ಬಳಕೆಗೆ ಅಪಾಯಕಾರಿ ಬೆಲ್ಲ
ಕಳಪೆ ಬೆಲ್ಲದ ಕುರಿತು ನ. 24-25ರಂದು 'ಉದಯವಾಣಿ'ಯಲ್ಲಿ ಪ್ರಕಟಗೊಂಡಿತ್ತು ವರದಿ
Team Udayavani, Dec 14, 2019, 1:33 PM IST
ಮುದ್ದೇಬಿಹಾಳ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಇಲ್ಲಿನ ಬಸವೇಶ್ವರ ವೃತ್ತದ ಹತ್ತಿರ ಇರುವ ರಾಜಸ್ತಾನ ಹನುಮಾನ್‌ಜಿ ರಾಜಪುರೋಹಿತ ಅವರಿಗೆ ಸೇರಿದ ಶ್ರೀ ಮಹಾಲಕ್ಷ್ಮೀ ಕಿರಾಣಿ ಮತ್ತು ಜನರಲ್ ಸ್ಟೋರ್ಸ್ ಮೇಲೆ ನ. 24ರಂದು ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಬೆಲ್ಲ ಕಳಪೆ ಗುಣಮಟ್ಟದಿಂದ ಕೂಡಿದ್ದು ಮಾನವ ಬಳಕೆಗೆ ಅಪಾಯಕಾರಿ ಎಂದು ಪ್ರಯೋಗಾಲಯ ವರದಿ ದೃಢಪಡಿಸಿದೆ.
ವರದಿಯ ಪ್ರತಿ ಉದಯವಾಣಿಗೆ ಲಭ್ಯವಾಗಿದ್ದು ಗ್ರಾಹಕರಿಗೆ ಮಾರಾಟವಾಗಿದ್ದ ಆ ಬೆಲ್ಲವು ಎಫ್‌ಎಸ್‌ಎಸ್‌ಎಐ (ಫುಡ್ ಸೇಫಟಿ ಆ್ಯಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ) ನಿಗದಿಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ತಯಾರಾಗಿದ್ದಲ್ಲ. ಅದರ ಗುಣಮಟ್ಟ ಸಬ್ ಸ್ಟಾಂಡರ್ಡ್ ಇದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳಪೆ ಗುಣಮಟ್ಟದ ಬೆಲ್ಲವನ್ನು ಗ್ರಾಹಕರಿಗೆ ಮಾರಾಟ ಮಾಡಿರುವ ಆರೋಪ ದೃಢಪಟ್ಟಿರುವ ಹಿನ್ನೆಲೆ ಮಹಾಲಕ್ಷ್ಮೀ ಕಿರಾಣಿ ಮತ್ತು ಜನರಲ್ ಸ್ಟೋರ್ಸ್ ಮಾಲೀಕ ಹನುಮಾನ್‌ಜಿ ರಾಜಪುರೋಹಿತ. ಇವರಿಗೆ ಬೆಲ್ಲ ಮಾರಾಟ ಮಾಡಿರುವ ಸ್ಥಳೀಯ ಬೆಲ್ಲದ ಸಗಟು ದಾಸ್ತಾನುಗಾರ ವಿ.ಕೆ.ದೇಶಪಾಂಡೆ ಮತ್ತು ಮುಖ್ಯ ಬೆಲ್ಲದ ಸಗಟು ಮಾರಾಟಗಾರ ಮಂಡ್ಯದ ಎಪಿಎಂಸಿಯಲ್ಲಿನ ಪೂರ್ಣಿಮಾ ಟ್ರೇಡಿಂಗ್ ಕಂಪನಿ ವ್ಯವಸ್ಥಾಪಕರ ವಿರುದ್ಧ ವಿಜಯಪುರ ಅಪರ ಜಿಲ್ಲಾ ದಂಡಾಧಿಕಾರಿಗಳು ಮತ್ತು ನ್ಯಾಯ ನಿರ್ಣಾಯಕ ಅಧಿಕಾರಿಗಳು ಆಹಾರ ಗುಣಮಟ್ಟ ಸುರಕ್ಷತಾ ಪ್ರಾಧಿಕಾರ ಇವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹಿನ್ನೆಲೆ: ತಾಲೂಕಿನ ಕೆಸಾಪುರದ ಬಸಮ್ಮ ಬೋಯೇರ ಅವರು ಶ್ರೀ ಮಹಾಲಕ್ಷ್ಮೀ ಕಿರಾಣಿ ಮತ್ತು ಜನರಲ್ ಸ್ಟೋರ್ಸನಿಂದ 2.5 ಕೆಜಿ ಬೆಲ್ಲ ಖರೀದಿಸಿದ್ದರು. ನ. 23ರಂದು ಮನೆಯಲ್ಲಿ ಸಜ್ಜಕ ಮಾಡಲು ಬೆಲ್ಲ ಕುದಿಸಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗಿತ್ತು. ಸಂಶಯಗೊಂಡ ಮನೆಯವರು ಸಜ್ಜಕ ಮಾಡದೆ ಬೆಲ್ಲ ಕುದಿಸಿದ ಕಪ್ಪು ನೀರನ್ನು ತೆಗೆದಿರಿಸಿ ಉದಯವಾಣಿ ಗಮನಕ್ಕೆ ತಂದಿದ್ದರು.
ಈ ಬಗ್ಗೆ ನ. 24ರಂದು ಉದಯವಾಣಿಯಲ್ಲಿ ಬಂದ ವರದಿ ಗಮನಿಸಿ ಬಸಮ್ಮ ಅವರ ಪುತ್ರ ಗದ್ದೆಪ್ಪ ಅವರು ನೀಡಿದ ದೂರಿನ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ ಶಂಕರಗೌಡ ಕಂತಲಗಾಂವಿ ಅವರು ಅಂಗಡಿ ಮೇಲೆ ದಾಳಿ ನಡೆಸಿ ಅಂಗಡಿಯಲ್ಲಿ ಉಳಿದಿದ್ದ ಅಂದಾಜು 1 ಕ್ವಿಂಟಾಲ್ ಬೆಲ್ಲವನ್ನು ಸೀಜ್ ಮಾಡಿ, ಅದರ ಸ್ಯಾಂಪಲ್ ಅನ್ನು ಬೆಳಗಾವಿಯಲ್ಲಿರುವ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳಿಸಿ ಗುಣಮಟ್ಟ ತಪಾಸಣೆ ನಡೆಸುವಂತೆ ಕೋರಿದ್ದರು. ಡಿ. 2ರಿಂದ ಡಿ. 7ರವರೆಗೆ ಬೆಲ್ಲದ ಸ್ಯಾಂಪಲ್ ಅನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಿದ ಮೇಲೆ ಡಿ. 9ರಂದು ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.