ಕೈಗೂಡಿಲ್ಲ ಎಚ್‌ಡಿಕೆ ಪೈಲಟ್ ಪ್ರಾಜೆಕ್ಟ್
ಗುಳೆ ತಡೆಯಲು ಘೋಷಿಸಿದ್ದ ಯೋಜನೆ10 ತಿಂಗಳಾದರೂ ಪ್ರಸ್ತಾವನೆಗೆ ಪ್ರತಿಕ್ರಿಯಿಸಿಲ್ಲ ಸರ್ಕಾರ
Team Udayavani, Dec 25, 2019, 1:33 PM IST
ಜಿ.ಎಸ್. ಕಮತರ
ವಿಜಯಪುರ: ಮಳೆ ಕೊರತೆ ಕಾರಣ ನಿರಂತರ ಬರ ಆವರಿಸುವ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯ ಉದ್ಧಾರಕ್ಕೆ ಮಾದರಿ ಯೋಜನೆ ರೂಪಿಸಲು ವರ್ಷದ ಹಿಂದೆ ರಾಜ್ಯದ ಮುಖ್ಯಮಂತ್ರಿ ಕೊಟ್ಟಿದ್ದ ಭರವಸೆ ಪ್ರಚಾರಕ್ಕೆ ಸೀಮಿತವಾಗಿ, ವರ್ಷಾಚರಣೆಗೆ ಸನ್ನದ್ಧವಾಗಿದೆ. ಸಿಎಂ ಘೋಷಿತ ಗುಳೆ ತಡೆಯುವ ಸಿಎಂ ಪೈಲಟ್ ಪ್ರಾಜೆಕ್ಟ್ ಅನುಷ್ಠಾನಕ್ಕೆ 10 ತಿಂಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ 36.70 ಕೋಟಿ ರೂ. ವೆಚ್ಚದ ಬೇಡಿಕೆ ಈಡೇರಿಲ್ಲ. ಗುಳೆ ಜಿಲ್ಲೆಯ ಹಣೆ ಪಟ್ಟಿ ಕಳಚುವ ಪ್ರಯತ್ನ ಮಾತಿಗೆ ಮಿತಿಗೊಂಡಿತೆ. ಅಲ್ಲಿಗೆ ರಾಜ್ಯದ ದೊರೆ ಕೊಟ್ಟ ಮಾತು ಕೈಗೂಡಿಲ್ಲ, ಜಿಲ್ಲೆಯ ಹಣೆ ಬರಹ ಮಾತ್ರ ಬದಲಾಗಲೇ ಇಲ್ಲ.
2018 ಏಪ್ರಿಲ್ ತಿಂಗಳಲ್ಲಿ ದುಡಿಮೆ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋರಟಿದ್ದ ಮದಭಾವಿ ಸುತ್ತಲಿನ ತಾಂಡಾಗಳ 17 ಜನರು ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದರು. ತಮ್ಮ ಕ್ಷೇತ್ರ ವ್ಯಾಪ್ತಿಯ ತಮ್ಮದೇ ಸಮುದಾಯದ ಮದಭಾವಿ ಸುತ್ತಲಿನ ತಾಂಡಾಗಳ
17 ಜನರನ್ನು ಬಲಿ ಪಡೆದ ಘಟನೆಯ ದುರಂತದ ಸಂಕಷ್ಟಕ್ಕೆ ಸ್ಪಂದಿಸಲು ಸ್ವಯಂ ಮುಖ್ಯಮಂತ್ರಿಗಳನ್ನೇ ಸ್ಥಳಕ್ಕೆ ಕರೆ ತರುತ್ತೇನೆ. ಅಲ್ಲದೇ ಭವಿಷ್ಯದಲ್ಲಿ ಬಂಜಾರಾ ಸಮುದಾಯದಲ್ಲಿ ಗುಳೆ ಹೋಗುವ ಸಂಸ್ಕೃತಿಗೆ ತೆರೆ ಎಳೆಯುವುದಾಗಿ ಶಾಸಕ ದೇವಾನಂದ ಚವ್ಹಾಣ ಘೋಷಿಸಿದ್ದರು.
ಶಾಸಕ ದೇವಾನಂದ ಹೇಳಿದಂತೆ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2018 ಡಿಸೆಂಬರ್ 25ರಂದು ಮದಭಾವಿ ತಾಂಡಾ-1ಕ್ಕೆ ಭೇಟಿ ನೀಡಿದ್ದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದ ಬಳಿಕ ಕುಮಾರಣ್ಣ ಮದಭಾವಿ ತಾಂಡಾದಲ್ಲಿ ಪೈಲಟ್ ಪ್ರಾಜೆಕ್ಟ್ ಯೋಜನೆ ಘೋಷಿಸಿದ್ದರು.
ರಾಜ್ಯದಲ್ಲೇ ಅತಿ ಹೆಚ್ಚು ಜನರು ಗುಳೆ ಹೋಗುವ ವಿಜಯಪುರ ಜಿಲ್ಲೆಯಿಂದಲೇ ಉದ್ಯೋಗ ಅರಸಿ ನಗರಕ್ಕೆ ವಲಸೆ ಬರುವುದನ್ನು ತಡೆಯಲು ನನ್ನ ಸರ್ಕಾರ ವಿಶೇಷ ಕಾಳಜಿ ವಹಿಸಲು ಮುಂದಾಗಿದೆ. ವಿಜಯಪುರ ಜಿಲ್ಲೆಯಿಂದಲೇ ಈ ಚಿಂತನೆಗೆ ಚಾಲನೆ ನೀಡಲಿದ್ದು, ಮದಭಾವಿ ತಾಂಡಾದಲ್ಲಿ ಪೈಲಟ್ ಪ್ರಾಜೆಕ್ಟ್ ರೂಪಿಸಿ, ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
ಗುಳೆ ಹೋಗುವ ದುಸ್ಥಿತಿಗೆ ಕಡಿವಾಣ ಹಾಕಲು ಗ್ರಾಮೀಣ ಜನರು ಸ್ವಗ್ರಾಮದಲ್ಲೇ ಗುಡಿ ಕೈಗಾರಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ರಾಜ್ಯದಲ್ಲೇ ಗುಳೆ ದುಸ್ಥಿತಿಗೆ ಶಾಶ್ವತ ಪರಿಹಾರ ನೀಡಲು ಮದಭಾವಿ ತಾಂಡಾ ಮಾದರಿಯಾಗಲಿದೆ. ಯೋಜನೆ ಅನುಷ್ಠಾನದ ಯಶಸ್ಸು ಕಂಡಲ್ಲಿ ನನ್ನ ಪ್ರಾಣ ಇರುವವರೆಗೆ ನಿಮ್ಮಿ ಋಣ ಮರೆಯುವುದಿಲ್ಲ ಎಂದು ಸಾರಿದ್ದರು.
ಮದಭಾವಿ ತಾಂಡಾ ಸುತ್ತಲಿನ 11 ತಾಂಡಾಗಳ ಮಹಿಳೆಯರು, ಯುವಕರಿಗೆ ಸ್ಥಳೀಯವಾಗಿಯೇ ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ತರಬೇತಿ ನೀಡಿ, ಉದ್ಯೋಗಿಗಳ ಸಂಘಗಳನ್ನು ಸ್ಥಾಪಿಸಿ ಸರ್ಕಾರವೇ ಬಡ್ಡಿ ರಹಿತ ಹಾಗೂ ರಿಯಾಯ್ತಿ ಸಾಲ ಸೌಲಭ್ಯ ಕಲ್ಪಿಸುತ್ತದೆ. ಇಂಥ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಕಲ್ಪಿಸುವ ಹೊಣೆಯನ್ನು ಸರ್ಕಾರವೇ ಹೊರಲಿದೆ.
ಇದರಿಂದ ರೈತರು ಮಾತ್ರವಲ್ಲ ಭೂ ರಹಿತರು ಕೂಡ ನೆಮ್ಮದಿ ಬದುಕು ಸಾಗಿಸಲು ನೆರವಾಗಲಿದೆ ಎಂದು ಘೋಷಿಸಿದ್ದರು. ಇದು ರಾಜ್ಯ ಮಟ್ಟದಲ್ಲಿ ದೊಡ್ಡದಾಗಿ ಪ್ರಚಾರ ಪಡೆದಿತ್ತು.ಇದಾದ ಬಳಿಕ ಮೂರೇ ದಿನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ನೇತೃತ್ವದಲ್ಲಿ ಪೈಲಟ್ ಯೋಜನೆ ರೂಪಿಸಲು ನಿರ್ಧರಿಸಿತ್ತು. ಈ ನೋಡಲ್ ಅಧಿಕಾರಿ ಜೊತೆಗೆ ವಿಜಯಪುರ ತಾಪಂ ಇಒ, ಬಂಜಾರಾ ಅಭಿವೃದ್ಧಿ ನಿಗಮದ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡವನ್ನು ರಚಿಸಿತ್ತು.
ಅಧಿಕಾರಿಗಳ ಈ ತಂಡದಲ್ಲಿ ತಲಾ 10 ಸಿಬ್ಬಂದಿಯ 3 ತಂಡಗಳನ್ನು ಮಾಡಿ ತಾಂಡಾಗಳ ಮನೆ ಮನೆ ಸಮೀಕ್ಷೆ ಆರಂಭಿಸಿತ್ತು. ಮದಭಾವಿಯ 2 ತಾಂಡಾ, ಹಡಗಲಿಯ 3 ತಾಂಡಾ, ಆಹೇರಿಯ 2 ತಾಂಡಾ, ಅಂಕಲಗಿಯ 2 ತಾಂಡಾ, ನಾಗಠಾಣ ಹಾಗೂ ಕವಲಗಿಯ ತಲಾ 1 ತಾಂಡಾ ಸೇರಿದಂತೆ 11 ತಾಂಡಾಗಳಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿತ್ತು. ಈ ವರ್ಷ ಜನೇವರಿ 9ರಿಂದ ಫೆಬ್ರವರಿ 22ರವರೆಗೆ ನಿರಂತರ 47 ದಿನ ಸಮೀಕ್ಷೆ ನಡೆಸಿದ ತಂಡ ಅಮೂಲಾಗ್ರ ವರದಿ ಸಿದ್ಧಪಡಿಸಿತ್ತು.
ಸಮೀಕ್ಷೆಯಲ್ಲಿ 11 ತಾಂಡಾಗಳ 1,835 ಕುಟುಂಬಗಳನ್ನು ಸಂಪರ್ಕಿಸಿ ಪ್ರತಿ ಕುಟುಂಬದ ಸದಸ್ಯರ, ವಯಸ್ಸು, ಶಿಕ್ಷಣ, ಪಡಿತರ ಚೀಟಿ, ಕೃಷಿ ಭೂಮಿ, ಜಾನುವಾರುಗಳು, ಆಸಕ್ತಿದಾಯಕ ಉದ್ಯೋಗಕ್ಕೆ ಇರುವ ಬೇಡಿಕೆ, ಬ್ಯಾಂಕ್ ಸಾಲದ ಅಗತ್ಯ, ಸರ್ಕಾರದ ಹಾಲಿ ಯೋಜನೆಗಳ ಸೌಲಭ್ಯಗಳ ಅಗತ್ಯ ಅಂತೆಲ್ಲ ಪ್ರಶ್ನೆ ಮಾದರಿಯ 13 ಅಂಶಗಳ ಮೇಲೆ ಪ್ರತಿ ಕುಟುಂಬದ ಸಮಗ್ರ ವಿಷಯ ಕ್ರೋಢೀಕರಿಸಿತ್ತು. ಸಮೀಕ್ಷೆ ಮುಗಿಸಿದ ಒಂದು ವಾರದಲ್ಲಿ ಸಮಗ್ರ ಯೋಜನಾ ವರದಿ ರೂಪಿಸಿದ ಸಿಎಂ ಪೈಲಟ್ ಪ್ರಾಜೆಕ್ಟ್ ನೋಡಲ್ ಅಧಿಕಾರಿ ಜಿಪಂ ಸಿಇಒ ಮೂಲಕ ಫೆಬ್ರರಿ 28ರಂದು ಸರ್ಕಾರಕ್ಕೆ 36.70 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಈ ವರದಿ ಸಲ್ಲಿಸಿ 10 ತಿಂಗಳಾಗುತ್ತ ಬಂದರೂ ಸರ್ಕಾರದಿಂದ ಪ್ರತಿಕ್ರಿಯೆ
ಬಂದಿಲ್ಲ. ವರದಿ ಸಲ್ಲಿಕೆ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಕ್ರಾಂತಿ ಪರಿಣಾಮ ಕುಮಾರಣ್ಣ ಅಧಿಕಾರ ಕಳೆದುಕೊಂಡು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.ರಾಜ್ಯಕ್ಕೆ ಮಾದರಿ ತಾಂಡಾ ರೂಪಿಸುವ ಭರವಸೆ ನೀಡಿದ್ದ ಸ್ಥಳೀಯ ಶಾಸಕ ದೇವಾನಂದ ಚವ್ಹಾಣ, ಕುಮಾರಸ್ವಾಮಿ ಸರ್ಕಾರ ನನ್ನ ಕ್ಷೇತ್ರಕ್ಕೆ ಘೋಷಿಸಿದ್ದ ಯೋಜನೆಗೆ ಈ ಸರ್ಕಾರದಲ್ಲಿ ಅನುದಾನ ಕಡಿತ ಮಾಡಿದೆ.
ಹೀಗಂತ ಹೇಳುವ ಮೂಲಕ ಹನುಮಂತ ಹಗ್ಗ ಕಡಿಯುವಾಗ… ಶ್ಯಾವಿಗೆ ಕೇಳಿದ ಕಥೆಯಂತಾಗಿದೆ ಎಂದು ಶಾಸಕ ಚವ್ಹಾಣ ತಮ್ಮ ಮುಂದಿನ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅಲ್ಲಿಗೆ ಮಾದರಿ ಯೋಜನೆ ಕನಸು ನಕಾರಾತ್ಮಕ ಮಾದರಿಯಾಗಿ ಮೂಲೆ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.