ಅನರ್ಹರಿಗೆ ಅರ್ಹತಾ ಪ್ರಮಾಣಪತ್ರ ನೀಡಿದ ಫಲಿತಾಂಶ
Team Udayavani, Dec 10, 2019, 6:10 AM IST
ಈ ಚುನಾವಣಾ ಫಲಿತಾಂಶ ಹಲವು ದಾಖಲೆಗಳನ್ನು ಬರೆದಿದೆ. ಮತ್ತೆ ಮೈತ್ರಿ ಸರಕಾರ ರಚನೆಯಾಗುವ ಅಪಾಯವನ್ನು ಮನಗಂಡೇ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಿದ ಹಾಗಿದೆ. ಜಾತೀಯ ರಾಜಕೀಯ, ತುಷ್ಟೀಕರಿಸುವ ಪಕ್ಷಗಳನ್ನು ತಹಬದಿಗೆ ತರುವ ಪ್ರಯತ್ನವೂ ಇಲ್ಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸಹಿತ ಅನೇಕ ನಾಯಕರಿಗೆ ಎಚ್ಚರಿಕೆ ಗಂಟೆಯನ್ನೂ ಬಾರಿಸಿದೆ.
ಭಾರತದ ಪ್ರಜಾಸತ್ತೆಯ ಅತ್ಯಂತ ಶಕ್ತಿಯುತ ಅಂಶವೆಂದರೆ ರಾಜಕೀಯಕ್ಕಿಂತ ದೇಶ ಮುಖ್ಯ- ಅಟಲ್ ಬಿಹಾರಿ ವಾಜಪೇಯಿ ಅವರ ಮಾತಿದು.
ಕರ್ನಾಟಕದ ಮಟ್ಟಿಗೆ ಈ ಮಾತನ್ನು ರೂಪಕವಾಗಿಸಿದರೆ ಉಪ ಚುನಾವಣೆಯಲ್ಲಿ ರಾಜ್ಯದ ಜನತೆ ಇಲ್ಲಿನ ರಾಜಕೀಯದ ಆಟವನ್ನು ಪಕ್ಕಕ್ಕೆ ಸರಿಸಿ, ರಾಜ್ಯದ ಅಭಿವೃದ್ಧಿಗೆ ಮತ ಚಲಾಯಿಸುವ ಮೂಲಕ “ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ’ ಎಂಬ ಸಂದೇಶ ರವಾನಿಸಿದ್ದಾರೆ.
ಅಂತೂ, ಜನತಾ ಜನಾರ್ದನ ಕೊಟ್ಟ ತೀರ್ಪು ಎಲ್ಲ ರಾಜಕೀಯ ಪಕ್ಷಗಳಿಗೆ ತನ್ನದೇ ಆದ ಉತ್ತರ ಕೊಟ್ಟಿದೆ. ರಾಜಕೀಯ ಜಿದ್ದಾಜಿದ್ದಿ ಯಿಂದಾಗಿ ಸರ್ಕಾರ ಪತನಗಳೊಳ್ಳಲು ಕಾರಣವಾದ ಅಂಶಗಳು, ಆಪರೇಷನ್ ಕಮಲ ಪ್ರಯತ್ನಗಳು, ಶಾಸಕರ ರಾಜೀನಾಮೆ ಪ್ರಹಸನ, ಅವರನ್ನು ಅನರ್ಹಗೊಳಿಸಿದ ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮ, ಬಳಿಕ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು… ಹಾಗೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡೆದುಕೊಂಡ ರೀತಿ ಮತ್ತು ಅರ್ಹತೆ-ಅನರ್ಹತೆ ಕುರಿತ ಜನಪ್ರತಿನಿಧಿ ಗಳ ನಡವಳಿಕೆಗಳು.. ಇವೆಲ್ಲವನ್ನೂ ಮತದಾರ ಸೂಕ್ಷ್ಮವಾಗಿ ಗಮನಿಸಿದ್ದಾನೆ. “ಅನರ್ಹ’ರಲ್ಲಿ ಅನೇಕರನ್ನು ಬಹು ಅಂತರದಲ್ಲಿ ಗೆಲ್ಲಿಸುವ ಮೂಲಕ ಮತದಾರ ಖಡಕ್ಕಾಗಿ ಉತ್ತರಿಸಿದ್ದಾನೆ. ಹಾಗೆಂದು ಪಕ್ಷದಿಂದ ಪಕ್ಷಕ್ಕೆ “ಸ್ವಹಿತಾಸಕ್ತಿ’ಗೋಸ್ಕರ ಜಿಗಿಯುವ ಹಕ್ಕಿಗಳಲ್ಲಿ ಕೆಲವರನ್ನು ಸೋಲಿಸುವ ಮೂಲಕ ಉತ್ತರಿಸಲು ಪ್ರಜ್ಞಾವಂತ ಮತದಾರ ಮರೆತಿಲ್ಲ!
ಬಹುಶಃ ಮತದಾರನಿಗೆ ಬೇಕಾಗಿರುವುದು ರಾಜ್ಯದ ಅಭಿವೃದ್ಧಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ “ಜನಪ್ರಿಯ ಯೋಜನೆ’ಗಳ ಘೋಷಣೆಗಳಾದರೂ, ಅವುಗಳನ್ನು ನಿಭಾಯಿಸಿದ ರೀತಿ ಬೇಸರ ತರಿಸಿರಬಹುದು. “ಶಾಸಕರ’ ಅನರ್ಹತೆ ಕಾರಣಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮತ್ತೆ ತನ್ನ “ಉತ್ತರ’ದಿಂದ ಅತಂತ್ರಗೊಳ್ಳದೆ ಮುಂದಿನ ವಿಧಾನಸಭೆ ಚುನಾವಣೆಯವರೆಗೆ ಸುಭದ್ರ ಆಡಳಿತ ನಡೆಸಲಿ ಎಂಬ ಅಶಯ ಮತ ದಾರನದ್ದಿರಬೇಕು. ನೆರೆಹಾವಳಿ ಸಂದರ್ಭದಲ್ಲಿ ಬಿಎಸ್‌ವೈ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳಿಗೆ ಸರ್ಕಾರದ ಅತಂತ್ರತೆ ಕಾರಣವಿರಬಹುದು ಎಂಬ ಸೂಕ್ಷ್ಮವನ್ನು ಮತದಾರ ಗಮನಿಸಿರ ಬಹುದು! ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸುಭದ್ರ ಬಿಜೆಪಿ ಸರ್ಕಾರ ಇದ್ದರೂ, ಬಿಜೆಪಿ ಅಲ್ಪಮತದ ಸರ್ಕಾರದಲ್ಲಿ ಆಡಳಿತಾತ್ಮಕ ಬದಲಾವಣೆ ಕಾಣದಿದ್ದಾಗ, ಗುಪ್ತಗಾಮಿನಿಯಾದ ಮತದಾರನ ಮನಸ್ಸು ಸುಭದ್ರ ಸರ್ಕಾರ ರಚನೆಯಾಗುವುದನ್ನು ಬಯಸಿರಬಹುದು.
ಅಂತೂ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಈಗ ಬಹುಮತದ ಸುಭದ್ರ ಸರ್ಕಾರದತ್ತ ಮುಖಮಾಡಿದಂತಾಗಿದೆ. ಮತದಾರನು ಬಿಜೆಪಿಯತ್ತಲೇ ಮುಖಮಾಡಿ ಅಭಿವೃದ್ಧಿ ಬಯಸುತ್ತಿದ್ದಾನೆ. ಕರ್ನಾಟಕದ “ರಾಜಕೀಯ ಶಾಪ’ ಎಂದೇ ಬಿಂಬಿತವಾಗಿದ್ದ ಕೇಂದ್ರ ದಲ್ಲೊಂದು ಸರ್ಕಾರ- ರಾಜ್ಯದಲ್ಲೊಂದು ಸರ್ಕಾರ ಎಂಬ ಮಾತು ಈಗ ಇಲ್ಲವಾಗಿ ದಿನಗಳಾಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಬಲಗೊಂಡಿರುವುದರಿಂದ ಇನ್ನು ಮುಂದೆ ಉತ್ತಮ ಆಡಳಿತ ಹಾಗೂ ಆ ಮೂಲಕ ರಾಜ್ಯದ ಅಭಿವೃದ್ಧಿ ಮಾತ್ರ ಬಿಜೆಪಿ ಮುಂದಿನ ಸವಾಲು. ಉಪಚುನಾವಣೆಯಲ್ಲಿ ಅರ್ಹತೆ ಪ್ರಮಾಣ ಪತ್ರವನ್ನು ಜನರಿಂದ ಪಡೆದ “ಅನರ್ಹರು’ ಕೂಡಾ ತಮ್ಮ ಗೆಲುವನ್ನು ಮತದಾರನ ಸೂಕ್ಷ್ಮ ಸಂದೇಶ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಹುಟ್ಟಿಕೊಂಡ ಸಂದರ್ಭದಲ್ಲಿ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಏಕಮಾತ್ರ ಉದ್ದೇಶದಿಂದ ಹಿಂದೊಮ್ಮೆ ಧರ್ಮಸಿಂಗ್ ಕಾಲದಲ್ಲಿ ನಡೆಸಿದ ಅಪಮೈತ್ರಿಯನ್ನು ಮತ್ತೂಮ್ಮೆ ಹುಟ್ಟುಹಾಕಿ ಸಮ್ಮಿಶ್ರ ಸರ್ಕಾರ ರಚಿಸಿದವು.
“ನಿಮ್ಮಪ್ಪನಾಣೆ ಸಿಎಂ ಆಗಲ್ಲ’ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಛೇಡಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಪಕ್ಷದ ವರಿಷ್ಠರ ಆಣತಿಯಂತೆ ಅನಿವಾರ್ಯವಾಗಿ “ಕುಮಾರಸ್ವಾಮಿ ಸಿಎಂ’ ಎಂದು ಘೋಷಿಸುವ ಅವಮಾನವನ್ನೂ ಅನುಭವಿಸಿದರು. ಸಿದ್ದರಾಮಯ್ಯ ಅವರು ಒಕ್ಕಲಿಗ ನಾಯಕರತ್ತ ಎಸೆದ ಮಾತಿನ ಬಾಣಗಳು, ಲಿಂಗಾಯತ-ವೀರಶೈವ ಎಂಬ ಧರ್ಮ ರಾಜಕೀಯಕ್ಕೆ ಕೈಹಾಕಿದ್ದು, ತಮ್ಮ ಮಗ್ಗಲಿನಲ್ಲಿದ್ದ ಕೆಲವರ ಕಾರ್ಯ ಕಾರಣಕ್ಕೆ “ಹಿಂದೂ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಅವರ ಸರ್ಕಾರದ ಅವನತಿಗೆ ಕಾರಣವಾದವು. ಜತೆಗೆ ಕಾಂಗ್ರೆಸ್‌ನಲ್ಲಿನ ರಾಡಿ ಎಬ್ಬಿಸಿದ್ದ ಒಳ ರಾಜಕೀಯವೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಮೂಡಿಬರಲು ಸಹಕಾರ ನೀಡಿದವು.
ಆದರೆ, ಕಾಂಗ್ರೆಸ್ ಮತ್ತು ಜೆೆಡಿಎಸ್ ಅನಿವಾರ್ಯ ಮೈತ್ರಿ ಬಹು ಕಾಲ ಗಟ್ಟಿಯಾಗಿ ಉಳಿಯುವುದು ಪ್ರಮುಖವಾಗಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ “ಹಾವು-ಮುಂಗುಸಿ’ ರಾಜಕೀಯ ದಿಂದಾಗಿ ಅಸಾಧ್ಯದ ಮಾತಾಗಿತ್ತು. ಜೆಡಿಎಸ್ ಕುಟುಂಬ ರಾಜಕೀಯ ಪ್ರಮುಖವಾಗಿ ಸಿದ್ದರಾಮಯ್ಯ ಅವರ ಜತೆಗಿದ್ದ “ಪರಮಾಪ್ತ’ ನಾಯಕರನ್ನೇ ಉಸಿರುಗಟ್ಟಿಸಿ ಆ ಸರ್ಕಾರದ ಪತನಕ್ಕೆ ನಾಂದಿ ಹಾಡಿತು. “ಆಪರೇಷನ್ ಕಮಲ’ದ ಮೂಲಕ ಆಗ ರಾಜ್ಯಾಧ್ಯಕ್ಷರಾಗಿದ್ದ ಬಿಎಸ್ ಯಡಿಯೂರಪ್ಪ ಮೊದಲ ದಿನದಿಂದಲೇ ಪ್ರಯತ್ನಿಸಿದರೂ, ಅದು ಕೂಡಿಬಂದಿದ್ದು, ಪ್ರಮುಖವಾಗಿ ಸಿದ್ದರಾಮಯ್ಯ ಅವರ ಆಪ್ತರಿಗೆ ಸಮ್ಮಿಶ್ರ ಸರ್ಕಾರದಲ್ಲಿ ನಡೆದ “ಅವಮಾನ-ಅಸಹಕಾರ’ಗಳು ಯಡಿಯೂರಪ್ಪ ಹೆಣೆದ ರಾಜಕೀಯ ನಡೆಗೆ ಸಹಕಾರಿಯಾದವು. ವಿಚಿತ್ರ ಎಂದರೆ ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಬಹುತೇಕರು ಕುಮಾರಸ್ವಾಮಿ ಸರ್ಕಾರದ ಪತನದಲ್ಲಿ ಪ್ರಮುಖ ರೂವಾರಿಗಳಾದರು ಮತ್ತು ಬಿಎಸ್‌ವೈ ಸರ್ಕಾರ ಉದಯಕ್ಕೂ ಕಾರಣವಾಗಿ ಮತ್ತೂಮ್ಮೆ ಬಿಜೆಪಿಯ ದಕ್ಷಿಣದ ಬಾಗಿಲು ತೆರೆಯಲು ಅನುವಾದರು.
ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಇನ್ನೊಂದು ಮಾತಿದೆ. ಸಿದ್ದರಾಮಯ್ಯ ಅವರಿಗೂ ಬಿಜೆಪಿ ಸರ್ಕಾರದ ಅಸ್ತಿತ್ವ ಬೇಕಾಗಿತ್ತು ಎನ್ನುವುದು. ಆ ಮೂಲಕ ತಮ್ಮ ಆಪ್ತರನ್ನೇ ರಾಜೀನಾಮೆ ಕೊಡಿಸಿ ಕುಮಾರಸ್ವಾಮಿ ಅವರಿಗೆ “ಪಾಠ ಕಲಿಸಿ’ ಸರ್ಕಾರ ಪತನಗೊಳಿಸುವುದು ಮತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ತಮ್ಮ ಆಪ್ತರನ್ನು ಮಂತ್ರಿಗಳಾಗಿಸುವುದು. ಆದರೆ, ಈ ಮಾತನ್ನು ಸ್ವತಃ ಸಿದ್ದರಾಮಯ್ಯ ಅವರು ಅನೇಕ ಬಾರಿ ನಿರಾಕರಿಸಿದ್ದಾರೆ. ಈಗ ಅದೇ ಆಪ್ತರಲ್ಲಿ ಕನಿಷ್ಠ ಏಳು ಮಂದಿ (ಕಾಂಗ್ರೆಸ್‌ನ ಗೆದ್ದ ಇಬ್ಬರು ಸೇರಿದಂತೆ) ಉಪಸಮರದಲ್ಲಿ ಗೆಲುವು ಪಡೆದಿರುವುದು ಮತ್ತು ಮಂತ್ರಿಯಾಗಲು ಹೊರಟಿರುವುದು ರಾಜಕೀಯ ವ್ಯಂಗ್ಯ ಎಂದೇ ಪರಿಭಾವಿಸಬೇಕಾಗಿದೆ.
ಒಂದರ್ಥದಲ್ಲಿ ಅವರ ನಿರಾಕರಣೆ ನಿಜವಿರಬಹುದು. ಯಾಕೆಂದರೆ ಉಪಚುನಾವಣೆಯನ್ನು ಕಾಂಗ್ರೆಸ್‌ನ ಏಕಮೇವ ನಾಯಕನಾಗಿ ಎದುರಿಸಿದ ರೀತಿ ಅದನ್ನು ಸಾಬೀತು ಪಡಿಸುತ್ತದೆ. ಆದರೆ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ ಮತ್ತಿತರರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೈಬಲಪಡಿಸಲು ವಿಫಲರಾದರು. ಹೆಚ್ಚೇಕೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದ ಅನೇಕರು ಉಪಚುನಾವಣೆ ಕಣದಲ್ಲಿ ಕಾಣಲೇ ಇಲ್ಲ!
ಯಡಿಯೂರಪ್ಪ, ಸಂಘಟನೆಗೆ ಅನುಕೂಲ ಇನ್ನೊಂದು ಕಡೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ದೀರ್ಘಾವಧಿ ರಾಜಕೀಯ ಅನುಭವವನ್ನು ಧಾರೆಯೆರೆದು ರಾಜ ಕೀಯ ನಡೆಸಿದಂತೆ ಕಾಣುತ್ತಿದೆ. ಸಿಡುಕು ತೊರೆದು, ನಗೆ ಚೆಲ್ಲಿ ಎಲ್ಲರತ್ತ ವಿಶ್ವಾಸದ ಹಸ್ತ ಚಾಚುತ್ತಲೇ ತಮ್ಮ ಪಕ್ಷವನ್ನು ಸುಭದ್ರಗೊಳಿಸುವಲ್ಲಿ ಯಶ ಕಂಡರು. ತಮ್ಮ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನೂ ಚಾಣಾಕ್ಷತೆಯಿಂದ ಬದಿಗೆ ಸರಿಸಿ, ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಕಾಂಗ್ರೆಸ್-ಜೆಡಿಎಸ್‌ನ 17 ಅನರ್ಹ ಶಾಸಕರನ್ನು “ಮರೆಯುವ ಪ್ರಶ್ನೆ’ ಇಲ್ಲ ಎಂಬುದು ಖಡಕ್ಕಾಗಿ ಹೇಳಿದರಲ್ಲದೆ ತಮ್ಮ ಪಕ್ಷದ ಮಂತ್ರಿ ಪದವಿ ಆಕಾಂಕ್ಷಿತ ನಾಯಕರನ್ನೂ ಸುಮ್ಮನಾಗಿಸಿದರು. ಬಿಎಸ್‌ವೈ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇತ್ತಾಗ ಪಕ್ಷದೊಳಗೆ ಸೇರಿಸಿಕೊಂಡು ಟಿಕೆಟ್ ಕೊಡಿಸಿ ಬಹುತೇಕರು ಗೆಲ್ಲುವಂತೆಯೂ ನೋಡಿಕೊಂಡರು.
ಆ ಮೂಲಕ ಕಾಂಗ್ರೆಸ್-ಜೆಡಿಎಸ್‌ನ ಭದ್ರಕೋಟೆಗಳಲ್ಲಿ ಬಿಜೆಪಿ ನೆಲೆ ಗಟ್ಟಿಯಾಗುವಂತೆ ನೋಡಿಕೊಳ್ಳುವ ಚಾತುರ್ಯವನ್ನೂ ಬಿಎಸ್‌ವೈ ಮೆರೆದರು. ಪ್ರಮುಖವಾಗಿ ಒಕ್ಕಲಿಗರು, ಹಿಂದುಳಿದ ಮತ್ತು ಪರಿಶಿಷ್ಟರೂ ಬಿಜೆಪಿ ಪಾಲಿಗೆ ಮತ ಬ್ಯಾಂಕ್‌ಗಳಾಗಿ ಪರಿವರ್ತನೆಯಾಗುವಂತೆ ಯಡಿಯೂರಪ್ಪ ನಡೆಸಿದ ನಡೆ ನಿಜವಾದಂತಿದೆ. ಹಳೆ ಮೈಸೂರು, ಅದೂ ಒಕ್ಕಲಿಗರ ಪ್ರಾಬಲ್ಯ ಇರುವ ಪ್ರಾಂತ್ಯದಲ್ಲಿ ಮತ ಬ್ಯಾಂಕ್ ಭದ್ರ ಪಡಿಸಿ ರುವುದು ಬಿಜೆಪಿಗೆ ಅನುಕೂಲವಾಗಲಿದೆ.
ಯಡಿಯೂರಪ್ಪ ಅವರಿಗೆ ಸರ್ಕಾರ ಉಳಿಯುವಷ್ಟು ಮಾತ್ರ ಸಂಖ್ಯಾಬಲ ಒದಗಿದರೆ ಅವರನ್ನು ನಿಧಾನವಾಗಿ ಪಕ್ಕಕ್ಕೆ ಸರಿಸುವ ಪ್ರಯತ್ನವೂ ಇದೆ ಎಂಬ ವದಂತಿ ಆ ಪಕ್ಷದೊಳಗೆ ಹಬ್ಬಿತ್ತು. ಆದರೆ, ಅದನ್ನೂ ಯಡಿಯೂರಪ್ಪ ನಿಭಾಯಿಸಿ, ತಾವು ಸದ್ಯಕ್ಕೆ ಏಕಮೇವಾದ್ವಿತೀಯ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸರ್ಕಾರ ಭದ್ರಗೊಳಿಸುವ ಹೋರಾಟದಲ್ಲಿ ರಾಷ್ಟ್ರೀಯ ನಾಯಕರನ್ನು ರಾಷ್ಟ್ರೀಯ ವಿಷಯಗಳನ್ನು ಬಳಸಿಕೊಳ್ಳಲಿಲ್ಲ ಯಡಿಯೂರಪ್ಪ. “ಅನರ್ಹತೆ’ ಎಂಬ ವಿಷಯ ಪ್ರಬಲವಾಗಿ ಪಕ್ಷದ ಹೋರಾಟಕ್ಕೆ ತಡೆಯಾಗಿದ್ದಾಗ ಅನರ್ಹರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಮೂಲಕ ಪ್ರತ್ಯುತ್ತರ ಕೊಟ್ಟರು. ಹಿಂದಿನಂತೆ ಯಾರ ಉಪಟಳ ಇಲ್ಲದೇ ವಿಧಾನಸಭಾವಧಿ ಮುಗಿಯುವವರೆಗೆ ಆಡಳಿತ ನೀಡಲಿದ್ದಾರೆಯೇ ಎಂಬುದು ಗೊತ್ತಾಗಲಿದೆ. ಜಾತಿವಾರು, ಪ್ರದೇಶವಾರು ಮಂತ್ರಿಗಿರಿ ಹಂಚಿಕೆ, ಹಗರಣರಹಿತ ಸರ್ಕಾರ ನೀಡುವುದು ಸವಾಲು.
ಜೆಡಿಎಸ್ ದಾಳಕ್ಕೆ ಜನರ ಉತ್ತರ
ಈ ನಡುವೆ, ಒಂದು ಪ್ರಾದೇಶಿಕ ಪಕ್ಷವಾಗಿ ಪಕ್ಷ ಉಳಿಸಿಕೊಳ್ಳುವುದು ಮತ್ತು ಸರ್ಕಾರ ರಚಿಸುವುದು ಅಥವಾ ಆ ಬಗ್ಗೆ ತಂತ್ರ ಹೂಡುವುದನ್ನು ಜೆಡಿಎಸ್ ಮುಂದುವರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ 30ರಿಂದ 50 ಶಾಸಕ ಸ್ಥಾನಗಳನ್ನಷ್ಟೇ ಗೆಲ್ಲುವ ಸಾಮರ್ಥ್ಯ ಇರುವ ಜೆಡಿಎಸ್ ತನ್ನ ಪರಿಮಿತಿಯಲ್ಲಿ ಏನೋ ಮಾಡಬೇಕೋ ಅದನ್ನೇ ಮಾಡುತ್ತಿದೆ. ಧರ್ಮ ಸಿಂಗ್, ಯಡಿಯೂರಪ್ಪ ಮತ್ತು ಪರಮೇಶ್ವರ್ ಜತೆಗೂಡಿ ಸಮ್ಮಿಶ್ರ ಸರ್ಕಾರಗಳನ್ನು ರಚಿಸುವತ್ತಲೇ ಜೆಡಿಎಸ್ ಪ್ರಯತ್ನಿಸಿರುವುದು ಈಗ ಇತಿಹಾಸ. ಪತನವಾದ ಸಮ್ಮಿಶ್ರ ಸರ್ಕಾರವನ್ನು ಮತ್ತೆ ರಚಿಸಲು ಜೆಡಿಎಸ್‌ಗೆ ಇದ್ದ ಮಾರ್ಗವೆಂದರೆ ಬಿಜೆಪಿ ನಾಲ್ಕಕ್ಕಿಂತ ಕಡಿಮೆ ಕ್ಷೇತ್ರಗಳನ್ನು ಈ ಉಪ ಚುನಾವಣೆಯಲ್ಲಿ ಗೆಲ್ಲುವಂತೆ ಕಟ್ಟಿಹಾಕುವುದು ಮತ್ತು ಆ ಮೂಲಕ ಬಿಜೆಪಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುಂತೆ ಮಾಡಿ, ಕಾಂಗ್ರೆಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸುವುದು ಹಾಗೂ ಸಿದ್ದ ರಾಮಯ್ಯ ಅವರನ್ನು ಬದಿಗೆ ಸರಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಎಂದು ಹೆಸರಿಸಿ ಮತ್ತೆ ಪಕ್ಷ ಬಲವರ್ಧನೆಗೆ ಪ್ರಯತ್ನಿಸುವುದು ಉದ್ದೇಶವಾಗಿತ್ತು. ಖರ್ಗೆ ಅವರ ಹೆಸರನ್ನು ತೇಲಿಬಿಟ್ಟಿದ್ದು, ಕಾಂಗ್ರೆಸ್‌ನಲ್ಲಿ ಮತ್ತಷ್ಟು ಭಿನ್ನಮತ ಹೆಚ್ಚಾಗಲಿ ಮತ್ತು ಬಿಜೆಪಿಗೆ ಅನುಕೂಲವಾಗಲಿ ಎಂದು ಜೆಡಿಎಸ್ ನಡೆಸಿದ ತಂತ್ರ ಎಂಬ ವ್ಯಾಖ್ಯಾನವೂ ಇದೆ. ಯಾಕೆಂದರೆ, ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಭದ್ರ, ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸಲಿ ದ್ದಾರೆ ಎಂಬ ಅರ್ಥಬರುವ ಮಾತಾಡಿದ್ದರು. ಇತ್ತ , ಕುಮಾರಸ್ವಾಮಿ ಅವರ ಅಪ್ಪ ಮಾಜಿ ಪ್ರಧಾನಿ ದೇವೇಗೌಡರು ಮುಂದೇನಿ ದ್ದರೂ “ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ’ ಹೇಳಿದಂತಾಗುತ್ತದೆ ಎಂಬ ಅರ್ಥ ಹುಡುಕಿದ್ದರು. ಈ ದಾಳ ಏನೆಂಬುದು ಬಹುಶಃ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಗೆ ಖಚಿತವಾಗಿ ತಿಳಿದಿರಬಹುದು.
ಒಟ್ಟಿನಲ್ಲಿ ಜಾತೀಯ ರಾಜಕೀಯ, ತುಷ್ಟೀಕರಿಸುವ ಪಕ್ಷಗಳನ್ನು ತಹಬದಿಗೆ ತರಲು ಪ್ರಜ್ಞಾವಂತ ಮತದಾರನಿಗೆ ಮಾತ್ರ ಸಾಧ್ಯ. ಸಿದ್ದರಾಮಯ್ಯ, ಕುಮಾರಸ್ವಾಮಿ ಆದಿಯಾಗಿ ಅನೇಕ ನಾಯಕರಿಗೆ ಎಚ್ಚರಿಕೆ ಗಂಟೆಯನ್ನೂ ಬಾರಿಸಿದೆ. ಬಹುಮತದ ಸರ್ಕಾರ “ಈಗ ತಾನೇ” ಬಂದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೋಸ್ಕರ ವಿರೋಧ ಪಕ್ಷಗಳ ಸಹಾಯ ಯಾಚಿಸಿರುವುದು ಪ್ರಜಾತಂತ್ರಕ್ಕೆ ಕೊಟ್ಟ ಬೆಲೆಯಾಗಿದೆ.
– ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.