ಸ್ಟ್ರಾಂಗ್ ಮಣ್ಣು!
ಮನೆಯಡಿ ಇರುವ ಮಣ್ಣು ಸದೃಢವಾಗಿದೆಯೇ?
Team Udayavani, Dec 16, 2019, 6:11 AM IST
ಒಮ್ಮೆ ನಿವೇಶನವನ್ನು ಶುದ್ಧಗೊಳಿಸಿ, ಅಗೆದು ನೋಡಿದರೆ ಎಲ್ಲೆಲ್ಲಿ ಗಟ್ಟಿ? ಎಲ್ಲೆಲ್ಲಿ ಟೊಳ್ಳು? ಎಂಬುದು ತಿಳಿದು ಬರುತ್ತದೆ. ಒಮ್ಮೆ ನಿವೇಶನವನ್ನು ಖರೀದಿಸಿದ ಮೇಲೆ ಅಲ್ಲಿಯೇ ಮನೆ ಕಟ್ಟುವುದು ಅನಿವಾರ್ಯ ಆಗುತ್ತದೆ. ಹೀಗಾಗಿಯೇ, ಮನೆ ಕಟ್ಟುವಾಗ ಗಟ್ಟಿಮುಟ್ಟಾದ ಮಣ್ಣಿನಲ್ಲಿ ಪಾಯ ತೋಡಿ ತಳಪಾಯ ಹಾಕಬೇಕು ಎನ್ನುತ್ತಾರೆ.
ಮನೆ ಕಟ್ಟುವಾಗ, ಗಟ್ಟಿಮುಟ್ಟಾದ ಮಣ್ಣಿನಲ್ಲಿ ಪಾಯ ತೋಡಿ ತಳಪಾಯ ಹಾಕಬೇಕು ಎನ್ನುತ್ತಾರೆ. ಆದರೆ ನಾನಾ ಕಾರಣಗಳಿಂದಾಗಿ ನಿವೇಶನಗಳಲ್ಲಿ ಭರ್ತಿಮಣ್ಣು, ಅಂದರೆ, ಹಳ್ಳ ಕೊಳ್ಳಗಳಿದ್ದ ಸ್ಥಳದಲ್ಲಿ ಮಣ್ಣು ಮತ್ತೂಂದನ್ನು ಸುರಿದು ಮಟ್ಟ ಮಾಡಲಾಗಿರುತ್ತದೆ. ಗಿಡಗಂಟಿಗಳು ಒಮ್ಮೆ ಬೆಳೆದು ನಿಂತರೆ ನೋಡಲು ಗಟ್ಟಿಮುಟ್ಟಾದ ಮಣ್ಣು ಹಾಗೂ ಹುಸಿ ಮಣ್ಣು ಒಂದೇ ರೀತಿಯಾಗಿ ಮೇಲ್ನೋಟಕ್ಕೆ ಕಾಣಬಹುದು. ಆದರೆ, ಒಮ್ಮೆ ನಿವೇಶನವನ್ನು ಶುದ್ಧಗೊಳಿಸಿ, ಅಗೆದು ನೋಡಿದರೆ ಎಲ್ಲೆಲ್ಲಿ ಗಟ್ಟಿ? ಎಲ್ಲೆಲ್ಲಿ ಟೊಳ್ಳು? ಎಂಬುದು ತಿಳಿದು ಬರುತ್ತದೆ.
ಒಮ್ಮೆ ನಿವೇಶನವನ್ನು ಖರೀದಿಸಿದ ಮೇಲೆ ಅಲ್ಲಿಯೇ ಮನೆ ಕಟ್ಟುವುದು ಅನಿವಾರ್ಯ ಆಗುತ್ತದೆ. ಸಾಮಾನ್ಯವಾಗಿ ಮನೆಯನ್ನು ನಿವೇಶನದ ಮಟ್ಟ ಅಂದರೆ, ರಸ್ತೆ ಮಟ್ಟಕ್ಕಿಂತ ಎರಡು ಅಡಿಯಷ್ಟು ಎತ್ತರದಲ್ಲಿ ಕಟ್ಟುವುದು ವಾಡಿಕೆ. ಇಲ್ಲಿಯೂ ಕೂಡ ಎರಡು ಅಡಿಗಳಷ್ಟು ಭರ್ತಿ ಮಣ್ಣು ಬಂದೇ ಬರುತ್ತದೆ. ಹಾಗಾಗಿ ಭರ್ತಿ ಮಣ್ಣು ಇರುವ ಸ್ಥಳದಲ್ಲಿ ಭೂಮಿಯನ್ನು ಒಂದಷ್ಟು ಗಟ್ಟಿಗೊಳಿಸುವ ಕ್ರಿಯೆ ನಡೆಸಿ ಮುಂದುವರಿಯುವುದು ಉತ್ತಮ.
ಮರಳು ಮಿಶ್ರಿತ ನುರುಜು ಕಲ್ಲು ಒಳಗೊಂಡ ಮಣ್ಣು, ಭರ್ತಿ ಮಾಡಲು ಉತ್ತಮ. ಆದಷ್ಟೂ, ಜೇಡಿ ಮಣ್ಣು ಹೆಚ್ಚಿರುವ ಮಣ್ಣನ್ನು ಭರ್ತಿ ಮಾಡಲು ಉಪಯೋಗಿಸಬಾರದು. ಹಳೇ ಕಟ್ಟಡಗಳ ತ್ಯಾಜ್ಯ ಉಪಯೋಗಿಸುವ ಹಾಗಿದ್ದರೆ, ಇವನ್ನು ಜಲ್ಲಿ ಕಲ್ಲಿನ ಗಾತ್ರಕ್ಕೆ ಒಡೆದು, ನಂತರವೇ ಉಪಯೋಗಿಸಬೇಕು. ದೊಡ್ಡ ದೊಡ್ಡ ತುಂಡುಗಳನ್ನು ಬಳಸಿದರೆ, ಅವು ಸರಿಯಾಗಿ “ಪ್ಯಾಕ್’ ಆಗದೆ, ಸಂದುಗೊಂದುಗಳು ಉಂಟಾಗಬಹುದು. ಎಲ್ಲರೂ ಬಯಸುವುದು ಕೆಂಪು ಮಣ್ಣನ್ನು. ಆದರೆ ಇದು ಸುಲಭದಲ್ಲಿ ಸಿಗುವುದಿಲ್ಲ. ಅದು ದುಬಾರಿಯೂ ಹೌದು.
ಹಂತ ಹಂತವಾಗಿ ಭರ್ತಿ ಮಾಡಬೇಕು: ಮಣ್ಣನ್ನು ನಾಲ್ಕಾರು ಅಡಿ ಎತ್ತರಕ್ಕೆ ಸುರಿದು ಅದರ ಮೇಲೆ ಎಷ್ಟೇ ನೀರು ಸುರಿದರೂ ಅದು ಕೆಳಗೆ ಇಳಿಯುವ ಸಾಧ್ಯತೆ ಕಡಿಮೆ. ಆದುದರಿಂದ ಎಷ್ಟೇ ಎತ್ತರದ ಭರ್ತಿ ಇರಲಿ, ಅದನ್ನು ಪದರಪದರವಾಗಿ ಸುಮಾರು ಎರಡು ಅಡಿ ಇರುವಂತೆ ನೋಡಿಕೊಳ್ಳಬೇಕು. ಒಮ್ಮೆ ಮಣ್ಣನ್ನು ತುಂಬಿದ ಮೇಲೆ, ಧಿಮ್ಮಸ್ಸಿನಿಂದ- ಕೋಲಿಗೆ ದಪ್ಪನಾದ ಕಬ್ಬಿಣದ ಇಲ್ಲವೆ ಮರದ ತುಂಡನ್ನು ಸಿಗಿಸಿ, ತಟ್ಟುವುದರ ಮೂಲಕ ಗಟ್ಟಿಗೊಳಿಸಬೇಕು. ನಂತರ ಅಡಿಗೆ ಒಂದರಂತೆ ಗಡಬಾರೆ ಅಂದರೆ, ಸುಮಾರು ಐದು ಅಡಿ ಉದ್ದದ ಕಬ್ಬಿಣದ ಸರಳಿನಿಂದ ಎರಡು ಮೂರು ಅಡಿ ಚುಚ್ಚಿ ತೂತುಗಳನ್ನು ಮಾಡಬೇಕು.
ಹೀಗೆ ರಂಧ್ರಗಳಿಂದ ತುಂಬಿದ ಸ್ಥಳದಲ್ಲಿ ನೀರು ಇಂಗುವುದು ನಿಲ್ಲುವವರೆಗೂ ಧಾರಾಳವಾಗಿ ನೀರನ್ನು ಹಾಯಿಸಬೇಕು. ಒಮ್ಮೆ ನೀರು ಕುಡಿದ ಮಣ್ಣು ಸಾಕಷ್ಟು ಇಳಿದ ಮೇಲೆ, ಅದನ್ನು ಒಣಗಲು ಬಿಡಬೇಕು. ನಂತರ ಮತ್ತೆ ಧಿಮ್ಮಸ್ಸಿನಿಂದ ಹೊಡೆದು ಗಟ್ಟಿಗೊಳಿಸಬೇಕು. ಹೀಗೆ ಮಾಡುವುದರಿಂದ ಮಣ್ಣಿನ ಕಣಗಳು ಚೆನ್ನಾಗಿ ನೀರು ಕುಡಿದು ಬೆರೆತು ಗಟ್ಟಿಗೊಳ್ಳುತ್ತವೆ. ನೀರುಣಿಸಿ ಧಿಮ್ಮಸ್ಸಿನಿಂದ ಹೊಡೆದರೆ, ಮಣ್ಣು ಕೆಸರಿನಂತೆ ಆಗಿಬಿಡುತ್ತದೆ. ಈ ಹಿಂದೆ ಇದಕ್ಕೆ “ಕೆಸರು ಮಣ್ಣು ಮಾಡಿ ಗಟ್ಟಿಗೊಳಿಸಲಾಗಿದೆ’ ಎಂದೇ ಹೇಳಲಾಗುತ್ತಿತ್ತು!
ಸದೃಢವಾಗಲು ವರ್ಷಗಳೇ ಬೇಕು: ಹೆಚ್ಚು ಭಾರ ಹೊರದ ವಿಭಜಕ ಗೋಡೆಗಳಿಗೆ, ಕಾಂಪೌಂಡ್ ಗೋಡೆಗಳಿಗೆ ಹಾಗೂ ನೆಲಹಾಸು ಹಾಕಲು ತಯಾರು ಮಾಡುವ ಬೆಡ್ ಕಾಂಕ್ರೀಟಿನ ಕೆಳಗೆ ಭರ್ತಿ ಮಣ್ಣನ್ನು ಗಟ್ಟಿಗೊಳಿಸಿ ಮುಂದುವರಿಯಬಹುದು. ಆದರೆ, ಮುಖ್ಯವಾಗಿ ಭಾರ ಹೊರುವ ಕಾಲಂಗಳ ಪಾಯ ಹಾಗೂ ಭಾರ ಹೊರುವ ಗೋಡೆಗಳಿಗೆ ಭರ್ತಿ ಮಣ್ಣಿನ ಪಾಯ ಅಪಾಯಕಾರಿ ಆಗುತ್ತದೆ. ಹಾಗಾಗಿ, ಈ ಮುಖ್ಯ ಆಧಾರಗಳಿಗೆ ನಾವು ಮೂಲ ಮಣ್ಣು ಅಂದರೆ ಭರ್ತಿ ಮಾಡಿರುವ ಮಣ್ಣಿನ ಕೆಳಗಿರುವ ಪದರದವರೆಗೂ ಅಗೆದು ಪಾಯ ಹಾಕಲೇಬೇಕಾಗುತ್ತದೆ. ನಾವು ಎಷ್ಟೇ ಕಾಳಜಿಯಿಂದ ಭರ್ತಿ ಮಣ್ಣನ್ನು ಗಟ್ಟಿಗೊಳಿಸಿದರೂ ಅದು ಮೂಲ ಮಣ್ಣಿನಂತೆಯೇ ಸದೃಢವಾಗಲು ನಾಲ್ಕಾರು ವರ್ಷಗಳೇ ಬೇಕಾಗುತ್ತದೆ. ಹಾಗಾಗಿ, ಭರ್ತಿ ಮಾಡಿದ ಸ್ಥಳದಲ್ಲಿ ಕಾಲಂ ಹಾಗೂ ಭಾರ ಹೊರುವ ಗೋಡೆಗಳಿಗೆ ಆಧಾರ ಕಲ್ಪಿಸಬಾರದು.
ಗಟ್ಟಿಯಾಗಿದೆಯೇ? ಖಾತರಿ ಮಾಡಿಕೊಳ್ಳಿ: ಮಣ್ಣನ್ನು ಭರ್ತಿ ಮಾಡಿದ ನಂತರ ನಾಲ್ಕಾರು ಭಾರೀ ಮಳೆ ಸುರಿದಿದ್ದರೆ, ಸಾಕಷ್ಟು ನೀರು ಕುಡಿದಿರುವ ಕಾರಣ ಅದನ್ನು ಗಟ್ಟಿಗೊಳಿಸಲು ಸುಲಭ ಆಗುತ್ತದೆ. ನಾವೇ ನೀರು ಹರಿಸಿದ್ದರೆ, ನೀರು ಕೆಳಮಟ್ಟದವರೆಗೂ ಹೋಗಿದೆಯೇ? ಎಂದು ಪರೀಕ್ಷಿಸುವುದು ಅನಿವಾರ್ಯ ಆಗುತ್ತದೆ. ನಾವು ಇದಕ್ಕಾಗಿ ಗಡಬಾರೆ – ಕಬ್ಬಿಣದ ಸರಳಿನಿಂದ ನಾಲ್ಕಾರು ಕಡೆ ರಂಧ್ರಗಳನ್ನು ಮಾಡಿ, ನೋಡಬೇಕಾಗುತ್ತದೆ.
ಹಾಗೆಯೇ, ಭರ್ತಿ ಮಾಡಿದ ಸ್ಥಳದಲ್ಲೂ ಮೂಲ ಮಣ್ಣಿಗೆ ಇರುವಷ್ಟೇ ಗಟ್ಟಿತನ ಇದೆಯೇ? ಎಂದು ಪರೀಕ್ಷಿಸಿ. ಇದನ್ನು ನಾವು ಮಣ್ಣು ಅಗೆಯುವ ಸನಿಕೆಯಿಂದಲೂ ಮಾಡಬಹುದು. ಇದರಿಂದ ಮೂಲಮಣ್ಣು ಅಗೆದಷ್ಟೇ ಕಷ್ಟ ಹಾಗೂ ಗಟ್ಟಿತನ ಭರ್ತಿ ಮಾಡಿದ ಜಾಗದಲ್ಲೂ ಇದೆಯೇ? ಎಂಬುದನ್ನು ಖಾತರಿ ಮಾಡಿಕೊಳ್ಳಬಹುದು. ಒಂದು ಅಂದಾಜಿನ ಪ್ರಕಾರ – ನಿಮ್ಮ ಹಿಮ್ಮುಡಿಯ ಮೇಲೆ ನಿಂತರೆ, ಇಲ್ಲ ಒತ್ತಿದರೆ, ಭರ್ತಿ ನೆಲದಲ್ಲಿ ಇಳಿಯದಿದ್ದರೆ- ಆಗ ಅದು ಗಟ್ಟಿಗೊಂಡಿದೆ ಎಂದು ಹೇಳಬಹುದು!
ಹೆಗ್ಗಣ, ಗೆದ್ದಲುಗಳಿಂದಲೂ ಅಪಾಯ: ಭರ್ತಿ ಮಣ್ಣು ಉತ್ತಮ ಗುಣಮಟ್ಟದ್ದೇ ಎಂದು ಪರೀಕ್ಷಿಸಿ. ಬರೀ ತ್ಯಾಜ್ಯ, ಎಲೆ, ಕೊಂಬೆ, ಪ್ಲಾಸ್ಟಿಕ್ ಚೀಲ ಇತ್ಯಾದಿಗಳಿಂದ ತುಂಬಿದ್ದರೆ, ಅನಿವಾರ್ಯವಾಗಿ ಅವನ್ನು ಅಗೆದು ತೆಗೆದು ಹೊಸ ಮಣ್ಣಿನಿಂದ ಮತ್ತೆ ಭರ್ತಿ ಮಾಡಬೇಕಾಗುತ್ತದೆ. ಒಳ್ಳೆಯ ಮಣ್ಣಿನಿಂದ ತುಂಬಿದ್ದರೂ, ಅದು ಹಲವಾರು ಮಳೆಗಾಲಗಳನ್ನು ಅನುಭವಿಸಿದ್ದರೆ ಮಾತ್ರ ಸದೃಢವಾಗಿರುತ್ತದೆ. ಇಲ್ಲದಿದ್ದರೆ ಸಾಕಷ್ಟು ನೀರು ಇಳಿಯದೆ, ಮಣ್ಣಿನ ಕಣಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ, ಹಾಗೆಯೇ ಹಸಿಯಾಗಿಯೇ ಇರುತ್ತವೆ. ಕೆಲವೊಮ್ಮೆ ಹೆಗ್ಗಣ, ಗೆದ್ದಲು ಕೂಡ ಡೊಗರೆಗಳನ್ನು ಮಾಡಿರುವ ಸ್ಯಾಧ್ಯತೆ ಇರುತ್ತದೆ. ಇನ್ನು ಮರಗಳ ಬುಡ, ಅಕ್ಕಪಕ್ಕದವರು ಸುರಿದ ತ್ಯಾಜ್ಯ ಮರಮುಟ್ಟುಗಳಿದ್ದರೂ ಕೂಡ ಗಟ್ಟಿಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಅವನ್ನೆಲ್ಲಾ ತೆಗೆದು ಹಾಕಬೇಕಾಗುತ್ತದೆ.
ದುರ್ಬಲ ಜಾಗದಲ್ಲಿ ಮೊದಲು ಭರ್ತಿ: ಕೆಲವೊಮ್ಮೆ ಇಡೀ ನಿವೇಶನವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯನ್ನು ಹಂತಹಂತವಾಗಿ ಮಾಡಲಾಗುತ್ತದೆ. ನಿವೇಶನದ ಕೆಲ ಭಾಗ ಮಾತ್ರ ಭರ್ತಿ ಮಣ್ಣಿನಿಂದ ಕೂಡಿದ್ದರೆ, ಆಗ ನಾವು ಕೆಲ ಭಾಗವನ್ನು ಮಾತ್ರ ಮೊದಲ ಹಂತದಲ್ಲಿ ಗಟ್ಟಿಗೊಳಿಸಬಹುದು. ತಕ್ಷಣಕ್ಕೆ ಭಾರ ಹೊರದ ಗೋಡೆಗಳು ಅಂದರೆ “ಪಾರ್ಟಿಷನ್’ ಪಾಯಗಳು ಎಲ್ಲೆಲ್ಲಿ ಬರುತ್ತವೋ ಅಲ್ಲೆಲ್ಲ ಗಟ್ಟಿಗೊಳಿಸುವ ಪ್ರಕ್ರಿಯೆಯನ್ನು ಮಾಡಿಕೊಳ್ಳಬಹುದು.
ಮೊದಲು ನಮಗೆ ಬೇಕಾದಷ್ಟು ಅಗಲದ ಅಂದರೆ, ಸುಮಾರು ಮೂರು ಅಡಿಯಷ್ಟು ಅಗಲದ ಪಾಯ ತೋಡಿ, ಪಾತಿಯಂತೆ ಮಾಡಿಕೊಂಡು, ಈ ಸ್ಥಳದಲ್ಲಿ ಗಡಬಾರೆ ಬಳಸಿ ರಂಧ್ರಗಳನ್ನು ಮಾಡಿಕೊಳ್ಳಬೇಕು. ಇಲ್ಲಿ ನೀರು ಇಂಗುವುದು ನಿಲ್ಲುವವರೆಗೂ ನೀರು ಹಾಯಿಸಿ ನಂತರ ಸ್ವಲ್ಪ ಒಣಗಲು ಬಿಡಬೇಕು. ಒಮ್ಮೆ ಧಿಮ್ಮಸ್ಸು ಹೊಡೆಯಲು ಸಾಧ್ಯವಾಗುವಷ್ಟು ಗಟ್ಟಿಗೊಂಡನಂತರ, ಜೆನ್ನಾಗಿ ಗಟ್ಟಿಗೊಳಿಸಿ ಪೂರ್ತಿಯಾಗಿ ಒಣಗಲು ಬಿಡಬೇಕು. ನಂತರವಷ್ಟೇ ಮಂದುವರಿಯುವುದು ಸೂಕ್ತ.
ಹೆಚ್ಚಿನ ಮಾಹಿತಿಗೆ: 9844132826
* ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.