ಫಾಸ್ಟಾಗ್ ಕಡ್ಡಾಯ: ನಗದು ಸ್ವೀಕಾರ ಗೇಟ್ ಹೆಚ್ಚಿಸಲು ಆಗ್ರಹ
Team Udayavani, Dec 17, 2019, 5:36 AM IST
ತಲಪಾಡಿ: ಫಾಸ್ಟಾಗ್ ಕಡ್ಡಾಯ ಹಿನ್ನೆಲೆಯಲ್ಲಿ ನಗದು ಸ್ವೀಕಾರ ಮಾಡುವ ಟೋಲ್‌ಗೇಟ್‌ಗಳನ್ನು ಹೆಚ್ಚಿಸಬೇಕು ಮತ್ತು ಖಾಸಗಿ ಬಸ್‌ಗಳಿಗೆ ಟೋಲ್‌ನಿಂದ ವಿನಾಯಿತಿ ನೀಡುವಂತೆ ಸೋಮವಾರ ಬೆಳಗ್ಗೆ ತಲಪಾಡಿ ಟೋಲ್ ಫ್ಲಾಝಾದ ಎದುರುಗಡೆ ಸ್ಥಳೀಯ ಸಂಘಟನೆಗಳು ಮತ್ತು ಖಾಸಗಿ ಬಸ್ ಮಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಗೆ ಮಣಿದ ಟೋಲ್‌ಸಂಸ್ಥೆಯ ಮೇಲ್ವಿಚಾರಕರು ತಾತ್ಕಾಲಿಕ ನೆಲೆಯಲ್ಲಿ ಫ್ಲಾಝಾದ ಎರಡೂ ಬದಿಯಲ್ಲಿ ಎರಡೆರಡು ಗೇಟ್‌ಗಳನ್ನು ನಗದು ಸ್ವೀಕಾರಕ್ಕೆ ಮುಕ್ತಗೊಳಿಸಿ ಖಾಸಗಿ ಬಸ್‌ಗಳಿಗೆ ಟೋಲ್ ವಿನಾಯಿತಿ ನೀಡಿದ್ದು ಎಂದಿನಂತೆ ಬಸ್ ಸಂಚಾರ ಮೇಲಿನ ತಲಪಾಡಿವರೆಗೆ ಆರಂಭಗೊಂಡಿತು.
ಟೋಲ್‌ಫ್ಲಾಝಾದ ಐದು ಗೇಟ್‌ಗಳಲ್ಲಿ ರವಿವಾರ ಒಂದು ಗೇಟ್ ನಗದು ಸ್ವೀಕಾರ ಮತ್ತು ಒಂದು ಗೇಟ್ ತುರ್ತು ಸಂಚರಿಸುವ ವಾಹನಗಳಿಗೆ ಮತ್ತು ಮೂರು ಗೇಟ್‌ಗಳನ್ನು ಫಾಸ್ಟಾಗ್ ಹಾಕಿರುವ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಖಾಸಗಿ ಬಸ್‌ಗಳಿಗೆ ಟೋಲ್ ವಿಧಿಸಿದ್ದರಿಂದ ಬಸ್‌ಗಳು ಟೋಲ್ ಬಳಿಯೇ ಲಾಸ್ಟ್ ಸ್ಟಾಪ್ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ನಗದು ಸ್ವೀಕಾರ ಗೇಟ್‌ನಲ್ಲಿ ಸರತಿ ಸಾಲಿನಲ್ಲಿ ವಾಹನಗಳು ಸಂಚರಿಸಿದ್ದರಿಂದ ಸೋಮವಾರ ಬೆಳಗ್ಗೆ ಖಾಸಗಿ ಬಸ್ ಮಾಲಕರು, ಸಾರ್ವಜನಿಕ ಹಿತರಕ್ಷಣಾ ವೇದಿಕೆ, ಗಡಿನಾಡು ರಕ್ಷಣಾ ವೇದಿಕೆ ಸಮ್ಮುಖದಲ್ಲಿ ಟೋಲ್ ಎದುರುಗಡೆ ಮುತ್ತಿಗೆ ಹಾಕಲಾಯಿತು. ಈ ವೇಳೆ ಟೋಲ್ ಸಿಬಂದಿ ಹಾಗೂ ಸಂಘಟನೆಗಳ ನಡುವೆ ವಾಗ್ವಾದ ನಡೆಯಿತು. ಟೋಲ್ ಸಿಬಂದಿ ಹಾಗೂ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಸ್ಥಳೀಯ ಬಸ್ ಹಾಗೂ ವಾಹನಗಳಿಗೆ ವಿನಾಯಿತಿ ನೀಡದೇ ಇದ್ದಲ್ಲಿ, ತಲಪಾಡಿಯಿಂದ ಟೋಲ್ ರದ್ದಾಗುವಂತೆ ಅಹೋರಾತ್ರಿ ಕುಳಿತು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ತತ್‌ಕ್ಷಣಕ್ಕೆ ವಿನಾಯಿತಿ ಹಾಗೂ ಹೆಚ್ಚು ಗೇಟ್‌ಗಳನ್ನು ತೆರೆಯುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಎರಡು ಗೇಟ್‌ಗಳನ್ನು ತೆರೆಯಲಾಯಿತು. ಅಲ್ಲದೆ ಖಾಸಗಿ ಬಸ್‌ಗಳಿಗೆ ಟೋಲ್ ಸುಂಕ ನೀಡುವ ಕುರಿತು ಅಧಿ ಕಾರಿಗಳ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಸಿಬಂದಿ ತಿಳಿಸಿದರು.
ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ, ಬೆಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕಂಪೆನಿ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ಅವರು ಈ ಹಿಂದೆ ಇರುವಂತೆಯೇ ನೀತಿಗಳನ್ನು ಜಾರಿಯಲ್ಲಿಡುವಂತೆ ತಿಳಿಸಿದ್ದರು. ಆದರೆ ತಲಪಾಡಿಯಲ್ಲಿ ಏಕಾಏಕಿ ದಬ್ಟಾಳಿಕೆ ನಡೆಸಲಾಗುತ್ತಿದೆ. ಖಾಸಗಿ ಬಸ್‌ಗಳಿಗೆ 50 ಮೀ. ಉದ್ದಕ್ಕೆ 57,000 ರೂ. ಸುಂಕ ಪಾವತಿಸುವಂತೆ ಕಂಪೆನಿ ಹೇಳುತ್ತಿದೆ. ಇದರ ಭಾರವನ್ನು ಸಾರ್ವಜನಿಕರ ಮೇಲೆ ಹೊರಲು ಅಸಾಧ್ಯ. ಅಷ್ಟು ಹಣವನ್ನು ಬಸ್ ಮಾಲಕರಿಗೆ ಭರಿಸಲು ಅಸಾಧ್ಯ. ಸಮಸ್ಯೆ ಮುಂದುವರಿದಲ್ಲಿ ಒಂದು ಕಿ.ಮೀ. ದೂರ ಕೇರಳಕ್ಕೆ ಸ್ಥಳಾಂತರಿಸಲು ಗೊತ್ತಿದೆ ಎಂದು ಎಚ್ಚರಿಸಿದರು.
ಜಿ.ಪಂ. ಮಾಜಿ ಸದಸ್ಯ ವಿನಯ ನಾಯ್ಕ ಮಾತನಾಡಿ ಸರ್ವಿಸ್ ರಸ್ತೆ, ಫ್ಲೈಒವರ್ ಇನ್ನು ಸಂಪೂರ್ಣವಾಗಿ ಮುಗಿದಿಲ್ಲ. ಕಾಮಗಾರಿ ಮುಗಿಸದೆ ದುಬಾರಿ ಸುಂಕ ಪಡೆಯುತ್ತಿರುವುದು ಅನ್ಯಾಯ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ನೀಡುತ್ತಿದ್ದರು. ಅದನ್ನು ನಿಲ್ಲಿಸುವ ಪ್ರಯತ್ನಗಳಾಗುತ್ತಿದೆ. ನಿಯಮ ಕಡ್ಡಾಯ ಮುಂದೆ ಹೋದರೂ, ಸ್ಥಳೀಯವಾಗಿ ಗೂಂಡಾಗಳನ್ನು ಇಟ್ಟು ಬೆದರಿಸುವ ಕೆಲಸವಾಗುತ್ತಿದೆ. ಕೇಂದ್ರ ಸರಕಾರ ಟೋಲ್ ವಿಚಾರವನ್ನು ಗಣನೆಗೆ ತೆಗೆದುಕೊಂಡು ರದ್ದುಗೊಳಿಸಬೇಕಾಗಿದೆ. ಅವೈಜ್ಞಾನಿಕ ಟೋಲ್ ವಿಚಾರವನ್ನು ಮನದಲ್ಲಿಟ್ಟುಕೊಂಡು ಕಾರ್ಯಾ ಚರಿಸಬೇಕಿದೆ ಎಂದರು.
ಈ ಸಂದರ್ಭ ಖಾಸಗಿ ಬಸ್ ಮಾಲಕರು, ಸಾರ್ವಜನಿಕ ಹಿತರಕ್ಷಣಾ ವೇದಿಕೆ, ಗಡಿನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.
ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟ
ಈ ಸಂದರ್ಭ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಟೋಲ್‌ನಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ತಲಪಾಡಿಯಲ್ಲಿ ಖಾಸಗಿ ಬಸ್‌ಗಳಿಗೆ ಟೋಲ್ ವಿಧಿಸಿದ್ದರಿಂದ ಕೇರಳಕ್ಕೆ ತೆರಳುವ ಪ್ರಯಾಣಿಕರು ಮುಕ್ಕಾಲು ಕಿ.ಮೀ. ನಡೆದುಕೊಂಡು ಹೋಗುವಂತಾಗಿದೆ. ನಾವು ಎಲ್ಲೆಲ್ಲಿ ಮನವಿ ನೀಡಬೇಕು ಅಲ್ಲಿಗೆ ಕೊಟ್ಟಿದ್ದೇವೆ. ಆದರೆ ಅಧಿಕಾರಿಗಳಿಗೆ ಸಮಸ್ಯೆ ಗೊತ್ತಾಗುವುದಿಲ್ಲ. ಕಡ್ಡಾಯ ದಿನಾಂಕವನ್ನು ಮುಂದೂಡಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಏಕಾಏಕಿ ಜನರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಸ್ಥಳೀಯರನ್ನು ಕರೆದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ 5,000 ಜನ ಸೇರಿಸಿ ಟೋಲ್ ಅನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಕೈ ಹಾಕಬೇಕಾಗಬಹುದು ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.