ಸೆಕೆಂಡ್ ಇನ್ನಿಂಗ್ಸ್ ಸುಲಭವೇ?
ಒಂದು ವಿರಾಮದ ನಂತರ...
Team Udayavani, Dec 4, 2019, 5:10 AM IST
ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ ಉದ್ಯೋಗ ಸಿಕ್ಕಿತ್ತು. ಸಾಫ್ಟ್ವೇರ್ ಕ್ಷೇತ್ರದಲ್ಲಿ ಗಟ್ಟಿಯಾಗಿ ಕಾಲೂರಬೇಕು ಅನ್ನುವಷ್ಟರಲ್ಲಿ, ಗರ್ಭಿಣಿಯಾದಳು. ಅನಿವಾರ್ಯವಾಗಿ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಯ್ತು. ಹೆರಿಗೆ-ಬಾಣಂತನ-ಮಗುವಿನ ಲಾಲನೆ-ಪಾಲನೆಯಲ್ಲಿ ಮೂರು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮಗು ನರ್ಸರಿಗೆ ಹೋಗತೊಡಗಿದಾಗ ನಯನಾಳೂ ಮತ್ತೆ ಕೆಲಸಕ್ಕೆ ಟ್ರೈ ಮಾಡಿದಳು. ಅಷ್ಟರಲ್ಲಾಗಲೇ ತಂತ್ರಜ್ಞಾನ ಮುಂದಕ್ಕೋಡಿತ್ತು. ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಸಿಗಲಿಲ್ಲ. ಕೆಲವೊಂದು ಇಂಟರ್‌ವ್ಯೂಗಳಲ್ಲಿ ಉತ್ತರಿಸಲೂ ಆಕೆಗೆ ಕಷ್ಟವಾಯ್ತು. ಇನ್ನೂ ಒಂದೆರಡು ಕಂಪನಿಗಳು ತೀರಾ ಕಡಿಮೆ ಸಂಬಳ ಆಫರ್ ಮಾಡಿದವು. ನಯನಾಳಿಗೆ ಅಷ್ಟೊಂದು ಕಡಿಮೆ ಸಂಬಳಕ್ಕೆ ದುಡಿಯಲು ಇಷ್ಟವಾಗದೆ, ಬೇರೆ ಯಾವ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಬಹುದೆಂದು ತಿಳಿಯದೆ ಮನೆಯಲ್ಲಿಯೇ ಉಳಿದಳು.
ಮಕ್ಕಳಾಗುವ ಮುಂಚೆ ಅರೆಕಾಲಿಕ ಉಪನ್ಯಾಸಕಿಯಾಗಿ ದುಡಿಯುತ್ತಿದ್ದ ಮಂಜುಳಾ, ಕೆಲಸ ಬಿಟ್ಟು ನಾಲ್ಕು ವರ್ಷಗಳಾಗಿದ್ದವು. ಈಗ ಮತ್ತೂಮ್ಮೆ ಹಳೆಯ ಕಾಲೇಜಿನಲ್ಲಿ ಕೆಲಸಕ್ಕೆ ಸೇರೋಣವೆಂದರೆ, ಸಹೋದ್ಯೋಗಿಗಳೆಲ್ಲ ಪರೀಕ್ಷೆ ಬರೆದು, ಪಿಎಚ್.ಡಿ ಮಾಡಿ ಪ್ರೊಫೆಸರ್‌ಗಳಾಗಿದ್ದಾರೆ. ಅವರ ನಡುವೆ ದುಡಿಯಲು ಕೀಳರಿಮೆ ಕಾಡತೊಡಗಿತು. ಬೇರೆ ಕಾಲೇಜುಗಳಲ್ಲಿ ಯುವ ಉಪನ್ಯಾಸಕರಿಗೆ ಮಾತ್ರ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಅದೂ ಅಲ್ಲದೆ, ಮೊದಲಿನಂತೆ ಆತ್ಮವಿಶ್ವಾಸದಿಂದ ಪಾಠ ಮಾಡಲು ತನ್ನಿಂದ ಸಾಧ್ಯವಿಲ್ಲವೇನೋ ಎಂಬ ಸಂಶಯವೂ ಮಂಜುಳಾರದ್ದು. ಮನೆಯ ಆರ್ಥಿಕ ಸ್ಥಿತಿ ನೋಡಿದರೆ ದುಡಿಯುವುದು ಅನಿವಾರ್ಯ. ಈಗ ಮಂಜುಳಾ, ಕಿಂಡರ್‌ಗಾರ್ಟನ್ ಒಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದಾರೆ. ಓದಿರುವ ಮೈಕ್ರೋ ಬಯಾಲಜಿ ಉಪಯೋಗಕ್ಕೆ ಬರುತ್ತಿಲ್ಲ.
ಸ್ನೇಹಿತೆಯೊಬ್ಬರು ಟಿ.ವಿ. ಮೀಡಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತಾಯ್ತನದ ಬ್ರೇಕ್ ಮುಗಿಸಿ ಮತ್ತೆ ಸಂಸ್ಥೆಗೆ ಸೇರಿಕೊಂಡಾಗ ಹಿಂದೆ ಮಾಡುತ್ತಿದ್ದ ಸಾಫ್ಟ್ವೇರ್‌ಗಳು ಸುಧಾರಿತಗೊಂಡಿದ್ದವು. ಹೊಸ ತಂತ್ರಜ್ಞಾನ ಕಲಿಯಲು ಸಮಯ ಹೊಂದಿಸಿಕೊಳ್ಳಲಾಗದೆ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯ್ತು. ಈಗ, ಮನಸ್ಸಿಗೆ ತೃಪ್ತಿ ಇಲ್ಲದಿದ್ದರೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಡಾಟಾ ಎಂಟ್ರಿ ಜಾಬ್‌ಗ ಸೇರಿಕೊಂಡಿದ್ದಾರೆ.
ಇದು, ವೃತ್ತಿ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲು ಬಯಸುವ ಬಹುತೇಕ ಮಹಿಳೆಯರ ಕಥೆ. ತಾಯ್ತನ, ಹಿರಿಯ ಪೋಷಕರ ಅನಾರೋಗ್ಯ, ಮನೆ ನಿರ್ವಹಣೆ, ಸಣ್ಣ ಮಕ್ಕಳ ಲಾಲನೆ ಪಾಲನೆ ಇತ್ಯಾದಿ ಕಾರಣಗಳಿಂದ ಮಹಿಳೆಯರು ಅನಿವಾರ್ಯವಾಗಿ ಉದ್ಯೋಗದಿಂದ ಬ್ರೇಕ್ ತೆಗೆದುಕೊಳ್ಳಬೇಕಾಗುತ್ತದೆ. ಇನ್ನೊಂದೆರಡು ವರ್ಷ; ಮಕ್ಕಳು ಶಾಲೆಗೆ ಹೋಗತೊಡಗಿದಂತೆ ಮತ್ತೆ ಕೆಲಸಕ್ಕೆ ಹೋಗುತ್ತೇನೆ ಅಂತಲೇ ಹೆಚ್ಚಿನ ಮಹಿಳೆಯರು ಅಂದುಕೊಳ್ಳುತ್ತಾರೆ. ಯಾಕಂದ್ರೆ, ಮದುವೆಗೂ ಮೊದಲು ದುಡಿಯುತ್ತಿದ್ದವಳಿಗೆ ಆರ್ಥಿಕ ಸ್ವಾವಲಂಬನೆ ಮುಖ್ಯ ಅನ್ನಿಸುತ್ತಿರುತ್ತದೆ. ಗಂಡನ ಜೊತೆಗೆ ತಾನೂ ದುಡಿದರೆ, ಮಕ್ಕಳನ್ನು ಒಳ್ಳೆ ಶಾಲೆಯಲ್ಲಿ ಓದಿಸಬಹುದು. ಕೇಳಿದ್ದೆಲ್ಲವನ್ನು ಕೊಡಿಸಬಹುದು. ಗಂಡನ ಎದುರು ದುಡ್ಡಿಗಾಗಿ ಕೈ ಚಾಚುವ ಅಗತ್ಯವಿರುವುದಿಲ್ಲ ಅಂದುಕೊಳ್ಳುತ್ತಾಳೆ. ಅಷ್ಟೇ ಅಲ್ಲ, ತನ್ನ ಪದವಿ, ಹಳೆ ಉದ್ಯೋಗದ ಅನುಭವವನ್ನು ವ್ಯರ್ಥವಾಗಿಸಿ, ಮನೆಯಲ್ಲಿ ಕುಳಿತುಕೊಳ್ಳಲು ಆಕೆಗೆ ಇಷ್ಟವಿರುವುದಿಲ್ಲ.
ಅದು ಸುಲಭವೇ?
ಒಂದು ದೀರ್ಘ ವಿರಾಮದ ನಂತರ ಮತ್ತೆ ಕೆಲಸ ಗಿಟ್ಟಿಸಿಕೊಳ್ಳುವುದು, ಮೊದಲಿನಷ್ಟೇ ದಕ್ಷತೆಯಿಂದ ಕೆಲಸ ಮಾಡುವುದು ಸುಲಭವೇ? ಇಲ್ಲ, ಎನ್ನುತ್ತಿದ್ದಾರೆ ಅನೇಕ ಮಹಿಳೆಯರು. ಸರ್ಕಾರಿ ನೌಕರಿಯವರು ಮಾತ್ರ ತಾಯ್ತನದ ರಜೆ ಮುಗಿಸಿ, ಮೊದಲಿನಂತೆ ಕೆಲಸಕ್ಕೆ ಮರಳುತ್ತಾರೆ. ಆದರೆ, ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಈ ಅವಕಾಶ ಇರುವುದಿಲ್ಲ. ಹೊಸ ಕೆಲಸ ಹುಡುಕಿಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ, ಗ್ಯಾಪ್‌ನ ನಂತರ ಮಹಿಳೆಯರು ಸಂದರ್ಶನ ಎದುರಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುತ್ತಾರೆ ಹಾಗೂ ತಮ್ಮಲ್ಲಿರುವ ವೃತ್ತಿ ಕೌಶಲಗಳು ಬದಲಾದ ಕಾಲಕ್ಕೆ ಉಪಯೋಗಕ್ಕೆ ಬಾರದೆ ಉದ್ಯೋಗ ಕ್ಷೇತ್ರದಲ್ಲಿ ಅಪ್ರಸ್ತುತರಾಗುತ್ತಾರೆ. ಇದರಿಂದ ದೇಶದ ಜಿಡಿಪಿಗೆ ಹೊಡೆತ ಬೀಳುವುದಷ್ಟೇ ಅಲ್ಲ, ಮಹಿಳಾ ಸಬಲೀಕರಣದ ಪರಿಕಲ್ಪನೆಗೂ ದೊಡ್ಡ ಕೊಡಲಿಪೆಟ್ಟು ಬೀಳುತ್ತದೆ.
ಅಂಕಿ-ಅಂಶಗಳ ಪ್ರಕಾರ
ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ 2 ಕೋಟಿ ಭಾರತೀಯ ಮಹಿಳೆಯರು 2004-12ರ ಒಳಗೆ ಕೆಲಸ ಬಿಟ್ಟಿದ್ದಾರೆ. ಇದರಲ್ಲಿ 65-70% ಮಹಿಳೆಯರು ಮತ್ತೆ ಕೆಲಸಕ್ಕೆ ವಾಪಸಾಗಲಿಲ್ಲ. ಮಹಿಳೆಯರು ಕೆಲಸಕ್ಕೆ ಸೇರಿದಾಗ ಅವರಿಗೆ ನೀಡಿದ ತರಬೇತಿ ಹಾಗೂ ಅನುಭವದ ಪ್ರಯೋಜನವನ್ನು ಸಂಸ್ಥೆ ಇನ್ನೇನು ಪಡೆಯಬೇಕು ಎನ್ನುವಷ್ಟರಲ್ಲಿ ಅವರು ತಾಯ್ತನದ ಬ್ರೇಕ್ ಪಡೆಯುತ್ತಾರೆ. ಹಾಗಾಗಿ, ಮಹಿಳಾ ಉದ್ಯೋಗಿಗಳ ಮೇಲೆ ಹೆಚ್ಚು ಅವಲಂಬಿತರಾಗಲು, ಅವರ ತರಬೇತಿಗೆ ಖರ್ಚು ಮಾಡಲು ಐಟಿ ಕಂಪನಿಗಳು ಹಿಂದೇಟು ಹಾಕುವುದೂ ಇದೆಯಂತೆ.
ಇನ್ನು ಮಕ್ಕಳಾದ ನಂತರ ಕೆಲಸಕ್ಕೆ ಸೇರುವವರು, ಯಾವ ಸಮಯದಲ್ಲಿ ಬೇಕಾದರೂ ವೈಯಕ್ತಿಕ ಕಾರಣಗಳನ್ನು ನೀಡಿ ಕೆಲಸ ಬಿಡುವ ಅಪಾಯ ಇರುವುದರಿಂದ, ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಮದುವೆಯ ನಂತರ ಯಾವುದೇ ಅಡೆತಡೆ ಇಲ್ಲದೆ ಸಾಗುವ ಪುರುಷರ ವೃತ್ತಿ ಜೀವನ, ಮಹಿಳೆಯರ ವಿಷಯಕ್ಕೆ ಬಂದಾಗ ತಾರತಮ್ಯ ತೋರುವುದು ಸುಳ್ಳಲ್ಲ.
ಬದಲಾವಣೆ ಅಗತ್ಯ
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಜಾರಿಯಾಗಿರುವ ಕಾಯ್ದೆಗಳನ್ನು ಪಕ್ಕಕ್ಕೆ ಇಟ್ಟರೆ, ಮಹಿಳೆಯರ upskilling programmes ಅಥವಾ reskilling programmesಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕಬೇಕಾಗುವುದು ಅನಿವಾರ್ಯ. ಮಹಿಳೆಯರಿಗೆ ಮತ್ತೆ ಉದ್ಯೋಗದಲ್ಲಿ ತೊಡಗುವಂತೆ ಪ್ರೇರೇಪಿಸುವುದು, ಅದಕ್ಕೆ ತಕ್ಕ ಅವಕಾಶಗಳನ್ನು ಕಲ್ಪಿಸುವುದು ಹಿಂದೆಂದಿಗಿಂತಲೂ ಇಂದಿನ ಅಗತ್ಯವಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಐಬಿಎಂ ಇತ್ತೀಚೆಗೆ ಎರಡು ಲಕ್ಷ ಮಹಿಳೆಯರಿಗೆ STEM fields ನಲ್ಲಿ ತರಬೇತಿ ನೀಡಿತು. she roes, jobs for her, vmware ಮುಂತಾದ ಕಂಪನಿಗಳು, ಬ್ರೇಕ್‌ನ ನಂತರ ಕೆಲಸ ಮಾಡಲು ಮಹಿಳೆಯರಿಗೆ ಸೂಕ್ತ ತರಬೇತಿ ನೀಡುತ್ತಿವೆ.
ಇತ್ತೀಚೆಗೆ ಗೂಗಲ್ ಕೂಡಾ, ತಾಯಿಯಾದ ನಂತರ ಕೆಲಸ ಮಾಡಲು ಬಯಸುವವರಿಗೆ ಎಚ್‌ಟಿಎಂಎಲ್, ಜಾವಾ ಸ್ಕ್ರಿಪ್ಟ್, ಕೋಡಿಂಗ್ ಮುಂತಾದ ಡಿಜಿಟಲ್ ಅಪ್‌ಸ್ಕಿಲಿಂಗ್ ತರಬೇತಿಗಳನ್ನು ನೀಡಿ, ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದೆ. ಅಷ್ಟೇ ಅಲ್ಲದೆ, ಸಣ್ಣ ಮಕ್ಕಳಿರುವ ತಾಯಂದಿರು ಒತ್ತಡ ಕಡಿಮೆ ಮಾಡುವಂಥ ಕೆಲವು ಕ್ರಮಗಳನ್ನು (ಕೆಲಸದ ಸ್ಥಳದಲ್ಲಿಯೇ ಮಕ್ಕಳಿಗೆ ಚೈಲ್ಡ್ ಕೇರ್ ವ್ಯವಸ್ಥೆ ಇತ್ಯಾದಿ) ಕೈಗೊಂಡಿರುವುದು ಶ್ಲಾಘನೀಯ. ಯಾಕೆಂದರೆ, ಇದು ಸೆಕೆಂಡ್ ಇನ್ನಿಂಗ್ ಶುರು ಮಾಡಲಿರುವ ಮಹಿಳೆಯರ ಸಮಸ್ಯೆಯಷ್ಟೇ ಅಲ್ಲ. ಸಾಮಾಜಿಕ ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಸಮಾಜದ ಪಾಲಿಗೆ ಬದಲಾವಣೆ ತರಬಲ್ಲ ವಿಚಾರವಿದು.
ಮಹಿಳೆಯರೇ, ಮೊದಲು ನೀವು ರೆಡಿಯಾಗಿ
ಯಾವುದೇ ಮಹಿಳೆ ಬ್ರೇಕ್‌ನ ನಂತರ ಮತ್ತೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸೂಕ್ತ ತಯಾರಿ ಹಾಗೂ ಪ್ಲಾನಿಂಗ್ ಬಹಳ ಮುಖ್ಯ. ಮೊದಲಿನ ಉದ್ಯೋಗ ಕ್ಷೇತ್ರದಲ್ಲಿಯೇ ಮುಂದುವರಿಯಬೇಕೋ, ಆಸಕ್ತಿ ಮತ್ತು ಕೌಶಲಕ್ಕೆ ತಕ್ಕಂತೆ ಪರ್ಯಾಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೋ ಎಂಬ ಬಗ್ಗೆ ಸ್ಪಷ್ಟ ಅರಿವಿರಬೇಕು. ಬದಲಾದ ಕಾಲಮಾನಕ್ಕೆ ಅಗತ್ಯವಾದ ಔದ್ಯೋಗಿಕ ತರಬೇತಿಗಳನ್ನು ಪಡೆಯುವುದು ಉತ್ತಮ. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬಯಸುವವರು ಡಿಜಿಟಲ್ ಲರ್ನಿಂಗ್ ಟೂಲ್ಸ್, ಎಜ್ಯುಕೇಶನಲ್ ಆ್ಯಪ್ಸ್, ಆನ್‌ಲೈನ್ ಟ್ಯೂಟರಿಂಗ್, ಸ್ಮಾರ್ಟ್ ಟೀಚಿಂಗ್, ಮುಂತಾದ ತರಬೇತಿ ಪಡೆದುಕೊಳ್ಳಬಹುದು. ಐಟಿ, ಬಿಟಿ ಅಥವಾ ತಾಂತ್ರಿಕ ಕ್ಷೇತ್ರದವರಿಗೂ ಈಗ ಸಾಕಷ್ಟು ಅವಕಾಶಗಳು ಇವೆ. ಇನ್ನು, ಶೈಕ್ಷಣಿಕ ಹಿನ್ನೆಲೆ, ಹಳೆಯ ಕೆಲಸದ ಅನುಭವವನ್ನು ಪಕ್ಕಕ್ಕಿಟ್ಟು, ಬೇರೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಅನ್ನುವವರಿಗೆ ಸೆಕೆಂಡ್ ಇನ್ನಿಂಗ್ಸ್ ಸ್ವಲ್ಪ ಸುಲಭವಾಗಬಹುದು. ಅಂಥ ಸಂದರ್ಭದಲ್ಲಿ ನೀವು ಹೆಚ್ಚು ಓದಿರಬೇಕಾದ ಅಗತ್ಯವಿಲ್ಲ. ಆ ಸಮಯಕ್ಕೆ ಸಿಕ್ಕ ಅವಕಾಶವನ್ನು ನೀವು ಹೇಗೆ ಉಪಯೋಗಿಸಿಕೊಳ್ಳುವಿರಿ ಎಂಬುದರ ಮೇಲೆ ಕೆರಿಯರ್ ರೀಸ್ಟಾರ್ಟ್ ಆಗುತ್ತದೆ.
ಹವ್ಯಾಸದಿಂದ ಕೆಲಸ
ಮದುವೆಯ ನಂತರ ತಮ್ಮ ಹವ್ಯಾಸಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಿಕೊಂಡವರಿದ್ದಾರೆ. ಸಂಗೀತ-ನೃತ್ಯ. ಚಿತ್ರಕಲೆ ಮುಂತಾದ ಕಲೆಯಲ್ಲಿ ಪರಿಣತರಾದವರು ಸ್ವಂತ ಕಲಾಶಾಲೆಗಳನ್ನು ತೆರೆಯಬಹುದು. ಸಾಹಿತ್ಯ, ಬರವಣಿಗೆಯಲ್ಲಿ ಆಸಕ್ತಿ ಇದ್ದವರು ಮನೆಯಲ್ಲಿ ಕುಳಿತೇ ಬರವಣಿಗೆ ಮೂಲಕ ಹಣ ಸಂಪಾದಿಸುವ ಅವಕಾಶವೂ ಇದೆ. ಸ್ವಂತವಾಗಿ ಬ್ಯುಸಿನೆಸ್ (ಬ್ಯೂಟಿ ಪಾರ್ಲರ್, ಟೈಲರಿಂಗ್, ಹೋಟೆಲ್) ಶುರು ಮಾಡುವವರು, ಸಮಾನ ಮನಸ್ಕರೊಂದಿಗೆ ಚರ್ಚಿಸಿ, ಅಗತ್ಯ ಕೌಶಲಗಳನ್ನು ಪಡೆದು ಉದ್ದಿಮೆ ಶುರು ಮಾಡಬಹುದು.
ಮಾನಸಿಕ ಸಿದ್ಧತೆ
ಮಕ್ಕಳಾದ ನಂತರ ಮಹಿಳೆಯರು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ದುರ್ಬಲರಾಗಬಹುದು. ಹೆಚ್ಚಿದ ಜವಾಬ್ದಾರಿಗಳಿಂದ ಬಹಳ ಬೇಗ ಒತ್ತಡಕ್ಕೆ ಸಿಲುಕಬಹುದು. ಇಂಥ ಸಂದರ್ಭದಲ್ಲಿ, ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಾಕಷ್ಟು ಮಾನಸಿಕ ಸಿದ್ಧತೆ, ಸಮಯದ ಹೊಂದಾಣಿಕೆ ಬೇಕಾಗುತ್ತದೆ. ಮಕ್ಕಳ ಜವಾಬ್ದಾರಿಯನ್ನು ಸರಿಯಾದ ಕೈಗಳಿಗೆ ಒಪ್ಪಿಸಿ, ಅಗತ್ಯ ಬಿದ್ದಲ್ಲಿ ರಜೆ ಸಿಗುವಂಥ ಕೆಲಸ ಹಿಡಿಯುವುದು ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ, ಸಣ್ಣಪುಟ್ಟ ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕು. ಇಲ್ಲದಿದ್ದರೆ ವೃತ್ತಿ- ಕುಟುಂಬ ಎರಡಕ್ಕೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಮುಂದೊಂದು ದಿನ, ಮಕ್ಕಳಿಗೆ ಗಮನ ಕೊಡಲಾಗಲಿಲ್ಲ ಎಂದು ಬೇಸರ ಮಾಡುವ ಬದಲು, ಮೊದಲೇ ಮಾನಸಿಕವಾಗಿ ಗಟ್ಟಿಯಾಗುವುದು ಒಳಿತಲ್ಲವೇ?
ಸಹಾಯ ಪಡೆಯಿರಿ
ಉದ್ಯೋಗದ ವಿಚಾರದಲ್ಲಿ ಕೆರಿಯರ್ ಕೌನ್ಸಲರ್‌ಗಳ ಸಲಹೆ ಸೂಚನೆ ಪಡೆಯಬಹುದು. ವೃತ್ತಿ ಬದಲಾವಣೆಯ ಯೋಚನೆಯಲ್ಲಿರುವವರು ಯಾವೆಲ್ಲಾ ಹೊಸ ಕೌಶಲಗಳನ್ನು ಕಲಿಯಬೇಕು, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪಡೆದರೆ ಕೆಲಸ ಸಿಗಬಹುದೇ, ಸಂದರ್ಶನಗಳನ್ನು ಎದುರಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಸಲಹೆ ಪಡೆದು, ಆ ನಿಟ್ಟಿನಲ್ಲಿ ಮುಂದುವರಿದರೆ ಸೆಕೆಂಡ್ ಇನ್ನಿಂಗ್ಸ್ ಕಷ್ಟವಲ್ಲ.
ಉಲ್ಲಾಸ್ ವಿಶ್ವನಾಥ್ ಕೆ.ಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.