ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಳಾಂತರಿಸಬೇಡಿ
Team Udayavani, Dec 24, 2019, 3:35 PM IST
ಮಹಾಲಿಂಗಪುರ: ಮೊರಾರ್ಜಿ ದೇಸಾಯಿ ವಸತಿಶಾಲೆಯನ್ನು ಸ್ಥಳೀಯವಾಗಿ ಉಳಿಸಿ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಗ್ರಂಥಾಲಯಕ್ಕೆ ಸ್ವಂತ ನಿವೇಶನ ನೀಡಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸುವಂತೆ ಆಗ್ರಹಿಸಿ ಎಪಿಎಂಸಿ ವಾಯುವಿಹಾರ ಮಿತ್ರ ಮಂಡಳಿ ಸದಸ್ಯರು ಸೋಮವಾರ ಪುರಸಭೆ ಮ್ಯಾನೇಜರ್ ರಾಘು ನಡುವಿನಮನಿ ಅವರಿಗೆ ಮನವಿ ಸಲ್ಲಿಸಿದರು.
ವಾಯುವಿಹಾರಿ ಮಿತ್ರ ಮಂಡಳದ ಅಧ್ಯಕ್ಷ ಶಂಕರ ಕೋಳಿಗುಡ್ಡ ಮಾತನಾಡಿ, ಮಹಾಲಿಂಗಪುರ ವಾಣಿಜ್ಯಕೇಂದ್ರವಾಗಿದ್ದು, 50 ಸಾವಿರ ಜನಸಂಖ್ಯೆ ಹೊಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು 2017ರಲ್ಲಿ ಆರಂಭಿಸಲಾಗಿದೆ.
ಈ ವಸತಿ ಶಾಲೆಯನ್ನು ಸ್ಥಳಾಂತರಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿದ್ದಾರೆ. ವಸತಿ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿದರು. ವರ್ತಕ ಬಾಲಕೃಷ್ಣ ಮಾಳವಾದೆ ಮಾತನಾಡಿ, ನಗರದಲ್ಲಿಗ್ರಂಥಾಲಯ ಅತಂತ್ರ ಮತ್ತು ಅವ್ಯವಸ್ಥೆಯಲ್ಲಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಸೋರುತ್ತಿದೆ. ಅಲ್ಲಿನ ಗ್ರಂಥ ಭಂಡಾರ ಹಾಳಾಗುತ್ತಿದೆ. ಸಾರ್ವಜನಿಕರಿಗೆ ಓದುಗರಿಗೆ ಅವಕಾಶ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಗಮನಹರಿಸಿ ಗ್ರಂಥಾಲಯಕ್ಕೆ ಸ್ವಂತ ನಿವೇಶನ ನೀಡಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸ್ಥಳಾಂತರ ಮಾಡಬಾರದು. ಅದಕ್ಕೆ ಸ್ವಂತ ಜಾಗೆ, ವ್ಯವಸ್ಥಿತ ಕಟ್ಟಡ, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಲ್ಲಪ್ಪ ಯರಡ್ಡಿ, ಸಂಜು ಅಂಗಡಿ, ಈರಪ್ಪ ಚಮಕೇರಿ, ಈರಪ್ಪ ಕೋಳಿಗುಡ್ಡ, ಅಜಯ ಹಂದ್ರಾಳ, ಸುರೇಶ ಮಡಿವಾಳ, ವೀರೇಶ ನ್ಯಾಮಗೌಡ, ಅಪ್ಪು ಕುಳ್ಳೊಳ್ಳಿ, ನಾಗಪ್ಪ ಹುಣಶ್ಯಾಳ, ಚನ್ನಪ್ಪ ಹುನ್ನೂರ, ವಿಜಯ ಸಬಕಾಳೆ, ಶಿವಾನಂದ ಅಂಗಡಿ, ರಾಜು ತಾಳಿಕೋಟಿ, ರವಿ ಜವಳಗಿ, ಶಂಭು ಬಡಿಗೇರ, ಗುರು ತೇಲಿ, ಪುಂಡಲೀಕ ಗಡೇಕರ, ಮುಸ್ತಾಕ ಚಿಕ್ಕೋಡಿ, ಲಕ್ಷ್ಮಣ ಮಾಂಗ, ಹನಮಂತ ಸಂಕರಡ್ಡಿ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.