ವ್ಯಾಪಾರ-ವಹಿವಾಟು: ಎರಡು ದಿನಗಳಲ್ಲಿ ಕೋಟ್ಯಂತರ ರೂ. ನಷ್ಟ !
ನಗರದಲ್ಲಿ ಕರ್ಫ್ಯೂ ಹಿನ್ನೆಲೆ
Team Udayavani, Dec 22, 2019, 4:45 AM IST
ಮಹಾನಗರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಹಾಗೂ ಅನಂತರದ ಕರ್ಫ್ಯೂನಿಂದಾಗಿ ಎರಡು ದಿನಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಅದರಲ್ಲಿಯೂ ಅಗತ್ಯ ವಸ್ತುಗಳ ಮಾರಾಟ ಮಾಡುವ ಹೊಟೇಲ್, ಹಾಲು-ತರಕಾರಿ, ದಿನಸಿ ಅಂಗಡಿ, ಮೀನು ವ್ಯಾಪಾರಸ್ಥರಿಗೆ ಹೆಚ್ಚಿನ ನಷ್ಟ ಉಂಟಾಗಿದೆ.
ಇನ್ನೊಂದೆಡೆ, ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಬ್ಬ ಸಮೀಪಿಸಿರುವ ಕಾರಣ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿವೆ. ಹೊರ ಜಿಲ್ಲೆ, ರಾಜ್ಯದಿಂದ ಯಾವುದೇ ಪ್ರವಾಸಿಗರು ದಕ್ಷಿಣಕನ್ನಡ ಜಿಲ್ಲೆಯತ್ತ ಆಗಮಿಸುತ್ತಿಲ್ಲ. ಕೇರಳ ಸಹಿತ ಕೆಲವೊಂದು ರಾಜ್ಯದಲ್ಲಿ ಕ್ರಿಸ್ಮಸ್ ರಜೆ ಈಗಾಗಲೇ ಆರಂಭವಾಗಿದ್ದು, ಮಂಗಳೂರಿನ ಬೀಚ್, ನಿಸರ್ಗಧಾಮ, ದೇವಸ್ಥಾನಗಳಿಗೆ ಪ್ರವಾಸಕ್ಕೆಂದು ಬರುವ ಮಂದಿ ಪ್ರವಾಸ ದಿನವನ್ನು ಮುಂದೂಡಿದ್ದಾರೆ.
ಇದೇ ಕಾರಣಕ್ಕೆ ಪ್ರವಾಸಿ ತಾಣಗಳಲ್ಲಿರುವ ಅಂಗಡಿ ಮಾಲಕರು, ಟ್ಯಾಕ್ಸಿ ಮಾಲಕರಿಗೆ ನಷ್ಟ ಉಂಟಾಗಿದೆ. ಇನ್ನೊಂದೆಡೆ, ಈಗಾಗಲೇ ಪ್ರವಾಸಕ್ಕೆ ಬುಕ್ಕಿಂಗ್ ಮಾಡಿ ದ್ದವರು ಅನಿವಾರ್ಯವಾಗಿ ಅದನ್ನು ರದ್ದುಗೊಳಿಸಿದ್ದು, ಅದರಿಂದಲೂ ಹೊಟೇಲ್ -ಲಾಡ್ಜ್ನವರು ಹಾಗೂ ಟೂರಿಸ್ಟ್ ಟ್ಯಾಕ್ಸಿಯವರನ್ನು ಬಾಧಿಸಿವೆ.
ಹೊಟೇಲ್ ಉದ್ಯಮಕ್ಕೆ ಹೊಡೆತ
ಸುಮಾರು 400ಕ್ಕೂ ಮಿಕ್ಕೂ ವಿವಿಧ ಮಾದರಿ ಹೊಟೇಲ್‌ಗಳಿವೆ. ಕೆಲವೊಂದು ಲಾಡ್ಜ್ಗಳಲ್ಲಿರುವ ಹೊಟೇಲ್‌ಗಳು ಹೊರತುಪಡಿಸಿ ಉಳಿದಂತೆ ಎಲ್ಲ ಹೊಟೇಲ್‌ಗಳನ್ನು ಡಿ. 19ರ ಮಧ್ಯಾಹ್ನ ಬಳಿಕ ಮುಚ್ಚಲಾಗಿತ್ತು. ಒಂದು ಅಂದಾಜಿನ ಪ್ರಕಾರ ಹೊಟೇಲ್ ಮಾಲಕರಿಗೆ ಕಳೆದ ಎರಡೂವರೆ ದಿನದಲ್ಲಿ ಸುಮಾರು 2 ಕೋಟಿ ರೂ.ಗೂ ಅಧಿಕ ನಷ್ಟ ವಾಗಿರುವ ಬಗ್ಗೆ ಆಂದಾಜಿಸಲಾಗಿದೆ. ಹೊಟೇಲ್‌ಗಳಲ್ಲಿ ಮೊದಲೇ ತಂದಿದ್ದಂತಹ ತರಕಾರಿ ಕೊಳೆತಿದ್ದು, ಹಾಲು ಕೂಡ ಹಾಳಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರು.
ಚಿತ್ರ ಪ್ರದರ್ಶನ ಇಲ್ಲ
ಐದು ಸಿನಿಮಾ ಮಂದಿರ ಸೇರಿ ಮಾಲ್‌ಗಳಲ್ಲಿರುವ ಪಿವಿಆರ್, ಸಿನಿಪೊಲಿಸ್, ಬಿಗ್‌ಸಿನೆಮಾದಲ್ಲಿ ಯಾವುದೇ ಚಿತ್ರ ಪ್ರದರ್ಶನಗೊಂಡಿಲ್ಲ. ಕನ್ನಡ, ಹಿಂದಿ ಆವೃತ್ತಿಯಲ್ಲಿ ಶುಕ್ರವಾರ ತೆರಕಂಡ “ದಬಾಂಗ್’ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದರೂ, ನಗರದಲ್ಲಿ ಬಿಡುಗಡೆಯಾಗಿಲ್ಲ.
ಇನ್ನು, ಚಿತ್ರಮಂದಿರದಲ್ಲಿ ಈಗಾಗಲೇ ಇರುವ ತುಳು, ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷಾ ಚಿತ್ರ ಪ್ರದರ್ಶನ ಇಲ್ಲದ ಕಾರಣ ಚಿತ್ರಮಂದಿರದ ಮಾಲಕರು ಮತ್ತು ವಿತರಕರು, ನಿರ್ಮಾಪಕರಿಗೆ ಅಪಾರ ನಷ್ಟ ಉಂಟಾಗಿದೆ.
ಪ್ರತೀದಿನ ಸದಾಚಟುವಟಿಕೆಯಲ್ಲಿರುವ ಸೆಂಟ್ರಲ್ ಮಾರುಕಟ್ಟೆ ಎರಡು ದಿನಗಳಿಂದ ಬಿಕೋ ಎನ್ನುತ್ತಿದೆ. ಪ್ರತೀ ದಿನ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತಿರುವ ಸೆಂಟ್ರಲ್ ಮಾರುಕಟ್ಟೆಯ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು. ಇನ್ನು, ಮತ್ಸೋದ್ಯಮದ ಮೇಲೂ ಪೆಟ್ಟು ಬಿದ್ದಿದ್ದು, ಮೀನು ಮಾರುಕಟ್ಟೆಗಳನ್ನೂ ಮುಚ್ಚಲಾಗಿತ್ತು.
ಬಸ್ ಸಂಚಾರ ಸ್ಥಗಿತ: 2.5 ಕೋಟಿ ರೂ.ಗೂ ಹೆಚ್ಚು ನಷ್ಟ
ಮಂಗಳೂರಿನಿಂದ ಸುತ್ತ-ಮುತ್ತಲಿನ ಪ್ರದೇಶಗಳಿಗೆ ಸುಮಾರು 300ಕ್ಕೂ ಹೆಚ್ಚಿನ ಸಿಟಿ ಬಸ್‌ಗಳು 60 ರೂಟ್‌ಗಳಲ್ಲಿ ಸಂಚರಿಸುತ್ತವೆ. ಡಿ. 19ರ ಸಂಜೆ ಬಳಿಕ ಡಿ. 21ರ ವರೆಗೆ ಯಾವುದೇ ಸಿಟಿ ಬಸ್‌ಗಳು ಸಂಚರಿಸಲಿಲ್ಲ. ಒಂದು ಬಸ್‌ನಲ್ಲಿ ಪ್ರತೀ ದಿನ ಸರಾಸರಿ ಸುಮಾರು 10,000 ರೂ. ನಷ್ಟು ಹಣ ಸಂಗ್ರಹವಾಗುತ್ತದೆ.
ಎರಡೂವರೆ ದಿನದಲ್ಲಿ ಸುಮಾರು 1.5 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸಿದೆ. ಅದೇರೀತಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ (ಮಂಗಳೂರಿನಲ್ಲಿ-3) ಹೊರಡುವ ಬಸ್ ಸಂಚಾರವನ್ನು ಸ್ಥಗಿತಗೊ ಳಿಸಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ ಸುಮಾರು 50 ಲಕ್ಷ ರೂ. ಸಂಗ್ರವಾಗುತ್ತದೆ. ಆದರೆ, ಕರ್ಫ್ಯೂ ಹಿನ್ನೆಲೆ, ಎರಡೂವರೆ ದಿನ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಸುಮಾರು 1.5 ಕೋಟಿ ರೂ. ನಷ್ಟ ಅನುಭವಿಸಿದೆ.
ವೀಕೆಂಡ್ ಸುತ್ತಾಟಕ್ಕೂ ಬ್ರೇಕ್
ಸಿಟಿ ಮಂದಿ ಸಾಮಾನ್ಯವಾಗಿ ವೀಕೆಂಡ್ ಶಾಪಿಂಗ್-ಸುತ್ತಾಟಕ್ಕಾಗಿ ಕಾಯುತ್ತಾರೆ. ಸಾಮಾನ್ಯವಾಗಿ ಶನಿವಾರ-ರವಿವಾರದಂದು ಮನೆ ಮಂದಿ ಒಟ್ಟಾಗಿ ಮಾಲ್‌ಗಳು, ಚಲನಚಿತ್ರ, ಬೀಚ್‌ಗಳಿಗೆ ಹೋಗುತ್ತಾರೆ. ಆದರೆ, ನಗರದಲ್ಲಿ ವಿಧಿಸಲಾದ ಕರ್ಫ್ಯೂನಿಂದ ಸಾರ್ವಜನಿಕರು ಮನೆಯ ಹೊರಗಡೆ ಕಾಲಿಡಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಈ ಕಾರಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ವೀಕೆಂಡ್ ವ್ಯಾಪಾರವನ್ನು ಅವಲಂಬಿಸಿಕೊಂಡಿರುವ ವ್ಯಾಪಾರಸ್ಥರಿಗೂ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮದ್ಯ ವಹಿವಾಟಿಗೂ ಹೊಡೆತ
ದ.ಕ. ಜಿಲ್ಲಾದ್ಯಂತ ಎರಡು ದಿನಗಳಿಂದ ಮದ್ಯಮಾರಾಟ ನಿಷೇಧಿಸಲಾಗಿತ್ತು. ಗುರುವಾರ ಮತ್ತು ಶುಕ್ರವಾರದ ಅಂಕಿ ಅಂಶದಂತೆ ಜಿಲ್ಲೆಯಲ್ಲಿ ಸುಮಾರು 20,000ಕ್ಕೂ ಮಿಕ್ಕೂ ಮದ್ಯದ ಬಾಟಲ್‌ಗಳು ಮಾರಾಟವಾಗಿಲ್ಲ. ಅದೇ ರೀತಿ ಶನಿವಾರ ಮತ್ತು ರವಿವಾರ ಸಾಮಾನ್ಯ ದಿನಗಳಲ್ಲಿ 25,000ಕ್ಕೂ ಮಿಕ್ಕಿ ಮದ್ಯದ ಬಾಟಲಿಗಳು ಮಾರಾಟವಾಗುತ್ತದೆ. ಕರ್ಫ್ಯೂ ಮತ್ತು ನಿಷೇಧಾಜ್ಞೆಯ ಪರಿಣಾಮ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದೆ.
ವ್ಯಾಪಾರ ನಷ್ಟ
ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ-ವಹಿವಾಟಿಗೆ ದೊಡ್ಡ ಮಟ್ಟಿನ ಪೆಟ್ಟು ಬಿದ್ದಿದೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ನಷ್ಟ ಅನುಭವಿಸಿದ್ದಾರೆ. ಅಲ್ಲದೆ, ಫಾರ್ಮಸಿ ಕ್ಷೇತ್ರದಲ್ಲಿಯೂ ನೌಕರರ ಕೊರತೆ ಉಂಟಾಗಿತ್ತು.
- ಐಸಾಕ್ ವಾಸ್, ಕೆಸಿಸಿಐ ಅಧ್ಯಕ್ಷ
ಒಂದು ಕೋಟಿ ನಷ್ಟ
ಬಂದ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್‌ಗಳ ಸಂಚಾರ ರದ್ದುಗೊಂಡ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಸುಮಾರು ಒಂದು ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ.
- ದಿಲ್‌ರಾಜ್ ಆಳ್ವ, ಖಾಸಗಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
2 ಕೋಟಿ ನಷ್ಟ
ಕರ್ಫ್ಯೂ ಹಿನ್ನೆಲೆಯಲ್ಲಿ ಹೊಟೇಲ್ ಉದ್ಯಮಕ್ಕೆ ಸುಮಾರು 2 ಕೋಟಿ ರೂ. ನಷ್ಟು ನಷ್ಟ ಅನುಭವಿಸಿದೆ. ಸದ್ಯ ಮಂಗಳೂರು ಶಾಂತವಾಗಿದ್ದು, ಹೊಟೇಲ್‌ಗಳು ತೆರೆಯಲು ಪೊಲೀಸರು ಅನುಮತಿ ನೀಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದೇವೆ.
- ಕುಡಿ ಜಗದೀಶ್ ಶೆಣೈ, ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.