ಒರತೆ ಕೆರೆಗಳ ಒಳಗುಟ್ಟು
Team Udayavani, Dec 16, 2019, 6:02 AM IST
ಬಯಲು ನಾಡಿನ ನೂರಾರು ಸಾವಿರಾರು ಎಕರೆ ವಿಸ್ತೀರ್ಣದ ಕೆರೆ ಕಂಡವರಿಗೆ ಮಲೆನಾಡು, ಕರಾವಳಿ, ಅರೆಮಲೆನಾಡಿನ ಕೆರೆ ನೋಡಿದರೆ ಹೊಂಡದಂತೆ ಕಾಣಿಸುತ್ತದೆ. ವಿಶಾಲ ಕೆರೆಯಂಗಳ, ಎತ್ತರದ ದಂಡೆ, ತೂಬು ವ್ಯವಸ್ಥೆ, ಮಳೆ ನೀರು ಒಳಬರುವ ಹಳ್ಳ, ಹೊರ ಕಾಲುವೆಗಳನ್ನು ನೋಡಿ ಕೆರೆಯ ಚಹರೆ ಅರ್ಥ ಮಾಡಿಕೊಳ್ಳುವವರು ಎರಡು ಎಕರೆ, ಎಕರೆ ಅಥವಾ ಒಂದೆರಡು ಗುಂಟೆ ಕ್ಷೇತ್ರದ ಪುಟ್ಟ ಪುಟ್ಟ ರಚನೆಯನ್ನು ಕೆರೆಯೆಂದು ನಂಬಲು ತಾಂತ್ರಿಕವಾಗಿ ಒಪ್ಪುವುದಿಲ್ಲ.
ಮಳೆಯ ನೀರನ್ನು ಹಿಡಿಯುವುದಿಲ್ಲ, ವಿಸ್ತೀರ್ಣವೂ ಇಲ್ಲವೆಂದರೆ ವಿಶಾಲ ಕೃಷಿ ಭೂಮಿಗೆ ಪುಟ್ಟ ಕೆರೆಯ ಕೊಡುಗೆ ಕಡಿಮೆಯೆಂದು ಭಾವಿಸುವಂತಿಲ್ಲ.. ಬ್ರಿಟಿಷ್ ಸರ್ವೆ ಕಾಲದಲ್ಲಿ ತೋಟ, ಗದ್ದೆಗಳ ಮೇಲ್ಭಾಗದಲ್ಲಿ ಕೆರೆ ಗುರುತಿಸಲಾಗಿದೆ. ಕೆರೆ ದಾಖಲೆಗಳಲ್ಲಿ ಸಣ್ಣ ರಚನೆಗಳನ್ನು ಸೂಕ್ಷ್ಮವಾಗಿ ಉಲ್ಲೇಖೀಸಿ ಗ್ರಾಮದ ನೈಸರ್ಗಿಕ ಸಂಪನ್ಮೂಲಕ್ಕೆ ಚಾರಿತ್ರಿಕ ಮಹತ್ವ ನೀಡಲಾಗಿದೆ. ಕೆರೆ ನೀರು ಹರಿಯುವ ಕಾಲುವೆಯ ದಿಕ್ಕು, ರೈತರ ಹಕ್ಕು ನಮೂದಿಸಿ ನಕ್ಷೆ ಬರೆಯಲಾಗಿದೆ.
ತುಂಬದೇವನಹಳ್ಳಿಯ ಒರತೆ ಕೆರೆ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ದಿಂಡಿಗನಹಳ್ಳಿಯ ದೊಡ್ಡಕೆರೆ ನಾಲ್ಕು ಹೆಕ್ಟೇರ್ ವಿಸ್ತೀರ್ಣ. ಕೆರೆಯಂಚಿನ ವೆಂಕಟ್ರಮಣ ದೇಗುಲದಿಂದ ನೋಡಿದರೆ ಕೆರೆ ಜಲಾನಯನವೂ ಕಾಣುತ್ತದೆ. ನಾಲ್ಕು ಹೆಕ್ಟೇರ್ ಪ್ರದೇಶದ ಇದು ಅರ್ಧಕ್ಕರ್ಧ ಹೂಳಿನಿಂದ ತುಂಬಿದ್ದರೂ ಇಂದಿಗೂ 40 ಹೆಕ್ಟೇರ್ ಭತ್ತದ ಗದ್ದೆಗೆ ನೀರು ನೀಡುತ್ತಿದೆ. ಇದೇ ತಾಲೂಕಿನ ತುಂಬದೇವನಹಳ್ಳಿಯ ಕಾಡು ತಗ್ಗಿನ ಕೆರೆ ಎರಡೂವರೆ ಹೆಕ್ಟೇರ್ ಕ್ಷೇತ್ರದಲ್ಲಿದೆ. ಆದರೆ 48 ಹೆಕ್ಟೇರ್ ಭೂಮಿಗೆ ನೀರುಣಿಸುವ ಸಾಮರ್ಥ್ಯವಿದೆ.
ಸುಮಾರು 44 ಚದರ ಕಿಲೋಮೀಟರ್ ಪ್ರದೇಶದ ಅರಣ್ಯ, ಇದರ ಜಲಾನಯನ ಕ್ಷೇತ್ರ. ಅಲ್ಲಿ ಸುರಿದ ಮಳೆ ಭೂಮಿಗೆ ಇಂಗಿ ವರ್ಷವಿಡೀ ಒರತೆ ನೀರು ಹರಿಯುವ ತಾಣವೇ ತುಂಬದೇವನಹಳ್ಳಿ ಕೆರೆ. ಪುಟ್ಟ ತೊರೆ, ಒರತೆ ಜನಿಸುವ ನೆಲೆಯ ಸುತ್ತ ಮಣ್ಣಿನ ಕಟ್ಟೆ ಕಟ್ಟಿ ನಿರಂತರ ಒರತೆ ನೀರನ್ನು ಸಂಗ್ರಹಿಸಿ ಕಾಲುವೆಗಳಿಗೆ ತಿರುಗಿಸಿ ಬೇಸಾಯ ನಡೆಸುವುದು ಸರಳ ವಿದ್ಯೆ. ದಟ್ಟ ಕಾಡಿನ ನೆಲೆಯಲ್ಲಿ ವಾರ್ಷಿಕ 6000 ಮಿಲಿಮೀಟರ್ ಮಳೆಯಿಂದ ಆರಂಭಿಸಿ 1400 ಮಿಲಿಮೀಟರ್ ಮಳೆ ಸುರಿಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಒರತೆ ಕೆರೆಗಳು ಕಂಡುಬರುತ್ತವೆ.
ಮಳೆಗಾಲದಲ್ಲಿ ಒತ್ತಡ ನೀರಿನ ಒತ್ತಡ: ಬಯಲುಸೀಮೆಗಳಂತೆ ಮಲೆನಾಡಿನಲ್ಲಿ ಕೃಷಿ ವಿಸ್ತರಣೆಗೆ ಅವಕಾಶ ಕಡಿಮೆ. ಯಂತ್ರಗಳಿಲ್ಲದ ಕಾಲದಲ್ಲಿ ಕಡಿದಾದ ಬೆಟ್ಟಗಳನ್ನು ಸಮತಟ್ಟುಗೊಳಿಸಲು ಮಾನವಶ್ರಮ ಬೇಕಿತ್ತು. ಬಹಳ ಪರಿಶ್ರಮದಿಂದ ಒಂದೊಂದು ಕಣಿವೆಯಲ್ಲಿ 25-30 ಎಕರೆ ಅಡಕೆ, ಭತ್ತದ ಬೇಸಾಯಕ್ಕೆ ಒಳಪಟ್ಟವು. ಇಷ್ಟು ಸೀಮಿತ ಕ್ಷೇತ್ರಕ್ಕೆ ಸರಕಾರಿ ನೀರಾವರಿ ಯೋಜನೆ ಯಾವತ್ತೂ ಸಾಧ್ಯವಿಲ್ಲ. ಊರಿನ ಅನುಕೂಲಕ್ಕೆ ಎತ್ತರದಲ್ಲಿ ಒರತೆ ನೀರಿಗೆ ಕಟ್ಟೆ ಕಟ್ಟುವ ವಿಧಾನಗಳು ಕಣಿವೆಯನ್ನು ನೀರ ನೆಮ್ಮದಿಯತ್ತ ಒಯ್ದವು. ಮಳೆ ನೀರು ಒಳಬರದಂತೆ ಕೆರೆಯ ಸುತ್ತ ದಂಡೆ ನಿರ್ಮಿಸಿ, ಒರತೆ ನೀರನ್ನು ಮಾತ್ರ ಕೃಷಿಗೆ ಬಳಸಲಾಗುತ್ತಿತ್ತು.
ಮಳೆ ನೀರನ್ನು ಕೆರೆಗೆ ಭರ್ತಿಮಾಡುವ ಅಗತ್ಯವಿಲ್ಲದ್ದರಿಂದ ಕೆರೆಗಳಿಗೆ ಹೂಳು ಬರುವ ಪ್ರಮಾಣ ಬಹುತೇಕ ಕಡಿಮೆ. ಆದರೆ ಮಳೆಗಾಲದಲ್ಲಿ ಒರತೆ ನೀರಿನ ಒತ್ತಡ ಜಾಸ್ತಿಯಾಗುವುದರಿಂದ ಭೂಮಿಯೊಳಗಿನಿಂದ ಮಣ್ಣು, ಹಾವಸೆ, ಸಣ್ಣಪುಟ್ಟ ಕಲ್ಲು, ಮರಳು, ಕಾಡಿನ ಎಲೆ ಟೊಂಗೆಗಳು ಕೆರೆಯಲ್ಲಿ ಭರ್ತಿಯಾಗುವುದು ಇದ್ದೇ ಇದೆ. ಸಹಜವಾಗಿ ಜೌಗು ನೆಲೆಯಾದ್ದರಿಂದ ವಾಟೆ, ಮುಂಡಿಗೆ, ವಾಟಗರಕೆ, ತಾವರೆ, ನೀರತ್ತಿ, ನೀರು ನೇರಲೆ ಮುಂತಾದವು ಕಳೆಗಿಡಗಳಾಗಿ ಕೆರೆಯನ್ನು ಕಬಳಿಸುತ್ತವೆ. ಹೀಗಾಗಿ ಸೂಕ್ತ ನಿರ್ವಹಣೆ ಅಗತ್ಯ.
ಅಳಿವಿನಂಚಿನಲ್ಲಿ ಒರತೆ ಕೆರೆಗಳು: ಅರಣ್ಯನಾಶ, ಮಳೆ ಕೊರತೆಯಿಂದ ಒರತೆ ಕೆರೆಗಳ ಮೂಲಸ್ವರೂಪ ಬದಲಾಗಿದೆ. ಚಿಕ್ಕಪುಟ್ಟ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಯಾವತ್ತೂ ಸರಕಾರದ ಗಮನವಿಲ್ಲ, ಜಿಲ್ಲಾ ಪಂಚಾಯತ್‌ಗಳಿಗೆ ಕುಡಿಯುವ ನೀರಿಗೆ ಆದ್ಯತೆಯಿದ್ದಷ್ಟು ಪುರಾತನ ಒರತೆ ಕೆರೆ ಸಂರಕ್ಷಣೆ, ಪುನಶ್ಚೇತನ ನಡೆಯುತ್ತಿಲ್ಲ. ಆಡಳಿತ ಹಾಗೂ ಜನರ ನಿರ್ಲಕ್ಷ್ಯದಿಂದ ಶತಮಾನಗಳಿಂದ ಕೃಷಿಕರ ಬದುಕು ಸಲಹಿದ ಒರತೆ ಕೆರೆಗಳು ಅವಸಾನವಾಗುತ್ತಿವೆ. ಕೆರೆ ಜಾಗ ಕಬಳಿಸಿ ಅಡಿಕೆ ತೋಟ ವಿಸ್ತರಿಸಿ ಒರತೆ ಕೆರೆ ಪಕ್ಕ ಆಳದ ಕೊಳವೆ ಬಾವಿಗಳು ಕಾಣಿಸುತ್ತಿರುವುದು ನೀರ ನೋವಿನ ನೇರ ಸಾಕ್ಷಿ.
ಕೆರೆಗಳ ದಾಖಲೆ: ಕೆರೆಗಳ ಸಮಗ್ರ ವಿವರಗಳ ಟ್ಯಾಂಕ್ ರಿಜಿಸ್ಟರ್ ತೆಗೆದರೆ ಕೆರೆಯಿರುವ ಗ್ರಾಮ, ಮಜಿರೆ, ಸರ್ವೆ ನಂಬರ್, ಕೆರೆ ವಿಸ್ತೀರ್ಣ, ದಂಡೆಯ ಉದ್ದ, ತೂಬಿನ ಎತ್ತರ, ನೀರಾವರಿ ಕ್ಷೇತ್ರ, ನೀರಾವರಿ ಕಾಲುವೆ ಉದ್ದ, ಕೆರೆ ನಿರ್ಮಾಣ ವರ್ಷ, ಜಲಾನಯನ ಪ್ರದೇಶ, ಕೋಡಿಯ ಉದ್ದ, ಅಗಲ ಹೀಗೆ ಹಲವು ದಾಖಲೆಗಳಿರುತ್ತವೆ. ಇವುಗಳ ಜೊತೆಗೆ ಇದು ಇಂಗುಕೆರೆಯೇ? ನೀರಾವರಿ ಕೆರೆಯೇ? ಮಾಹಿತಿಗಳು ಲಭ್ಯ. ಕೆರೆ ನೀರಿನ ಮೂಲದಲ್ಲಿ ಒರತೆ ಕೆರೆ (ಸ್ಪ್ರಿಂಗ್ ಟ್ಯಾಂಕ್)ಯೆಂಬ ದಾಖಲೆ ಮಲೆನಾಡು, ಕರಾವಳಿ ಕೆರೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ.
* ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.