ಫಾಸ್ಟಾಗ್ ಬಗ್ಗೆ ಬೇಕು ಮತ್ತಷ್ಟು ಜನ ಜಾಗೃತಿ
Team Udayavani, Dec 16, 2019, 1:16 AM IST
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಫಾಸ್ಟಾಗ್ ವ್ಯವಸ್ಥೆ ವಾಹನ ಚಾಲಕ-ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ಈ ಬಗ್ಗೆ ಅದರ ಜಾರಿ ಬಗ್ಗೆ ಸಿದ್ಧತೆ ಇಲ್ಲದೇ ಇರುವುದು ಮತ್ತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆಯಿಂದ ಹೀಗಾಗಿದೆ. ಒಂದು ಮಾಹಿತಿಯ ಪ್ರಕಾರ ಕರ್ನಾಟಕದ ಶೇ.42 ವಾಹನಗಳಲ್ಲಿ ಮಾತ್ರ ಅದನ್ನು ಅಳವಡಿಸಿಕೊಳ್ಳಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿ ವಿಚಾರದಲ್ಲಿ ಸರಿಯಾದ ರೀತಿಯಲ್ಲಿ ಚಿಲ್ಲರೆ ಕೊಡುವುದಕ್ಕೆ, ಹೆಚ್ಚಿನ ಅವಧಿ ಅದಕ್ಕಾಗಿಯೇ ವಿನಿಯೋಗವಾಗುವುದನ್ನು ತಪ್ಪಿಸಲು ಕೇಂದ್ರ ಫಾಸ್ಟಾಗ್ ಕಡ್ಡಾಯಗೊಳಿಸಿತ್ತು. ಕೇಂದ್ರ ಸರ್ಕಾರದ ಉದ್ದೇಶ ಒಳ್ಳೆಯದೇ.
ಆದರೆ ಅದನ್ನು ಕಡ್ಡಾಯಗೊಳಿಸುವುದರ ಜತೆಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಬಗ್ಗೆ ಅದು ನೀಡಿದ ಸಾರ್ವಜನಿಕ ಪ್ರಚಾರ ಏನೇನೂ ಸಾಲದು. ಎನ್‌ಎಚ್‌ಎಐ ನೀಡಿದ ಮಾಹಿತಿ ಪ್ರಕಾರ ಡಿ.1ರ ಒಳಗಿನ ಅವಧಿಯಲ್ಲಿ ಶೇ.30, ಡಿ.15ರ ವರೆಗಿನ 2ನೇ ಅವಧಿಯಲ್ಲಿ ಶೇ.12ರಷ್ಟು ವಾಹನಗಳು ಮಾತ್ರ ಹೊಸ ವ್ಯವಸ್ಥೆ ಅಳವಡಿಸಿಕೊಂಡಿವೆ. ಒಟ್ಟಾರೆಯಾಗಿ ಶೇ.58ರಷ್ಟು ವಾಹನ ಗಳಲ್ಲಿ ಈ ವ್ಯವಸ್ಥೆ ಇಲ್ಲ. ಆದರೆ ಶೇ.75ರಷ್ಟು ಅಂದರೆ ನಾಲ್ಕು ಟೋಲ್ ನೀಡಿ ಹೋಗುವ ದಾರಿಯಲ್ಲಿ ಮೂರು ಫಾಸ್ಟಾ ಗ್‌ಗೆ ಮತ್ತು 1ರಲ್ಲಿ ನಗದು ನೀಡಿ ಪಾವತಿಸಲು ಈಗ ಅವಕಾಶ ಮಾಡಲಾಗಿದೆ.
ಫಾಸ್ಟಾಗ್ ಕಡ್ಡಾಯ ಎನ್ನುವ ಗಡುವು ಒಂದು ತಿಂಗಳು ಮತ್ತೆ ವಿಸ್ತರಿಸಲಾಗಿದ್ದರೂ, ಕರ್ನಾಟಕದ ವಿವಿಧ ಭಾಗಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಗೊಂದಲ, ಫಾಸ್ಟಾಗ್ ಲೇನ್‌ನಲ್ಲಿ ಹೋದ ವಾಹನಗಳಿಗೆ ಎರಡು ಪಟ್ಟು ಹೆಚ್ಚು ಶುಲ್ಕ, ಮೈಲುಗಟ್ಟಲೆ ಸರತಿ ಸಾಲು ಸಾಮಾನ್ಯವಾಗಿತ್ತು.
ಕೇವಲ ಕೆಲವು ಬೂತ್‌ಗಳಲ್ಲಿ ಮಾತ್ರ ನಗದು ಪಾವತಿಗೆ ಇಂಥ ನಂಬರ್ ಲೇನ್‌ನಲ್ಲಿ ಹೋಗಿ, ಫಾಸ್ಟಾಗ್‌ಗೆ ಈ ಲೇನ್‌ನಲ್ಲಿ ಹೋಗಿ ಎಂಬ ಬಗ್ಗೆ ಮಾಹಿತಿ ಇದ್ದವು. ಕೆಲವೊಂದು ಸಂದರ್ಭದಲ್ಲಿ ಫಾಸ್ಟಾಗ್ ಲೇನ್ ಸ್ಕ್ಯಾನರ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವ ಬಗ್ಗೆ, ಇದರ ಜತೆಗೆ ಸ್ಕ್ಯಾನರ್‌ಗಳ ಮಾಹಿತಿ-ನಿಯಂತ್ರಣ ಹೊಂದಿರುವ ಸರ್ವರ್ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದೆ ಎಂಬ ದೂರುಗಳಿವೆ. ಜ.15ರ ವರೆಗೆ ನಿಗದಿತ ವಾಹನಕ್ಕೆ ಫಾಸ್ಟಾಗ್ ಇಲ್ಲದೇ ಇದ್ದರೆ ದಂಡ ವಿಧಿಸುವಂತೆ ಕೂಡ ಇಲ್ಲ ಎಂದು ಹೇಳಲಾಗಿದೆ. ಆದರೆ ಗಮನಿಸಬೇಕಾಗಿರುವ ಅಂಶವೆಂದರೆ ಫಾಸ್ಟಾಗ್ ಇಲ್ಲದೇ ಇರುವವರು ನಗದು ಪಾವತಿ ಮಾಡುವ ದ್ವಾರದಲ್ಲಿಯೇ ಹೋಗಬೇಕು. ಇಲ್ಲದೇ ಇದ್ದರೆ ದಂಡ ಪಾವತಿ ಮಾಡಬೇಕು. ಆದರೆ ಇಂಥ ಮಾಹಿತಿಯೇ ಸಮರ್ಪಕವಾಗಿಲ್ಲ. ಅದನ್ನು ಸರಿಪಡಿಸಬೇಕಾಗಿದೆ.
ದೇಶದಲ್ಲಿರುವ ವಾಹನಗಳ ಸಂಖ್ಯೆ ಇರುವಷ್ಟು ಫಾಸ್ಟಾಗ್ ಅನ್ನು ಸಿದ್ಧಪಡಿಸಲಾಗಿಲ್ಲ. ಕೆಲ ಮಾಹಿತಿ ಪ್ರಕಾರ ನ.26ರಂದು 1,35,583 ಫಾಸ್ಟಾಗ್ ನೀಡಲಾಗಿದೆ. ಮಾತ್ರವಲ್ಲದೆ 70 ಲಕ್ಷ ಹೊಸ ವ್ಯವಸ್ಥೆ ನೀಡಲಾಗಿದೆಯೆಂದು ಕೆಲ ಅಂಕೆ-ಸಂಖ್ಯೆಗಳಲ್ಲಿ ಮಾಹಿತಿ ಇದೆ. ಟೋಲ್ ಪ್ಲಾಜಾ ಪ್ರವೇಶಕ್ಕಿಂತ ಮೊದಲೇ ನಗದು ಪಾವತಿಗೆ ಯಾವ ಸಂಖ್ಯೆಯ ಕೌಂಟರ್, ಫಾಸ್ಟಾಗ್ ಇರುವ ಕೌಂಟರ್ ಸಂಖ್ಯೆ ಯಾವುದು ಎನ್ನುವುದು ವಾಹನ ಚಾಲಕ-ಮಾಲೀಕರಿಗೆ ಸ್ಪಷ್ಟವಾಗಿ ಕಾಣುವಂತೆ ಇರಬೇಕು. ಕೆಲವೊಂದು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ಹೆಚ್ಚಿದ್ದರೆ, ಫಾಸ್ಟಾಗ್ ಮಾತ್ರ ಇರುವ ಕೌಂಟರ್‌ಗಳಲ್ಲಿಯೂ ಕೂಡ ನಗದು ಪಾವತಿ ಮಾಡುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಿದೆ. ಆದರೆ ಅದಕ್ಕೆ ನಿಗದಿತ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಸದ್ಯದ ಅವಧಿಯಲ್ಲಿ ಅಂಥವುಗಳಿಗೆ ಕೂಡ ಅವಕಾಶ ಮಾಡಬೇಕು. ಹೀಗಾಗಿ ಮುಂದಿನ 1 ತಿಂಗಳ ಅವಧಿಯಲ್ಲಿ ಹೊಸ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಮೊಬೈಲ್‌ಗಳಿಗೆ ನೇರವಾಗಿ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ. ಈ ಮೂಲಕ ಅನಾನುಕೂಲತೆಗಳನ್ನು ತಪ್ಪಿಸಬಹುದು.
ಹೇಗಿದ್ದರೂ ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಎಸ್‌ಎಂಎಸ್, ಸ್ಥಳೀಯರ ಗಣ್ಯರ ಧ್ವನಿಮುದ್ರಿಕೆಯಲ್ಲಿ ಫಾಸ್ಟಾಗ್ ಅಳವಡಿಕೆ ಬಗ್ಗೆ ಗ್ರಾಹಕರಿಗೆಕರೆ ಮಾಡುವುದರ ಮೂಲಕ ಸಂದೇಶ ನೀಡಿ, ಅರಿವು ಮೂಡಿಸಲು ಅವಕಾಶ ಇದೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದ ಮುಖ್ಯಸ್ಥರು ಅರಿತು ಮಾಡಬೇಕು. ಆದರೆ ಆ ನಿಟ್ಟಿನಲ್ಲಿ ಸೂಕ್ತ ಚಿಂತನೆ ನಡೆಯಬೇಕಾಗಿದೆ. ಇದರಿಂದಾಗಿ ಮುಂದಿನ ಒಂದು ತಿಂಗಳಲ್ಲಿ ಸಮರ್ಥವಾಗಿ ಜಾಗೃತಿ ಮೂಡಿಸಲು ಅವಕಾಶ ಇದೆ. ಹೀಗಾಗಿ, ಕೇಂದ್ರದ ಭೂ ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಆಡಳಿತ ಕೈಜೋಡಿಸಬಹುದು. ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಸಹಕಾರಿ ರಂಗಕ್ಕೆ ಸೇರಿದ 22 ವಿತ್ತೀಯ ಸಂಸ್ಥೆಗಳ ಮೂಲಕ ಅದನ್ನು ಖರೀದಿಸಲು ಅವಕಾಶ ಉಂಟು. ಇದರ ಜತೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಂಚಾರ ಪೊಲೀಸರು ಕೂಡ ಹೊಸ ವ್ಯವಸ್ಥೆ ಅಳವಡಿಕೆಗೆ ಕೈಜೋಡಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.