ಬೆಳಗಾವಿ: ಉಪಸಮರದ ಮತಎಣಿಕೆಗೆ ಸರ್ವ ಸಿದ್ದತೆ
Team Udayavani, Dec 8, 2019, 1:20 PM IST
ಬೆಳಗಾವಿ: ಜಿಲ್ಲೆಯ ಮೂರು ಮತ ಕ್ಷೇತ್ರಗಳ ಮತ ಎಣಿಕೆ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ನಾಳೆ ಸೋಮವಾರ ನಡೆಯಲಿದ್ದು, ಭದ್ರತೆ ಸೇರಿದಂತೆ ಮತ ಎಣಿಕೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಮತ ಎಣಿಕೆ ಸಿದ್ಧತೆ ಕುರಿತು ಭಾನುವಾರ ಮತ ಎಣಿಕೆ ಕೇಂದ್ರದ ಆವರಣದ ಮಾಧ್ಯಮ ಕೇಂದ್ರದಲ್ಲಿ ನಡೆದ ಎಲ್ಲ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರತೆ, ಪಾರ್ಕಿಂಗ್, ಮತ ಎಣಿಕೆ ಸಿಬ್ಬಂದಿ ಗುರುತಿನಚೀಟಿ, ಅಂತರ್ಜಾಲ ಸಂಪರ್ಕ, ಅಗತ್ಯ ಉಪಕರಣಗಳನ್ನು ಒದಗಿಸುವಿಕೆ, ಅಂಚೆ ಮತ ಎಣಿಕೆ, ಚುನಾವಣಾ ವೀಕ್ಷಕರ ಕೊಠಡಿ, ಮಾಹಿತಿ ಕೇಂದ್ರ ವ್ಯವಸ್ಥೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಸಾರ್ವಜನಿಕರಿಗೆ ಮತ ಎಣಿಕೆ ಮಾಹಿತಿಯನ್ನು ನೀಡಲು ಆರ್.ಪಿ.ಡಿ. ಮುಖ್ಯದ್ವಾರ ಅಥವಾ ಕ್ರಾಸ್ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಪ್ರತಿ ಮತಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿರುತ್ತದೆ. ಆಯಾ ಮತಕ್ಷೇತ್ರಗಳ ಮತಗಟ್ಟೆ ಸಂಖ್ಯೆ ಆಧಾರದಲ್ಲಿ ಗರಿಷ್ಠ 21 ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಚುನಾವಣಾ ಆಯೋಗದ ಅನುಮತಿಯ ನಂತರವೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ಡಾ.ಬೊಮ್ಮನಹಳ್ಳಿ ಅವರು ಹೇಳಿದರು.
8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಕೂಡ ಏಜೆಂಟರನ್ನು ನಿಯೋಜಿಸಿರುತ್ತಾರೆ. ಮತ ಎಣಿಕೆ ಕುರಿತು ಚುನಾವಣಾಧಿಕಾರಿ ನೀಡುವ ವಿವರವನ್ನು ಆಯಾ ಕ್ಷೇತ್ರದ ಸಾಮಾನ್ಯ ವೀಕ್ಷಕರು ದೃಢೀಕರಿಸಿದ ಬಳಿಕ ಪ್ರತಿ ಸುತ್ತಿನ ಎಣಿಕೆ ವಿವರವನ್ನು ಪ್ರಕಟಿಸಲಾಗುತ್ತದೆ ಎಂದರು.
ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಯಾರೂ ಮೊಬೈಲ್ ಫೋನ್ ಗಳನ್ನು ತರಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾಧ್ಯಮದವರಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದ್ದು, ಅವರು ಮಾಧ್ಯಮ ಕೇಂದ್ರಗಳಲ್ಲಿ ಮಾತ್ರ ಮೊಬೈಲ್ ಬಳಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಮತ ಎಣಿಕೆ ಕೊಠಡಿಗಳಿಗೆ ಮೊಬೈಲ್ ಫೋನ್ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಡಾ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದರು.
ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ಮಾತನಾಡಿ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 750 ಜನರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಒಟ್ಟಾರೆ ಶಾಂತಿಯುತ ಮತ ಎಣಿಕೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಸೀಮಾ ಲಾಟ್ಕರ್, ಯಶೋಧಾ ಒಂಟಗೋಡಿ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಗೋಕಾಕ ಮತಕ್ಷೇತ್ರದ ಚುನಾವಣಾಧಿಕಾರಿ ಭೂಬಾಲನ್, ಅಥಣಿ ಮತಕ್ಷೇತ್ರದ ಜಿಲಾನಿ ಮೊಖಾಶಿ, ಕಾಗವಾಡ ಚುನಾವಣಾಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ಮೊದಲಾದವರು ಉಪಸ್ಥಿತರಿದ್ದರು.