ಗುಡ್ಡ ಅಗೆದು ಬಾಳೆ ನೆಟ್ಟ ಶ್ರೀನಿವಾಸ ನಾಯ್ಕ, ಸುಧಾಕರ ನಾಯ್ಕ
ಶಿಲೆಗಳೇ ತುಂಬಿದ ಬರಡು ಭೂಮಿಯಲ್ಲಿ ಕೃಷಿ ಸಾಧನೆ
Team Udayavani, Dec 26, 2019, 5:49 AM IST
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಕುಂದಾಪುರ: ಸೋಮನಾಥ ಶಿಲೆಗಳೇ ತುಂಬಿದ, ಕೃಷಿಗೆ ಅಂತಹ ಹೇಳಿಮಾಡಿಸಿದ್ದಲ್ಲದ ಬರಡು ಭೂಮಿ. ಪಶ್ಚಿಮಘಟ್ಟದ ಶೋಲಾ ಅರಣ್ಯದಂತೆ ಮೂರೂ ಬದಿ ಇಳಿಜಾರಿನ ಪ್ರದೇಶ. ಸಮೃದ್ಧ ನೀರು. ಸರಕಾರದಿಂದ ದರ್ಖಾಸಾಗಿ ಸಾಗುವಳಿ ಚೀಟಿ ಪಡೆದ 10 ಎಕರೆ ಭೂಮಿ. ಇವಿಷ್ಟು ಇರುವಾಗ ಕೂಲಿನಾಲಿ ಮಾಡಿ ಸಂಬಳಕ್ಕೆ ಕೈಯೊಡ್ಡುವ ಹಂಗೇಕೆ ಎಂದು ಭಾವಿಸಿದವರೇ ಅಲ್ಲಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಶಂಕರನಾರಾಯಣದ ಶ್ರೀನಿವಾಸ ನಾಯ್ಕ ಅವರು ಸ್ವಂತ ಭೂಮಿಯೆಡೆಗೆ ಕಣ್ಣು ಹಾಯಿಸಿದರು. ತಾತ ಪುಟ್ಟಯ್ಯ ನಾಯ್ಕ, ತಂದೆ ಮಂಜನಾಯ್ಕರು ಮಾಡಿಟ್ಟ ಸ್ವಲ್ಪ ಕೃಷಿಯಿತ್ತು.
ಶಂಕರನಾರಾಯಣ ಹಾಲಾಡಿ ಮಾರ್ಗದಲ್ಲಿ ಗುಟರ್‌ಮಕ್ಕಿ ಬ್ರಹ್ಮ ದೇಗುಲದ ಬಳಿ ಗುಡ್ಡ ಹತ್ತಿದ ದಾರಿಯಲ್ಲಿ ಸಾಗಿದಾಗ ಕೆರೆಕಾಡು ಮನೆ ಅಲ್ಲಿ ಐದು ವರ್ಷಗಳ ಹಿಂದೆ ಬಾಳೆ ಹಾಕಬೇಕೆಂಬ ಹಟ ತೊಟ್ಟ ಶ್ರೀನಿವಾಸ ನಾಯ್ಕ (38) ಸಹೋದರ ಸುಧಾಕರ ನಾಯ್ಕ (32) ಅವರ ಜತೆ ಸೇರಿ ಸ್ವಲ್ಪ ಎಂದು ಗುಡ್ಡ ಅಗೆದು ಕಣಿ ತೆಗೆದು ಹೊಂಡ ತೋಡಿ ಬಾಳೆಬುಡ ನೆಟ್ಟಿದ್ದಾರೆ. ಒಮ್ಮೆಲೆ ಫಸಲು ಬಾರದ ರೀತಿಯಲ್ಲಿ ವರ್ಷಕ್ಕೆ ಮೂರು ಬಾರಿ ಕಟಾವು ಮಾಡುವಂತೆ ವಿಂಗಡಿಸಿ ಗಿಡ ನೆಟ್ಟಿದ್ದಾರೆ.
ಅದನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಾ ಈಗ9 ಸಾವಿರ ನೇಂದ್ರ ಬಾಳೆ ಬುಡ ನೆಟ್ಟ ದೃಶ್ಯ ಎಲ್ಲೆಲ್ಲೆ ಹಸಿರಾಗಿ ಕಣ್ತುಂಬುತ್ತದೆ. 9 ತಿಂಗಳಲ್ಲಿ ಫಲ ಕೈಗೆ ಬರುತ್ತದೆ.
ಕೇರಳಕ್ಕೆ
ನೇಂದ್ರ ಬಾಳೆ ಹೆಚ್ಚಾಗಿ ಚಿಪ್ಸ್ ತಯಾರಿಸಲು ಬಳಕೆಯಾಗುತ್ತದೆ. ಅದರಲ್ಲೂ ಕೇರಳ ಪ್ರಮುಖ ಮಾರುಕಟ್ಟೆಯಾಗಿದೆ. ಹಾಗಾಗಿ ಸ್ವಂತ ಪಿಕಪ್‌ನಲ್ಲಿ ರಾತೋರಾತ್ರಿ ಕೇರಳಕ್ಕೆ ಹೋಗಿ ಮಾರಿ ಬರುತ್ತಾರೆ. ಅಕ್ಟೋಬರ್ ಓಣಂ ಸಂದರ್ಭ ಹೆಚ್ಚು ಬೇಡಿಕೆ ಇರುತ್ತದೆ ಎಂದು ಆಗ ಹೆಚ್ಚು ಕಟಾವಾಗಿ ಬರುವಂತೆ, ಅನಂತರದ ಅವಧಿಯಲ್ಲಿ ಕಡಿಮೆ ಕಟಾವಿಗೆ ಬರುವಂತೆ ನೆಟ್ಟಿದ್ದಾರೆ. ಮಂಗಳೂರಿಗೂ ಮಾರುತ್ತಾರೆ.
ಲೆಕ್ಕಾಚಾರ
ಒಂದು ಬಾಳೆಗೊನೆ 15ರಿಂದ 20 ಕೆಜಿ ತೂಗುತ್ತದೆ. ಓಣಂ ಸಂದರ್ಭ ಕೆಜಿಗೆ 80 ರೂ.ವರೆಗೆ ಬೇಡಿಕೆಯಿದ್ದರೆ ಇತರ ದಿನಗಳಲ್ಲಿ 30ರಿಂದ 60 ರೂ.ವರೆಗೂ ಬೇಡಿಕೆಯಿರುತ್ತದೆ. ಪ್ರತಿವರ್ಷ ಹೊಸಗುಂಡಿಯಲ್ಲಿ ಹೊಸಬುಡ. ಈ ವರ್ಷ ನೆಟ್ಟಲ್ಲಿ ಮರುವರ್ಷ ಬಾಳೆಬುಡ ನೆಡುವುದಿಲ್ಲ. ರಾಸಾಯನಿಕ ಬಳಸುತ್ತಾರೆ.
ಬಾಳೆಗೆ ಹಾನಿಯಾಗದಂತೆ ಉಪಾಯ
ಶಿಲೆ, ಖನಿಜ, ಒರಟು ಮಣ್ಣಿನಿಂದ ಆವೃತವಾದ ಭೂಮಿ ಯನ್ನು ಯಂತ್ರಗಳಿಂದ ಹದಗೊಳಿಸಿ ಕಣಿವೆ ಮಾಡಿ ಇಡೀ ತೋಟಕ್ಕೆ ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಈ ಪೈಪ್‌ಗ್ಳನ್ನು ಮುಂದಿನ ಬಾರಿ ಬದಲಿಸುವಂತೆಯೇ ಭೂಮಿಯಾಳದಲ್ಲಿ ಹಾಕದೇ ಮೇಲೆಯೇ ಅಳವಡಿಸಿದ್ದಾರೆ. ಬಾಳೆಗೊನೆ ಸುಮಾರು 10 ಅಡಿಯಷ್ಟು ಬರುತ್ತದೆ. ಆಗ ಬಾಳೆ ಭೂಮಿಗೆ ಬಾಗಿ ಬೀಳದಂತೆ ಒಂದು ಬಾಳೆಯ ಬುಡಕ್ಕೆ ಇನ್ನೊಂದು ಬಾಳೆಯನ್ನು ಹಗ್ಗದಿಂದ ಎಳೆದು ಕಟ್ಟುತ್ತಾರೆ. ಒಂದು ಬಾಳೆಗೆ ಮೂರು ಹಗ್ಗಗಳಂತೆ ಬಾಳೆಗೊನೆಯ ವಿರುದ್ಧ ದಿಕ್ಕಿನಲ್ಲಿ ಕಟ್ಟಿ ಗಾಳಿಗೆ ಹಾನಿಯಾಗದಂತಹ ಉಪಾಯ ಮಾಡಿ ಯಶಸ್ವಿಯಾಗಿದ್ದಾರೆ.
ಮಿಶ್ರಕೃಷಿ
2 ಸಾವಿರ ಅಡಿಕೆಮರಗಳು, 50 ತೆಂಗು, ಕಾಳುಮೆಣಸಿನ ಬಳ್ಳಿ ಇದೆ. 8 ಸಾವಿರದಷ್ಟು ಅಡಿಕೆ ಸಸಿಗಳನ್ನು ಬೆಳೆಸಿ ಕೊಡುವ ನರ್ಸರಿಯನ್ನೂ ನಡೆಸುತ್ತಾರೆ.
ಸಹಜ ನೀರು
ಶೋಲಾ ಅರಣ್ಯದ ಮಾದರಿಯಲ್ಲಿ ಇಲ್ಲಿ ಸಮೃದ್ಧ ನೀರು ಇದೆ. ಮೂರು ಕಡೆ ಗುಡ್ಡದ ಇಳಿಜಾರಿನ ಮೂಲಕ ನೀರು ದೊರೆಯುತ್ತದೆ. ಕೆರೆಕಾಡು ಎಂಬ ಹೆಸರಿಗೆ ಅನ್ವರ್ಥವಾಗಿ ಈ ಜಾಗದಲ್ಲಿ 5 ಕೆರೆಗಳಿವೆ, ಸಹಜ ಗುಡ್ಡದ ನೀರು ಇದೆ. ಸಮೀಪದಲ್ಲಿಯೇ ವಾರಾಹಿಯೂ ಇದೆ. ಅಡಿಕೆ ಪಣ್ತದಲ್ಲಿ ಅಡಿಕೆಯನ್ನೂ ಮಳೆಗಾಲದಲ್ಲಿ ಸಂಗ್ರಹಿಸುವ ಇವರು ಮಾದರಿ ಕೃಷಿಕರು ಎನ್ನುತ್ತಾರೆ ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಾಹಕ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ.
ಆಸಕ್ತಿ ಬೇಕು
ಬೇರೆ ಬೇರೆ ಬೆಳೆಗಳ ಮೂಲಕ ಆದಾಯ ತೆಗೆಯುವ ಕಾರಣ ಸಾಲ ಕಟ್ಟಲು ತೊಂದರೆಯಾಗದು, ನಷ್ಟ ಎಂಬ ಪದ ಬಳಿ ಸುಳಿಯದು. ಬಾಳೆಗೊನೆ ಎಂದ ಮೇಲೆ ಮಂಗಗಳ ಉಪಟಳ ಇಲ್ಲದಿದ್ದೀತೇ? ಅದಕ್ಕಾಗಿ ಹಗ್ಗದಲ್ಲಿ ಕಲ್ಲು ಕಟ್ಟಿ ಎಸೆಯುವ ಕವಣೆ ಕಲ್ಲಿನ ಪ್ರಯೋಗವೇ ಹೆಚ್ಚು ಪ್ರಯೋಜನಕಾರಿ. ಜತೆಗೆ ನಾಯಿಗಳಂತೂ ಇದ್ದೇ ಇವೆ.
ಕೃಷಿಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಬೇಕು. ಸ್ವಂತ ದುಡಿಮೆ ಮಾಡಬೇಕು. ಆಗ ಕೃಷಿ ಅನ್ನ ಕೊಡುತ್ತದೆ. ಬಾಳೆ ಬೆಳೆಯಿಂದ ಲಾಭ ಮಾಡಿಕೊಳ್ಳುವುದು ಹೇಗೆ ಎಂದು ನಾವಿನ್ನೂ ತೋರಿಸಿಕೊಡುತ್ತಿದ್ದೇವೆ. ಈಗಿನ ಮಾದರಿಯಲ್ಲಿ ಕೃಷಿ ವಿಸ್ತರಿಸಿದರೆ ತೊಡಕು ಉಂಟಾಗದು.
-ಶ್ರೀನಿವಾಸ ನಾಯ್ಕ ,
ಬಾಳೆ ಕೃಷಿಕ
ಹೆಸರು: ಸುಧಾಕರ ನಾಯ್ಕ
ಏನೇನು ಕೃಷಿ:ಬಾಳೆ, ಅಡಿಕೆ, ತೆಂಗು
ಎಷ್ಟು ವರ್ಷ ಕೃಷಿ:15
ಪ್ರದೇಶ : 10ಎಕರೆ
ಸಂಪರ್ಕ ಸಂಖ್ಯೆ:9449936665
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.