ರಾಜ್ಯದಲ್ಲಿ ಅಭಿವೃದ್ಧಿಪರ -ಸುಭದ್ರ ಸರಕಾರ: ಯಡಿಯೂರಪ್ಪ
ಬೆಳ್ತಂಗಡಿ:81ಗ್ರಾಮ-818 ಅಭಿವೃದ್ಧಿ ಕಾಮಗಾರಿ ; ಮುಖ್ಯಮಂತ್ರಿಗಳಿಂದ ಏಕಕಾಲದಲ್ಲಿ ಚಾಲನೆ
Team Udayavani, Dec 9, 2019, 5:16 AM IST
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಬೇಡಿಕೆಗೆ ತಕ್ಕಂತೆ ಅನುದಾನ ಒದಗಿಸುವ ಜತೆಗೆ ರಾಜ್ಯದ ಇತರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಮೂಲಕ ಮುಂದಿನ ಮೂರೂವರೆ ವರ್ಷ ಸುಭದ್ರ ಸರಕಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.
ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ದಲ್ಲಿ ರವಿವಾರ ನಡೆದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 81 ಗ್ರಾಮಗಳ ಒಟ್ಟು 347 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಅಪೇಕ್ಷಿಸಿದ ಕಾಮಗಾರಿ ಗಳಿಗೆ ಅನುದಾನ ಪೂರೈಸಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ ಎಂದರು.
ನೆರೆ ಪರಿಹಾರ ನೆರವಿಗೆ ಕೃತಜ್ಞತೆ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾ ದಾಗ ಸಂತ್ರಸ್ತರ ನೆರವಿಗೆ ಧಾವಿಸಿದವರನ್ನು ಸಿಎಂ ಅಭಿನಂದಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಯವರು ನೀಡಿದ 25 ಕೋ.ರೂ. ನೆರವು ಸೇರಿದಂತೆ ರಾಜ್ಯದ ಪರಿಹಾರ ನಿಧಿಯಲ್ಲಿ ಒಟ್ಟು 500 ಕೋ.ರೂ. ಸಂಗ್ರಹವಾಗಿದೆ ಎಂದರು. ಭೂಕುಸಿತ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಸೇವೆಯನ್ನು ನೆನೆದ ಅವರು, ಬಾಂಜಾರುಮಲೆಯಲ್ಲಿ ಶಾಸಕರ ಮಾದರಿ ಸ್ಟೀಲ್ ಬ್ರಿಜ್ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅನುಷ್ಠಾನ ವಾಗುವ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ ಸಿಎಂ, ಕಳಪೆ ಕಾಮಗಾರಿ ಕಂಡುಬಂದರೆ ಸರಕಾರಕ್ಕೆ ಮಾಹಿತಿ ನೀಡಿ ಎಂದರು.
ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಮೊದಲ ಬಾರಿಗೆ ಶಾಸಕನಾಗಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹರೀಶ್ ಪೂಂಜ ಅವರನ್ನು ಪಡೆದ ತಾಲೂಕಿನ ಜನತೆ ಧನ್ಯರು. ಸಿಎಂ ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಯನ್ನು ಮಾ. 31ರೊಳಗೆ ಪೂರೈಸುವುದಾಗಿ ಭರವಸೆ ನೀಡಿದರು. ಎಸ್‌ಸಿ ನಿಧಿಯಿಂದ 5 ಕೋ.ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಸಕರ ಮನವಿಯಂತೆ ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ, ಅಗ್ನಿಶಾಮಕ ಕಟ್ಟಡ, ಬೆಳ್ತಂಗಡಿ ನಗರದಲ್ಲಿ ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವುದಾಗಿ ಘೋಷಿಸಿದರು.
ಇದಕ್ಕೂ ಮುನ್ನ ಪ್ರಸ್ತಾವನೆಯೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ರಬ್ಬರ್ ಮತ್ತು ಅಡಿಕೆ ಬೆಳೆಗಾರರ ಹಿತರಕ್ಷಣೆ ಕಾಪಾಡುವುದು ನನ್ನ ಗುರಿ ಎಂದರು. ಶೈಕ್ಷಣಿಕ ಅಭಿವೃದ್ಧಿಗೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ, ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ ದೇವಸ್ಥಾನ ಮತ್ತು ದೈವಸ್ಥಾನ ಅಭಿವೃದ್ಧಿ, ಪೊಲೀಸ್ ಠಾಣೆ, ಅಗ್ನಿಶಾಮಕ ದಳ ತೆರೆಯಲು ಅನುದಾನ ನೀಡುವಂತೆ ಸಿಎಂ ಮತ್ತು ಸಚಿವರನ್ನು ವಿನಂತಿಸಿದರು. ಇದೇ ವೇಳೆ ಅಭಿವೃದ್ಧಿ ಕುರಿತ “ಬೆಸುಗೆ’ ಪುಸ್ತಕ ಬಿಡುಗಡೆಗೊಳಿಸಿದರು.
ತುಳು ಭಾಷೆಗೆ ಮಾನ್ಯತೆ ತಂದುಕೊಡುವ ನಿಟ್ಟಿನಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ರಾಜ್ಯ ಸರಕಾರ ಶ್ರಮಿಸಬೇಕು ಎಂದು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಸಿಎಂಗೆ ಮನವಿ ನೀಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್ ನಾಯ್ಕ, ಸಂಜೀವ ಮಠಂದೂರು, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ. ವಲಯ ಐಜಿಪಿ ಅರುಣ್ ಚಕ್ರವರ್ತಿ, ಎಸ್‌ಪಿ ಲಕ್ಷ್ಮೀ ಪ್ರಸಾದ್, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಎಸಿ ಡಾ| ಯತೀಶ್ ಉಳ್ಳಾಲ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿ, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ವಂದಿಸಿದರು.
ಸಮಾವೇಶದಂತೆ ಶಿಲಾನ್ಯಾಸಕ್ಕೆ ಸೇರಿದ ಜನತೆ
ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಶಾಸಕ ಹರೀಶ್ ಪೂಂಜ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಫಲವಾಗಿ ಈ ಬಾರಿ 347 ಕೋ.ರೂ. ಅನುದಾನ 81 ಗ್ರಾಮಗಳಿಗೆ ಲಭಿಸಿದೆ. 16 ಸಾವಿರಕ್ಕೂ ಅಧಿಕ ಮಂದಿ ಇದೇ ಮೊದಲ ಬಾರಿಗೆ ಶಿಲಾನ್ಯಾಸುಕ್ಕೆ ಸೇರಿ ಇತಿಹಾಸ ನಿರ್ಮಾಣವಾಗಿದೆ. ಸಂಘಟನ ಚತುರ ಶಾಸಕ ಹರೀಶ್ ಪೂಂಜ ಅವರ ಗ್ರಾಮಾಭ್ಯುದಯದ ಕನಸಿಗೆ ಗ್ರಾಮೀಣ ಜನತೆ ತಲೆಬಾಗಿದ್ದಾರೆ.
ಸಿಎಂಗೆ ಬೆಳ್ಳಿ ಕಿರೀಟ
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ, 75 ಕೆ.ಜಿ. ತೂಕ, 31 ಅಡಿ ಉದ್ದದ ಬೃಹತ್ ತುಳಸಿ ಮತ್ತು ಸೇವಂತಿಗೆ ಹೂವುಗಳ ಮಾಲೆ ಹಾಕಿ ಶಾಸಕ ಹರೀಶ್ ಪೂಂಜ ಗೌರವಿಸಿದರು. ಪವಿತ್ರ ನೇತ್ರಾವತಿ ತೀರ್ಥ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿದರು.
ತಾಲೂಕಿಗೆ
ಭರಪೂರ ಘೋಷಣೆ
ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ.
ಧರ್ಮಸ್ಥಳದಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ನೀಗಿಸುವ ದೃಷ್ಟಿಯಿಂದ ಡಾ| ಹೆಗ್ಗಡೆ ಮನವಿಯಂತೆ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟಿಗೆ 2 ಕೋ.ರೂ. ಅನುದಾನ.
ಕಣಿಯೂರು ಹೋಬಳಿಯಾಗಿ ಘೋಷಣೆ.
ಬೆಳ್ತಂಗಡಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ 2 ಕೋ.ರೂ.
ಕೊಕ್ಕಡ ಎಂಡೋ ಪಾಲನ ಕೇಂದ್ರ ನಿರ್ಮಾಣಕ್ಕೆ ಅನುದಾನ ಘೋಷಣೆ.
ಮಂಜುನಾಥನ ದರ್ಶನ ಪಡೆದ ಬಿಎಸ್‌ವೈ
ಬೆಳ್ತಂಗಡಿ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಧರ್ಮಸ್ಥಳ ಹೆಲಿಪ್ಯಾಡ್‌ಗೆ ಆಗಮಿಸಿದಾಗ ಡಿ. ಹಷೇìಂದ್ರ ಕುಮಾರ್ ಮತ್ತು ಶಾಸಕ ಹರೀಶ್ ಪೂಂಜ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗಿದ್ದರು.
ಡಿಸಿ ಸಿಂಧೂ ರೂಪೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಮುಖರಾದ ಕ್ಯಾ| ಬೃಜೇಶ್ ಚೌಟ, ಜಯಂತ್ ಕೋಟ್ಯಾನ್, ಬಾಲಕೃಷ್ಣ ಶೆಟ್ಟಿ ಸವಣಾಲು, ಡಿಐಜಿ ಅರುಣ್ ಚಕ್ರವರ್ತಿ, ಎಸ್‌ಪಿ ಲಕ್ಷ್ಮೀಪ್ರಸಾದ್, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಎಡಿಸಿ ಎಂ.ಜೆ. ರೂಪಾ ಇದ್ದರು.
ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಸುಭಿಕ್ಷೆಗಾಗಿ ಅನುಗ್ರಹಿಸುವಂತೆ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದರು. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
13 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ
ಪತ್ರಕರ್ತರ ಜತೆಗೆ ಮಾತನಾಡಿದ ಸಿಎಂ, ಎಲ್ಲರ ಕುತೂಹಲ ಚುನಾವಣೆ ಫಲಿತಾಂಶದ ಕಡೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ನಾವು ಸುತ್ತಾಡಿ ಸಮೀಕ್ಷೆ ನಡೆಸಿದ್ದು, 15 ಕ್ಷೇತ್ರಗಳ ಪೈಕಿ 13ರಲ್ಲೂ ಗೆಲ್ಲುತ್ತೇವೆ. ಇನ್ನುಳಿದ ಮೂರೂವರೆ ವರ್ಷ ಬಿಜೆಪಿ ಸ್ಥಿರ ಸರಕಾರ ನೀಡಲಿದೆ ಎಂದರು. ಜಿಎಸ್‌ಟಿ ಕಟ್ಟಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ವಿಚಾರ. ಸರಿಯಾದ ಮಾಹಿತಿ ಇಲ್ಲದೆ ಆರೋಪ ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.