ಸರಕಾರ ಸುಭದ್ರವಾಯಿತು, ಸುಸ್ಥಿರ ಆಡಳಿತ ನೀಡಿ
Team Udayavani, Dec 10, 2019, 5:55 AM IST
ನಡೆದದ್ದು ಉಪ ಚುನಾವಣೆಯಾಗಿದ್ದರೂ ಇದಕ್ಕೆ ರಾಷ್ಟ್ರ ಮಟ್ಟದ ಮಹತ್ವವಿತ್ತು. ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಕಡಿಮೆಯಿಲ್ಲದಂತೆ ತುರುಸಿನಿಂದ ನಡೆದಿತ್ತು ಈ ಚುನಾವಣೆ. ಈ ಚುನಾವಣೆಯ ಫಲಿತಾಂಶದ ಮೇಲೆ ರಾಜ್ಯದ ರಾಜಕೀಯ ಭವಿಷ್ಯ ನಿಂತಿತ್ತು. ಹೀಗಾಗಿ ಈ ಚುನಾವಣೆಗೆ ಇನ್ನಿಲ್ಲದ ಮಹತ್ವವಿತ್ತು.15ರ ಪೈಕಿ 12 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಿಜೆಪಿ ವಿಜಯದ ನಗೆ ಬೀರಿದೆ.
ಇದೀಗ ಈ ಫಲಿತಾಂಶದಿಂದಾಗಿ ಬಿಜೆಪಿ ನಿಚ್ಚಳ ಬಹುಮತ ಗಳಿಸಿಕೊಂಡಿರುವುದರಿಂದ ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಇದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಸರಳ ಬಹುಮತ ಇಲ್ಲದ ಕಾರಣ ಸರಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿಕೊಂಡು ರಚಿಸಿದ ಸರಕಾರದ ಆಡಳಿತದ ಅಪಸವ್ಯಗಳನ್ನೆಲ್ಲ ರಾಜ್ಯ ನೋಡಿದೆ. ಒಂದು ವೇಳೆ ಬಿಜೆಪಿಗೆ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೆ ಹೋಗುತ್ತಿದ್ದರೆ ರಾಜಕೀಯ ಅಸ್ಥಿರತೆ ಮತ್ತೆ ಮುಂದುವರಿಯುತ್ತಿತ್ತು. ಫಲಿತಾಂಶಕ್ಕೂ ಮೊದಲೇ ಮತ್ತೂಮ್ಮೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗುವ ಮಾತುಗಳು ಕೇಳಿ ಬಂದಿದ್ದವು. ಸಮ್ಮಿಶ್ರ ಸರಕಾರದ ರಗಳೆಯೇ ಬೇಡವೆಂದು ಮತದಾರ ಈ ಸಲ ಬಿಜೆಪಿಗೆ ಮತ ನೀಡಿರುವಂತೆ ಕಂಡು ಬರುತ್ತಿದೆ. ಆ ಮಟ್ಟದ ಪ್ರಬುದ್ಧತೆಯನ್ನು ಮತದಾರರು ತೋರಿಸಿಕೊಟ್ಟಿದ್ದಾರೆ.
ಬಹುಮತ ಪಡೆದುಕೊಳ್ಳಲು ಬಿಜೆಪಿ ಅನುಸರಿಸಿದ ದಾರಿ ಸರಿಯಾದದ್ದೇ ಅಲ್ಲವೇ ಎನ್ನುವ ಚರ್ಚೆ ಬೇರೆ. ಆದರೆ ಇನ್ನುಳಿದಿರುವ ಮೂರೂವರೆ ವರ್ಷ ಸರಕಾರ ಪತನವಾಗುವ ಭೀತಿಯಿಲ್ಲದೆ ಆಡಳಿತ ನಡೆಸುವ ಅವಕಾಶ ಸಿಕ್ಕಿದೆ ಎನ್ನುವುದು ಮುಖ್ಯ. ಈ ಅವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಬಹಳ ವರ್ಷಗಳ ಬಳಿಕ ಕೇಂದ್ರದಲ್ಲೂ, ರಾಜ್ಯದಲ್ಲೂ ಒಂದೇ ಪಕ್ಷ ಆಡಳಿತ ನಡೆಸುವ ಅವಕಾಶ ಪ್ರಾಪ್ತವಾಗಿದ್ದು, ಇದನ್ನು ಸರಿಯಾಗಿ ಬಳಸಿಕೊಂಡು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಸರಕಾರ ಕಾರ್ಯ ಪ್ರವೃತ್ತವಾಗಬೇಕು.
ಈ ಅದ್ಭುತ ಗೆಲುವಿನಿಂದ ಸಾಬೀತಾಗಿರುವ ಇನ್ನೊಂದು ಅಂಶವೆಂದರೆ ಯಡಿಯೂರಪ್ಪನವರೇ ಇನ್ನೂ ಬಿಜೆಪಿಯ ಪ್ರಬಲ ನಾಯಕ ಎನ್ನುವುದು. ಹಾಗೇ ನೋಡಿದರೆ ಈ ಉಪಚುನಾವಣೆ ರಾಜ್ಯದ ರಾಜಕೀಯ ಭವಿಷ್ಯದ ಜೊತೆಗೆ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ನಾಯಕತ್ವದ ಅಗ್ನಿಪರೀಕ್ಷೆಯೂ ಆಗಿತ್ತು. ಈ ಪರೀಕ್ಷೆಯಲ್ಲಿ ಗೆದ್ದವರು ಯಡಿಯೂರಪ್ಪನವರೇ.ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೇ ಹೋಗಿದ್ದರೆ ಸರಕಾರ ಪತನವಾಗುವ ಸಾಧ್ಯತೆಯಿತ್ತು.ಹೀಗಾಗಿದ್ದರೆ ಅದರ ಮೊದಲ ಬಲಿಪಶು ಯಡಿಯೂರಪ್ಪನವರೇ ಆಗುತ್ತಿದ್ದರು. ಯಾವ ಕಾರಣಕ್ಕೂ ಪಕ್ಷದ ಹೈಕಮಾಂಡ್ ಅವರಿಗೆ ಮರಳಿ ಮನ್ನಣೆ ನೀಡುವ ಸಾಧ್ಯತೆಯಿರಲಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೂ ಅದರ ಶ್ರೇಯಸ್ಸೆಲ್ಲ ಮೋದಿ-ಶಾ ಜೋಡಿಗೆ ಹೋಗಿತ್ತು. ಯಡಿಯೂರಪ್ಪನವರು ಶ್ರಮಕ್ಕೆ ವಿಶೇಷವಾದ ಮನ್ನಣೆ ಸಿಕ್ಕಿರಲಿಲ್ಲ. ಈ ಎಲ್ಲ ಕಾರಣಕ್ಕೆ ಉಪ ಚುನಾವಣೆ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಮುಖ್ಯವಾಗಿತ್ತು. ಈ ಒಂದು ಗೆಲುವಿನ ಮೂಲಕ ಯಡಿಯೂರಪ್ಪ ತನ್ನ ರಾಜಕೀಯದ ಕಡು ವಿರೋಧಿಗಳಾಗಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರನ್ನು ಮೂಲೆಗುಂಪು ಮಾಡಿದ್ದಲ್ಲದೆ ಪಕ್ಷದೊಳಗಿನ ಹಿತಶತ್ರುಗಳ ಬಾಯಿ ಮುಚ್ಚಿಸಿದ್ದಾರೆ. ಇನ್ನುಳಿದ ಅವಧಿಯಲ್ಲಿ ಯಡಿಯೂರಪ್ಪನವರಿಗೆ ಕಿರುಕುಳ ನೀಡುವ ಧೈರ್ಯವನ್ನು ಅವರು ಮಾಡಲಿಕ್ಕಿಲ್ಲ.
ಫಲಿತಾಂಶ ಖಂಡಿತವಾಗಿಯೂ ಪಕ್ಷದಲ್ಲಿ ಯಡಿಯೂರಪ್ಪನವರ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಯಡಿಯೂರಪ್ಪನವರನ್ನು ದುರ್ಬಲಗೊಳಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವುದು ಅಸಾಧ್ಯ ಎಂಬ ಸಂದೇಶ ಸಿಕ್ಕಿದೆ. ಆದರೆ ಹಾಗೆಂದು ಯಡಿಯೂರಪ್ಪನವರ ಹಾದಿ ಸುಗಮವಾಯಿತು ಎಂದಲ್ಲ. ಅನರ್ಹಗೊಂಡು ಮರಳಿ ಸ್ಪರ್ಧಿಸಿ ಗೆದ್ದು ಬಂದವರಿಗೆಲ್ಲ ಉತ್ತಮ ಸ್ಥಾನಮಾನ ನೀಡುವುದಾಗಿ ಯಡಿಯೂರಪ್ಪನವರು ವಾಗ್ಧಾನ ನೀಡಿದ್ದಾರೆ. ಅದನ್ನೀಗ ಈಡೇರಿಸಬೇಕು.
ಇದು ಕಾಂಗ್ರೆಸ್‌ನಲ್ಲಾದಂತೆ ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರು ಎಂಬ ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು. ಇಂಥ ರಗಳೆಗಳನ್ನು ನಿಭಾಯಿಸಿಕೊಂಡು ಸುಸ್ಥಿರವಾದ ಆಡಳಿತವನ್ನು ನೀಡುವ ಹೊಣೆ ಸರಕಾರದ ಮೇಲಿದೆ. ಯಾವುದೇ ಕಾರಣಕ್ಕೂ ಇನ್ನೊಂದು ರಾಜಕೀಯ ಅಸ್ಥಿರತೆಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಮತದಾರರು ಇಲ್ಲ ಎನ್ನುವುದನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.