ಕಮಲ ಅರ್ಭಟಕ್ಕೆ ಕಾಂಗ್ರೆಸ್, ಜೆಡಿಎಸ್ ಧೂಳೀಪಟ
Team Udayavani, Dec 10, 2019, 3:00 AM IST
ಜಿಲ್ಲೆಯ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ಸುಗಮವಾಗಿ ನಡೆದು ಫಲಿತಾಂಶ ಹೊರ ಬಿದ್ದಿದ್ದು, ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಮಲ ತನ್ನ ಖಾತೆ ತೆರೆಯುವ ಮೂಲಕ ಜಿಲ್ಲೆಯ ಭವಿಷ್ಯದ ರಾಜಕಾರಣಕ್ಕೆ ಫಲಿತಾಂಶ ಹೊಸ ದಿಕ್ಸೂಚಿ ನೀಡಿದೆ. ಇನ್ನೂ ಸತತ ಡಾ.ಕೆ.ಸುಧಾಕರ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದರೆ, ಕಮಲದ ಆರ್ಭಟಕ್ಕೆ ಗೆಲ್ಲುವ ಉತ್ಸಾಹದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಧೂಳೀಟಪವಾಗಿವೆ. ಸುಧಾಕರ್ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಮೈತ್ರಿ ಸರ್ಕಾರದಲ್ಲಿ ಕೈ ತಪ್ಪಿದ ಸಚಿವ ಸ್ಥಾನ ಬಿಜೆಪಿ ಸರ್ಕಾರದಲ್ಲಿ ಸಿಗುವುದು ಪಕ್ಕಾ ಆಗಿದೆ. ಉಪ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಎಷ್ಟು ಮತ ಪಡೆದರು, ಗೆದ್ದವರು ಹೇಳಿದ್ದೇನು? ಸೋತವರ ಅನಿಸಿಕೆ ಏನಾಗಿತ್ತು? ಉಪ ಚುನಾವಣೆ ಫಲಿತಾಂಶದ ಸಮಗ್ರ ವಿಶ್ಲೇಷಣೆ ಇಲ್ಲಿದೆ ನೋಡಿ..
ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್, ಜೆಡಿಎಸ್‌ನ 14 ತಿಂಗಳ ಮೈತ್ರಿ ಸರ್ಕಾರ ಪತನದ ಬಳಿಕ ಎದುರಾದ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸುಧಾಕರ್ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ದಾಖಲೆ ಸೃಷ್ಟಿ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೂಮ್ಮೆ ಸತತವಾಗಿ ಎರಡನೇ ಬಾರಿಗೆ ಗೆಲುವು ಸಾಧಿಸಿಲ್ಲ ಎಂಬ ಇತಿಹಾಸವನ್ನು 2018ರ ಚುನಾವಣೆಯಲ್ಲಿ ಪುನಾರಾಯ್ಕೆಗೊಳ್ಳುವ ಮೂಲಕ ಅಳಿಸಿದ್ದ ಸುಧಾಕರ್, ಈಗ ಅಕಾಲಿಕವಾಗಿ ಎದುರಾದ ಉಪ ಚುನಾವಣೆಯಲ್ಲಿ ಕೈ ಬಿಟ್ಟು ಬಿಜೆಪಿಗೆ ಪಕ್ಷಾಂತರಗೊಂಡು ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ರಾಜಕೀಯವಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ನಂದಿ ಅಂಜನಪ್ಪ ವಿರುದ್ಧ ಬರೋಬ್ಬರಿ 34,801 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಸುಧಾಕರ್‌ಗೆ 84,389 ಮತ: ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಬಂದ ಬಿಜೆಪಿ ಅಭ್ಯರ್ಥಿ ಸುಧಾಕರ್, ಚಲಾವಣೆಯಾದ ಒಟ್ಟು 1,73,866 ಮತಗಳ ಪೈಕಿ ಬರೋಬ್ಬರಿ 84,381 ಇವಿಎಂ ಮತ ಹಾಗೂ ಅಂಚೆ ಮತ 8 ಸೇರಿ ಒಟ್ಟು 84,389 ಮತ ಪಡೆಯುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪ ಇವಿಎಂ ಮತ 49,587 ಹಾಗೂ ಅಂಚೆ ಮತ 1 ಸೇರಿ ಒಟ್ಟು 49,588 ಮತಗಳನ್ನು ಪಡೆದಿದ್ದು, ಸುಧಾಕರ್ 43,801 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ಗೆಲ್ಲುವ ಉತ್ಸಾಹದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ 35,869 ಇವಿಎಂ ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆರಂಭದಿಂದ 15 ಸುತ್ತುಗಳವರೆಗೂ ಸುಧಾಕರ್ ಹಾಗೂ ಎನ್.ರಾಧಾಕೃಷ್ಣ ನಡುವೆ ಪೈಪೋಟಿ ನಡೆದು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಆದರೆ ಕಡೆಯ 10 ಸುತ್ತುಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ನಡೆದು ಕೊನೆಗೂ ಬಿಜೆಪಿಯ ಸುಧಾಕರ್ ಗೆಲುವು ಸಾಧಿಸುವ ಮೂಲಕ ಅಖಾಡದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಮಣ್ಣು ಮುಕ್ಕಿಸಿದ್ದಾರೆ.
ಅಭ್ಯರ್ಥಿಗಳು ಮತ ಪಡೆದ ವಿವರ
ಅಭ್ಯರ್ಥಿ ಪಕ್ಷ ಪಡೆದ ಮತ
ಡಾ.ಕೆ.ಸುಧಾಕರ್ ಬಿಜೆಪಿ 84,389
ಎಂ.ಅಂಜನಪ್ಪ ಕಾಂಗ್ರೆಸ್ 49.588
ಎನ್.ರಾಧಕೃಷ್ಣ ಜೆಡಿಎಸ್ 35,869
ಡಿ.ಆರ್.ನಾರಾಯಣಸ್ವಾಮಿ ಬಿಎಸ್ಪಿ 1,319
ಎಸ್.ವಿ.ಫಣೀರಾಜ್ ಉತ್ತಮ ಪ್ರಜಾಕೀಯ ಪಕ್ಷ 619
ದಿಲ್‌ಶಾದ್ ಬೇಗಂ ಪಕ್ಷೇತರ 175
ಡಾ.ಎಂ.ಎಂ.ಬಾಷಾ ನಂದಿ ಪಕ್ಷೇತರ 533
ಅರಿಕರೆ ಮುನಿರಾಜು ಪಕ್ಷೇತರ 166
ಸೈಯದ್ ಆಸೀಫ್ ಪಕ್ಷೇತರ 244
2018ರ ವಿಧಾನಸಭಾ ಚುನಾವಣೆ ಮತ ಗಳಿಕೆ
ಅಭ್ಯರ್ಥಿ ಪಕ್ಷ ಪಡೆದ ಮತ ವ್ಯತ್ಯಾಸ
ಡಾ.ಕೆ.ಸುಧಾಕರ್ ಕಾಂಗ್ರೆಸ್ 82,002 -32414
ಕೆ.ಪಿ.ಬಚ್ಚೇಗೌಡ ಜೆಡಿಎಸ್ 51,575 -15,706
ಡಾ.ಜಿ.ವಿ.ಮಂಜುನಾಥ ಬಿಜೆಪಿ 5,576 +78,813
ಅಂಚೆ ಮತ ಗಳಿಕೆಯಲ್ಲಿ ಸುಧಾಕರ್ ಮೊದಲು: ಉಪ ಚುನಾವಣೆಯಲ್ಲಿ ಅಂಚೆ ಮತಗಳು ಕೇವಲ 10 ಮಾತ್ರ ಚಲಾವಣೆಗೊಂಡಿದ್ದು, ಆ ಪೈಕಿ ಬಿಜೆಪಿ ಅಭ್ಯರ್ಥಿ ಸುಧಾಕರ್ 8 ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪಗೆ ಕೇವಲ 1 ಅಂಚೆ ಮತ ಬಿದ್ದರೆ, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣಗೆ ಅಂಚೆ ಮತದಾರರ ಒಲವು ಸಿಕ್ಕಿಲ್ಲ. ಆ ಪೈಕಿ 10 ಅಂಚೆ ಮತಗಳು ಸಲ್ಲಿಕೆಯಾದರೆ 9 ಮಾತ್ರ ಊರ್ಜಿತಗೊಂಡಿದ್ದು 1 ತಿರಸ್ಕೃತಗೊಂಡಿದೆ. ಕಳೆದ ಬಾರಿ ಸುಧಾಕರ್‌ಗೆ 478, ಬಚ್ಚೇಗೌಡರಿಗೆ 313, ಡಾ.ಜಿ.ವಿ.ಮಂಜುನಾಥಗೆ 48 ಅಂಚೆ ಮತ ಬಂದಿದ್ದವು.
973 ನೋಟಾ ಮತದಾನ: ಉಪ ಚುನಾವಣೆಯಲ್ಲಿ ನೋಟಾಗೆ ಒಟ್ಟು 973 ಮತಗಳು ಬಿದ್ದಿವೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸುವ ನೋಟಾಗೆ ಹೆಚ್ಚು ಮತದಾನ ಆಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೋಟಾ ಮತದಾನ ಕಡಿಮೆ ಆಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 714 ನೋಟಾ ಮತದಾನ ಆಗಿತ್ತು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಮತದಾರರು ನೋಟಾ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಲ್ಲ.
ಕೈ, ದಳ ನಾಯಕರಿಗೆ ತೀವ್ರ ಮುಖಭಂಗ: ಉಪ ಚುನಾವಣೆ ಫಲಿತಾಂಶ ಕ್ಷೇತ್ರದ ದಳಪತಿಗಳಿಗಿಂತ ಜಿಲ್ಲೆಯ ಕೈ ನಾಯಕರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಸುಧಾಕರ್ ಪಕ್ಷಾಂತರ, ಅನರ್ಹತೆಯ ಅಸ್ತ್ರ ಮುಂದಿಟ್ಟುಕೊಂಡು ಸುಧಾಕರ್ ವಿರುದ್ಧ ರಾಜಕೀಯ ಹೋರಾಟ ನಡೆಸಿದ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತಿತರ ನಾಯಕರಿಗೆ ಫಲಿತಾಂಶ ಸಾಕಷ್ಟು ಇರುಸು ಮುರುಸು ಮಾಡಿದೆ.
ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡಿದರೂ ಕಾಂಗ್ರೆಸ್ ತನ್ನ ಕೋಟೆ ಉಳಿಸುವಲ್ಲಿ ವಿಫಲವಾಗಿದೆ. ಇದರ ನಡುವೆ ಸುಧಾಕರ್ ಪರ ಪರೋಕ್ಷವಾಗಿ ಬ್ಯಾಟಿಂಗ್ ನಡೆಸಿದ್ದ ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ ಈ ಭಾಗದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಾರದೇ ಹೋಗಿದ್ದು ಕೈ ಹಿನ್ನಡೆಗೆ ಕಾರಣ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಪರ ಖುದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎರಡು, ಮೂರು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದರೂ ಮತದಾರರು ಒಲವು ತೋರದಿರುವುದು ಎರಡು ಪಕ್ಷಗಳ ನಾಯಕರಿಗೆ ಉಪ ಚುನಾವಣೆ ತೀವ್ರ ಮುಖಭಂಗ ಉಂಟು ಮಾಡಿದೆ.
* ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.