ಅಮ್ಮಾ, ಬೋರ್ ಆಗ್ತಿದೆ….
ಮಕ್ಕಳು ಅತ್ತರೆ ಮೊಬೈಲ್ ಕೊಡ್ಬೇಡಿ...
Team Udayavani, Dec 4, 2019, 5:05 AM IST
ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು ನೋಡ್ತಾಳೆ… ಅಂತೆಲ್ಲಾ ಮಕ್ಕಳನ್ನು ನೋಡಿ ಬೀಗಬೇಡಿ. ಯಾಕಂದ್ರೆ, ದೊಡ್ಡವರಾದ ಮೇಲೆ ಅವನ್ನೆಲ್ಲ ಕಲಿಯಲು ಅವಕಾಶಗಳಿವೆ. ಆದರೆ, ಬಾಲ್ಯದ ಆಟಗಳನ್ನು, ತುಂಟಾಟಗಳನ್ನು ದೊಡ್ಡವರಾದ ಮೇಲೆ ಮಾಡಲಾಗುತ್ತದೆಯೇ?
ಸಮಾರಂಭಗಳಿಗೆ ಹೋದಾಗ ಅಲ್ಲಿಗೆ ಬಂದಿರುವ ಮಕ್ಕಳನ್ನು ಗಮನಿಸಿ. “ಅಮ್ಮಾ, ಬೋರ್ ಆಗ್ತಾ ಇದೆ. ಮೊಬೈಲ್ ಕೊಡಮ್ಮ, ಗೇಮ್ ಆಡ್ತೀನಿ’ಅಂತ ಅಮ್ಮಂದಿರನ್ನು ಪೀಡಿಸುತ್ತಿರುತ್ತಾರೆ. ಸುತ್ತ ನೂರಾರು ಜನರಿದ್ದರೂ, ಮಕ್ಕಳು ಮೊಬೈಲ್‌ನಲ್ಲೇ ಮುಳುಗಿರುತ್ತಾರೆ.
ನಾವು ಸಣ್ಣವರಿದ್ದಾಗಲೂ ಅಮ್ಮನ ಬಾಲದಂತೆ ಸಮಾರಂಭಗಳಿಗೆ ಹೋಗುತ್ತಿದ್ದೆವು. ಅಮ್ಮಂದಿರು ಅವರ ಗೆಳತಿಯರೊಂದಿಗೆ ಹರಟುತ್ತಿರುವಾಗ, ನಾವು ನಮ್ಮ ವಯಸ್ಸಿನವರ ಗುಂಪಿನೊಳಗೆ ಸೇರಿಕೊಳ್ಳುತ್ತಿದ್ದೆವು. ಕಣ್ಣಾಮುಚ್ಚಾಲೆ, ಕುಂಟೆಬಿಲ್ಲೆ, ಮುಟ್ಟಾಟ, ಕೋಲನ್ನು ಬೀಸಿ ಒಗೆಯುವುದು, ಅಂತ್ಯಾಕ್ಷರಿ, ಒಗಟು ಬಿಡಿಸುವುದು, ಐ ಆ್ಯಮ್ ಮೀನಾ, ಸೂಪರ್ ಮೀನಾ ಎಂದು ಒಬ್ಬರಿಗೊಬ್ಬರು ಕೈ ಮಿಲಾಯಿಸುತ್ತಾ ಹಾಡುವುದು… ಹೀಗೆ ನಮ್ಮ ಆಟಗಳಿಗೆ ಕೊನೆಯೇ ಇರುತ್ತಿರಲಿಲ್ಲ. ನಾಲ್ಕು ಕಲ್ಲು ಸಿಕ್ಕರೆ ಗಜ್ಜುಗದಂತೆ ಬಳಸಿ ಗುಡ್ನಾ ಆಡುತ್ತಿದ್ದೆವು. ಕೆಲವು ಹುಡುಗರು ಬಟ್ಟೆಯನ್ನೇ ಚೆಂಡಿನಂತೆ ಸುತ್ತಿ ಚೆಂಡಾಟ, ಲಗೋರಿ ಶುರು ಮಾಡುತ್ತಿದ್ದರು. ಹತ್ತಿರದಲ್ಲಿ ಮರವೇನಾದರೂ ಇದ್ದರೆ, ಕೋತಿಗಳಾಗಿ ಬದಲಾಗುತ್ತಿದ್ದವರು ಎಷ್ಟು ಜನರೋ. ಯಾರದ್ದಾದರೂ ಜೇಬಿನಲ್ಲಿ ಪೆನ್,ಪೆನ್ಸಿಲ್ ಇದ್ದರೆ, ಎಲ್ಲಿಂದಾದರೂ ಒಂದು ಹಾಳೆ ತಂದು ಕಳ್ಳ, ಪೊಲೀಸ್, ಸೆಟ್ ಆಟ, ಚುಕ್ಕಿ ಆಟ… ಹೀಗೆ ಹತ್ತಾರು ಆಟಗಳನ್ನು ಆಡುತ್ತಿದ್ದೆವು. ಊಟಕ್ಕೆ ಕುಳಿತಾಗಲೂ, ಆಟದ ಬಗ್ಗೆಯೇ ಯೋಚಿಸುತ್ತಾ, ಇನ್ನೊಮ್ಮೆ ಸಿಕ್ಕಾಗ ಆ ಆಟ ಆಡೋಣ, ಇನ್ನೊಂದು ಆಡೋಣ ಅಂತ ಹರಟೆ ಹೊಡೆಯುತ್ತಿದ್ದೆವು. ಊಟದ ನಂತರ ಸ್ವಲ್ಪ ಸಮಯ ಸಿಕ್ಕರೆ ಮತ್ತೂಂದು ಆಟ ಶುರುವಾಗುತ್ತಿತ್ತು.
ಆದರೀಗ ಕಾಲ ಬದಲಾಗಿದೆ…
ಇತ್ತೀಚೆಗೆ ನಾವೊಂದು ಕಡೆ ನಾಟಕ ನೋಡಲು ಹೋಗಿದ್ದೆವು. ಸ್ವಲ್ಪ ಹೊತ್ತಿಗೆ ಮೂರು ವರ್ಷದ ಮಗ ಅಳಲು ಶುರು ಮಾಡಿದ. ಅವನನ್ನೆತ್ತಿಕೊಂಡು ಹೊರಗೆ ಬಂದೆ. ಹೊರಗೆ ಹತ್ತಿಪ್ಪತ್ತು ಮಕ್ಕಳು ಆಡುತ್ತಿದ್ದರು, ಮೊಬೈಲ್‌ನಲ್ಲಿ! ಅವರಿಗೆ ಹೊರ ಪ್ರಪಂಚದ ಅರಿವೇ ಇರಲಿಲ್ಲ. ಮಗನೂ ಮೊಬೈಲ್ ಕೇಳಿಬಿಟ್ಟರೆ ಅಂತ ಹೆದರಿ, “ಬಾ, ನಾವು ಫ್ಯಾನ್, ಲೈಟ್ ಆಟ ಆಡೋಣ’ ಅಂತ ಅವನಿಗೆ ಅಲ್ಲಿದ್ದ ಫ್ಯಾನ್‌ಗಳನ್ನು ಲೆಕ್ಕ ಹಾಕಲು ಹೇಳಿದೆ. ಸ್ವಲ್ಪ ಹೊತ್ತಿನಲ್ಲಿ ಸಾಲಾಗಿ ಜೋಡಿಸಿಟ್ಟ ಟೇಬಲ್‌ಗಳ ಮೇಲೆಲ್ಲಾ ಹತ್ತಿ, ಆಟವಾಡತೊಡಗಿದ. ಅಲ್ಲಿದ್ದ ಕೆಲವರು, “ಮಗುವನ್ನು ಮೇಲೆ ಆಡಲು ಬಿಟ್ಟಿದಾಳೆ ನೋಡು, ಬಿದ್ದರೆ ಏನು ಕಥೆ?’ ಎಂದು ಗೊಣಗಿದರು.
ಸ್ವಲ್ಪ ಹೊತ್ತಿನಲ್ಲಿ ಇನ್ನೂ ನಾಲ್ಕಾರು ಅಪ್ಪ-ಅಮ್ಮಂದಿರು ಮಕ್ಕಳನ್ನೆತ್ತಿಕೊಂಡು ಹೊರ ಬಂದರು. ಅಳುತ್ತಿದ್ದ ಆ ಮಕ್ಕಳೆಲ್ಲ ಮಗನ ಆಟಕ್ಕೆ ಜೊತೆಯಾದರು. ನನಗೆ ಖುಷಿಯಾಯಿತು, ಸ್ವಲ್ಪವಾದರೂ ಮೊಬೈಲೇತರ ವಾತಾವರಣ ಸೃಷ್ಟಿಯಾಯಿತಲ್ಲ ಎಂದು. ಅಷ್ಟರಲ್ಲಿ ಒಂದು ಮಗುವಿನ ತಂದೆ, ಮಕ್ಕಳೆಲ್ಲರನ್ನೂ ಕೂರಿಸಿಕೊಂಡು ಮಾತನಾಡಿಸತೊಡಗಿದರು. ಮೊದಲು ಹಿಂಜರಿದ ಮಕ್ಕಳು, ನಂತರ ಒಬ್ಬೊಬ್ಬರಾಗಿ ತಮಗೆ ಗೊತ್ತಿದ್ದ ರೈಮ್ಸ್‌ಗಳನ್ನು ಅಂಕಲ್‌ಗೆ ಒಪ್ಪಿಸತೊಡಗಿದರು.
ನಾವೂ ಬದಲಾಗೋಣ
ವಿದೇಶದ ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳನ್ನು ತಂದುಕೊಡಲು ಹೆಚ್ಚಿನ ಸಮಯ ಬೇಕಾದಾಗ ಹೋಟೆಲ್‌ನವರೇ ಮಕ್ಕಳಿಗೆ ಡ್ರಾಯಿಂಗ್ ಬುಕ್, ಕ್ರೆಯಾನ್ಸ್, ಸ್ಕೆಚ್‌ಪೆನ್‌ಗಳನ್ನು ಕೊಡುತ್ತಾರೆ. ಮಕ್ಕಳು ಮೊಬೈಲ್‌ನಲ್ಲಿ ಮುಳುಗದಿರಲಿ ಎಂದು ಹೀಗೆ ಮಾಡುತ್ತಾರೆ ಎಂದು ಅಮೆರಿಕಾಕ್ಕೆ ಹೋಗಿ ಬಂದ ಗೆಳತಿ ಹೇಳುತ್ತಿದ್ದಳು. ನಾವೂ ಇದೇ ರೀತಿ ಮಾಡಬಹುದಲ್ಲ? ಹಠ ಮಾಡುವ ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು, ಅವರಿಷ್ಟದ ಕಥೆ ಪುಸ್ತಕವನ್ನೋ, ಆಟಿಕೆಯನ್ನೋ ಕೊಡಬಹುದಲ್ಲ. ಹೊರಗೆ ಹೋಗುವಾಗ ಅವುಗಳನ್ನು ಜೊತೆಗೊಯ್ದರೆ ಆಯ್ತು.
ಮಕ್ಕಳಿಗೆ ಮೊಬೈಲ್ ಕೊಡುವವರದ್ದು ಒಂದೇ ವಾದ- ಮಗ/ ಮಗಳು ತುಂಬಾ ಹಠ ಮಾಡುತ್ತಾನೆ, ಕೀಟಲೆ ತಡೆಯೋಕೆ ಸಾಧ್ಯವಿಲ್ಲ ಅನ್ನೋದು. ಮಕ್ಕಳಲ್ಲದೆ ಮತ್ಯಾರು ಅವನ್ನೆಲ್ಲ ಮಾಡಲು ಸಾಧ್ಯ? ಅಮ್ಮಾ, ಬೋರ್ ಆಗ್ತಿದೆ ಎಂದಾಗ ಕ್ರಿಯೇಟಿವ್ ಆಗಿ ಏನು ಮಾಡಲು ಸಾಧ್ಯ ಅಂತ ಅವರಿಗೆ ಹೇಳಿಕೊಡಿ. ಅದನ್ನು ಬಿಟ್ಟು ಹಠ ಮಾಡಿದಾಗೆಲ್ಲಾ ಅವರಿಗೆ ಮೊಬೈಲ್ ಕೊಟ್ಟು ಸುಮ್ಮನಾಗಿಸಿದರೆ, ಮುಂದೆ ಅವರು ಮೊಬೈಲ್ ಬೇಕು ಎಂದೇ ಹಠ ಮಾಡುತ್ತಾರೆ.
-ಹೊರಗಡೆ ಹೋದಾಗ ಇತರೆ ಮಕ್ಕಳೊಂದಿಗೆ ಆಟವಾಡಲು ಬಿಡಿ.
– ಬಾಲ್ಯಕಾಲದ ಹೊರಾಂಗಣ, ಒಳಾಂಗಣ ಆಟಗಳನ್ನು ಮಕ್ಕಳಿಗೆ ಕಲಿಸಿ.
-ಮಕ್ಕಳೊಂದಿಗೆ ಇದ್ದಾಗ ಹೆತ್ತವರೂ ಮೊಬೈಲ್ ಬಳಕೆ ಕಡಿಮೆ ಮಾಡಬೇಕು.
– ಹೊಸ ಹೊಸ ಆಟಗಳನ್ನು ಮಕ್ಕಳೊಂದಿಗೆ ಸೇರಿ ಸೃಷ್ಟಿಸಿ.
-ಮಕ್ಕಳ ಸೃಜನಶೀಲತೆಯ ಹರಿವಿಗೆ ಮೊಬೈಲ್‌ನ ಅಣೆಕಟ್ಟು ಕಟ್ಟಬೇಡಿ.
-ಸಾವಿತ್ರಿ ಶ್ಯಾನುಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.