ರೆಡೀ ಟು ಈಟ್ ರೆಡೀ ಟು ಅರ್ನ್
Team Udayavani, Dec 24, 2019, 5:02 AM IST
ಆಹಾರೋದ್ಯಮ ಈಗ ಉದ್ಯೋಗ ಕೊಡುವ ಕ್ಷೇತ್ರ. ಕೇವಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲದೇ, ಆಹಾರ ಉತ್ಪಾದನೆ ಮಾಡುವ ಕಡೆಯಲ್ಲೆ ಆಹಾರ ವಿಜ್ಞಾನಿ, ತಂತ್ರಜ್ಞಾನಿ ಹೀಗೆ ಅನೇಕ ಪೋಸ್ಟ್‌ಗಳು ಹುಟ್ಟಿಕೊಂಡಿವೆ. ಈ ಕೆಲಸಕ್ಕೆ ಸೇರಬೇಕೆಂದರೆ ಏನು ಓದಬೇಕು, ಹೇಗೆ ಸೇರಬೇಕು ಅನ್ನೋದರ ಮಾಹಿತಿ ಇಲ್ಲಿದೆ.
ಅಂದು ಪ್ರವಾಸದಿಂದ ಹಿಂದಿರುಗಿ ಬೆಂಗಳೂರು ತಲುಪಿದಾಗ ರಾತ್ರಿ ಹನ್ನೆರಡಾಗಿತ್ತು. ದಾರಿಯಲ್ಲಿ ಏನನ್ನೂ ತಿನ್ನದೆ ಇದ್ದುದರಿಂದ ಚುರುಗುಡುತ್ತಿದ್ದ ಹೊಟ್ಟೆಗೆ ಏನಾದರೂ ಬೀಳಲೇಬೇಕಿತ್ತು. ಆಗ ನೆನಪಾದದ್ದೇ ನೂಡಲ್ಸ್. ನೀರು ಮತ್ತು ಗ್ಯಾಸ್ ಇದ್ದರೆ ಕೆಲವೇ ನಿಮಿಷಗಳಲ್ಲಿ ತಯಾರು ಮಾಡಬಹುದಾದ ಅತ್ಯಂತ ಸುಪರಿಚಿತ ಆಹಾರವಾಗಿರುವ ನೂಡಲ್ಸ್ ಸಂಸ್ಕರಿತ ಆಹಾರ. ಈ ರೀತಿ ಅಪರರಾತ್ರಿಗಳಲ್ಲಿ, ಪ್ರಯಾಣ ಬೆಳೆಸಿದಾಗ ಸರಿಯಾದ ಸಮಯಕ್ಕೆ ತಿನ್ನಲು ಏನೂ ಸಿಗದೇ ಇದ್ದಾಗ ಈ ಸಿದ್ಧ ಆಹಾರಗಳು ಕೆಲಸಕ್ಕೆ ಬರುತ್ತವೆ. Ready to Eat ಬ್ರಾಂಡಿನ ಆಹಾರ ತಯಾರಿಕೆಯೇ ಈಗ ದೊಡ್ಡ ಉದ್ಯಮ.
ರೆಡಿ ಟು ಈಟ್ ಎನ್ನುವ ಎಲ್ಲ ಆಹಾರ-ತಿನಿಸುಗಳನ್ನು ಸಂಸ್ಕರಿತ ಆಹಾರದ ಗುಂಪಿಗೆ ಸೇರಿಸಬಹುದು. ಈಗಂತೂ ಪಾಸ್ತಾ, ಬ್ರೆಡ್, ಕೇಕ್, ಪೇಸ್ಪರಿ, ಬಿಸ್ಕತ್ತು, ಪಿಜ್ಜಾ, ಪರೋಟ, ಕಾರ್ನ್ಫ್ಲೇಕ್, ಪಾಪ್‌ಕಾರ್ನ್, ಬಿಯರ್, ಮೃದು ಪಾನೀಯಗಳದ್ದೇ ಭರಾಟೆ. ಇವುಗಳನ್ನು ಬೇಕೆನಿಸಿದಾಗ ಫಟಾಫಟ್ ಬಾಕ್ಸ್ ಅಥವಾ ಬಾಟಲ್ ಓಪನ್ ಮಾಡಿ ಬಳಸಬಹುದಾಗಿದೆ. ಇವುಗಳ ಜೊತೆ ಈಗ ರೆಡಿ ಟು ಈಟ್ ಉಪ್ಪಿಟ್ಟು, ದೋಸೆ, ಇಡ್ಲಿ, ಅವಲಕ್ಕಿ, ಹೋಳಿಗೆಗಳೆಲ್ಲಾ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಈ ರೀತಿ ತ್ವರಿತವಾಗಿ ಸಿಗುವ, ತಯಾರಾಗುವ ಆಹಾರವನ್ನು ಮೊದಲೇ ಪ್ಯಾಕ್ ಮಾಡಲಾಗಿರುತ್ತದೆ. ಅದು ಕೆಡದಂತೆ ಅನೇಕ ಕೃತಕ ರುಚಿಕಾರಕ ಹಾಗೂ ಸುಗಂಧಕಾರಕಗಳನ್ನು ಬಳಸಿ ಸಂಸ್ಕರಿಸಿಡಲಾಗಿರುತ್ತದೆ. ಯುದ್ಧ, ನೆರೆ, ಆಂತರಿಕ ಗಲಭೆಯ ಸಂದರ್ಭಗಳಲ್ಲಿ ಸಂಸ್ಕರಿಸಿದ ಆಹಾರವನ್ನು ಪ್ಯಾಕ್ ಮಾಡಿ ವಿತರಿಸಲಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲಾ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದವರು ತಯಾರಿಸುವ ಬಹಳ ದಿನಗಳವರೆಗೆ ಕೆಡದಿರುವ ಚಪಾತಿ, ಚಟ್ನಿ, ರೊಟ್ಟಿ, ಬ್ರೆಡ್, ಜ್ಯೂಸ್‌ಗಳು ಜನಪ್ರಿಯವಾಗಿವೆ. ಹೀಗೆ, ಆಹಾರವನ್ನು ಗ್ರಾಹಕರಿಗೆ ತಲುಪಿಸುವ ಅನೇಕ ಆಹಾರ ಸಂಸ್ಕರಣಾ ಘಟಕಗಳು ವಿಶ್ವದಾದ್ಯಂತ ಇವೆ.
ಆಹಾರ ಸಂಸ್ಕರಣೆ ಅಥವಾ ಫುಡ್ ಪೋ›ಸೆಸಿಂಗ್ ಎಂಬ ಉದ್ಯಮ ವೇಗವಾಗಿ ಬೆಳೆಯುತ್ತಿದ್ದು, ಅನೇಕರಿಗೆ ಉದ್ಯೋಗ ನೀಡಿ ಅವರ ಹೊಟ್ಟೆಯನ್ನು ತುಂಬುತ್ತಿದೆ. ಈ ಉದ್ಯಮದಲ್ಲಿರುವವರೂ ಅನ್ನದಾತರಿದ್ದಂತೆಯೇ. ರೈತನಿಂದ ಪಡೆದ ಬೆಳೆಯನ್ನು ಆಹಾರ ರೂಪಕ್ಕೆ ಪರಿವರ್ತಿಸಿ ಹಸಿದ ಹೊಟ್ಟೆಗಳಿಗೆ ಹಾಕುವ ಕೆಲಸ ಸಂಸ್ಕರಣಾ ಘಟಕಗಳಲ್ಲಿ ನಡೆಯುತ್ತದೆ. ಆದರೆ, ಜನರ ಆರೋಗ್ಯದ ಮೇಲೆ ಯಾವುದೇ ಶಾಶ್ವತ ದುಷ್ಪರಿಣಾಮವಾಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯ. ಅದಕ್ಕೆಂದೇ ಜಾಗತಿಕ ಮಟ್ಟದಲ್ಲಿ ಆಹಾರ ಗುಣಮಟ್ಟವನ್ನು ಪ್ರಮಾಣೀಕರಿಸಲು ಫುಡ್ ಅಂಡ್ ಅಗ್ರಿಕಲ್ಚರ್ ಸಂಸ್ಥೆ ಇದೆ. ಅದರಂತೆ ನಮ್ಮಲ್ಲೂ ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ ಆ್ಯಕ್ಟ್ ಆಫ್ ಇಂಡಿಯ ಜಾರಿಯಲ್ಲಿದೆ.
ಯಾವ ಯಾವ ಕೋರ್ಸ್?
ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಓದಿದವರು ಪ್ರೇವಶ ಪರೀಕ್ಷೆ ಬರೆದು, ಫುಡ್ ಪೊ›ಸೆಸಿಂಗ್ ಕೋರ್ಸ್ ಸೇರಬಹುದು. ಸರ್ಟಿಫಿಕೇಟ್ ಕೋರ್ಸಿನ ಜೊತೆಗೆ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳೂ ಉಂಟು. ಪದವಿ ಅಧ್ಯಯನ ಮುಗಿದ ನಂತರ ಮಾಸ್ಟರ್ ಮಾಡಿ ಸಂಶೋಧನೆಗೂ ಇಳಿಯಬಹುದು.
ಭಾರತದಲ್ಲಿ ಈ ಕ್ಷೇತ್ರ ಈಗ ತಾನೆ ವಿಸ್ತರಣೆಗೊಳ್ಳುತ್ತಿರುವುದರಿಂದ ಉದ್ಯೋಗವಕಾಶಗಳು ವಿಫುಲವಾಗಿವೆ. ಆಹಾರ ತಜ್ಞ, ಸಂಸ್ಕರಣಾ ತಜ್ಞ, ಮೇಲ್ವಿಚಾರಕ, ತಂತ್ರಜ್ಞ, ಮಾರ್ಕೆಟಿಂಗ್ ಮ್ಯಾನೇಜರ್, ಸಂಶೋಧಕ ಹೀಗೆ… ಈ ಕ್ಷೇತ್ರದಲ್ಲಿ ಅನೇಕ ಬಗೆಯ ನೌಕರಿಗಳಿವೆ. ಇಲ್ಲಿ ಕೆಲಸ ಮಾಡಲು ಪದವಿಯ ಜೊತೆ ಆಸಕ್ತಿಯೂ ಇರಬೇಕು. ಸದ್ಯಕ್ಕೆ ಹೋಮ್ ಸೈನ್ಸ್ ಮತ್ತು ಫುಡ್ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ ಪಡೆಯುವವರ ಸಂಖ್ಯೆ ಜಾಸ್ತಿ ಇದೆ. ಆಹಾರ ಸಂಸ್ಕರಣೆ ವಿಷಯಗಳಲ್ಲಿ ಪದವಿ ಕೋರ್ಸ್ ಅಧ್ಯಯನ ಮಾಡುವವರಿಗೆ ಜೆಎನ್‌ಟಾಟಾ ದತ್ತಿನಿಧಿ, ಐ.ಸಿ.ಎ.ಆರ್, ಅಗ್ರಿ ಬಯೋಟೆಕ್ ಫೌಂಡೇಶನ್, ರಾಮಲಿಂಗಸ್ವಾಮಿ ದತ್ತಿ ನಿಧಿಗಳು ಸ್ಕಾಲರ್‌ಶಿಪ್ ನೀಡುತ್ತವೆ. ಎಸ್.ಕೆ.ಪಾಟೀಲ್ ಫೌಂಡೇಶನ್ ಮತ್ತು ದೇಶದ ಅನೇಕ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು, ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದ ಶಿಕ್ಷಣ ಸಾಲ ನೀಡುತ್ತವೆ.
ಎಲ್ಲೆಲ್ಲಿ ಕೋರ್ಸ್ ಲಭ್ಯ?
ಬೆಂಗಳೂರು ಹಾಗೂ ಕರ್ನೂಲಿನ ನ್ಯಾಷನಲ್ ಡೈರಿ ರೀಸರ್ಚ್ ಸಂಸ್ಥೆ, ಬರೋಡ ಎಂ.ಎಸ್.ವಿ.ವಿ, ಗುಜರಾತ್ ಮತ್ತು ಮೈಸೂರಿನ ಸಿಎಫ್ಟಿಆರ್‌ಐ, ಹಿಮಾಚಲದ ಕೃಷಿ ವಿವಿ, ಲಕ್ನೋದ ಫ್ರುಟ್ ಟೆಕ್ನಾಲಜಿ ಸಂಸ್ಥೆ, ಕಾನ್ಪುರ, ಚೆನ್ನೈ ಮತ್ತು ಲಕ್ನೋಗಳ ನಾಷನಲ್ ಶುಗರ್ ಟೆಕ್ನಾಲಜಿ ಸಂಸ್ಥೆಗಳಲ್ಲಿ ಹಲವು ಹಂತದ ಡಿಪ್ಲೊಮಾ, ಪದವಿ, ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಲಾಗುತ್ತಿದೆ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್‌ನಲ್ಲಿ ಮೀನಿನ ಆಹಾರ ಸಂಸ್ಕರಿಸುವುದನ್ನು ಕಲಿಸುವ ಹಲವು ಕೋರ್ಸ್‌ಗಳಿವೆ.
ಎಲ್ಲೆಲ್ಲಿ ಕೆಲಸ?
ಹಲವು ವಿದೇಶಿ ಕಂಪೆನಿಗಳೊಂದಿಗೆ ಕೈ ಜೋಡಿಸಿ ನಡೆಸುತ್ತಿರುವ ಭಾರತದ ಅನೇಕ ಆಹಾರ ಸಂಸ್ಕರಣೆ ಉದ್ಯಮಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕನುಗುಣವಾಗಿ ಉದ್ಯೋಗ ನೀಡುತ್ತಿವೆ. ಅವುಗಳಲ್ಲಿ ಪ್ರಮುಖವಾದವು ಅಮುಲ್, ಗೋದ್ರೆಜ್ ಇಂಡಸ್ಟ್ರೀಸ್ ಲಿಮಿಟೆಡ್, ಡಾಬರ್ ಇಂಡಿಯ ಲಿಮಿಟೆಡ್, ಬ್ರಿಟಾನಿಯಾ, ಐ.ಟಿ.ಸಿ, ಪಾರ್ಲೆ, ಕ್ಯಾಡ್‌ಬರಿ, ಎಂ.ಟಿ.ಆರ್ ಫುಡ್ಸ್, ಮಿಲ್ಕ್ ಫುಡ್, ನೆಸ್ಲೆ ಇಂಡಿಯಾ, ಪೆಪ್ಸಿಕೊ ಇಂಡಿಯಾ ಹೋಲ್ಡಿಂಗ್ಸ್ ಹೀಗೆ, ನಾನಾ ಕಂಪೆನಿಗಳಲ್ಲಿ ಕನಿಷ್ಠ 8 ಸಾವಿರ ರೂ ಗಳಿಂದ 25 ಸಾವಿರ ರೂ ವರೆಗಿನ ಸಂಬಳ ದೊರಕುವ ಉದ್ಯೋಗಗಳಿವೆ.
ಯಾವ ಯಾವ ಕೆಲಸ?
ಆಹಾರ ವಿಜ್ಞಾನಿ, ಆಹಾರ ತಂತ್ರಜ್ಞ, ಫುಡ್ ಎಂಜಿನಿಯರ್, ಬಯೋಕೆಮಿಸ್ಟ್, ಆಗ್ಯಾìನಿಕ್ ಕೆಮಿಸ್ಟ್, ಅನಾಲಿಟಿಕಲ್ ಕೆಮಿಸ್ಟ್, ಹೋಮ್ ಎಕನಾಮಿಸ್ಟ್, ಮ್ಯಾನೇಜರ್ ಮತ್ತು ಅಕೌಂಟೆಂಟ್ ಹುದ್ದೆಗಳು ಆರ್ಹ ಪದವೀಧರರಿಗೆ ಸಿಗುತ್ತಿವೆ. ಕೇಂದ್ರ ಸರ್ಕಾರ ಪ್ರಸಕ್ತ ಪಂಚವಾರ್ಷಿಕ ಯೋಜನೆಯಲ್ಲಿ ಪ್ರತಿ ಲೋಕಸಭೆಯ ಕ್ಷೇತ್ರಕ್ಕೊಂದರಂತೆ ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆ ರೂಪಿಸಿದೆ. ಹಲವು ಸಂಸ್ಕರಿತ ಆಹಾರ ತಯಾರಿಸುವ ಕಂಪೆನಿ-ಉದ್ಯಮಗಳಿಗೆ ಭಾರತದ 50 ಕೋಟಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರೇ ಮುಖ್ಯ ಟಾರ್ಗೆಟ್.
ದಶಲಕ್ಷ ಡಾಲರ್ ವ್ಯವಹಾರ ಕುದುರಿಸಲಿರುವ ಆಹಾರ ಸಂಸ್ಕರಣೆಯ ಉದ್ಯಮಕ್ಕೆ ನುರಿತ, ಸುಶಿಕ್ಷಿತ ಮತ್ತು ಸ್ವತ್ಛತೆಗೆ ಆದ್ಯತೆ ನೀಡುವವರ ಅವಶ್ಯಕತೆ ತುಂಬಾ ಇದೆ. ಆಹಾರ ಸಂಸ್ಕರಣೆಯ ಉದ್ಯಮಕ್ಕೆ ನೆರವಾಗಲು ಪ್ಯಾಕಿಂಗ್, ಲೇಬಲ್ ಪ್ರಿಂಟಿಂಗ್ ಮತ್ತು ಸಾಗಣೆ ಉದ್ಯಮಗಳಿಗೂ ಅನೇಕ ಅವಕಾಶಗಳಿವೆ. ಪ್ರಸ್ತುತ ಭಾರತದ ಮೆಟ್ರೋ ನಗರಗಳಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತಿರುವ ಆಹಾರ ಸಂಸ್ಕರಣಾ ಉದ್ಯಮ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕುಗಳಿಗೆ ಶೀಘ್ರ ಬರಲಿವೆ. ಮಾಂಸಾಹಾರ ಸೇವಿಸುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿರುವುದರಿಂದ ಮೀನು, ಮಾಂಸ ಸಂಸ್ಕರಣೆಗೂ ವಿಪುಲ ಅವಕಾಶಗಳು ಸೃಷ್ಟಿಯಾಗಿವೆ.
ಗುರುರಾಜ್ ಎಸ್.ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.