ಅಭಿವೃದ್ಧಿ ಕಾಣದ ಕುಕ್ಕುದಕಟ್ಟೆ – ಕಾನಂಗಿ ರಸ್ತೆ
ಡಾಮರು ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿ ಪರಿವರ್ತನೆ; ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ
Team Udayavani, Dec 9, 2019, 5:43 AM IST
ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದ ಕಟ್ಟೆಯಿಂದ ಕಾನಂಗಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಅಭಿವೃದ್ಧಿಗೆ ದಶಕಗಳಿಂದ ಮನವಿ ನೀಡುತ್ತ ಬಂದರೂ ರಸ್ತೆ ಅಭಿವೃದ್ಧಿ ಕಾಣದೆ ಸ್ಥಳೀಯರು ಸಂಕಷ್ಟಪಡುವಂತಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ಇದಕ್ಕೆ ಸುಮಾರು 20 ವರ್ಷಗಳ ಹಿಂದೆ ಡಾಮರು ಹಾಕಲಾಗಿದ್ದು ಈಗ ಡಾಮರು ಸಂಪೂರ್ಣ ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿದೆ.
ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿದು ಬೃಹತ್ ಹೊಂಡ ನಿರ್ಮಾಣವಾಗಿ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ಕಳೆದ ಏಳು ವರ್ಷಗಳಿಂದ ರಸ್ತೆ ನಿರ್ವಹಣೆ ಇಲ್ಲದೆ, ತೇಪೆ ಕಾರ್ಯವೂ ನಡೆಯದೆ ವಾಹನ ಸಂಚಾರವೇ ಅಸಾಧ್ಯವಾಗಿದೆ.
ಪ್ರಮುಖ ರಸ್ತೆ
ಪೆಲತ್ತಿಜೆ, ಕಾನಂಗಿ, ಪಾಲಿಜೆ, ಎಲ್ಲಿಬೆಟ್ಟು, ಬೆಂಗಾಲ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪಾಲಿಜೆ ಭಾಗದಲ್ಲಿ ಪರಿಶಿಷ್ಟ ಜಾತಿಯ ಕಾಲನಿ ಇದ್ದು ಇದನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಸುಮಾರು 4 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆಯಲ್ಲಿ ಡಾಮರು ಎದ್ದುಹೋಗಿ ಜಲ್ಲಿಕಲ್ಲು, ಗುಂಡಿಗಳಿಗೆ ಹಾಕಿದ ಮಣ್ಣು ಕಾಣುತ್ತಿದೆ. ರಸ್ತೆಯಲ್ಲಿ ನಿರ್ಮಾಣವಾಗಿ ರುವ ಹೊಂಡಗಳಿಗೆ ತಾತ್ಕಾಲಿಕ ಸಂಚಾರಕ್ಕೆ ಪಂಚಾಯತ್ ಮಣ್ಣನ್ನು ಹಾಕಿದ್ದು ಬೇಸಗೆಯಲ್ಲಿ ರಸ್ತೆಯುದ್ದಕ್ಕೂ ಧೂಳು ಆವೃತ ವಾಗಿ ಸ್ಥಳೀಯರಿಗೆ ಸಂಚಾರ ನಡೆಸಲು ಕಷ್ಟಸಾಧ್ಯವಾಗಿದೆ. ಕಾನಂಗಿ ಭಾಗದ ಜನತೆ ತಮ್ಮ ನಿತ್ಯ ವ್ಯವಹಾರಕ್ಕಾಗಿ ಕಾರ್ಕಳ, ಹಿರ್ಗಾನ ಪೇಟೆಗೆ ತೆರಳಲು ಈ ರಸ್ತೆ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿವೆ. ದಶಕಗಳಿಂದ ರಸ್ತೆಗೆ ಮರುಡಾಮರು ಮಾಡುವಂತೆ ಜನಪ್ರತಿನಿಧಿ, ಇಲಾಖಾಧಿ ಕಾರಿಗಳಿಗೆ ಮನವಿ ನೀಡಿದರೂ ಯಾವುದೇ
ಪ್ರಯೋಜನವಿಲ್ಲದಂತಾಗಿದೆ.ಪ್ರತೀ ಗ್ರಾಮಸಭೆಯಲ್ಲಿ ಈ ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಣಯ ಕೈಗೊಂಡರೂ ಯಾವುದೇ ಕಾಮಗಾರಿ ನಡೆದಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಅತಿ ಗ್ರಾಮೀಣ ಭಾಗವಾಗಿರುವ ಕಾನಂಗಿ ಪ್ರದೇಶಕ್ಕೆ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಾತ್ರ ಬಸ್ ಸೌಲಭ್ಯವಿದ್ದು ಇತರ ಸಮಯದಲ್ಲಿ ಅಟೋಕ್ಷಾ ಅವಲಂಬಿಸಬೇಕಾಗಿದೆ. ಆದರೆ ಅಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಎರಡು ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಜನಪ್ರತಿನಿಧಿಗಳು ತಿಳಿಸಿದ್ದರೂ ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ ರಸ್ತೆ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕುಸಿಯುವ ಹಂತದಲ್ಲಿ ಕಿರು ಸೇತುವೆ
ಈ ರಸ್ತೆ ನಡುವೆ ಕಿರು ಸೇತುವೆ ಯೊಂದಿದ್ದು ನಿರ್ವಹಣೆಯಿಲ್ಲದೆ ಕುಸಿಯುವ ಹಂತದಲ್ಲಿದೆ. ಕಿರು ಸೇತುವೆಯ ಇಕ್ಕೆಲಗಳ ತಡೆಬೇಲಿ ಹಾನಿಗೀಡಾಗಿದ್ದು ಯಾವುದೇ ಸಂದರ್ಭ ಕುಸಿಯುವ ಹಂತದಲ್ಲಿದೆ.
ಕಾಮಗಾರಿಗೆ ಭರವಸೆ
ಕುಕ್ಕುದಕಟ್ಟೆ ಕಾನಂಗಿ ರಸ್ತೆ ಅಭಿವೃದ್ಧಿಪಡಿಸುವಂತೆ ದಶಕಗಳಿಂದ ಮನವಿ ನೀಡುತ್ತ ಬಂದಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಬಗ್ಗೆ ಶಾಸಕರಲ್ಲಿ ಮತ್ತೆ ಮನವಿ ಮಾಡಲಾಗಿದ್ದು 2020ರ ಜನವರಿ ಅಂತ್ಯದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ. ಕಾಮಗಾರಿ ಆರಂಭಗೊಳ್ಳದಿದ್ದಲ್ಲಿ ಸ್ಥಳೀಯ ಜನರೊಡನೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.
-ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಗ್ರಾ. ಪಂ. ಹಿರ್ಗಾನ
ಏಕೈಕ ಸಂಪರ್ಕ ರಸ್ತೆ ಇದು
ಕಾನಂಗಿ ಭಾಗದ ಜನತೆಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಕಳೆದ 10 ವರ್ಷಗಳಿಂದ ಸಂಕಷ್ಟಪಡುವಂತಾಗಿದೆ. ಶೀಘ್ರ ಕಾಮಗಾರಿ ಆರಂಭಗೊಂಡು ಮುಂದಿನ ಮಳೆಗಾಲದ ಒಳಗೆ ರಸ್ತೆ ದುರಸ್ತಿ ನಡೆಸಿ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.
-ಪ್ರವೀಣ್, ಸ್ಥಳೀಯರು,ಮಾಜಿ ಗ್ರಾ.ಪಂ ಸದಸ್ಯ
ಪ್ರಸ್ತಾವನೆ ಸಲ್ಲಿಸಲಾಗಿದೆ
ಕಾನಂಗಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಅಭಿವೃದ್ಧಿ ನಡೆಸುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಮಧು ಕುಮಾರ್,
ಕಿರಿಯ ಎಂಜಿನಿಯರ್, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.