Tour ಸರ್ಕಲ್: ಕೊಡಚಾದ್ರಿ ಚಾರಣಿಗರ ನೆಚ್ಚಿನ ತಾಣ
Team Udayavani, Dec 15, 2019, 6:27 PM IST
ಮಿಲಾಗ್ರಿಸ್ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಗ ಕಳೆದ ಎನ್.ಸಿ.ಸಿ. ಕ್ಯಾಂಪ್ ಗಳು ಜೀವನದಲ್ಲಿ ಮತ್ತೂಮ್ಮೆ ಬರಲು ಸಾಧ್ಯವೇ ಇಲ್ಲ ಎಂದು ನಾವೆಲ್ಲ ಭಾವಿಸಿದ್ದೆವು. ಕಾಲೇಜು ಮುಗಿದು ಹಲವು ವರ್ಷಗಳವರೆಗೆ ಹಳೆಯ ಗೆಳೆಯರ ಸಂಪರ್ಕವೇ ಇಲ್ಲದೇ, ಹಿಂದಿನ ಫೋಟೋಗಳೇ ನೆನಪಿನ ಬುತ್ತಿಯಾಗಿದ್ದವು. ಆ ಹೊತ್ತಿಗೆ ವಾಟ್ಸ್ ಆ್ಯಪ್ ಎಂಬ ಜಾಲತಾಣದಿಂದಾಗಿ ಎಲ್ಲಿ ಎಲ್ಲಿಯೋ, ಹೇಗೋ ಇದ್ದ ಗೆಳೆಯರನ್ನು ಒಟ್ಟುಗೂಡಿಸಿ ಎನ್.ಸಿ.ಸಿ. ಎಕ್ಸ್ ಕೆಡೆಟ್ ಎಂಬ ಗ್ರೂಪ್ ರಚಿಸಿ ಎಲ್ಲರನ್ನು ಒಂದು ಕಡೆ ಸೇರಿಸಿಯೇ ಬಿಟ್ಟಳು ಗೆಳತಿ ದಿವ್ಯಾ.
ಒಂದೆರಡು ವರ್ಷಗಳಲ್ಲಿ ಗೆಳೆಯರೆಲ್ಲರೂ ಸೇರಿ ಯಾಕೆ ಟ್ರೆಕ್ಕಿಂಗ್ ಹೋಗಬಾರದು ಎಂಬ ಆಲೋಚನೆ ನಮಗೆಲ್ಲ ಬಂದಿದ್ದೇ ತಡ ಗ್ರೂಪ್‌ನಲ್ಲಿ ಚರ್ಚಿಸಿದೆವು. ಎಲ್ಲ ಸ್ನೇಹಿತರು ಅದಕ್ಕೆ ಹಸಿರು ನಿಶಾನೆ ಸೂಚಿಸಿದರು. ಮಿಲಾಗ್ರಿಸ್ ಕಾಲೇಜಿನ ನಮ್ಮೆಲ್ಲರ ನೆಚ್ಚಿನ ಗುರು ಹೆರಾಲ್ಡ್ ಮೊನಿಸ್ ಸರ್ ಮುಂದಾಳತ್ವದಲ್ಲಿ 21 ಜನರ ನಮ್ಮ ತಂಡ ಕುಂದಾದ್ರಿ ಬೆಟ್ಟಕ್ಕೆ ಹೋಗಿ ಯಶಸ್ವಿಯಾಗಿ ಚಾರಣ ಮುಗಿಸಿ ಬಂದಿತ್ತು.
ಕುಂದಾದ್ರಿ ಬೆಟ್ಟಕ್ಕೆ ಡಾಂಬರು ರಸ್ತೆಯಲ್ಲಿಯೇ 4 ಕಿ.ಮೀ. ನಡೆದು ಹೋಗಲು ಇದ್ದುದರಿಂದ ನಮಗೆ ನಿಜವಾದ ಚಾರಣದ ಅನುಭವ ಸಿಗಲಿಲ್ಲ. ಅದ್ದರಿಂದ ನಮ್ಮ ತಂಡದ ಮುಂದಿನ ವರ್ಷದ ಚಾರಣ ಎನ್.ಸಿ.ಸಿ. ಕೆಡೆಟ್‌ಗಳ ನೆಚ್ಚಿನ ತಾಣ ಕೊಡಚಾದ್ರಿಗೆ ಹೋಗುವುದೆಂದು ನಿರ್ಧರಿಸಿದೆವು. ಪಶ್ಚಿಮ ಘಟ್ಟಗಳಲ್ಲಿ ಅತೀ ಎತ್ತರದ ಬೆಟ್ಟ, ಸುಂದರ ತಾಣಗಳಲ್ಲಿ ಕೊಡಚಾದ್ರಿಯೂ ಒಂದು.
ಕೊಡಚಾದ್ರಿ ಚಾರಣಕ್ಕೆ ನಿಗದಿಪಡಿಸಿದ ದಿನ ಹತ್ತಿರ ಬರುತ್ತಿದ್ದಂತೆ ಅಡ್ಡಿಪಡಿಸುವಂತೆ ಮಳೆ, ಗಾಳಿ ಮತ್ತಷ್ಟು ಜೋರಾಗತೊಡಗಿತು. ಕೊಡಚಾದ್ರಿ-ಸಿಗಂದೂರಿನ ರಸ್ತೆ ಕುಸಿತದ ಸುದ್ದಿ, ವಾರದಿಂದ ಬಿಡದೆ ಜೋರಾಗಿ ಬೀಳುತ್ತಿದ್ದ ಮಳೆ ನಮ್ಮ ಚಾರಣಕ್ಕೆ ಹೊಸ ಸವಾಲು ಹಾಕುತ್ತಿದ್ದವು. ಮನಸ್ಸಿನಲ್ಲಿ ಸ್ವಲ್ಪ ಅಂಜಿಕೆ ಇದ್ದರೂ ಗೆಳೆಯರ ಧೈರ್ಯದ ಮಾತುಗಳು ಕೊಡಚಾದ್ರಿಯ ಕನಸನ್ನು ಇನ್ನಷ್ಟು ಗಟ್ಟಿಯಾಗಿಸಿದವು. ಕೊಡಚಾದ್ರಿ ಚಾರಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆವು.
ಬೆಳಗ್ಗೆ 6.30ರ ಹೊತ್ತಿಗೆ 28 ಜನರಿದ್ದ ನಮ್ಮ ತಂಡ, ಹೆರಾಲ್ಡ್ ಮೊನಿಸ್ ಅವರನ್ನು ಸಂತೆಕಟ್ಟೆಯಲ್ಲಿ ಕೂಡಿಕೊಂಡು, ಬೆಳಗ್ಗೆಯ ಉಪಾಹಾರ, ಮಧ್ಯಾಹ್ನದ ಊಟ ಎಲ್ಲವನ್ನು ನಾವೇ ತಯಾರು ಮಾಡಿಸಿ, ಬಸ್ಸಿನಲ್ಲಿ ತುಂಬಿಸಿ ಕೊಡಚಾದ್ರಿಯ ಕಡೆಗೆ ಪ್ರಯಾಣ ಆರಂಭಿಸಿದೆವು. ಕೊಲ್ಲೂರು ಬಂದು, ಅಲ್ಲಿಂದ ಕಟ್ಟಿನ ಹೊಳೆಗೆ ತಲುಪಿದೆವು. ಮಳೆ ಬರುತ್ತಿದ್ದ ಕಾರಣ ಜೀಪು ಚಾಲಕ ಮಧುಕರ ಅವರ ಮನೆಯ ಅಂಗಳದಲ್ಲಿ ನಮ್ಮ ಗೆಳೆಯ ಪ್ರದೀಪ್‌ನ ಹುಟ್ಟುಹಬ್ಬದ ಕೇಕ್ ಕತ್ತರಿಸಿ, ನಾವು ತಂದ ಬೆಳಗ್ಗೆಯ ಉಪಾಹಾರವನ್ನು ಸೇವಿಸಿ ಸಿದ್ಧರಾದೆವು. ನಾವು ತಂದಿದ್ದ ಕಿತ್ತಾಳೆ ಹಣ್ಣನ್ನು ಎಲ್ಲರ ಬ್ಯಾಗ್‌ಗೆ ತುಂಬಿಸಿ, ಒಬ್ಬ ಗೈಡ್‌ನ ಸಹಾಯದಿಂದ ಚಾರಣ ಆರಂಭಿಸಿದೆವು.
ಹಿಡ್ಲುಮನೆ ಫಾಲ್ಸ್
ಮೊದಲು ಜೀಪ್ ಹೋಗುವ ದಾರಿಯಲ್ಲಿ ಸಾಗಿದೆವು. ಮಣ್ಣಿನ ರಸ್ತೆಯಾಗಿದ್ದರಿಂದ ಮಳೆ ಬಂದು ರಸ್ತೆ ಕೆಟ್ಟು, ರಸ್ತೆ ತುಂಬಾ ಕೆಸರಾಗಿತ್ತು. ಆ ರಸ್ತೆಯಲ್ಲಿ ಸಾಗಿ ಕಾಡಿನ ದಾರಿ ಹಿಡಿದೆವು. ಅದು ಹಿಡ್ಲುಮನೆ ಫಾಲ್ಸ್‌ನ ದಾರಿ. ದಾರಿಯುದ್ದಕ್ಕೂ ನಮ್ಮ ರಕ್ತದ ರುಚಿಯನ್ನು ನೋಡಲು ಬಾಯಿತೆರೆದು ಹಂಬಲಿಸುತ್ತಿದ್ದ ಇಂಬ್ಲಾದಿಂದ ಆದಷ್ಟು ದೂರ ಇರಬೇಕು ಎಂದು ಎಷ್ಟೇ ಜಾಗ್ರತೆ ವಹಿಸಿದ್ದರೂ ಕೆಲವು ಸ್ನೇಹಿತರ ರಕ್ತದ ರುಚಿಯನ್ನು ನೋಡಿಯೇ ಬಿಟ್ಟಿದ್ದವು.
ನೋಡುತ್ತಿದ್ದಂತೆ ಹಿಡ್ಲುಮನೆ ಫಾಲ್ಸ್ ಬಂದೇಬಿಟ್ಟಿತ್ತು. ನಡೆದು ದಣಿದಿದ್ದ ನಮಗೆ ಹಿಡ್ಲುಮನೆ ಫಾಲ್ಸ್‌ಗೆ ಧುಮುಕಿ ಸ್ನಾನ ಮಾಡಿಯೇ ಬಿಡಬೇಕೆಂದು ಅನಿಸಿತು. ಆದರೆ ಕೊಡಚಾದ್ರಿ ಬೆಟ್ಟ ತಲಪಲು ಬಹಳಷ್ಟು ದೂರ ಕ್ರಮಿಸಬೇಕಿರುವುದರಿಂದ ಅಲ್ಲಿಂದ ಮುಂದಕ್ಕೆ ಹೊರಟೆವು. ಮುಂದಕ್ಕೆ ದಾರಿ ಕಠಿಣವಾಯಿತು. ನಡೆದಷ್ಟು ಹೆಜ್ಜೆ ಭಾರವಾಗತೊಡಗಿತು. ಅಲ್ಲಲ್ಲಿ ವಿಶ್ರಾಂತಿಯನ್ನು ಪಡೆದು ನಡೆಯುತ್ತಾ ಸಾಗಿದೆವು.
ಮುಂದೆ ಹೆಜ್ಜೆ ಇಡುವುದು ಕೂಡಾ ಕಷ್ಟವಾಗುತ್ತಿತು. ನಾವು ಕ್ರಮಿಸಲು ಇನ್ನೂ ತುಂಬಾ ದೂರ ಇದ್ದರೂ ‘ಇನ್ನು ಸಲ್ವ ದೂರ ಅಷ್ಟೇ’ಎನ್ನುವ ಗೆಳೆಯರ ಸಮಾಧಾನದ ಮಾತುಗಳು ಮನಸ್ಸಿಗೆ ಚೈತನ್ಯವನ್ನು ನೀಡುತ್ತಿತ್ತು. ಸ್ವಲ್ಪ ಹೊತ್ತಲ್ಲೇ ಜೋರಾಗಿ ಮಳೆ, ಗಾಳಿ ಬರಲಾರಂಭಿಸಿತು. ಮಳೆಯಲ್ಲಿ ನೆನೆದ ನಮಗೆ ಉಲ್ಲಾಸ ಬಂದ ಹಾಗಾಯಿತು.ಮಳೆ ನಿಲ್ಲುವ ಹೊತ್ತಿಗೆ ಇಡೀ ಕೊಡಚಾದ್ರಿಯೇ ಮಂಜಿನಿಂದ ಆವೃತವಾಗಿತ್ತು.
ತುಂಬಾ ಸಮಯ ಕೊಡಚಾದ್ರಿಯಲ್ಲಿ ಕಳೆದ ನಂತರ ವಿದಾಯ ಹೇಳಿ ಮನೆ ಕಡೆಗೆ ಮುಖ ಮಾಡುವ ಸಮಯ. ನಾವು ಕಾಯ್ದಿರಿಸಿದ್ದ 3 ಜೀಪ್ ಗಳು ನಮ್ಮನ್ನು ಕೊಡಚಾದ್ರಿಯಿಂದ ಕಟ್ಟಿನ ಹೊಳೆ ಕಡೆ ಹೊತ್ತೂಯ್ಯಲು ತಯಾರಾಗಿ ನಿಂತಿದ್ದವು. ಎಲ್ಲರೂ ಜೀಪ್ ಹತ್ತಿದೆವು. ಅಲ್ಲಲ್ಲಿ ದೊಡ್ಡ-ದೊಡ್ಡ ಗುಂಡಿ ಬಿದ್ದು, ಕಂದಕ, ಪ್ರಪಾತದ ಹಾಗೆ ಇದ್ದ ಮಣ್ಣಿನ ರಸ್ತೆಯಲ್ಲಿ ಜೀಪ್‌ನಲ್ಲಿ ಪ್ರಯಾಣಿಸಿದ ಅನುಭವ ಅವಿಸ್ಮರಣೀಯ.
ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಆ ದಾರಿಯಲ್ಲಿ ಹೋಗಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಆ ರಸ್ತೆ ಕುಲಗೆಟ್ಟು ಹೋಗಿತ್ತು. ಸಮುದ್ರದಲ್ಲಿ ಚಂಡಮಾರುತದ ನಡುವೆ ಪ್ರಯಾಣಿಸುವ ಹಡಗಿನ ಹಾಗೆ ನಮ್ಮ ಜೀಪು ಸಾಗುತ್ತಿತ್ತು. ಜೀಪ್ ಒಮ್ಮೆ ಎಡಕ್ಕೆ ವಾಲಿ ಇನ್ನೇನು ನಾವು ಬಿದ್ದು ಮೂಳೆ ಪುಡಿ- ಪುಡಿಯಾಯಿತು ಎನ್ನುವಾಗ ಮತ್ತೆ ಬಲಕ್ಕೆ ತಿರುಗಿಸಿ ಜೀಪ್‌ನ್ನು ಚಾಕಚಾಕ್ಯತೆಯಿಂದ ಚಲಾಯಿಸುತ್ತಿದ್ದ ಚಾಲಕ ನಮಗೆಲ್ಲ ಪವಾಡ ಪುರುಷನಂತೆ ಕಂಡ.
ಕಡೆಗೂ ಕಟ್ಟೆ ಹೊಳೆ ತಲುಪಿ ನಮ್ಮ ಬಸ್ಸು ಹತ್ತಿ ಸಂತೆಕಟ್ಟೆ ಕಡೆಗೆ ಪ್ರಯಾಣ ಬೆಳೆಸಿದೆವು. ಆತಂಕದಿಂದ ಚಾರಣಕ್ಕೆ ಬಂದಿದ್ದ ಎಲ್ಲರ ಮುಖದಲ್ಲಿಯೂ ಈಗ ಸಾರ್ಥಕತೆಯ ಸಂತಸ. ಕೊಡಚಾದ್ರಿಯ ಅದ್ಭುತ ಕ್ಷಣಗಳನ್ನು ಮೆಲುಕು ಹಾಕುತ್ತಾ ಬಸ್ಸಿನಲ್ಲಿ ಶ್ರೀಹರ್ಷ, ರೋಹಿತ್, ಶೈಲೇಶ್ ಮುಂತಾದವರ ನರ್ತನವನ್ನು ಆನಂದಿಸುತ್ತಿದ್ದ ನಮಗೆ ಸಂತೆಕಟ್ಟೆ ಬಂದಿದ್ದೇ ಗೊತ್ತಾಗಲಿಲ್ಲ. ಎಲ್ಲರಿಗೂ ಧನ್ಯವಾದ ಸಲ್ಲಿಸಿ ಸಾವಿರ ನೆನಪುಗಳನ್ನು ಹೊತ್ತು ಮನೆಯ ಕಡೆಗೆ ಮುಖ ಮಾಡಿದೆವು.
ರೂಟ್ ಮ್ಯಾಪ್
– ಉಡುಪಿಯಿಂದ ಕೊಡಚಾದ್ರಿಗೆ ಸುಮಾರು 110 ಕಿಮೀ. ದೂರ.
– ಕೊಲ್ಲೂರಿನಿಂದ ಜೀಪ್ ಗಳು ಬಾಡಿಗೆಗೆ ಸಿಗುತ್ತವೆ. ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದವರೆಗೆ ಹೋಗುತ್ತವೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ರಸ್ತೆಯ ಮೂಲಕ ಸಂಚರಿಸಬೇಕು. ಕಾರು, ಬೈಕ್ ಇತ್ಯಾದಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಚಾರಣ ಮಾಡುವುದಾದರೆ ಹೋಗಿ ಬರಲು ಸುಮಾರು 18 ಕಿ.ಮೀ. ಅಂತರವಿದೆ. ಜೀಪ್ ಗಳು ರಾತ್ರಿ ಹೊತ್ತು ಅಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿಯಿಲ್ಲ.
– ಮಂಜುನಾಥ್ ಹಾವಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.