ಒಂದು ಕೋ.ರೂ. ಪ್ರಸ್ತಾವನೆಗೆ ಸ್ಪಂದಿಸದ ಸರಕಾರ
ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಉತ್ಸವ
Team Udayavani, Dec 9, 2019, 5:16 AM IST
ಮಹಾನಗರ: ಮಂಗಳೂರಿನಲ್ಲಿ ಸರ್ಫಿಂಗ್ ಕ್ರೀಡೆಗೆ ಹೊಸ ಆಯಾಮ ತಂದು ಕೊಟ್ಟಿರುವ ಸಸಿಹಿತ್ಲು ಸರ್ಫಿಂಗ್ ಕ್ರೀಡೆ ಹಾಗೂ ಸರ್ಫಿಂಗ್ ಉತ್ಸವ ಆಯೋಜನೆಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಸರಕಾರಕ್ಕೆ ಒಂದು ಕೋ.ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದಕ್ಕೆ ಇದುವರೆಗೆ ಇನ್ನೂ ಪೂರಕ ಸ್ಪಂದನೆ ದೊರಕಿಲ್ಲ. ಹೀಗಾಗಿ, ಕಳೆದ ವರ್ಷ ರದ್ದುಗೊಂಡಿದ್ದ ಸರ್ಫಿಂಗ್ ಉತ್ಸವ ಈ ಬಾರಿಯೂ ನಡೆಯುವ ಬಗ್ಗೆ ಅನಿಶ್ಚಿತತೆ ಆವರಿಸಿದೆ.
ಕಳೆದ ವರ್ಷ ರದ್ದುಗೊಂಡಿದ್ದ ಸರ್ಫಿಂಗ್ ಕ್ರೀಡೆ, ಸರ್ಫಿಂಗ್ ಉತ್ಸವವನ್ನು 2020ರ ಜನವರಿಯಲ್ಲಿ ನಡೆಸುವ ಉದ್ದೇಶದಿಂದ ಈ ವರ್ಷದ ಆಗಸ್ಟ್ ನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಸರಕಾರಕ್ಕೆ ಒಂದು ಕೋ.ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಯಲ್ಲಿ ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಉತ್ಸವದ ಆವಶ್ಯಕತೆ, ಅದರಿಂದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆಗುವ ಲಾಭ, ಈ ಹಿಂದಿನ ಸರ್ಫಿಂಗ್ ಉತ್ಸವಗಳಿಗೆ ದೊರಕಿದ್ದ ಭಾರಿ ಜನಸ್ಪಂದನೆ ಬಗ್ಗೆ ವಿವರಿಸಲಾಗಿತ್ತು. ಆದರೆ ಪ್ರಸ್ತಾವನೆ ಸಲ್ಲಿಕೆಯಾಗಿ 4 ತಿಂಗಳುಗಳು ಕಳೆದರೂ ಸರಕಾರದಿಂದ ಇದಕ್ಕೆ ಈವರೆಗೆ ಅನುಮೋದನೆ ಲಭಿಸಿಲ್ಲ.
ತಯಾರಿಗೆ ಕಾಲಾವಕಾಶ ಅಗತ್ಯ
ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವ ಆಯೋಜನೆಗೆ ಬಹಳಷ್ಟು ಮುಂಚಿತವಾಗಿ ಸಿದ್ಧತೆಗಳನ್ನು ನಡೆಸ ಬೇಕಾಗುತ್ತದೆ. ಸರ್ಫಿಂಗ್ ಪಟುಗಳಿಗೆ ಸಾಕಷ್ಟು ಮುಂಚಿತವಾಗಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರೆ ಅಂಥವರಿಗೆ ಹೆಸರುಗಳನ್ನು ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇದ್ದು, ಸ್ಪರ್ಧೆ ನೀರಸ ವಾಗುವ ಸಾಧ್ಯತೆಗಳಿರುತ್ತವೆ. ಇದರ ಜತೆ ತೀರ್ಪುಗಾರರನ್ನು ಕೂಡ ಸಾಕಷ್ಟು ಮುಂಚಿತವಾಗಿ ಸಂಪರ್ಕಿಸಿ ಕಾಯ್ದಿರಿ ಸಬೇಕಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಸರ್ಫಿಂಗ್‌ಪಟುಗಳು ಹಾಗೂ ಆಸಕ್ತರ ಗಮನ ಸೆಳೆಯುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಮುಂಚಿತವಾಗಿಯೇ ಸರ್ಫಿಂಗ್ ಉತ್ಸವದ ದಿನಾಂಕವನ್ನು ನಿಗದಿಪಡಿಸಿ ರೂಪರೇಖೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಇನ್ನೊಂದೆಡೆ ಸಸಿಹಿತ್ಲು ಕಡಲ ತೀರವನ್ನು ಸರ್ಫಿಂಗ್ ಉತ್ಸವಕ್ಕೆ ಸಿದ್ಧಗೊಳಿಸಬೇಕಾಗುತ್ತದೆ. ಆದರೆ ಸಸಿಹಿತ್ಲುವಿನಲ್ಲಿ ಈ ಬಾರಿ ಸರ್ಫಿಂಗ್ ಉತ್ಸವ ಆಯೋಜನೆ ಬಗ್ಗೆ ಇದುವರೆಗೆ ಯಾವುದೇ ಪೂರ್ವಭಾವಿ ಚರ್ಚೆ ಅಥವಾ ಸಿದ್ಧತೆಗಳು ಆರಂಭಗೊಂಡಿಲ್ಲ.
ಎರಡು ವರ್ಷ ಅದ್ದೂರಿ ಆಯೋಜನೆ
ಸಸಿಹಿತ್ಲು ಕಡಲ ತೀರದಲ್ಲಿ 2016ರಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ, ಕೆನರಾ ವಾಟರ್ ನ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಹಾಗೂ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ಹಾಗೂ 2017ರಲ್ಲಿ 64 ಲಕ್ಷ ರೂ. ವೆಚ್ಚದಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಸರ್ಫಿಂಗ್ ಉತ್ಸವ ಆಯೋಜಿಸಲಾಗಿತ್ತು. ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಸಹಿತ 120ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಮಂಗಳೂರು, ಉಡುಪಿ, ಉತ್ತರ ಕನ್ನಡ ಮುಂತಾದೆಡೆಗಳ ಸರ್ಫಿಂಗ್ ಕ್ಲಬ್‌ಗಳ ಸದಸ್ಯರು, ಗೋವಾ, ಪಾಂಡಿಚೇರಿ, ತಮಿಳುನಾಡಿನಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಫ್ರಾನ್ಸ್, ಮಾಲ್ಡೀವ್ಸ್, ಮದಾಸ್ಕರ್ ಸಹಿತ ಅಂತಾರಾಷ್ಟ್ರೀಯ ಪಟುಗಳು ನೋಂದಾ ಯಿಸಿಕೊಂಡಿದ್ದರು. ಸುಮಾರು 50,000ಕ್ಕೂ ಅಧಿಕ ಪ್ರವಾಸಿಗರು ಇದಕ್ಕೆ ಭೇಟಿ ನೀಡಿದ್ದರು.
ಆದರೆ ಕಳೆದ ವರ್ಷ ಸರ್ಫಿಂಗ್ ಉತ್ಸವ ನಡೆದಿರಲಿಲ್ಲ. ಬಜೆಟ್‌ನಲ್ಲಿ ಸರ್ಫಿಂಗ್ ಉತ್ಸವಕ್ಕೆ ಅನುದಾನ ನೀಡದಿರುವುದು, ರಾಜ್ಯ ವಿಧಾನಸಭಾ ಚುನಾವಣೆ ಇದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ನ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್, ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಪಣಂಬೂರು ಬೀಚ್ ಟೂರಿಸಂ ಡೆವಲಪ್‌ಮೆಂಟ್ ಪ್ರೊಜೆಕ್ಟ್ ಸಹಭಾಗಿತ್ವದಲ್ಲಿ ಕಳೆದ ವರ್ಷ ಜೂ. 2ರಿಂದ 7ರ ವರೆಗೆ ಆಹ್ವಾನಿತ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆ ಮಾನ್ಸೂನ್ ಚಾಲೇಂಜ್ ಪಣಂಬೂರಿನಲ್ಲಿ ದೊಡ್ಡಮಟ್ಟದಲ್ಲಿ ಆಯೋಜನೆಗೊಂಡಿತ್ತು.
ಸರ್ಫಿಂಗ್ ಪ್ರಿಯರಿಗೆ ನಿರಾಸೆ
ಸಸಿಹಿತ್ಲು ಬೀಚ್‌ನಲ್ಲಿ 4 ವರ್ಷಗಳ ಹಿಂದೆ ರಾಷ್ಟ್ರೀಯ ಸರ್ಫಿಂಗ್ ಉತ್ಸವ ಆರಂಭಗೊಂಡಾಗ ಇದು ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮಕ್ಕೆ ಹೊಸ ಆಯಾಮವೊಂದು ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಕರ್ನಾಟಕ ಕರಾವಳಿಯಲ್ಲಿ ಸುಂದರ ಬೀಚ್‌ಗಳಲ್ಲೊಂದಾಗಿರುವ ಸಸಿಹಿತ್ಲು ಈಗಾಗಲೇ ಉತ್ತಮ ಸರ್ಫಿಂಗ್ ತಾಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶ್ವ ಸರ್ಫ್ ಲೀಗ್‌ನ ಸ್ಟೀಪನ್ ರಾಬರ್ಟ್‌ಸ್ ಅವರು ಸಸಿಹಿತ್ಲು ಬೀಚ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಹಿಂದಿನ ರಾಜ್ಯ ಸರಕಾರ ಬಜೆಟ್‌ನಲ್ಲಿ ಸಸಿಹಿತ್ಲುವಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವ ಘೋಷಿಸುವ ಮೂಲಕ ಸಸಿಹಿತ್ಲು ಸರ್ಫಿಂಗ್ ಉತ್ಸವಕ್ಕೆ ಅಧಿಕೃತವಾಗಿ ಸರಕಾರದ ಮಾನ್ಯತೆ ಲಭಿಸಿತ್ತು. 2017ರಲ್ಲಿ ಆಯೋಜನೆಗೊಂಡಿದ್ದ ಉತ್ಸವಕ್ಕೆ ಆಗಮಿಸಿದ್ದ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯವರು ಮುಂದಿನ ವರ್ಷ ಸಸಿಹಿತ್ಲುವಿನಲ್ಲಿ ವಿಶ್ವ ಸರ್ಫಿಂಗ್ ಲೀಗ್ ಸ್ಪರ್ಧಾ ಕೂಟವನ್ನು ಆಯೋಜಿಸುವುದಾಗಿ ಭರವಸೆ ನೀಡಿದ್ದರು. ಆದರೆ ಬಳಿಕ ಸರ್ಫಿಂಗ್‌ಗೆ ಪ್ರವಾಸೋದ್ಯಮ ಇಲಾಖೆ ತೋರಿರುವ ನಿರಾಸಕ್ತಿ ಸರ್ಫಿಂಗ್ ಪ್ರಿಯರಲ್ಲಿ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆಯಲ್ಲಿರುವರಲ್ಲಿ ನಿರಾಸೆ ಮೂಡಿಸಿತ್ತು.
ಪ್ರವಾಸೋದ್ಯಮ ಸಚಿವರ ಜತೆ ಚರ್ಚಿಸುವೆ
ಸಸಿಹಿತ್ಲುವಿನಲ್ಲಿ ಈ ವರ್ಷ ಸರ್ಫಿಂಗ್ ಉತ್ಸವ ಆಯೋಜನೆಗೊಳ್ಳುವ ಬಗ್ಗೆ ಮುಂದಿನ ವಾರ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವರ ಜತೆ ಚರ್ಚೆ ನಡೆಸುತ್ತೇನೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜತೆಗೂ ಇದರ ಬಗ್ಗೆ ಚರ್ಚಿಸುತ್ತೇನೆ.
- ಕೋಟ ಶ್ರೀನಿವಾಸ ಪೂಜಾರಿ,ಜಿಲ್ಲಾ ಉಸ್ತುವಾರಿ ಸಚಿವರು
ಸರಕಾರಕ್ಕೆ ಪ್ರಸ್ತಾವನೆ
ಸರ್ಫಿಂಗ್ ಉತ್ಸವ ಆಯೋಜಿಸುವ ಸಂಬಂಧ ಈಗಾಗಲೇ ಸರಕಾರಕ್ಕೆ ಒಂದು ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದಿಂದ ಶೀಘ್ರದಲ್ಲೇ ಪೂರಕ ಸ್ಪಂದನೆ ದೊರೆಯುವ ನಿರೀಕ್ಷೆಯಿದ್ದು, ಆ ಮೂಲಕ ಈ ಬಾರಿ ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಕ್ರೀಡೋತ್ಸವ ಆಯೋಜಿಸುವ ಉದ್ದೇಶ ಹೊಂದಲಾಗಿದೆ.
- ಉದಯ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.