7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಗೊಂದಲ ಬಗೆಹರಿಯಲಿ
Team Udayavani, Dec 13, 2019, 5:25 AM IST
ಪ್ರಸಕ್ತ ಸಾಲಿನ ಅರ್ಧ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಪೂರ್ಣಗೊಂಡಿದ್ದು, ಉಳಿದರ್ಧ ಭಾಗದ ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ತಿಂಗಳು ಕಳೆದಿದೆ. ಆದರೆ, 7ನೇ ತರಗತಿ ಪಬ್ಲಿಕ್ ಪರೀಕ್ಷೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪಾಲಕ, ಪೋಷಕರು, ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇನ್ನೂ ಬಗೆಹರಿದಿಲ್ಲ. 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಪ್ರಸಕ್ತ ಸಾಲಿನಿಂದಲೇ ನಡೆಯುತ್ತದೋ ಅಥವಾ ಇಲ್ಲವೋ ಎಂಬ ಸ್ಪಷ್ಟತೆಯನ್ನು ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಕರಿಗೂ ನೀಡಿಲ್ಲ.
ಗ್ರಾಮೀಣ ಭಾಗದ ಅನೇಕ ಶಾಲಾ ಶಿಕ್ಷಕರು ಇನ್ನೂ ಇದೇ ಗೊಂದಲದಲ್ಲೇ ಇ¨ªಾರೆ. ಒಂದೊಮ್ಮೆ ಸರ್ಕಾರ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವ ಸಂಬಂಧ ಆದೇಶ ಹೊರಡಿಸಿದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿ ಸುವುದು ಹೇಗೆ ಎಂಬ ಆತಂಕವೂ ಮನೆ ಮಾಡಿದೆ.
7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲೇ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಿದ್ದೇವೆ ಎಂದು ಹೇಳಿದ್ದರು.
ಆದರೆ, ಈ ಬಗ್ಗೆ ಯಾವುದೇ ಸಿದ್ಧತಾ ಕ್ರಮ ತೆಗೆದುಕೊಂಡಿಲ್ಲ. ಅರ್ಧ ವರ್ಷದ ಶೈಕ್ಷಣಿಕ ಚಟುವಟಿಕೆ ಮುಗಿದು, ವಿದ್ಯಾರ್ಥಿಗಳು ದಸರಾ ರಜೆ ಪೂರೈಸಿ ಪುನಃ ಶಾಲೆಗೆ ಹೋಗುವ ಸಂದರ್ಭದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು 7ನೇ ತರಗತಿ ಪಬ್ಲಿಕ್ ಪರೀಕ್ಷೆಯ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ತೊಡಕುಗಳ ಪರಿಶೀಲನೆ ಆರಂಭಿಸಿದ್ದರು.
ಒಟ್ಟಲ್ಲಿ, 7ನೇ ತರಗತಿ ಪಬ್ಲಿಕ್ ಪರೀಕ್ಷೆ ಸಂಬಂಧ ರಾಜ್ಯ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ಪರೀಕ್ಷೆ ಸನಿ ಹ ವಿ ರುವ ಈ ದಿನಗಳಲ್ಲಿ ಸರ್ಕಾರ ಇಂತಹ ಇಕ್ಕಟ್ಟಿಗೆ ವಿದ್ಯಾರ್ಥಿ, ಪಾಲಕ ಪೋಷಕ ರನ್ನು ಸಿಲುಕಿಸಿರುವುದು ಸರಿಯಲ್ಲ.
2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಂತೆ ಶಾಲಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತಿಲ್ಲ. ಅದಾಗ್ಯೂ ಸರ್ಕಾರ ಹಾಗೂ ಶಿಕ್ಷಣ ಇಲಾಖೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಪ್ರಸ್ತಾವನೆ ಇಟ್ಟುಕೊಂಡಿರುವುದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿತ್ತು.
ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸ್ಪಷ್ಟನೆ ಕೋರಿ ನವೆಂಬರ್ ಎರಡನೇ ವಾರದಲ್ಲಿ ನೊಟೀಸ್ ಜಾರಿ ಮಾಡಿತ್ತು.
ಆದರೆ ಇಲಾಖೆಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಬುಧವಾರ(ಡಿ.11)ರಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಸಭೆ ನಡೆಸಿದ್ದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಿರುವ ಬಜೆಟ್
ಅನುಮೋದನೆ ಮತ್ತು ವಿವಿಧ ಯೋಜನೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವ ತೀರ್ಮಾನ ವನ್ನೂ ತೆಗೆದುಕೊಂಡಿಲ್ಲ. ಈ ಸಂಬಂಧ ಇನ್ನೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಸ್ವತಃ ಶಿಕ್ಷಣ ಸಚಿವರೆ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ ತಿಂಗಳು ಅರ್ಧ ಕಳೆದಿದೆ. ಕ್ರಿಸ್ಮಸ್ ರಜೆ ಸೇರಿದಂತೆ ಕೆಲವು ಶೈಕ್ಷಣಿಕ ಚಟುವಟಿಕೆಯಿಂದಲೇ ಈ ತಿಂಗಳು ಪೂರ್ತಿ ಕಳೆಯಲಿದೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ಮೂರು ತಿಂಗಳು ಉಳಿಯಲಿದೆ. ಈ ಮೂರು ತಿಂಗಳಲ್ಲಿ ಪರೀಕ್ಷೆ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು. ಪರೀಕ್ಷೆ ನಡೆಸುವುದಾದರೆ ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸಬೇಕು. ಪರೀಕ್ಷೆಗೆ ಆಡಳಿತಾತ್ಮಕ ಸಿದ್ಧತೆ ಮಾಡಬೇಕು. ಮೌಲ್ಯಮಾಪನ ಹಾಗೂ ಫಲಿತಾಂಶ ಘೋಷಣೆ ಹೇಗೆ ಮತ್ತು ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಹುದೇ? ಎಂಬಿತ್ಯಾದಿ ಅನೇಕ ಅಂಶಗಳ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿರುತ್ತದೆ.
ಒಟ್ಟಿನಲ್ಲಿ 7ನೇ ತರಗತಿ ಪಬ್ಲಿಕ್ ಪರೀಕ್ಷೆ ವಿಷಯದ ಲ್ಲಿ ಸರ್ಕಾರ ಹಾಗೂ ಇಲಾಖೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾಡಿದೆ. ಅತ್ತ ಶಿಕ್ಷಕರಿಗೂ ಸರಿಯಾದ ಮಾಹಿತಿ ಇಲ್ಲ. ಇತ್ತ ಪಾಲಕ ಪೋಷಕರೂ ಕಂಗಾಲಾಗುತ್ತಿದ್ದಾರೆ. ಇಡೀ ವಿದ್ಯಾರ್ಥಿ ಸಮೂಹವೇ ಗೊಂದಲ ದಲ್ಲಿ ಇದೆ. ಇಲಾಖೆ ಮತ್ತು ಸರ್ಕಾರ ಈ ಸಂಬಂಧ ಆದಷ್ಟು ಬೇಗ ಸ್ಪಷ್ಟ ನಿರ್ಧಾರ ತೆಗೆದುಕೊಂಡು ವಿದ್ಯಾರ್ಥಿ ಶಿಕ್ಷಕ ಸಮೂಹದಲ್ಲಿ ಮೂಡಿರುವ ಆತಂಕ ದೂರ ಮಾಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.