ನೀವೂ ಗ್ರಹಣ ವೀಕ್ಷಿಸಬಹುದು
Team Udayavani, Dec 26, 2019, 3:09 AM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೂ ಸೂರ್ಯ ಗ್ರಹಣ ವೀಕ್ಷಣೆಗೆ ಸಿದ್ಧತೆ ನಡೆದಿದ್ದು, ಜವಾಹರಲಾಲ್ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ತಾರಾಲಯದಲ್ಲಿ ಬೆಳಗ್ಗೆ 8 ರಿಂದ 11.15ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಐದು ದೂರದರ್ಶಕಗಳು, ಒಂದು ಸಿಲೊಸ್ಟ್ಯಾಟ್ ಸಾಧನ, ಎಚ್ ಆಲಾ ಟೆಲಿಸ್ಕೋಪ್ ಸೇರಿದಂತೆ ಇತ್ಯಾದಿ ಸಲಕರಣೆಗಳನ್ನು ಅಳವಡಿಸಲಾಗಿದೆ.
ಸೂರ್ಯನ ಬಿಂಬವನ್ನು ಪರದೆಯ ಮೇಲೆ ಮೂಡಿಸಲಾಗುತ್ತದೆ. ಗ್ರಹಣದ ನಾನಾ ಹಂತಗಳನ್ನು ಇಲ್ಲಿ ಕಾಣಬಹುದು. ಸೂರ್ಯನನ್ನು ನೇರವಾಗಿ ವೀಕ್ಷಿಸಲು 14 ವೆಲ್ಡರ್ ಗ್ಲಾಸ್‌ಗಳು ಇರಲಿವೆ. ಇವುಗಳ ಜತೆಗೆ ಸೂರ್ಯನ ಕುರಿತಾದ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿ ತಾರಾಲಯ ಡಾಟ್ ಓ ಆರ್‌ಜಿ (taralaya.org) ವೆಬ್‌ಸೈಟ್ ಲಿಂಕ್ ಮೂಲಕ ಕ್ಯೂಆರ್ ಕೋಡ್ ಬಳಸಿ ಯೂಟ್ಯೂಬ್‌ನಲ್ಲಿಯೂ ಸೂರ್ಯಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.
ಸೂರ್ಯಗ್ರಹಣದ ವೇಳೆ ಅರ್ಥಪೂರ್ಣ ಮಾಹಿತಿಗೆ ವಿದ್ಯಾರ್ಥಿ ತಂಡವೂ ತಾರಾಲಯದಲ್ಲಿದ್ದು, ಸಾರ್ವಜನಕರಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಜತೆಗೆ ಕಾರವಾರ, ಧಾರವಾಡ, ಮಂಗಳೂರಿನ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಜತೆ ಸಮನ್ವಯತೆ ಮೂಲಕ ಗ್ರಹಣ ಅಳತೆ, ತಾಪಮಾನ ಸೇರಿದಂತೆ ವಿವಿಧ ಅಂಶಗಳ ಅಧ್ಯಯನ ನಡೆಯಲಿದೆ.
ದೇವಾಲಯಗಳು ಬಂದ್: ಸೂರ್ಯ ಗ್ರಹಣ ಹಿನ್ನೆಲೆ ಗುರುವಾರ ಬೆಳಿಗ್ಗೆ 7 ಗಂಟೆಯಿಂದ 1 ಗಂಟೆವರೆಗೂ ನಗರದ ಬಹುತೇಕ ದೇವಾಲಯಗಳು ಬಂದ್ ಆಗಿರಲಿವೆ. ಗ್ರಹಣ ವೇಳೆ ದೇವಸ್ಥಾನಗಳಲ್ಲಿ ದೇವರನ್ನು ತೊಳೆಯುವ, ಪುಣ್ಯಾ ಹಾದಿಗಳಿಂದ ಶುದ್ಧಿಗೊಳಿಸುವ, ಸಂಪ್ರೋಕ್ಷಣೆ ಮತ್ತಿತರ ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿ ಶಾಸ್ತ್ರೋಕ್ತ ರೀತಿಯಲ್ಲಿ ನಡೆಯುವ ಕಾರ್ಯಗಳಿಗೆ ವಿಘ್ನ ಬರಬಾರದು ಎನ್ನುವ ಕಾರಣಕ್ಕೆ ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ, ಬೆಳಗಿನ ಜಾವ ಧನುರ್ಮಾಸದ ಪೂಜೆ ಮುಗಿಸಿ ದೇವಾಸ್ಥಾನಗಳು ಅರ್ಧದಿನದ ಮಟ್ಟಿಗೆ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿವೆ.
ಗ್ರಹಣ ಬಿಟ್ಟ ಕೂಡಲೇ ದೇವಾಲಯ ಮೂರ್ತಿ ಹಾಗೂ ಗೋಪುರ ಶುದ್ದೀಕರಣ ಮಾಡಿ ಆ ಬಳಿಕ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದರು. ಇನ್ನು ನಗರದ ಪ್ರಮುಖ ದೇವಸ್ಥಾನಗಳಾದ ಗವಿಗಂಗಾಧರೇಶ್ವರ, ಇಸ್ಕಾನ್ ದೇವಾಲಯ, ಕೋಟೆ ಆಂಜನೇಯ ಸ್ವಾಮಿ ದೇವಾಲಯ ಕಾಡುಮಲ್ಲೇಶ್ವರ, ದೊಡ್ಡ ಗಣಪತಿ ದೇವಸ್ಥಾನಗಳು ಬೆಳಗ್ಗೆ 7.30 ರಿಂದ ಸಂಜೆ 4 ಗಂಟೆವರೆಗೂ ಬಂದ್ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ಬರಿಗಣ್ಣಿನಿಂದ ನೋಡಿದರೆ ಹಾನಿ: ಗ್ರಹಣ ಸಂದರ್ಭದಲ್ಲಿ ಬರಿಗಣ್ಣಿನಲ್ಲಿ ಸೂರ್ಯನನ್ನು ವೀಕ್ಷಿಸುವುದರಿಂದ ಕಣ್ಣುಗಳಿಗೆ ಹಾನಿಯುಂಟಾಗುತ್ತದೆ ಎಂದು ನೇತ್ರ ತಜ್ಞರು ತಿಳಿಸಿದ್ದಾರೆ. ಸೂರ್ಯಗ್ರಹಣದ ಸಮಯದಲ್ಲಿ ಅಥವಾ ಸಾಮಾನ್ಯ ಬಿಸಿಲಿನಲ್ಲೂ ಸೂರ್ಯನನ್ನು ದಿಟ್ಟಿಸುವುದು ಶಾಶ್ವತವಾಗಿ ಅಕ್ಷಿಪಟಲವನ್ನು ಸುಟ್ಟು ಹಾಕುತ್ತದೆ, ಇದರಿಂದ ಶಾಶ್ವತ ಅಂಧತ್ವ ಉಂಟಾಗುತ್ತದೆ.
ಸೋಲಾರ್ ರೆಟಿನೋಪತಿ ಎನ್ನುವ ಈ ಸಮಸ್ಯೆ ಅಕ್ಷಿಪಟಲದ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ ಅದಕ್ಕೆ ಸೌರ ವಿಕಿರಣ ಮೆದುಳಿಗೆ ಚಿತ್ರಗಳನ್ನು ಕಳುಹಿಸುವ ವಿಧಾನಕ್ಕೆ ಹಾನಿಯುಂಟಾಗ ಬಹುದು. ಸೋಲಾರ್ ರೆಟಿನೋಪತಿಯಿಂದ ಬಾಧಿತ ರಾದವರು ದೃಷ್ಟಿ ಮಂದವಾಗುವುದು, ದೃಷ್ಟಿಯಲ್ಲಿ ತಡೆ, ಕಪ್ಪು ರಂಧ್ರಗಳು(ಸೆಂಟ್ರಲ್ ಸ್ಕೊಟೊಮಸ್), ಬೆಳಕಿನ ಸಂವೇದನೆ (ಫೋಟೋಫೋಬಿಯಾ),
ದೃಷ್ಟಿ ಗ್ರಹಿಕೆಯಲ್ಲಿ ತೊಂದರೆ(ಕ್ರೊಮಟೊಪ್ಸಿಯಾ) ಮತ್ತು ತಲೆನೋವುಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಬರಿ ಗಣ್ಣನಿಂದ ಸೂರ್ಯಗ್ರಹಣ ವೀಕ್ಷಿಸುವುದು ಒಳ್ಳೆಯದಲ್ಲ. ಸೂರ್ಯಗ್ರಹಣವನ್ನು ಗ್ರಹಣದ ಕನ್ನಡಕ ಅಥವಾ ಸೋಲಾರ್ ಫಿಲ್ಟರ್‌ಗಳ ವೀಕ್ಷಿಸಬಹುದು ಎಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಸನ್‌ಗ್ಲಾಸ್‌ಗಳು, ಮನೆಯಲ್ಲಿ ನಿರ್ಮಿಸಲಾದ ಅಥವಾ ಪೊಲರೈಸ್ಡ್ ಫಿಲ್ಟರ್‌ಗಳು, ಎಕ್ಸ್-ರೇ ಫಿಲ್ಮ್, ಡೆವಲಪ್ ಆಗದ ಫಿಲ್ಮ್ ಅಥವಾ ಸ್ಮೋಕ್ಡ್ ಗ್ಲಾಸ್ ಮೂಲಕ ಸೂರ್ಯಗ್ರಹಣ ವೀಕ್ಷಣೆ ಸುರಕ್ಷಿತವಲ್ಲ ಏಕೆಂದರೆ ಇವು ನಿಮ್ಮ ಕಣ್ಣುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲಾರವು. ಫಿಲ್ಟರ್‌ಗಳನ್ನು ಹೊಂದಿಲ್ಲದ ಟೆಲಿಸ್ಕೋಪ್‌ಗಳು ಅಥವಾ ಬೈನಾಕ್ಯುಲರ್‌ಗಳು ಕೂಡಾ ಬಳಕೆಗೆ ಸುರಕ್ಷಿತವಲ್ಲ ಎಂದು ಅವರು ತಿಳಿಸಿದ್ದಾರೆ.
ತಾರಾಲಯದಲ್ಲಿ ಬೆಳಗ್ಗೆ 8 ರಿಂದ 11.15ರವರೆಗೆ ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಮೂರು ದಿನಗಳಿಂದ ಇರುವಂತೆ ಬುದವಾರ ಕೂಡ ಮೋಡ ಮುಚ್ಚಿದ ವಾತಾವರಣ ಮುಂದುವರಿದರೆ ಗ್ರಹಣ ಗೋಚರಿಸುವುದಿಲ್ಲ.
-ಪ್ರಮೋದ್ ಗಲಿಗಲಿ, ನೆಹರು ತಾರಾಲಯದ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.