತಲೆ ಎತ್ತುತ್ತಿಲ್ಲ. ಇದಕ್ಕೆ ಕಾರಣ ಬ್ಯಾಂಕಿಂಗ್ ವಲಯದಲ್ಲಾಗಿರುವ ಬಿಕ್ಕಟ್ಟು. ಎನ್‌ಪಿಎ ಹೊರೆ ಮತ್ತು ವಂಚನೆಯಿಂದ ತತ್ತರಿಸಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೆ ದೊಡ್ಡ ಮಟ್ಟದ ಸಾಲ ಕೊಡುವುದಕ್ಕೆ ಹಿಂದೇಟು ಹಾಕುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮ ಅತಿಯಾಗಿ ನಂಬಿಕೊಂಡಿದ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸರಕಾರದ ನೀತಿ ಮತ್ತು ಲಗಾಮುಗಳಿಂದಾಗಿ ಹೈರಾಣಾಗಿವೆ. ಹೀಗಾಗಿ ಈ ಕ್ಷೇತ್ರ ಹೂಡಿಕೆ ಸಮಸ್ಯೆಯನ್ನು ಎದುರಿಸುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮದ ಹಿಂಜರಿತ ಪರೋಕ್ಷವಾಗಿ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ.
ಹಾಗೆಂದು ಆರ್ಥಿಕತೆಗೆ ಪುನಶ್ಚೇತನ ನೀಡಲು ಸರಕಾರ ಏನೂ ಮಾಡಿಲ್ಲ ಎಂದರೆ ತಪ್ಪಾಗುತ್ತದೆ. ಬ್ಯಾಂಕ್‌ಗಳಿಗೆ 70,000 ಕೋ. ರೂ. ಬಂಡವಾಳ ಮರುಪೂರಣ ಮಾಡಲಾಗಿದೆ. ಕಾರ್ಪೋರೇಟ್ ತೆರಿಗೆಯನ್ನು ತಗ್ಗಿಸುವ ಮೂಲಕ ಉತ್ಪಾದನೆಗೆ ವೇಗ ಕೊಡುವ ಪ್ರಯತ್ನ ಮಾಡಲಾಗಿದೆ. ಹೆಚ್ಚಿನ ಎಲ್ಲ ಕ್ಷೇತ್ರಗಳಿಗೆ ಉತ್ತೇಜನಕಾರಿ ಕ್ರಮಗಳನ್ನು ಘೋಷಿಸಲಾಗಿದೆ. ಅಭಿವೃದ್ಧಿಯ ವೇಗ ವರ್ಧಿಸಲು ಸರಕಾರ ಕೈಗೊಂಡಿರುವ 32 ಉಪಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದಾರೆ. ಆದರೆ ಇವೆಲ್ಲ ದೂರಗಾಮಿ ನೆಲೆಯಲ್ಲಿ ಪರಿಣಾಮ ಬೀರುವ ಸುಧಾರಣೆಗಳು. ಇದರ ಜೊತೆಗೆ ತತ್‌ಕ್ಷಣಕ್ಕೆ ಆಗಬೇಕಾಗಿರುವ ಕೆಲವು ಉತ್ತೇಜನಕಾರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.