ಬಾಕಿ ವೇತನ-ಆಹಾರ ಬಿಲ್ ಪಾವತಿಸಿ
Team Udayavani, Dec 9, 2019, 6:10 PM IST
ರಾಯಚೂರು: ಬಾಕಿ ವೇತನ ಪಾವತಿ, ಮೊಟ್ಟೆ, ಆಹಾರದ ಬಿಲ್ ಬಾಕಿ ಚುಕ್ತಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಕ್ಕೂಟದ ಸದಸ್ಯರು ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.
ಈ ಕುರಿತು ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಾಲಕಾಲಕ್ಕೆ ವೇತನ ಪಾವತಿ ಆಗುತ್ತಿಲ್ಲ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಕಳೆದ 15 ವರ್ಷದಿಂದ ಇದೇ ಸಮಸ್ಯೆ ಇದೆ. ಮಕ್ಕಳಿಗೆ ಆಹಾರ ವಿತರಿಸಲು ಕೈಯಿಂದ ಹಣ ನೀಡಬೇಕಾದ ಸ್ಥಿತಿ ಕಾರ್ಯಕರ್ತೆಯರಿಗೆ ಎದುರಾಗಿದೆ. ಕಳೆದ ಎಂಟು ತಿಂಗಳಿಂದ ಆಹಾರ ಬಿಲ್ ನೀಡಿಲ್ಲ. ಹೀಗಾದರೆ ಮಕ್ಕಳಿಗೆ ಆಹಾರ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕಾನೂನು ಪ್ರಕಾರ 18-20 ಸಾವಿರ ರೂ. ವರೆಗೆ ವೇತನ ನೀಡಬೇಕು. ಆದರೆ ಇಲ್ಲಿ ಮಾತ್ರ ಅದು ಜಾರಿಯಾಗಿಲ್ಲ. 8ರಿಂದ 10 ಸಾವಿರ ರೂ.
ವೇತನ ನೀಡುತ್ತಿದ್ದಾರೆ. ಕಾರ್ಮಿಕ ಕಾಯ್ದೆ ಪ್ರಕಾರ ಸರ್ಕಾರವೇ ಕನಿಷ್ಠ ವೇತನ ನೀಡದೆ ವಂಚಿಸುತ್ತಿದೆ ಎಂದು ದೂರಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಧಾನ್ಯಗಳು ಕೂಡ ಕಳಪೆಯದ್ದಾಗಿದೆ. ಧಾನ್ಯಗಳನ್ನು ತೂಕ ಮಾಡದೇ ನೀಡುತ್ತಿದ್ದು, 2-3 ಕೆಜಿ ವ್ಯತ್ಯಾಸವಾಗುತ್ತಿದೆ. ಇದರ ಹೊಣೆ ಕಾರ್ಯಕರ್ತೆಯರೇ ಹೊರಬೇಕಿದೆ. ಅನ್ಯಾಯ ಪ್ರಶ್ನಿಸಿದರೆ ಕಿರುಕುಳ ನೀಡುತ್ತಾರೆ ಎಂದು ದೂರಿದರು.
ಕೂಡಲೇ ಬಾಕಿ ವೇತನ ಪಾವತಿಸಬೇಕು. ಆಹಾರದ ಬಾಕಿ ಬಿಲ್ ಪಾವತಿಸಬೇಕು. ಮೇಲಧಿಕಾರಿಗಳ ಕಿರುಕುಳ ತಪ್ಪಿಸಬೇಕು. ಆಹಾರ ಧಾನ್ಯ ಸರಿಯಾಗಿ ಪೂರೈಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಯ್ಯಸ್ವಾಮಿ ಚಿಂಚರಕಿ, ಜಿಲ್ಲಾಧ್ಯಕ್ಷ ವೀರಬಸಮ್ಮ, ಸದಸ್ಯರಾದ ಅಮರಮ್ಮ, ಗಿರಿಜಮ್ಮ, ಚನ್ನಮ್ಮ, ತಿಪ್ಪಯ್ಯಶೆಟ್ಟಿ, ಸಾವಿತ್ರಿ, ವೀರಕುಮಾರ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.