ಸುಗಮ ಸಂಚಾರ ವ್ಯವಸ್ಥೆಯೋ, ಅವ್ಯವಸ್ಥೆಯೋ?
ಸುದ್ದಿ ಸುತ್ತಾಟ
Team Udayavani, Dec 23, 2019, 3:10 AM IST
ರಾಜ್ಯದಲ್ಲಿ 445ಕ್ಕೂ ಅಧಿಕ ಟೋಲ್‌ಗಳಿದ್ದು, ಈ ಪೈಕಿ ಲಾಜಿಸ್ಟಿಕ್ ಸೇರಿ ಅತಿ ಹೆಚ್ಚು ವಾಹನ ಸಂಚಾರ ಇರುವ ನಗರದ ಹೊರವಲಯಗಳಲ್ಲಿ ಆರು ಟೋಲ್‌ಗೇಟ್‌ಗಳಿವೆ. ಅಲ್ಲೆಲ್ಲಾ ಫಾಸ್ಟ್‌ಟ್ಯಾಗ್ ಪರಿಚಯಿಸಲಾಗಿದೆ. ಸಮಯ ಉಳಿತಾಯ, ಒಂದೇ ಕಡೆ ನೂರಾರು ವಾಹನಗಳ ಟೋಲ್ ಪಾವತಿಯಂತಹ ಹಲವು ಅನುಕೂಲಗಳಾಗಿವೆ. ಆದರೆ, ಬೆನ್ನಲ್ಲೇ ಎರಡೆರಡು ಬಾರಿ ಶುಲ್ಕ ಕಡಿತ, ಫಾಸ್ಟ್‌ಟ್ಯಾಗ್‌ಗಳ ಕೊರತೆ, ಬ್ಯಾಂಕ್ ಖಾತೆ ಮತ್ತು ಟ್ಯಾಗ್‌ಗೆ ಲಿಂಕ್ ಆಗದಿರುವಂತಹ ಅನನುಕೂಲಗಳೂ ಕಾಣಿಸಿಕೊಳ್ಳುತ್ತಿವೆ. ಲಕ್ಷಾಂತರ ಜನ ನಿತ್ಯ ಬಳಸುವ ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಳವಡಿಕೆಗೆ ಬರುವ ಜ.15ರವರೆಗೆ ಗಡುವು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯ ಸಾಧಕ-ಬಾಧಕಗಳ ಒಂದು ನೋಟ “ಸುದ್ದಿ ಸುತ್ತಾಟ’ದಲ್ಲಿ…
ಕೆಲ ವರ್ಷಗಳ ಹಿಂದೆ ತಡೆರಹಿತ ಹಾಗೂ ಶರವೇಗದ ಸಂಚಾರಕ್ಕಾಗಿ ಇರುವ ರಸ್ತೆಗೆ ಖಾಸಗಿ ಸಹಭಾಗಿತ್ವದಲ್ಲಿ ಪರ್ಯಾಯ ಮಾರ್ಗಗಳನ್ನು ನಿರ್ಮಿಸಲಾಯಿತು. ಲಕ ಲಕ ಹೊಳೆಯುವ ಆ ಪಥಗಳಿಗೆ ಎಲ್ಲ ವಾಹನಗಳು ಮುಗಿಬಿದ್ದವು. ಮುಂದೆ ಅವುಗಳಿಗೆ ಬಳಕೆದಾರರ ಶುಲ್ಕ (ಟೋಲ್) ವಿಧಿಸಲಾಯಿತು. ನಂತರದ ದಿನಗಳಲ್ಲಿ ಆ ರಸ್ತೆಗಳೇ ಇಂದು ವಾಹನಗಳನ್ನು ಅಲ್ಲಲ್ಲಿ ಹಿಡಿದು ನಿಲ್ಲಿಸಲು ಶುರುಮಾಡಿದವು! ಪರಿಣಾಮ ದೇಶಾದ್ಯಂತ ತಲೆಯೆತ್ತಿರುವ ಈ ಟೋಲ್‌ಗಳಿಂದ ಸಮಯ, ಚಾಲಕರ ಶ್ರಮ, ಡೀಸೆಲ್ ವ್ಯರ್ಥವಾಗುತ್ತಿದೆ.
ಒಂದು ವೇಳೆ ತಂತ್ರಜ್ಞಾನದ ಸ್ಪರ್ಶದಿಂದ ಆ ತಡೆಗೋಡೆಗಳನ್ನು ತೆಗೆದುಹಾಕಿದರೆ, ಕೋಟ್ಯಂತರ ರೂ. ಉಳಿತಾಯ ಮಾಡಬಹುದು. ಅದು ಪರೋಕ್ಷವಾಗಿ ಸರ್ಕಾರಕ್ಕೆ ಆದಾಯ ಮೂಲ ಕೂಡ ಆಗಬಹುದು ಎಂಬ ಆಲೋಚನೆ ಹೊಳೆಯಿತು. ಅದರ ಪರಿಣಾಮವೇ ಫಾಸ್ಟ್ ಟ್ಯಾಗ್. ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ದಶಕದ ಈಚೆಗೆ “ಈಸ್ ಆಫ್ ಡೂಯಿಂಗ್’ ಪರಿಚಯಿಸಲಾಯಿತು. ಅದರ ಮುಂದುವರಿದ ಭಾಗವಾಗಿ ಫಾಸ್ಟ್ ಟ್ಯಾಗ್ ರೂಪದಲ್ಲಿ “ಈಸ್ ಆಫ್ ಟ್ರಾನ್ಸ್ ಪೋರ್ಟ್’ ವ್ಯವಸ್ಥೆ ಎಂದು ವಾಹನ ಚಾಲಕರು ಮತ್ತು ಮಾಲೀಕರು ಇದನ್ನು ವಿಶ್ಲೇಷಿಸುತ್ತಿದ್ದಾರೆ.
ಇದಕ್ಕೆ ಸಕಾರಣವೂ ಇದೆ. ಕೇವಲ 20 ದಿನಗಳ ಅಂತರದಲ್ಲೇ ಈ ಫಾಸ್ಟ್‌ಟ್ಯಾಗ್ ಫಲ ಕೊಡುತ್ತಿದೆ. ರಾಜ್ಯದ ನೂರಾರು ಟೋಲ್‌ಗಳ ಮೂಲಕ ನಿತ್ಯ ಸರಾಸರಿ 5.50 ಲಕ್ಷ ವಾಹನಗಳು ಹಾದುಹೋಗುತ್ತವೆ. ಇದರಲ್ಲಿ ಶೇ.40ರಷ್ಟು ನಗರದ ಟೋಲ್‌ಗಳಿಂದ ನಿರ್ಗಮಿಸುತ್ತವೆ. ಇವು ಹಿಂದಿನ ವ್ಯವಸ್ಥೆಯಲ್ಲಿ ಟೋಲ್ ಪಾವತಿಗಾಗಿ ಸರಾಸರಿ 5ರಿಂದ 15 ನಿಮಿಷಗಳ ಕಾಲ ನಿಲ್ಲಬೇಕಾಗಿತ್ತು. ಹೊಸ ವ್ಯವಸ್ಥೆಯಿಂದ “ನಿಲುಗಡೆ ಸಮಯ’ ಶೇ.70ರಿಂದ 80ರಷ್ಟು ಕಡಿಮೆಯಾಗಿದೆ ಎಂದು ಚಾಲಕರು ಮತ್ತು ಟ್ರಾನ್ಸ್‌ಪೊರ್ಟ್ ಮಾಲಿಕರು ಹೇಳುತ್ತಾರೆ. ನಗರದಿಂದ ನಿತ್ಯ ಹತ್ತು ಸಾವಿರ ಲಾರಿಗಳು ಲೋಡ್ ಮತ್ತು ಅನ್‌ಲೋಡ್ ಆಗುತ್ತವೆ.
ನೆಲಮಂಗಲ ಒಂದೇ ಮಾರ್ಗದಲ್ಲಿ ಬರುವ ಟೋಲ್‌ಗಳಲ್ಲಿ 25 ಸಾವಿರ ವಿವಿಧ ಮಾದರಿಯ ಲಾರಿಗಳು ಸಂಚರಿಸುತ್ತವೆ. ಈ ಹಿಂದೆ ಕನಿಷ್ಠ 2ರಿಂದ ಗರಿಷ್ಠ 15 ನಿಮಿಷಗಳ ಕಾಲ ಟೋಲ್ ಬಳಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಆದರೆ, ಫಾಸ್ಟ್ ಟ್ಯಾಗ್ ಅಳವಡಿಕೆ ನಂತರದಿಂದ ಶೇ.70ರಷ್ಟು ಸಮಯ ಉಳಿತಾಯ ಆಗುತ್ತಿದೆ. ಅಷ್ಟೇ ಅಲ್ಲ, ಪ್ರತಿ ಲಾರಿಗೆ ಮಾಲಿಕರು ಪ್ರತ್ಯೇಕವಾಗಿ ಟೋಲ್ ಪಾವತಿಗೆ ನಗದು ನೀಡಿ ಕಳುಹಿಸಬೇಕಿತ್ತು. ಆದಾಗ್ಯೂ ಎಷ್ಟೋ ಸಲ ಚಾಲಕರು ಟೋಲ್‌ಗಳನ್ನು ತಪ್ಪಿಸಿ ಹೋಗುತ್ತಿದ್ದರು. ಇದರಿಂದ ಮಾಲೀಕರಿಗೆ ಮಾತ್ರವಲ್ಲ; ಸರ್ಕಾರಕ್ಕೂ ನಷ್ಟವಾಗುತ್ತಿತ್ತು. ಈಗ ಆ ಸೋರಿಕೆಗೂ ಬ್ರೇಕ್ ಬಿದ್ದಂತಾಗಿದೆ ಎಂದು ಬೆಂಗಳೂರು ನಗರ ಲಾರಿ ಏಜೆಂಟರುಗಳ ಸಂಘದ ಕಾರ್ಯದರ್ಶಿ ಶ್ರೀನಿವಾಸರಾವ್ ಸುಂದರ್ ತಿಳಿಸಿದರು.
ಆದರೆ, ರಸ್ತೆ ಬಳಕೆದಾರರಿಂದ ಪಡೆದ ಶುಲ್ಕಕ್ಕೆ ಪ್ರತಿಯಾಗಿ ಸೌಲಭ್ಯಗಳನ್ನೂ ನೀಡಬೇಕಾಗುತ್ತದೆ. ಅದು ಸರಿಯಾಗಿ ದೊರೆಯು ತ್ತಿಲ್ಲ. ಎಷ್ಟೋ ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಆಸುಪಾಸು ಕಳ್ಳತನ, ಸುಲಿಗೆಗಳು ಆಗಾಗ್ಗೆ ವರದಿಯಾಗುತ್ತವೆ. ಟೋಲ್ ನೀಡದಿ ದ್ದರೆ, ನಾಲ್ಕು ಜನ ಭದ್ರತಾ ಸಿಬ್ಬಂದಿಯನ್ನು ಬಿಟ್ಟು ವಸೂಲು ಮಾಡುವ ಏಜೆನ್ಸಿಗಳು, ಅದೇ ಬದ್ಧತೆಯನ್ನು ಚಾಲಕರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಪ್ರದರ್ಶಿಸುವುದಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಡೀಸೆಲ್ ಉಳಿತಾಯ: “ಸಮಯ ಉಳಿತಾಯವೊಂದೇ ಅಲ್ಲ; ಅದರಿಂದ ಪರೋಕ್ಷವಾಗಿ ಡೀಸೆಲ್ ಕೂಡ ಉಳಿಯುತ್ತಿದ್ದು, ವಾಹನಗಳ ಮೈಲೇಜ್ ಹೆಚ್ಚುತ್ತದೆ. ಒಂದು ವಾಹನದ ಎಂಜಿನ್ ಪ್ರತಿ ಟೋಲ್‌ನಲ್ಲಿ ಹತ್ತು ನಿಮಿಷ ಉರಿದರೆ, ಅದರಿಂದ ಡೀಸೆಲ್ ಮತ್ತು ಅದು ಉಗುಳುವ ಹೊಗೆಯಿಂದ ಪರಿಸರ ಹಾನಿ ಎರಡೂ ಆಗುತ್ತದೆ. ಹೀಗೆ ನಿತ್ಯ ನಗರದ ವ್ಯಾಪ್ತಿಯಲ್ಲೇ ಲಕ್ಷಾಂತರ ವಾಹನಗಳು ನಿಲ್ಲುವುದನ್ನು ಕಾಣಬಹುದು. ಅದೆಲ್ಲವನ್ನೂ ಲೆಕ್ಕಹಾಕಿದರೆ ಅಪಾರ ಪ್ರಮಾಣ ಆಗುತ್ತದೆ. ಗಂಟೆಗೆ 80-100ರ ವೇಗಮಿತಿಯಲ್ಲಿ ಹೋಗುವ ವಾಹನ ಟೋಲ್‌ನಲ್ಲಿ ಏಕಾಏಕಿ ಗಂಟೆಗೆ 15 ಕಿ.ಮೀ.ಗೆ ಇಳಿಕೆಯಾದಾಗ, ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.
ಫಾಸ್ಟ್ ಟ್ಯಾಗ್‌ನಿಂದ ಅದರಿಂದ ಪರಿಹಾರ ದೊರೆಯಲಿದೆ. ಆದರೆ, ಅದು ವ್ಯವಸ್ಥಿತವಾಗಿ ಆಗಬೇಕಾಗಿದೆ. ಪ್ರಸ್ತುತ ಅನುಷ್ಠಾನ ಹಂತದಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಆರ್‌ಎಫ್ಐಡಿ (ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್) ಸರಿಯಾಗಿ ರೀಡ್ ಮಾಡುವುದಿಲ್ಲ. ಕೆಲವು ಸಲ ಎರಡೆರಡು ಬಾರಿ ಹಣ ಕಡಿತಗೊಂಡ ಉದಾಹರಣೆಗಳೂ ಇವೆ. ಆದ್ದರಿಂದ ಗುಣಮಟ್ಟದ ಸೆನ್ಸರ್‌ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘ (ಬಿಸಿಐಸಿ) ಮಾಜಿ ಅಧ್ಯಕ್ಷ ಹಾಗೂ ವಲ್ಲಿಯಪ್ಪ ಗ್ರೂಪ್ ಅಧ್ಯಕ್ಷ ತ್ಯಾಗು ವಲ್ಲಿಯಪ್ಪ ತಿಳಿಸುತ್ತಾರೆ.
“ಹೊಸ ವ್ಯವಸ್ಥೆ ಜಾರಿಯಲ್ಲಿ ಪೂರ್ವಸಿದ್ಧತೆ ಕೊರತೆ ಎದ್ದುಕಾಣುತ್ತಿದೆ. ವಾಹನ ಮಾಲಿಕರು ಮತ್ತು ಚಾಲಕರಿಗೆ ಮೊದಲು ಈ ಬಗ್ಗೆ ಅರಿವು ಮೂಡಿಸಬೇಕು. ನಂತರ ವಾಹನಗಳು ಎಷ್ಟು? ಫಾಸ್ಟ್‌ಟ್ಯಾಗ್‌ಗಳ ಅಗತ್ಯ ಎಷ್ಟಿದೆ? ತಯಾರಿಕೆ ಮತ್ತು ಲಭ್ಯತೆ ಬಗ್ಗೆ ಅಂಕಿ-ಅಂಶಗಳನ್ನು ಕಲೆಹಾಕಿ ಜಾರಿಗೊಳಿಸಬೇಕಿತ್ತು. ಆದರೆ, ಏಕಾಏಕಿ ಜಾರಿಯಿಂದಾಗಿ ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ಗಳ ಅಭಾವ ಉಂಟಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ದಾಸರಹಳ್ಳಿಯ ಬ್ಯಾಂಕ್ ಶಾಖೆಯೊಂದರ ಅಧಿಕಾರಿ ಮಾಹಿತಿ ನೀಡಿದರು.
ಟೋಲ್‌ಗಳಲ್ಲಿ ಕಾಯಿಸುವಂತಿಲ್ಲ: ಟೋಲ್‌ಗಳಲ್ಲಿ 3 ನಿಮಿಷಕ್ಕಿಂತ ಹೆಚ್ಚು ಹೊತ್ತು ಸಾಲಿನಲ್ಲಿ ನಿಲುಗಡೆ ಆಗುವಂತಿದ್ದರೆ, ವಾಹನ ಮಾಲೀಕರು/ಚಾಲಕರು ಶುಲ್ಕ ಪಾವತಿಸದೆ ತೆರಳಬಹುದು ಎಂಬ ನಿಯಮ ಇದೆ. ಆದರೆ, ಅದು ಪಾಲನೆ ಆಗುತ್ತಿಲ್ಲ.
ಪ್ರತಿ ನಿತ್ಯ ಕೋಟ್ಯಂತರ ರೂ. ಸುಲಿಗೆ ಆಗುತ್ತಿದೆ; ಆರೋಪ: ಫಾಸ್ಟ್‌ಟ್ಯಾಗ್‌ನಿಂದ ಒಂದೆಡೆ ಸಮಯ ಉಳಿತಾಯವಾದರೂ, ಮತ್ತೂಂದೆಡೆ ಟೋಲ್ ಸಂಗ್ರಹಿಸುವ ಏಜೆನ್ಸಿಗೆ ನಿತ್ಯ ಕೋಟ್ಯಂತರ ಹಣ ಸುಲಿಗೆಗೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ದಿನದ 24 ಗಂಟೆಗಳಲ್ಲಿ ಯಾವೊಂದು ಟೋಲ್‌ಗೇಟ್‌ನಿಂದ ಒಮ್ಮೆಲೆ ಹೋಗಿ-ಬರುವ ಶುಲ್ಕ ಕಡಿಮೆ ಇತ್ತು. ಆದರೆ, ಈಗ ಪ್ರತ್ಯೇಕವಾಗಿ ಕಡಿತವಾಗುತ್ತಿದೆ. ಉದಾಹರಣೆಗೆ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಕ್ಯಾಬ್‌ಗ ಟೋಲ್ ಶುಲ್ಕ 90 ರೂ. ಹೋಗಿ-ಬರುವ ಶುಲ್ಕ 135 ರೂ. ಇದೆ. ಆದರೆ, ಖಾತೆಯಲ್ಲಿ ಕಡಿತವಾಗುತ್ತಿರುವುದು 180 ರೂ.!
ಒಂದು ಕ್ಯಾಬ್‌ನಿಂದ ಸರಾಸರಿ 50 ರೂ. ಎಂದು ಲೆಕ್ಕಹಾಕಿದರೂ, ನಿತ್ಯ ಏರ್‌ಪೋರ್ಟ್‌ಗೆ ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಅವುಗಳಲ್ಲಿ ಬಹುತೇಕ ಎಲ್ಲವೂ 24 ಗಂಟೆಗಳಲ್ಲಿ ಹೋಗಿ-ಬರುವ ವಾಹನಗಳೇ ಆಗಿರುತ್ತವೆ. ಈ ಮೊತ್ತ ಕೋಟ್ಯಂತರ ರೂ. ಆಗುತ್ತದೆ. ಈ ಸುಲಿಗೆಗೆ ಹೊಣೆ ಯಾರು? ವಿಮಾನ ನಿಲ್ದಾಣ ಮಾರ್ಗದಲ್ಲಿ ಟೋಲ್ ಸಂಗ್ರಹವನ್ನೇ ಕೈಬಿಡಬೇಕು ಎಂಬ ಒತ್ತಾಯ ಇದೆ. ಹೀಗಿರುವಾಗ, ಈಗ ಹೆಚ್ಚುವರಿ ಸುಲಿಗೆ ಮಾಡಲಾಗುತ್ತಿದೆ ಎಂದು ಓಲಾ, ಉಬರ್ ಕ್ಯಾಬ್‌ಗಳ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ಅಶೋಕ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಾರಿಗೆ ನಿಗಮಗಳಿಂದಲೂ ವಸೂಲಿ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದಲೂ ಹೀಗೆ ಅಧಿಕ ಮೊತ್ತದ ವಸೂಲು ಮುಂದುವರಿದಿದೆ. ಉದಾಹರಣೆಗೆ ತುಮಕೂರಿಗೆ ಹೋಗಿಬರುವ ಬಸ್, ಸಹಜವಾಗಿ ಎರಡೂ ಬದಿಯ ಶುಲ್ಕ ಪಾವತಿಸುತ್ತದೆ. ಹಿಂದಿನ ವ್ಯವಸ್ಥೆಯಲ್ಲಿ ಅದು ಕಡಿಮೆ ಇತ್ತು. ಈಗ ಪ್ರತ್ಯೇಕವಾಗಿ ಕಡಿತವಾಗುತ್ತಿದ್ದು, ಸಂಸ್ಥೆಗೆ ನಷ್ಟವಾಗುತ್ತಿದೆ. ಅಲ್ಲದೆ, ಈ ಮೊದಲು ತಿಂಗಳ ಪಾಸು ನೀಡಲಾಗುತ್ತಿತ್ತು. ಇದರಿಂದ ಶುಲ್ಕದ ಮೊತ್ತ ಸಾಮಾನ್ಯ ಬಸ್‌ಗಳ ಕಾರ್ಯಾಚರಣೆಗೆ ಹೋಲಿಸಿದರೆ, ಶೇ. 30ರಷ್ಟು ಕಡಿಮೆ ಆಗುತ್ತಿತ್ತು. ಆದರೆ, ಕೆಲವೆಡೆ ಅದು ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇನ್ನು ಪ್ರಸ್ತುತ ಪ್ರತಿ ಟೋಲ್‌ಗೇಟ್‌ನಲ್ಲಿ ಸರಾಸರಿ 5ರಿಂದ 6 ಜನ ಕಾರ್ಯನಿರ್ವಹಿಸುತ್ತಾರೆ. ಈಗ ಫಾಸ್ಟ್‌ಟ್ಯಾಗ್ ಸ್ವಯಂಚಾಲಿತವಾಗಿ ಸ್ಕ್ಯಾನ್ ಆಗುವುದರಿಂದ ಅಷ್ಟು ಸಿಬ್ಬಂದಿ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ, ಸಂಗ್ರಹವಾದ ಮೊತ್ತವನ್ನು ವಿವಿಧ ಏಜೆನ್ಸಿಗಳ ಮೂಲಕ ಬ್ಯಾಂಕ್‌ಗಳಿಗೆ ಪಾವತಿಸಲಾಗುತ್ತಿತ್ತು. ಇನ್ಮುಂದೆ ನೇರವಾಗಿ ಬ್ಯಾಂಕ್ ಖಾತೆಗೇ ಜಮೆ ಆಗುತ್ತದೆ. ಹೀಗೆ ಉಳಿತಾಯವಾಗುವ ಮೊತ್ತವು ವಾಹನ ಚಾಲಕರು ಮತ್ತು ಮಾಲಿಕರಿಗೆ ಸೇರಬೇಕು. ಈ ನಿಟ್ಟಿನಲ್ಲಿ ಟೋಲ್ ಶುಲ್ಕ ಕಡಿಮೆ ಮಾಡಬೇಕು ಎಂದೂ ಅಶೋಕ್ ಒತ್ತಾಯಿಸುತ್ತಾರೆ.
90 ವರ್ಷಗಳ ಹಿಂದೆಯೇ ಇತ್ತು ಟೋಲ್‌ಗೇಟ್!: ನಗರದಲ್ಲಿ ಸುಮಾರು 90 ವರ್ಷಗಳ ಹಿಂದೆಯೇ ಐದು ಟೋಲ್ ಗೇಟ್‌ಗಳಿದ್ದವು. ಅವುಗಳಿಗೆ ವಾರ್ಷಿಕ 33 ಸಾವಿರ ರೂ. ಟೋಲ್ ಶುಲ್ಕ ಸಂಗ್ರಹಿಸುವ ಗುರಿಯನ್ನೂ ನೀಡಲಾಗಿತ್ತು! ಹೌದು, ಜಿಲ್ಲಾ ಮಂಡಳಿಯು 1920ರ ಆಸುಪಾಸಿನಲ್ಲಿ ಬೈರಪಟ್ಟಣ, ಅತ್ತಿಬೆಲೆ, ದಾಬಸ್‌ಪೇಟೆ, ಹಿಂಡಿಗಣಲ, ಆವತಿ ಎಂಬ ಐದು ಕಡೆಗಳಲ್ಲಿ ಟೋಲ್‌ಗೇಟ್ ನಿರ್ಮಿಸಿತ್ತು. ಅವುಗಳ ಮೂಲಕ ಹಾದುಹೋಗುವ ವಾಹನಗಳಿಂದ ವಾರ್ಷಿಕ ಸರಾಸರಿ 30 ಸಾವಿರ ಟೋಲ್ ಸಂಗ್ರಹಿಸಲಾಗುತ್ತಿತ್ತು. 1928-29ರಲ್ಲಿ ಸಂಗ್ರಹ ಗುರಿ ಇದ್ದದ್ದು 33,280 ರೂ. ಈ ಪೈಕಿ 30,995 ರೂ. ಕಲೆಹಾಕಲಾಗಿತ್ತು.
ಎತ್ತಿನಬಂಡಿಗಳಿಗೆ ಟೋಲ್‌ನಿಂದ ವಿನಾಯ್ತಿ ನೀಡಲಾಗಿತ್ತು ಎಂದು ಗೆಜೆಟಿಯರ್‌ನಲ್ಲಿ ಉಲ್ಲೇಖೀಸಲಾಗಿದೆ. ನಂತರದಲ್ಲಿ ಅಂದರೆ 1929ರ ಜುಲೈನಲ್ಲಿ ಆವತಿ ಟೋಲ್‌ಗೇಟ್ ರದ್ದುಪಡಿಸಲಾಯಿತು. ನಂತರದಲ್ಲಿ ಒಂದೊಂದಾಗಿ ಮುಚ್ಚಲ್ಪಟ್ಟವು. ಸರ್ಕಾರ ಈ ಟೋಲ್‌ಗೇಟ್‌ಗಳಿಗೆ ಅನುಮತಿ ನೀಡದಿರುವುದು ಇದಕ್ಕೆ ಕಾರಣ ಎಂದೂ ಹೇಳಲಾಗಿದೆ. ಅಂದಹಾಗೆ ಆ ಅವಧಿಯಲ್ಲಿ ಉದ್ದೇಶಿತ ಮಾರ್ಗಗಳ ಮೂಲಕ ನಿತ್ಯ 109 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು.
ಏನಿದು ಫಾಸ್ಟ್ ಟ್ಯಾಗ್?: ಇದೊಂದು ಪ್ರಿಪೇಯ್ಡ್ ವ್ಯವಸ್ಥೆ. ಈ ಮೊದಲು ಬಳಕೆದಾರರು ಟೋಲ್‌ಪ್ಲಾಜಾಗಳಲ್ಲೇ ಶುಲ್ಕ ಪಾವತಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ವಾಹನ ಮುಂಭಾಗದ ಗಾಜಿಗೆ ಟ್ಯಾಗ್ ಅಂಟಿಸಲಾಗುತ್ತದೆ. ಅದು ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್ಐಡಿ) ಆಧಾರಿತ ಆಗಿರುತ್ತದೆ. ಇದರಲ್ಲಿನ ಸೆನ್ಸರ್‌ಗಳನ್ನು ರೀಡ್ ಮಾಡುವ ಯಂತ್ರ ಟೋಲ್ ಪ್ಲಾಜಾನಲ್ಲಿರುತ್ತದೆ. ವಾಹನ ಗೇಟ್ ಹತ್ತಿರಕ್ಕೆ ಬರುತ್ತಿದ್ದಂತೆ ರೀಡ್ ಆಗುತ್ತದೆ. ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ,ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣ ಇರಬೇಕಾದುದು ಕಡ್ಡಾಯ. ಸುಮಾರು 22 ಬ್ಯಾಂಕುಗಳು ಈ ಫಾಸ್ಟ್‌ಟ್ಯಾಗ್ ಸೌಲಭ್ಯ ನೀಡುತ್ತಿದ್ದು,ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಟ್ಯಾಗ್ ಅನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.
ಟ್ಯಾಗ್ ಪಡೆಯುವುದು ಹೀಗೆ: ಫಾಸ್ಟ್‌ಟ್ಯಾಗ್‌ನ ಬೆಲೆ 100 ರೂ. ಖರೀದಿಸುವಾಗ ಮೊದಲಿಗೆ 150-200 ರೂ. ಭದ್ರತಾ ಶುಲ್ಕ ಪಾವತಿಸಬೇಕು. ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಕನಿಷ್ಠ 100 ರೂಪಾಯಿ ಇರಬೇಕು. ಈ ಫಾಸ್ rಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿಯಾಗುತ್ತದೆ. ಪ್ರತಿ ಪಾವತಿಗೆ ಶೇ.2.5ರಷ್ಟು ರಿಯಾಯ್ತಿ ಇದೆ. 2020ರ ಮಾರ್ಚ್ 31ರ ವರೆಗೆ ಈ ರಿಯಾಯಿತಿ ಸೌಲಭ್ಯ ಇರಲಿದೆ ಎನ್ನಲಾಗಿದೆ. ಟೋಲ್ ಪ್ಲಾಜಾಗಳಲ್ಲೂ ಈ ಟ್ಯಾಗ್‌ಗಳು ಲಭ್ಯ.
ಎರಡೂವರೆ ದಶಕದ ಹಳೆ ತಂತ್ರಜ್ಞಾನ!: ಮಲೇಷಿಯಾದಲ್ಲಿ 1992ರಲ್ಲೇ ಈ ವ್ಯವಸ್ಥೆ ಇತ್ತು. ಈಗ ಅದನ್ನು ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಗುಣಮಟ್ಟದ ಸೆನ್ಸರ್ ಮತ್ತಿತರ ಸಂಬಂಧಪಟ್ಟ ಉಪಕರಣಗಳನ್ನು ಹೊಂದಿರದಿದ್ದರೆ, ಇದರ ಉದ್ದೇಶ ವಿಫಲವಾಗುವ ಸಾಧ್ಯತೆಯೂ ಇದೆ. ಪೀಕ್ ಅವರ್‌ಗಳಲ್ಲಿ ವಾಹನಗಳ ಸಂಖ್ಯೆ ಮೂರ್ನಾಲ್ಕುಪಟ್ಟು ಆಗುತ್ತದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ತುಂಬಾ ಅತ್ಯವಶ್ಯಕ.
ತಯಾರಿಸುವಾಗಲೇ ಟ್ಯಾಗ್ ಅಳವಡಿಕೆ: ವಾಹನದ ತಯಾರಿಕೆ ವೇಳೆಯೇ ಟ್ಯಾಗ್ ಫಿಕ್ಸ್ ಮಾಡುವ ವ್ಯವಸ್ಥೆ ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿದೆ. ಟೆಕ್ಸಸ್ ಮತ್ತಿತರ ಕಂಪನಿಗಳು ವಾಹನಗಳನ್ನು ತಯಾರಿಸುವಾಗ ಅದರ ಡ್ಯಾಶ್ ಬೋರ್ಡ್ ಮೇಲೆ ಸೆನ್ಸರ್ ಆಧಾರಿತ ಸ್ಕ್ಯಾನರ್ ಅಳವಡಿಸಲಾಗಿರುತ್ತದೆ. ಇದನ್ನು ರೀಡ್ ಮಾಡುವ ಉಪಕರಣ ಟೋಲ್ ಪ್ಲಾಜಾಗಳಲ್ಲಿರುತ್ತದೆ. ಹಾಗಾಗಿ ವಾಹನ ನಿಲ್ಲಬೇಕಾಗಿಯೇ ಇಲ್ಲ ಎನ್ನುತ್ತಾರೆ ತ್ಯಾಗು ವಲ್ಲಿಯಪ್ಪ.
ಮುಂಗಡ ಶುಲ್ಕ ಪಾವತಿ ವ್ಯವಸ್ಥೆ ಬರಲಿ: ಬುಕ್ ಮೈ ಶೋನಲ್ಲಿ ಚಿತ್ರದ ಟಿಕೆಟ್ ಕಾಯ್ದಿರಿಸುವಂತೆ, ನಾವು ಹೋಗುವ ಮಾರ್ಗದ ಎಲ್ಲ ಟೋಲ್‌ಗಳ ಶುಲ್ಕವನ್ನು ಮೊದಲೇ ಪಾವತಿಸುವ ವ್ಯವಸ್ಥೆಯನ್ನೇಕೆ ಪರಿಚಯಿಸಬಾರದು ಎಂದೂ ಕೆಲ ಟ್ರಾನ್ಸ್‌ಪೊರ್ಟರ್‌ಗಳು ಪ್ರಶ್ನಿಸುತ್ತಾರೆ. ಉದಾಹರಣೆಗೆ ಬೆಂಗಳೂರಿನಿಂದ ಗೋವಾ ಮಾರ್ಗದಲ್ಲಿ ಎಷ್ಟು ಟೋಲ್‌ಗೇಟ್‌ಗಳು ಇವೆ ಎಂದು ಲೆಕ್ಕಹಾಕಿ ಆನ್‌ಲೈನ್‌ನಲ್ಲಿ ಮುಂಚಿತವಾಗಿಯೇ ಶುಲ್ಕ ಪಾವತಿಸಿದರಾಯಿತು. ವಾಹನಗಳು ಟೋಲ್ ಪಾವತಿಗಾಗಿ ನಿಲ್ಲುವ ಪ್ರಮೇಯವೇ ಬರುವುದಿಲ್ಲ. ಆದರೆ, ಇದಕ್ಕಾಗಿ ಟೋಲ್ ಗೇಟ್‌ಗಳನ್ನು ಉನ್ನತೀಕರಿಸಬೇಕಾಗುತ್ತದೆ. ವಾಹನಗಳ ನೋಂದಣಿ ಸಂಖ್ಯೆಗಳನ್ನು ಲಿಂಕ್ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.
ಶೇ.44 ವಾಹನಗಳಲ್ಲಿ ಫಾಸ್ಟ್‌ಟ್ಯಾಗ್: ರಾಜ್ಯದಲ್ಲಿ 39 ಟೋಲ್‌ಗಳಿದ್ದು, 449 ಪಥಗಳಿವೆ. ಅದರಲ್ಲಿ 424 ಪಥಗಳನ್ನು ಎಲೆಕ್ಟ್ರಾನಿಕ್ ಟೋಲಿಂಗ್ ಕಲೆಕ್ಷನ್‌ಗಳಾಗಿ ಪರಿವರ್ತಿಸಲಾಗಿದೆ. ನಿತ್ಯ 5.5 ಲಕ್ಷ ವಾಹನಗಳು ಇವುಗಳನ್ನು ಬಳಸುತ್ತಿವೆ. ಈ ಪೈಕಿ ಶೇ.44 ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ. ನಗರ ವ್ಯಾಪ್ತಿಯಲ್ಲಿ ಸಾದಹಳ್ಳಿ, ಅಂತಾರಾಷ್ಟ್ರೀಯವಿಮಾನ ನಿಲ್ದಾಣ ಮಾರ್ಗ, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ, ತುಮಕೂರು ರಸ್ತೆ, ಹೊಸಕೋಟೆ ಸೇರಿ ಒಟ್ಟು ಆರು ಟೋಲ್ ಪ್ಲಾಜಾಗಳಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸುತ್ತಾರೆ.
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.