ಗಡಿ ವಿವಾದ: ಉದ್ಧವ ಠಾಕ್ರೆ “ಉದ್ಧ’ಟತನಕ್ಕೆ ನಮ್ಮವರೇಕೆ ಮೌನ?


Team Udayavani, Dec 26, 2019, 3:08 AM IST

gadi-vivada

ಹುಬ್ಬಳ್ಳಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಗಡಿ ವಿವಾದ ಕೆದಕಿದ್ದಲ್ಲದೆ, ಕನ್ನಡಿಗರು ಅತಿಕ್ರಮಣಕಾರರು ಎಂದು ಅವಮಾನಿಸಿದ್ದರೂ ರಾಜ್ಯ ಸರ್ಕಾರ, ಸಾಹಿತ್ಯ ವಲಯ, ಕನ್ನಡ ಚಿತ್ರರಂಗ ಮೌನಕ್ಕೆ ಶರಣಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದ ವಿಚಾರ ಎಂಬುದಕ್ಕೆ ಈ ಉದಾಸೀನತೆಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.

ನಾಡಿನ ನೆಲ, ಜಲ, ಭಾಷೆ, ಸ್ವಾಭಿಮಾನ ವಿಚಾರಕ್ಕೆ ಸರ್ಕಾರ ಹಾಗೂ ಸಾಹಿತ್ಯ ವಲಯ ಮೊದಲು ಎದ್ದು ನಿಲ್ಲಬೇಕಾಗುತ್ತದೆ. ಆದರೆ, ಮಹಾರಾಷ್ಟ್ರ ಸಿಎಂ ಅವರು ಕನ್ನಡಿಗರ ಸ್ವಾಭಿಮಾನವನ್ನೇ ಪ್ರಶ್ನಿಸುವಂತೆ ಹೇಳಿಕೆ ನೀಡಿದ್ದಲ್ಲದೆ, ಗಡಿ ತಂಟೆ ಹೋರಾಟಕ್ಕೆ ತಮ್ಮ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಿದ್ದರೂ ರಾಜ್ಯ ಸರ್ಕಾರದಿಂದ ಇದುವರೆಗೂ ಸ್ಪಷ್ಟ ರೀತಿಯ ಹೇಳಿಕೆ ಬಂದಿಲ್ಲ. ಸಾಹಿತ್ಯ ವಲಯದಿಂದ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿಲ್ಲ.

ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ನಾಗ್ಪುರದಲ್ಲಿ ನಡೆದ ಮಹಾರಾಷ್ಟ್ರ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲೇ ಹೇಳಿಕೆ ನೀಡುವ ಮೂಲಕ ಕರ್ನಾಟಕವನ್ನು ಅವಮಾನಿಸಿದ್ದಾರೆ.

ಗಡಿ ವಿವಾದ ಜೀವಂತಕ್ಕೆ ಯತ್ನ?: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮೂಲಕ ಗಡಿ ತಂಟೆ ಬಗ್ಗೆ ಇಲ್ಲಸಲ್ಲದ ಗದ್ದಲ, ಅಪಪ್ರಚಾರವನ್ನು ಮಹಾರಾಷ್ಟ್ರ ಕೈಗೊಳ್ಳುತ್ತ ಬಂದಿದೆ. ಅದರಲ್ಲೂ ಶಿವಸೇನೆಯವರಂತೂ ಗಡಿ ವಿಚಾರದಲ್ಲಿ ಸದಾ ಕತ್ತಿ ಮಸೆಯುತ್ತಲೇ ಇದ್ದಾರೆ. ಇದೀಗ ಅವರೇ ಅಧಿಕಾರಕ್ಕೆ ಬಂದಿದ್ದು, ಗಡಿ ವಿವಾದಕ್ಕೆ ಜೀವ ತುಂಬುವ ಯತ್ನಕ್ಕೆ ಮುಂದಾಗಿದ್ದಾರೆ.

ಹಲವು ದಶಕಗಳಿಂದ ಮಹಾರಾಷ್ಟ್ರ ಗಡಿ ವಿವಾದ ಸೃಷ್ಟಿಸಿದೆ. ಬೆಳಗಾವಿ ನಗರ ಸೇರಿದಂತೆ ನಿಪ್ಪಾಣಿ, ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಾರವಾರ, ಬೀದರನ ಭಾಲ್ಕಿ, ಔರಾದ್‌ ಮತ್ತು ಬಸವಕಲ್ಯಾಣ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕಾಗಿವೆ ಎಂಬ ಮೊಂಡುವಾದಕ್ಕೆ ಅಂಟಿಕೊಂಡಿದೆ.

1980-1990ರವರೆಗೆ ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಎಂಇಎಸ್‌ ಮೂಲಕ ಹಲವು ನಿರ್ಣಯಗಳನ್ನು ಕೈಗೊಳ್ಳುವಂತೆ ಮಾಡಿದೆ. 2005ರಲ್ಲಿ ವಿಪಕ್ಷಗಳು, ಕನ್ನಡಪರ ಸಂಘಟನೆಗಳ ತೀವ್ರ ವಿರೋಧ, ರಾಜ್ಯ ಸರ್ಕಾರದ ಅಧಿಕಾರಿಗಳ ಆಕ್ಷೇಪಗಳನ್ನು ಧಿಕ್ಕರಿಸಿ, ಎಂಇಎಸ್‌ ಸ್ಥಳೀಯ ಆಡಳಿತದ ಅಧಿಕಾರ ಬಳಸಿ, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಕೈಗೊಂಡಿತ್ತು.

ನಿಲ್ಲದ ಮೊಂಡುತನ: 1881ರಲ್ಲಿ ಬ್ರಿಟಿಷ್‌ ಸರ್ಕಾರದ ಗೆಜೆಟ್‌ನಲ್ಲಿ ಬೆಳಗಾವಿಯಲ್ಲಿ ಶೇ.64.39ರಷ್ಟು ಕನ್ನಡ ಭಾಷಿಕರು, ಶೇ.26.04ರಷ್ಟು ಮರಾಠಿ ಭಾಷಿಕರು ಇದ್ದಾರೆಂದು ನಮೂದಿಸಲಾಗಿದೆ. 1956ರಲ್ಲಿ ಫ‌ಜಲ್‌ ಅಲಿ ನೇತೃತ್ವದ ರಾಜ್ಯ ಪುನರ್‌ ವಿಂಗಡಣೆ ಆಯೋಗ, 1967ರಲ್ಲಿ ಗಡಿ ವಿವಾದ ಇತ್ಯರ್ಥಕ್ಕೆಂದೇ ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ರಚನೆ ಮಾಡಿದ್ದ ನ್ಯಾ| ಮೆಹರ್‌ ಚಂದ್‌ ಮಹಾಜನ ಆಯೋಗ ನೀಡಿದ ವರದಿಯಲ್ಲೂ ಬೆಳಗಾವಿ ಕರ್ನಾಟಕದ್ದೆಂದು ಸ್ಪಷ್ಟಪಡಿಸಿವೆ.

ಮಹಾಜನ ಆಯೋಗ ನೀಡುವ ತೀರ್ಪು ಒಪ್ಪುತ್ತೇವೆಂದು ಹೇಳಿದ್ದ ಮಹಾರಾಷ್ಟ್ರ ನಂತರ ಉಲ್ಟಾ ಹೊಡೆದು, ತನ್ನ ಮೊಂಡುತನ ಮುಂದುವರಿಸಿದೆ. ಅದರ ಮುಂದುವರಿದ ಭಾಗವಾಗಿ ಮಹಾರಾಷ್ಟ್ರದ ಸಿಎಂ, ಬೆಳಗಾವಿ ನಮ್ಮದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಲ್ಲದೆ, ಗಡಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಿದ್ದನ್ನು ನೋಡಿದರೆ, ಶಿವಸೇನೆ ಗಡಿ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಕೆದಕುವ, ಆ ಮೂಲಕ ಎಂಇಎಸ್‌ಗೆ ಜೀವ ತುಂಬುವ ಕೆಲಸಕ್ಕೆ ಮುಂದಾಗಿದೆ ಎಂದೆನಿಸುತ್ತಿದೆ.

ಬಾಯಿ ಬಿಡದ ಸಿಎಂ: ಕನ್ನಡಿಗರು ಅತಿಕ್ರಮಣಕಾರರು ಎಂಬಂತೆ ಮಹಾರಾಷ್ಟ್ರ ಸಿಎಂ ಹೇಳಿಕೆ ನೀಡಿದಾಗ ಸಿಎಂ ಯಡಿಯೂರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಾಗಿತ್ತು. ಆದರೂ, ಅದು ಆಗಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಎಚ್‌.ಕೆ.ಪಾಟೀಲ ಗಡಿ ಉಸ್ತುವಾರಿ ಸಚಿವರಾಗಿದ್ದರು. ನಂತರದಲ್ಲಿ ಸಮ್ಮಿಶ್ರ ಸರ್ಕಾರ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದಲ್ಲೂ ಗಡಿ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ.

ಸಾತ್ವಿಕ ಸಿಟ್ಟು ಮರೆತ ಸಾಹಿತ್ಯ ವಲಯ: ಮಹಾರಾಷ್ಟ್ರ ಸಿಎಂ ಉದ್ಧಟತನದ ಹೇಳಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಒಂದು ಹೇಳಿಕೆ ನೀಡಿದ್ದು ಬಿಟ್ಟರೆ ಸಾಹಿತ್ಯ ವಲಯದಿಂದ ದೊಡ್ಡ ಮಟ್ಟದ ವಿರೋಧ ಬಂದಿಲ್ಲ. ನೆಲ-ಜಲ, ಭಾಷೆಯಂತಹ ವಿಚಾರದಲ್ಲಿ ಮೊದಲಿಗೆ ಸಾಹಿತ್ಯ ವಲಯ ಎದ್ದು ನಿಲ್ಲಬೇಕಾಗುತ್ತದೆ. ಸಾತ್ವಿಕ ಸಿಟ್ಟನ್ನು ಹೊರ ಹಾಕಬೇಕಾಗುತ್ತದೆ. ನಾಡಿನ ನೆಲ-ಜಲದ ವಿಚಾರದಲ್ಲಿ ಚಿತ್ರರಂಗವೂ ಸಿಡಿದೇಳಬೇಕಾಗುತ್ತದೆ. ರಾಜ್ಯದ ಪರ ಧ್ವನಿ ಮೊಳಗಿಸಬೇಕಾಗಿದೆ. ಆದರೆ, ಇದಾವುದೂ ಕಂಡು ಬರುತ್ತಿಲ್ಲ.

ಮಹಾರಾಷ್ಟ್ರ ಸಿಎಂ ಗಡಿ ತಂಟೆ ತೆಗೆದಿದ್ದಷ್ಟೇ ಅಲ್ಲದೆ, ಕನ್ನಡಿಗರನ್ನು ಅವಮಾನಿಸುವ ರೀತಿ ಹೇಳಿಕೆ ನೀಡಿದ್ದರೂ ರಾಜ್ಯ ಸರ್ಕಾರ ಪ್ರತಿರೋಧ ತೋರದೆ ಉದಾಸೀನತೆ ತೋರುತ್ತಿದೆ. ನೆಲ-ಜಲದ ವಿಚಾರಕ್ಕೆ ತಕ್ಷಣಕ್ಕೆ ಸ್ಪಂದಿಸುವ ಜವಾಬ್ದಾರಿಯನ್ನು ಸರ್ಕಾರ ಮರೆತಿದೆ. ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ರಾಜ್ಯದ ಸಚಿವರ ಧ್ವನಿ ಯಾಕಿಲ್ಲ?
-ಎಚ್‌.ಕೆ.ಪಾಟೀಲ, ಮಾಜಿ ಸಚಿವ

ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಬೆಂಗಳೂರಿನಲ್ಲಿ ಏಕಿರಬೇಕು? ಬೆಳಗಾವಿಗೆ ಅವುಗಳನ್ನು ವರ್ಗಾಯಿಸಿಲಿ. ಗಡಿ ಸಂರಕ್ಷಣಾ ಆಯೋಗಕ್ಕೆ ಜಲ ವಿವಾದವನ್ನು ಸೇರಿಸಲಾಗಿದ್ದು, ಅದನ್ನು ಹಿಂತೆಗೆಯುವ ಕೆಲಸ ಆಗಬೇಕು. ಗಡಿ ವಿಚಾರದಲ್ಲಿ ಶಿವಸೇನೆಯ ಬಾಯಿ ಮುಚ್ಚಿಸಲು ಸಾಹಿತ್ಯ ವಲಯ, ಸರ್ಕಾರ, ಸಾರ್ವಜನಿಕರಿಂದ ಸಂಘಟಿತ ಗಟ್ಟಿಧ್ವನಿ ಮೊಳಗಲಿ.
-ಅಶೋಕ ಚಂದರಗಿ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.