ಕೃಷಿ ಪ್ರಶಸ್ತಿ ಪುರಸ್ಕೃತ, ಇಳಿ ವಯಸ್ಸಲ್ಲೂ ಕುಗ್ಗದ ಉತ್ಸಾಹಿ
ಬಾಳೆ, ಕಬ್ಬು, ಭತ್ತ, ಗೆಣಸು ಕೃಷಿಯಲ್ಲಿ ಯಶ ಕಂಡ ಗಣಪಯ್ಯ ಗಾಣಿಗ
Team Udayavani, Dec 18, 2019, 5:17 AM IST
ಹೆಸರು: ಗಣಪಯ್ಯ ಗಾಣಿಗ
ಏನೇನು ಕೃಷಿ: ಬಾಳೆ, ಕಬ್ಬು, ಭತ್ತ, ಗೆಣಸು
ಎಷ್ಟು ವರ್ಷ ಕೃಷಿ: 50
ಕೃಷಿ ಪ್ರದೇಶ: 1.5 ಎಕರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಕುಂದಾಪುರ: ಒಂದು ಎಕರೆ ಕೃಷಿ ಭೂಮಿಯಲ್ಲಿ ಅಧಿಕ ಕಬ್ಬು ಬೆಳೆದು ಶ್ರೇಷ್ಠ ಕೃಷಿಕ ಪ್ರಶಸ್ತಿ, ಅನ್ನಪೂರ್ಣೇಶ್ವರಿ ಕ್ಯಾವೆಂಡಿಶ್ ಬಾಳೆ, ಮೆಣಸು, ಗೆಣಸು, ಭತ್ತ ಹೀಗೆ ತರಹೇ ವಾರಿ ಕೃಷಿ ಬೆಳೆಸಿದ್ದು, ಮಾತ್ರವಲ್ಲದೆ ಅದರಲ್ಲಿ ಪ್ರಯೋಗಶೀಲತೆ ಅಳವಡಿಸಿ ಮಾದರಿಯಾದ ಕಳುವಿನ ಬಾಗಿಲಿನ ಗಣಪಯ್ಯ ಗಾಣಿಗ. 4ನೇ ತರಗತಿಯವರೆಗೆ ಓದಿದ್ದರೂ ಕೃಷಿ ವಿಶ್ವವಿದ್ಯಾಲಯಕ್ಕೂ ಕಡಿಮೆಯಿಲ್ಲದ ಅಪಾರ ಕೃಷಿ ಜ್ಞಾನ ಇವರದು. ಕಂಬಳದಲ್ಲಿ 3 ವರ್ಷ ಓಟಗಾರರಾಗಿದ್ದು, ಕೆಂಚನೂರಿನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ಕೇವಲ 1 ಎಕರೆ ಕೃಷಿ ಭೂಮಿಯಲ್ಲಿ ಬರೋಬ್ಬರಿ 117 ಟನ್ ಕಬ್ಬು ಬೆಳೆಯುವ ಮೂಲಕ ಅಧಿಕ ಇಳುವರಿ ಗಳಿಸಿದ್ದಕ್ಕೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವತಿಯಿಂದ ಕೊಡಮಾಡುವ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು 1987 ಹಾಗೂ 88ರಲ್ಲಿ ಸತತ ಎರಡು ಬಾರಿ ಪಡೆದ ಸಾಧನೆ ಇವರದು. 1987ರಲ್ಲಿ ದ.ಕ. ಜಿಲ್ಲಾ ಸೋಮ ಕ್ಷತ್ರಿಯ ಸಮಾಜ ಕೊಡಮಾಡಿದ ರೈತ ಶ್ರೇಷ್ಠ ಪ್ರಶಸ್ತಿ, 2014 ರಲ್ಲಿ ಕುಂದಾಪುರ ತಾ| ಗಾಣಿಗ ಸೇವಾ ಸಮಾಜ ನೀಡಿದ ಪ್ರಶಸ್ತಿಗಳು ಇವರ ಕೃಷಿ ಸಾಧನೆಗೆ ಸಂದ ಗೌರವ.
ಸಕ್ಕರೆ ಕಾರ್ಖಾನೆ ಕಷ್ಟ
ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಗೊಂಡರೂ ಅದನ್ನು ಮುನ್ನಡೆಸಿಕೊಂಡು ಹೋಗುವುದು ತುಂಬಾ ಸವಾಲಿನ ಸಂಗತಿ ಎನ್ನುವ ಗಣಪಯ್ಯ, ಮೊದಲೆಲ್ಲ ಎಕರೆಗೆ 100 ಟನ್ ಕಬ್ಬು ಬೆಳೆಯುತ್ತಿದ್ದರೆ, ಈಗ ಬರೀ 30-40 ಟನ್ ಅಷ್ಟೇ ಸಿಗಬಹುದು. ಇದಲ್ಲದೆ ಕರಾವಳಿ ಭಾಗದಲ್ಲಿ ಬೆಳೆದ ಕಬ್ಬುಗಳಲ್ಲಿ ಸಿಹಿ ಅಂಶ ಕಡಿಮೆ ಇರುವುದರಿಂದ ಗುಣಮಟ್ಟದ ಸಕ್ಕರೆ ಸಿಗುವುದು ಕಷ್ಟ ಎನ್ನುತ್ತಾರವರು.
ವಿಭಿನ್ನ ಕೃಷಿ
ಇವರಲ್ಲಿ ತಾವು ಬೆಳೆಯುವ ಕೃಷಿಯ ಬಗ್ಗೆ ಪರಿಪೂರ್ಣತೆ, ಅಪಾರ ಅನುಭವವಿತ್ತು. ಹಾಗಾಗಿ 30 ವರ್ಷಗಳ ಹಿಂದೆ ಬಳ್ಕೂರು ಗ್ರಾಮದಲ್ಲಿಯೇ ಮೊದಲ ಬಾರಿಗೆ ಹಸಿಮೆಣಸು ಬೆಳೆಸಿ, ಅದರಲ್ಲಿ ಆ ಕಾಲದಲ್ಲಿ ವರ್ಷಕ್ಕೆ 40-50 ಸಾವಿರ ರೂ. ಆದಾಯ ಗಳಿಸಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ ಚೆಂಬೂರ್‌ಗುಳ್ಳ, ಕಬ್ಬು, ತೆಂಗು, ವಿಶಿಷ್ಟ ತಳಿಗಳ ಭತ್ತ, ಗೆಣಸು ಹೀಗೆ ವಿಭಿನ್ನ ಮಾದರಿಯ ಕೃಷಿಯನ್ನು ಪೋಷಿಸಿ, ಅದರಲ್ಲೂ ಯಶ ಕಂಡಿದ್ದರು, ಕೃಷಿಕರಿಗೆ ಮಾದರಿಯಾಗಿದ್ದರು.
85 ವರ್ಷದ ವರೆಗೂ ಕೃಷಿ ಕಾಯಕ
ಈಗ ಇವರಿಗೆ 87 ವರ್ಷ. ಕಳೆದ 2 ವರ್ಷದಿಂದ ವಯೋಸಹಜ ಸಮಸ್ಯೆಯಿಂದ ಕೃಷಿಯಿಂದ ಹಿಂದೆ ಸರಿದಿದ್ದಾರೆ. ಆದರೆ 85 ವರ್ಷದ ವರೆಗೂ ಕೃಷಿ ಕಾಯಕದಲ್ಲಿದ್ದರು. ಇವರ ಇಬ್ಬರು ಗಂಡು ಮಕ್ಕಳಾದ ರಾಮಚಂದ್ರ ಹಾಗೂ ರತ್ನಾಕರ ಕೂಡ ಈ ಕೃಷಿ ಪರಂಪರೆಯನ್ನು ಮುಂದುವರಿಸಿದ್ದಾರೆ.
ವಿಶಿಷ್ಟ ಬಾಳೆ ಕೃಷಿ
2015ರಲ್ಲಿ ತನ್ನ ಅರ್ಧ ಎಕರೆ ತೆಂಗಿನ ತೋಟ ದಲ್ಲಿಯೇ ಹೊಸ ತಳಿಯ ಬಾಳೆ ಅನ್ನಪೂರ್ಣೇಶ್ವರೀ ಕ್ಯಾವೆಂಡಿಶ್ ಗಿಡಗಳನ್ನು ಬೆಳೆಸಿ, ಭರಪೂರ ಯಶ ಕಂಡವರು. ಬ್ರಹ್ಮಾವರದ ಪೇತ್ರಿಯಿಂದ ಈ ಗಿಡಗಳನ್ನು ತಂದು ನೆಟ್ಟು, ಅದಕ್ಕೆ ಸಾವಯವ ಗೊಬ್ಬರ, ಹಿತ ಮಿತ ನೀರು ಹಾಕಿ ಬೆಳೆಸಿ, 7-8 ತಿಂಗಳಲ್ಲಿಯೇ ಫಸಲು ತೆಗೆದಿದ್ದರು. ಸಾಮಾನ್ಯವಾಗಿ ಬಾಳೆ ಗೊನೆ ಕಟಾವಿಗೆ 10ರಿಂದ 12 ತಿಂಗಳ ವರೆಗೆ ಕಾಯಬೇಕು. 4 ಅಡಿ ಎತ್ತರದ ಒಂದೊಂದು ಗೊನೆ 30-35 ಕೆಜಿ ವರೆಗೂ ತೂಕವಿರುತ್ತಿತ್ತು. ಅತ್ಯಂತ ರುಚಿಕರ ಮತ್ತು ಆರೋಗ್ಯ ದಾಯಕವಂತೆ. 6 ಅಡಿ ಆಳ, ಆರು ಅಡಿ ಅಗಲದ ಸಾಲು ದಂಡೆ ಮಾಡಿ ಒಂದೊಂದು ಗಿಡದ ನಡುವೆ 6 ಅಡಿ ಅಂತರ ಕಾಯ್ದುಕೊಂಡು ಬೆಳೆಸಲಾಗಿತ್ತು. ಈ ಬಳ್ಕೂರು, ಬಸ್ರೂರು ಪ್ರದೇಶದ ಮಣ್ಣಿನಲ್ಲಿ ಈ ಬಾಳೆ ಕೃಷಿ ಅಸಾಧ್ಯ ಎನ್ನುವರರ ಮಾತನ್ನೇ ಸುಳ್ಳಾಗಿಸಿದ್ದರು.
ಮಾರುಕಟ್ಟೆ ಕಲೆಯೂ ಅಗತ್ಯ
ರೈತರು ಕೃಷಿ ಮಾಡುವ ಜತೆಗೆ ಅದಕ್ಕೆ ಮಾರುಕಟ್ಟೆ ಮಾಡುವುದನ್ನು ಕೂಡ ಕಲಿತರೆ ಮಾತ್ರ ಯಶಸ್ಸು ಪಡೆಯಬಹುದು. ಇಲ್ಲದಿದ್ದರೆ ಕಷ್ಟಪಟ್ಟು ದುಡಿಯುವುದು ಯಾರೋ? ಲಾಭ ಗಳಿಸುವುದು ಇನ್ನು ಯಾರೋ ಆಗಿರುತ್ತಾರೆ. ಸರಕಾರ ಕೂಡ ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಒಂದು ಸೊಸೈಟಿಯಂತಹ ಮಾರುಕಟ್ಟೆ ವ್ಯವಸ್ಥೆಯನ್ನು ತಂದರೆ ಅನುಕೂಲವಾಗುತ್ತದೆ. ಕೇವಲ ಸಾವಯವದಿಂದ ಅಧಿಕ ಇಳುವರಿ, ಉತ್ತಮ ಫಸಲು ಕಷ್ಟವಾದರೂ ಮಣ್ಣಿನ ಫಲವತ್ತತೆಗಾಗಿ ಆದಷ್ಟು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ. ಕೃಷಿಯ ಬಗ್ಗೆ ಮುಖ್ಯವಾಗಿ ಆಸಕ್ತಿಯಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ.
-ಗಣಪಯ್ಯ ಗಾಣಿಗ, ಕಳುವಿನಬಾಗಿಲು
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.