ಜ.3ರಿಂದ ನಗರದಲ್ಲಿ ವಿಜ್ಞಾನ ಸಮ್ಮೇಳನ
Team Udayavani, Dec 12, 2019, 3:06 AM IST
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಜ.3ರಿಂದ 7ರವರೆಗೆ ನಡೆಯಲಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ “ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’ ವಿಷಯ ಕುರಿತು ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೋಬೆಲ್ ಪ್ರಶಸ್ತಿ ಪುರಸ್ಕೃತರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 20 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ವಿಜ್ಞಾನದ 14 ವಿಭಾಗಗಳ ಪ್ರಸ್ತುತ ದಿನದ ಸಂಶೋಧನೆ ಮತ್ತು ಆವಿಷ್ಕಾರದ ಬಗ್ಗೆ ಉಪನ್ಯಾಸ, ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.
ಮಹಿಳಾ ವಿಜ್ಞಾನ ಕಾಂಗ್ರೆಸ್ ಆಯೋಜನೆ: ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗಾಗಿ ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ಮಹಿಳಾ ವಿಜ್ಞಾನ ಕಾಂಗ್ರೆಸ್ ಆಯೋಜಿಸಲಾಗಿದೆ. ಜ.5ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ 160 ವಿಜ್ಞಾನಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಲೇಖನಗಳನ್ನು ಮಂಡಿಸಲಿದ್ದಾರೆ ಎಂದರು.
ಜ.4, 5ರಂದು ಮಕ್ಕಳ ವಿಜ್ಞಾನ ಕಾಂಗ್ರೆಸ್: ಜ.4 ಮತ್ತು 5ರಂದು ಮಕ್ಕಳ ವಿಜ್ಞಾನ ಕಾಂಗ್ರೆಸ್ ಆಯೋಜಿಸಲಾಗಿದ್ದು, ಈ ಕಾಂಗ್ರೆಸ್‌ನಲ್ಲಿ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಮಕ್ಕಳು ಅವರ ಯೋಜನೆ ಪ್ರದರ್ಶಿಸಲಿದ್ದಾರೆ. ಇದನ್ನು ಭಾರತರತ್ನ ಸಿ.ಎನ್.ಆರ್.ರಾವ್ ಉದ್ಘಾಟಿಸಲಿದ್ದಾರೆ. ವಿಜ್ಞಾನ ಕಾಂಗ್ರೆಸ್ ಭಾಗವಾಗಿ ಸಂವಹನಕಾರರ ಕೂಟವನ್ನು ಜ.5 ಮತ್ತು 6ರಂದು ಆಯೋಜಿಸಲಾಗಿದೆ. ಇದು ತಜ್ಞರು ಮತ್ತು ಯುವ ಸಂಶೋಧಕರ ವೇದಿಕೆಯಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಮಾಹಿತಿಗಾಗಿ ಆ್ಯಪ್ ಅಭಿವೃದ್ಧಿ: ಭಾರತೀಯ ವಿಜ್ಞಾನ ಸಮ್ಮೇಳನದ ಮಾಹಿತಿಗಳನ್ನು ಒದಗಿಸಲು “ಐಎಸ್‌ಸಿ 2020 ಯುಎಎಸ್‌ಬಿ’ ಮೊಬೈಲ್ ಆ್ಯಪನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಡೆಯಬಹುದು. ಈ ಆ್ಯಪ್‌ನಲ್ಲಿ ವಿಜ್ಞಾನ ಸಮ್ಮೇಳನದ ಸಂಪೂರ್ಣ ಮಾಹಿತಿ, ಆಯಾ ದಿನಗಳ ಅಧಿವೇಶನಗಳ ಮಾಹಿತಿ, ವಿವಿಧ ವಿಷಯಗಳ ಮೇಲಿನ ಉಪನ್ಯಾಸಗಳು ನಡೆಯುವ ಸ್ಥಳಗಳ ಮಾಹಿತಿ ಹಾಗೂ ಆ ಸ್ಥಳಗಳನ್ನು ತಲುಪಲು ನ್ಯಾವಿಗೇಷನ್, ವಸತಿ ಮತ್ತು ಸಾರಿಗೆ ಕುರಿತು ಮಾಹಿತಿ, ಭೋಜನಾಲಯದ ಮಾಹಿತಿ ದೊರೆಯಲಿದೆ. ಮಾಹಿತಿಗೆ ದೂ. ಸಂ. 18005722020ನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.