ಹಳೇ ಬೇರು ಹೊಸ ಚಿಗುರುಗಳ ನೃತ್ಯ ಸಾಂಗತ್ಯ
63ರ ಹರೆಯದ ಕಲಾವಿದೆಯ ಪ್ರಸ್ತುತಿ
Team Udayavani, Dec 6, 2019, 5:15 AM IST
ಈ ಈರ್ವರು ಕಲಾವಿದೆಯರ ನೃತ್ಯ ಸಾಂಗತ್ಯವು ವೇಣುನಾದ ಎಂಬ ನವೀನ ಹಿನ್ನೆಲೆ ಸಂಗೀತ, ಬರೀ ಕೊಳಲಿನ ನಾದ ಮಾತ್ರ, ಗಾಯನ ಇಲ್ಲದೆ ನೃತ್ಯಕ್ಕೆ ಹೆಚ್ಚು ಒತ್ತುಕೊಟ್ಟು ಶಾಸ್ತ್ರೀಯತೆಯನ್ನು ಮೆರೆಯಿತು.
ಯಾವುದೇ ಕಲೆಯನ್ನು ಅಭ್ಯಸಿಸುತ್ತಾ ಅದರಲ್ಲೇ ತೊಡಗಿಕೊಂಡಿರುವ ಓರ್ವ ವ್ಯಕ್ತಿ ಆ ಕಲೆಯನ್ನು ಪೂರ್ಣ ಮನಸ್ಸಿನಿಂದ , ಆಸಕ್ತಿಯಿಂದ, ಶ್ರದ್ಧೆ ಬದ್ಧತೆಗಳೊಂದಿಗಿನ ಕಠಿನತಮ ಪರಿಶ್ರಮದಿಂದ ಆಪ್ತವಾಗಿಸಿಕೊಂಡಾಗ ಅದನ್ನು ತನ್ನ ಸ್ವಸಂತೋಷ , ಆತ್ಮತೃಪ್ತಿಗಾಗಿ ಪ್ರದರ್ಶಿಸಬೇಕೆಂಬ ಅಂತರಾಳದಲ್ಲಿ ಬಚ್ಚಿಟ್ಟುಕೊಂಡ ತುಡಿತ ಸಹಜ. ಈ ತೀವ್ರ ತುಡಿತದ ಪ್ರಕಟನೆ ವಯಸ್ಸು , ಲಿಂಗ , ಜಾತಿ , ರೂಪ, ಪರಿಸರದ ಪ್ರಭಾವ, ರಸಿಕರ ಅಭಿಪ್ರಾಯ ಇಂಥ ಹಲವಾರು ವಿಚಾರಗಳನ್ನು ಗೌಣವಾಗಿಸಿ ತಾನು ತನ್ನ ಪ್ರೀತಿಯ ಕಲೆಯ ಪ್ರದರ್ಶನ ಎಂಬ ಅವಿನಾಭಾವದ ಸಾಂಗತ್ಯವೇ ಗೆದ್ದಾಗ ಆ ಕಲಾವಿದೆ ಯಾವುದಕ್ಕೂ ಸಡ್ಡು ಹೊಡೆಯದೆ ತನ್ನ ಕಲಾ ಪ್ರದರ್ಶನವನ್ನು ಸೊಗಸಾಗಿ ಮಾಡುವುದು ಅಸಾಧ್ಯವಲ್ಲ ಎಂಬುದನ್ನು ಮೀನಾಕ್ಷಿ ರಮೇಶ್ ಠಾಕೂರ್‌ರವರು ತಮ್ಮ ಭರತನಾಟ್ಯ ಪ್ರದರ್ಶನದಿಂದ ವಿಷದಪಡಿಸಿದರು. 63ರ ಹರೆಯದ ಮೀನಾಕ್ಷಿ 50ನೇ ವಯಸಿನಲ್ಲಿ ಬರೋಡಾದಲ್ಲಿ ಭರತನಾಟ್ಯದ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದರು. ಅನಂತರ ಬೆಂಗಳೂರಿಗೆ ಬಂದಾಗ ನೃತ್ಯಾಭ್ಯಾಸವನ್ನು ಮುಂದುವರಿಸಿದರು.4 ವರ್ಷಗಳಿಂದ ಉಡುಪಿ ನೃತ್ಯ ನಿಕೇತನದಲ್ಲಿ ಕಲಿಕೆ ಮುಂದುವರಿಸಿದ್ದಾರೆ.
ವಯೋ ಸಹಜತೆಯಿಂದಾಗಿ ಉಂಟಾಗುವ ಮುಜುಗರವನ್ನು ಕಡಿಮೆ ಮಾಡಲು ಮೊಮ್ಮಗಳ ಪ್ರಾಯದ ಸುರಭಿ ಸುಧೀರ್ ಅವರನ್ನು ಜೊತೆಯಾಗಿರಿಸಿಕೊಂಡು ಇತ್ತೀಚೆಗೆ ಕೃಷ್ಣಮಠದ ರಾಜಾಂಗಣದಲ್ಲಿ ನಿರ್ವಹಿಸಿದ ನೃತ್ಯ ಸಾಂಗತ್ಯವು ಅಪೂರ್ವ ಹಳೇ ಬೇರು ಹೊಸ ಚಿಗುರಿನ ನೃತ್ಯ ಪ್ರದರ್ಶನವಾಯಿತು.
ಪುಷ್ಪಾಂಜಲಿ, ಗಣೇಶ ವಂದನೆ, ವೇಣು ನಾದ, ದೇವಿ ಸ್ತುತಿ, ಕೋಳೂರ ಕೊಡಗೂಸು, ಜಗದೋದ್ಧಾರನಾ, ಬೂಂದನ್ ಬೂಂದನ್ ಹಾಗೂ ಸಾಯಿಬಾಬಾರ ಮಂಗಳ ಈ ಪ್ರದರ್ಶನದ ನೃತ್ಯಬಂಧಗಳಾಗಿದ್ದವು. ವರಮುರಾಗದ ಪುಷ್ಪಾಂಜಲಿ ಹಾಗೂ ಗಣೇಶಸ್ತವದ ಅಭಿನಯವು ಅಡವುಗಳ ವಿನ್ಯಾಸ, ಚುರುಕು ಗತಿ ಹಾಗೂ ಗಣಪತಿಯ ವಿವಿಧ ಭಂಗಿ, ನಡಿಗೆ ಹಾಗೂ ಹಸ್ತಗಳನ್ನು ಮೀನಾಕ್ಷಿಯವರು ಜೆನ್ನಾಗಿ ನಿರ್ವಹಿಸಿದರು. ಪ್ರಾರಂಭದಲ್ಲಿ ತುಸು ವಿಚಲಿತರಾದಂತೆ ಕಂಡರೂ ಮುಂದೆ ಇಡೀ ನೃತ್ಯವನ್ನು ಕಳೆಗಟ್ಟಿಸಿದರು. ಸ್ವಾಮಿ ಬ್ರಹ್ಮಾನಂದ ದುರ್ಗಾ ರಾಗ ಆದಿತಾಳದ ಜಯ ದುರ್ಗೆ ಕೃತಿಯನ್ನು ಮೀನಾಕ್ಷಿಯವರು ಭಕ್ತಿಭಾವದಿಂದ ದುರ್ಗಾ ಮಾತೆಯ ರೌದ್ರ ಸೌಮ್ಯ ರೂಪಗಳನ್ನೂ, ನವದುರ್ಗೆಯರ ಭಂಗಿಗಳನ್ನೂ ಜತಿಗಳು ಹಾಗೂ ಸಣ್ಣ ಸಂಚಾರಿ ಭಾವಗಳೊಂದಿಗೆ ಲಯ ಹಾಗೂ ಅಭಿನಯವನ್ನು ಸಮ್ಮಿಳಿತಗೊಳಿಸಿ ನರ್ತಿಸಿದರು.
ಈ ಈರ್ವರು ಕಲಾವಿದೆಯರ ನೃತ್ಯ ಸಾಂಗತ್ಯವು ವೇಣುನಾದ ಎಂಬ ನವೀನ ಹಿನ್ನೆಲೆ ಸಂಗೀತ, ಬರೀ ಕೊಳಲಿನ ನಾದ ಮಾತ್ರ, ಗಾಯನ ಇಲ್ಲದೆ ನೃತ್ಯಕ್ಕೆ ಹೆಚ್ಚು ಒತ್ತುಕೊಟ್ಟು ಶಾಸ್ತ್ರೀಯತೆಯನ್ನು ಮೆರೆಯಿತು. ಗಂಭೀರನಾಟ ಆದಿತಾಳದ ಈ ನಿನಾದವನ್ನು ರಚಿಸಿ ರಾಗ ಸಂಯೋಜಿಸಿ ಕಲಾವಿದೆಯರ ನೃತ್ಯಕ್ಕೆ ಪೋಷಣೆ ಒದಗಿಸಿದವರು ವಿ| ಸತೀಶ್ ಅಮ್ಮಣ್ಣಾಯರು.
ಹರಿಹರನ ರಗಳೆಯಿಂದ ಆರಿಸಲ್ಪಟ್ಟ ಕೋಳೂರ ಕೊಡಗೂಸು ಒಂದು ದೃಶ್ಯ ಕಾವ್ಯದಂತೆ ನಾಟಕೀಯವಾಗಿ ಭರತನಾಟ್ಯ ಮಾಧ್ಯಮದಲ್ಲಿ ನಿರ್ವಹಿಸಲ್ಪಟ್ಟಿತು. ಪುಟ್ಟ ಬಾಲಕಿಯಲ್ಲಿ ಪರಮೇಶ್ವರನ ಬಗ್ಗೆ ಭಕ್ತಿ ಹುಟ್ಟಿಸುವ ತಾಯಿ, ಮುಂದೆ ಆ ಬಾಲಕಿಯು ಪರಮೇಶ್ವರನ ದರ್ಶನಕ್ಕೆ ತವಕಿಸುವ ಪರಿ, ಕೊನೆಗೆ ಈಶ್ವರನ ಸಾನಿಧ್ಯವನ್ನು ಪಡೆಯುವ ಕಥಾನಕದಿಂದ ಕೂಡಿದ ಈ ನೃತ್ಯಬಂಧ ಅವರ ನಿರ್ದೇಶನ , ಸಂಗೀತ ಹಾಗೂ ಕಲಾವಿದೆಯರ ನವಿರಾದ ಅಭಿನಯದಿಂದ ಕಂಗೊಳಿಸಿತು.
ರಾಜಸ್ಥಾನಿ ಭಾಷೆಯ ಸೊಗಡನ್ನು ವರ್ಣಿಸಿದ ಬೂಂದನ್ ಬೂಂದನ್ ಎಂಬ ಮಳೆ ನೃತ್ಯ. ಇಳಿ ವಯಸ್ಸಿ ನಲ್ಲಿ ಪತಿ ಯ ಬರುವಿಕೆಗಾಗಿ ಕಾತರಿಸುತ್ತಿರುವ ಅಜ್ಜಿ, ಮುದ್ದಿನ ಚೆ ಲ್ಲಾಟಗಳಿಂದ ಅವ ಳನ್ನು ಸಂತೈಸುವ ಮೊಮ್ಮಗಳ ಕಥಾಹಂದರವನ್ನು ಈ ಹಾಡಿನಲ್ಲಿ ಪ್ರಸ್ತುತಪಡಿಸಲಾಯಿತು.
ಸಾಮಾನ್ಯವಾಗಿ ರಂಗದಲ್ಲಿ ಸಂಚಾರಿಭಾವಗಳಿಂದ ಯಶೋದೆ -ಬಾಲಕೃಷ್ಣರ ಸಂಬಂಧವನ್ನು ವರ್ಣಿಸುವ ಪುರಂದರದಾಸರ ಕೃತಿ ಜಗದೋದ್ಧಾರನ ಕಲ್ಪನೆಯನ್ನು ಶ್ರೀಕೃಷ್ಣನ ಹೆತ್ತಮ್ಮ ದೇವಕಿಯ ದೃಷ್ಟಿಯಿಂದ ಅವಲೋಕಿಸುವ ಯಶೋದೆ- ಕೃಷ್ಣರ ಸಂಬಂಧವನ್ನು ಮೆಚ್ಚುವ, ದುಃಖೀಸುವ , ಹತಾಶಭಾವಗಳನ್ನು ವ್ಯಕ್ತಪಡಿಸುವ ಅಪರೂಪದ ಪರಿಕಲ್ಪನೆಯನ್ನು 11ರ ಹರೆಯದ ಸುರಭಿ ಪ್ರಬುದ್ಧವಾಗಿ ಅಭಿನಯಿಸಿದರು. ಮೀನಾಕ್ಷಿಯವರು ಈ ವಯಸ್ಸಿನಲ್ಲಿ ನೀಡಿದ ನೃತ್ಯ ಪ್ರದರ್ಶನವನ್ನು ವಿಮರ್ಶಿಸುವುದು ಸಾಧುವಲ್ಲ. ಅವರ ಈ ಶ್ರದ್ಧೆ, ಹುಮ್ಮಸ್ಸಿಗೆ ನಾವು ತಲೆಬಾಗಬೇಕು. ವಿಭಿನ್ನ ಪರಿಸರ, ಭಾಷೆ, ಕರ್ಟಾಟಕಿ ಪದ್ಧತಿಯ ಸಂಗೀತ, ದಕ್ಷಿಣ ಭಾಗದ ಭರತನಾಟ್ಯ ನೃತ್ಯ ಪದ್ಧತಿಯನ್ನು ತನ್ನೊಳಗೆ ಆವರಿಸಿಕೊಂಡು ಆಪ್ತವಾಗಿಸಿ ತಾದಾತ್ಮéಭಾವದಿಂದ ಛಲತೊಟ್ಟು ಪ್ರದರ್ಶಿಸಿದ್ದು ಒಂದು ಅಪೂರ್ವ ಸಾಹಸವೇ ಸರಿ.
ವಿ. ಪ್ರತಿಭಾ ಎಂ.ಎಲ್. ಸಾಮಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.