ರೈಲು ನಿಲ್ದಾಣದ ಬಾಗಿಲಿಗೇ ಬಸ್
Team Udayavani, Dec 17, 2019, 10:31 AM IST
ಬೆಂಗಳೂರು: ಮೆಜೆಸ್ಟಿಕ್‌ನ ಸಿಟಿ ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಬಿಎಂಟಿಸಿ ಬಸ್‌ಗಾಗಿ ಇನ್ಮುಂದೆ ಲಗೇಜು ಹೊತ್ತು, ಸ್ಕೈವಾಕ್ ಅಥವಾ ಸುರಂಗಮಾರ್ಗ ಹತ್ತಿ-ಇಳಿಯುವ ಸರ್ಕಸ್ ಮಾಡಬೇಕಿಲ್ಲ. ನಿಲ್ದಾಣದ ಬಾಗಿಲಿಗೇ ಬಸ್ ಗಳು ಬರಲಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿ ಸಹಯೋಗದಲ್ಲಿ ನಗರದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ ಆರ್) ರೈಲು ನಿಲ್ದಾಣದ ಮೂರನೇ ಪ್ರವೇಶ ದ್ವಾರದಿಂದ ಸೋಮವಾರ ಈ ಸೇವೆಗೆ ಚಾಲನೆ ನೀಡಿತು. ಪ್ರಾಯೋಗಿಕವಾಗಿ ಈ ಪ್ರವೇಶ ದ್ವಾರದಿಂದ ಕಾಡುಗೋಡಿ, ಹೊಸಕೋಟೆ, ಅತ್ತಿಬೆಲೆ, ಸರ್ಜಾಪುರ, ಯಲಹಂಕ ಮತ್ತು ನಾಗವಾರಕ್ಕೆ ತಲಾ 9 ಟ್ರಿಪ್‌ಗ್ಳಲ್ಲಿ ಒಟ್ಟಾರೆ ದಿನಕ್ಕೆ 54 ಸುತ್ತುವಳಿಯಲ್ಲಿ ಬಸ್ ಸಂಚಾರ ಸೌಲಭ್ಯ ಸಿಗಲಿದೆ. ಬಸ್‌ಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30ರವರೆಗೆ ಕಾರ್ಯಾಚರಣೆ ಮಾಡಲಿವೆ.
ರೈಲು ನಿಲ್ದಾಣದ ಎದುರಿನಲ್ಲೇ ಬಿಎಂಟಿಸಿ ಬಸ್ ನಿಲ್ದಾಣವಿದ್ದರೂ, ವಿವಿಧೆಡೆಯಿಂದ ಬಸ್‌ನಲ್ಲಿ ಬರುವವರು ರೈಲು ನಿಲ್ದಾಣಕ್ಕೆ ಹಾಗೂ ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ತೆರಳಲು ಸರ್ಕಸ್ ಮಾಡಬೇಕಿತ್ತು. ಇದರಿಂದ ಮಹಿಳೆಯರು, ಹಿರಿಯ ನಾಗರಿಕರಿಗೆ ಹೆಚ್ಚು ಸಮಸ್ಯೆ ಆಗುತ್ತಿತ್ತು. ಹಾಗಾಗಿ, ರೈಲು ಪ್ರಯಾಣಿಕರು ಆಟೋ, ಟ್ಯಾಕ್ಸಿಗಳ ಮೊರೆಹೋಗುತ್ತಿದ್ದರು. ಇದರಿಂದ ಪರೋಕ್ಷವಾಗಿ ಬಿಎಂಟಿಸಿ ಆದಾಯಕ್ಕೂ ಕತ್ತರಿ ಬೀಳುತ್ತಿತ್ತು. ಹೊಸ ವ್ಯವಸ್ಥೆಯಿಂದ ಆ ಕಿರಿಕಿರಿ ಇರುವುದಿಲ್ಲ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ, ಸಾರ್ವಜನಿಕರನ್ನು ಸಮೂಹ ಸಾರಿಗೆಯತ್ತ ಹೆಚ್ಚಾಗಿ ಸೆಳೆಯುವ ಸಲುವಾಗಿ ಹೊಸ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅದರಂತೆ ಇದೀಗ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸ್ ಸೇವೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ನೀಡುವ ಸಲುವಾಗಿ ರೈಲು ನಿಲ್ದಾಣದಿಂದ ಬಸ್ ಸೇವೆ ಆರಂಭಿಸಲಾಗುತ್ತಿದೆ. ಉಪನಗರ ರೈಲು ಯೋಜನೆ ಅನುಷ್ಠಾನದ ಬಳಿಕ ಬಸ್ ಸೇವೆ ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ ಎಂದರು.
ಇದಕ್ಕೂ ಮುನ್ನ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇವೆಗೆ ಚಾಲನೆ ನೀಡಿದರು. ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಸೇರಿದಂತೆ ಬಿಎಂಟಿಸಿ ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆಟ್ರೋ ಪ್ರಯಾಣಿಕರಿಗಿಲ್ಲ ಅವಕಾಶ: ನಗರಕ್ಕೆ ಬಂದಿಳಿಯುವ ರೈಲು ಪ್ರಯಾಣಿಕರು ಮೆಟ್ರೋ ಮೂಲಕ ವಿವಿಧ ಪ್ರದೇಶಗಳಿಗೆ ತೆರಳುವವರಿಗೆ ರಸ್ತೆ ದಾಟುವ ಸರ್ಕಸ್ ಅನಿವಾರ್ಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣ (ನೇರಳೆ ಮಾರ್ಗದಲ್ಲಿ ಹೋಗುವವರು) ಅಥವಾ ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕಾಗಿ ಕನಿಷ್ಠ 300 ಮೀಟರ್ ಸಂಚರಿಸಲೇಬೇಕಾಗುತ್ತದೆ. ಇನ್ನು ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣಕ್ಕೆ ಬಂದಿಳಿದು, ಬಸ್‌ನಲ್ಲಿ ಬೇರೆ ಕಡೆಗೆ ಹೋಗುವವರಿಗೆ ಈ ಹೊಸ ವ್ಯವಸ್ಥೆ ಅನುಕೂಲ ಆಗಲಿದೆ.
ಮೈಸೂರಿಗೆ “ಮೆಮು’ ವಿಶೇಷ ರೈಲು: ಮೈಸೂರು-ಬೆಂಗಳೂರು -ಯಲಹಂಕ ನಡುವೆ ಮಂಗಳ ವಾರದಿಂದ “ಮೆಮು’ ವಿಶೇಷ ರೈಲು ಸಂಚಾರ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಟ್ವೀಟ್ ಮಾಡಿದ್ದಾರೆ. ಪ್ರತಿದಿನ ರಾತ್ರಿ 10.20ಕ್ಕೆ ಮೈಸೂರಿನಿಂದ ಹೊರಟು ಮಧ್ಯರಾತ್ರಿ 1.30ಕ್ಕೆ ಬೆಂಗಳೂರಿನ ಯಲಹಂಕ ತಲುಪಲಿದೆ. 2.30ಕ್ಕೆ ಯಲಹಂಕದಿಂದ ಹೊರಟು ಬೆಳಗ್ಗೆ 5.35ಕ್ಕೆ ಮೈಸೂರು ತಲುಪಲಿದೆ. ಬೆಳಗಿನ ಜಾವ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಮತ್ತು ಈ ಭಾಗದ ತರಕಾರಿ, ಹೂವು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ದರ ಪರಿಷ್ಕರಣೆ; ಸಾಧಕ-ಬಾಧಕ ಚರ್ಚೆ: ಬಿಎಂಟಿಸಿ ಬಸ್ ಸಂಚರಿಸುತ್ತಿರುವ ಎಲ್ಲಾ ಮಾರ್ಗಗಳ ದರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸದ್ಯ ದರ ಇಳಿಕೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಶಿಖಾ ತಿಳಿಸಿದ್ದಾರೆ. ಬಸ್ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಸ್ ಪ್ರಯಾಣದರ ಇಳಿಕೆ ಮಾಡುವಂತೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ದರ ಇಳಿಕೆ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಗರದಲ್ಲಿ ಸಂಚಾರದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.