ನಿರ್ವಹಣೆ ಕಾಣದ ಗ್ರಾಮೀಣ ಭಾಗದ ವೆಂಟೆಡ್ ಡ್ಯಾಂ
ಸುಗ್ಗಿ ಬೆಳೆಗೆ ನೀರಿಲ್ಲ ತುಕ್ಕು ಹಿಡಿಯುತ್ತಿರುವ ಕಬ್ಬಿಣದ ಬಾಗಿಲುಗಳು ಕೃಷಿಭೂಮಿ ಬರಡಾಗುವ ಪರಿಸ್ಥಿತಿ
Team Udayavani, Dec 11, 2019, 4:47 AM IST
ಬೈಂದೂರು: ಕೃಷಿಕರ ಅನುಕೂಲಕ್ಕಾಗಿ ಜನಪ್ರತಿನಿಧಿಗಳು ಸರಕಾರ ಮಟ್ಟದಲ್ಲಿ ಪರಿಶ್ರಮ ಪಟ್ಟು ತಂದಿರುವ ಹತ್ತಾರು ಕೋಟಿ ರೂ. ಅನುದಾನದ ಗ್ರಾಮೀಣ ಭಾಗದ ವೆಂಟೆಡ್ ಡ್ಯಾಂಗಳು ನಿರ್ವಹಣೆ ಕಾಣದೆ ನೀರು ಪಾಲಾಗುತ್ತಿವೆ. ನೂರಾರು ವರ್ಷ ಬಾಳಬೇಕಾದ ಸೇತುವೆಗಳು ಒಂದೆರಡು ವರ್ಷದಲ್ಲೆ ಕಳಚಿ ಬೀಳುವ ಪರಿಸ್ಥಿತಿ ಬಂದಿದೆ. ಗುತ್ತಿಗೆದಾರರ ನಿರ್ಲಕ್ಷ್ಯ, ಅಧಿಕಾರಿಗಳ ಆಲಸ್ಯದ ಪರಿಣಾಮ ನೂರಾರು ಎಕರೆ ಕೃಷಿಭೂಮಿ ಬರಡಾಗುವ ಪರಿಸ್ಥಿತಿ ಯಡ್ತರೆ ಗ್ರಾಮದ ಆಲಂದೂರು ಮುಂತಾದ ಭಾಗದಲ್ಲಿ ಕಂಡು ಬರುತ್ತಿದೆ.
ಏನಿದು ಸಮಸ್ಯೆ?
ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ಎರಡು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 1.31 ಕೋಟಿ ರೂ. ಅನುದಾನದ ವೆಂಟೆಡ್ ಡ್ಯಾಮ್ ನಿರ್ಮಿಸಲಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿಯೆ ಪ್ರಪ್ರಥಮ ಬಾರಿ ವಿನೂತನ ತಂತ್ರಜ್ಞಾನ ಹಾಗೂ ವಿನ್ಯಾಸದಲ್ಲಿ ಇದನ್ನು ರೂಪುಗೊಳಿಸಲಾಗಿತ್ತು. ಕೊಸಳ್ಳಿ ಜಲಪಾತದಿಂದ ಹರಿಯುವ ತೂದಳ್ಳಿ ಹೊಳೆ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. 1980ರ ದಶಕದಲ್ಲಿ ಹಡವಿನಗದ್ದೆ ಎಂಬಲ್ಲಿ ದೂರದೃಷ್ಟಿತ್ವದ ಚಿಂತನೆಯೊಂದಿಗೆ ಸುಮಾರು 400 ಮೀಟರ್ ಉದ್ದದ ಚೆಕ್‌ಡ್ಯಾಮ್ ನಿರ್ಮಿಸಿದ್ದರೂ ನದಿಯ ನೀರಿನ ಅಬ್ಬರ ಹಾಗೂ ಸೆಳೆತದ ನಡುವೆ ಕಾಲ ಕ್ರಮೇಣ ಕಿರು ಸೇತುವೆ ಶಿಥಿಲಗೊಂಡು ಅವಸಾನಗೊಂಡಿತ್ತು. ಈ ಭಾಗದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಿ ಸುಮಾರು 3 ಕಿ.ಮೀ. ಕಾಲುವೆ ಮೂಲಕ ನೀರು ಕೊಂಡೋಯಲಾಗುತ್ತಿತ್ತು. ಇದರಿಂದ ಕೇಸ್ನಿ, ಆಲಂದೂರು, ಜೋಗೂರು, ಶಿರೂರಿನವರೆಗೆ ಕೃಷಿಗೆ ಹಾಗೂ ಸುಗ್ಗಿ ಬೆಳೆಗೆ ಅನುಕೂಲವಾಗುತ್ತಿತ್ತು. ಉದಯವಾಣಿ ಈ ಕುರಿತು ಹಲವು ಬಾರಿ ವರದಿ ಪ್ರಕಟಿಸಿತ್ತು.
ಬಳಿಕ ಸ್ಥಳೀಯರು, ಜನಪ್ರತಿನಿಧಿಗಳು ಮಂತ್ರಿಗಳನ್ನು ಭೇಟಿ ನೀಡಿ ಗಮನ ಸೆಳೆದಿದ್ದರು. ಈ ಕುರಿತು ಗಂಭೀರವಾಗಿ ಪರಿಗಣಿಸಿದ ಜನಪ್ರತಿನಿಧಿಗಳು ಸರಕಾರದ ಗಮನಸೆಳೆದು ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು. ಆರಂಭದಲ್ಲೇ ಕಳಪೆ ಕಾಮಗಾರಿ ನಡೆಸುವುದರ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಅಧಿಕಾರಿಗಳು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಕಾನೂನು ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.
ಉದ್ಘಾಟನೆ ಕೂಡ ಆಗಿಲ್ಲ
ಕಾಮಗಾರಿ ಮುಗಿದ ಬಳಿಕ ಚುನಾವಣೆ ಘೋಷಣೆಯಾಗಿ ಬಳಿಕ ಜನಪ್ರತಿನಿಧಿಗಳ ಬದಲಾವಣೆಯಾಯಿತು. ಆದರೆ ಈ ವೆಂಟೆಂಡ್ ಡ್ಯಾಮ್ ಇದುವರೆಗೆ ಅಧಿಕೃತವಾಗಿ ಉದ್ಘಾಟನಾ ಭಾಗ್ಯ ಕಂಡಿಲ್ಲ. ಗುತ್ತಿಗೆದಾರರು ಸಹ ಈ ಕಡೆ ಕಣ್ಣೆತ್ತಿ ನೋಡಲಿಲ್ಲ.ಇದರಿಂದಾಗಿ ಮಳೆಗಾಲದಲ್ಲಿ ಕಾಲುವೆಯಲ್ಲಿ ಮಣ್ಣು ಶೇಖರಣೆಗೊಂಡು ಕೋಟ್ಯಂತರ ರೂಪಾಯಿ ಅನುದಾನ ಗುತ್ತಿಗೆದಾರರ ಕಳಪೆ ನಿರ್ವಹಣೆಯಿಂದ ನೀರು ಪಾಲಾಗಿದೆ.
ಈ ಕುರಿತು ಸ್ಪಂದಿಸದಿರುವುದರಿಂದ ಸ್ಥಳೀಯರು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗುತ್ತಿಗೆದಾರರಿಗೆ ನೊಟೀಸ್ ನೀಡುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ ಆರಂಭದಲ್ಲೆ ಕಟ್ಟು ನಿರ್ಮಿಸಿ ನೀರು ಕಾಲುವೆಯಲ್ಲಿ ಸಾಗಿಸಬೇಕಾದ ಕಾರಣ ಸೇತುವೆ ನಂಬಿಕೊಂಡ ನೂರಾರು ಎಕರೆ ಕೃಷಿಕರು ಕೃಷಿಯನ್ನು ಕೈಬಿಡುವಂತಾಗಿದೆ.
ನೀರಾವರಿಗೆ ವಿಶೇಷ ಪ್ರಾಧಾನ್ಯ
ವೆಂಟೆಡ್ ಡ್ಯಾಂ ಬಹುತೇಕ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ನಿರ್ವಹಣೆ ಕೊರತೆಯಿಂದ ಕೃಷಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಳಪೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಸಹಿಸಲಾಗದು. ಕೃಷಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇನೆ. ನೀರಾವರಿಗೆ ವಿಶೇಷ ಪ್ರಾಧಾನ್ಯ ನೀಡಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು
-ಅರುಣ ಕುಮಾರ್, ಶಿರೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.